ಕೀರ್ತನೆಗಳು 42 : 1 (IRVKN)
ದ್ವಿತೀಯ ಭಾಗವು 42 - 72 *ದೇಶಾಂತರದಲ್ಲಿರುವ ಭಕ್ತನು ದೇವದರ್ಶನಕ್ಕಾಗಿ ಹಂಬಲಿಸುವುದು. ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಕೋರಹೀಯರ ಪದ್ಯ. *ದೇವರೇ, ಬಾಯಾರಿದ ಜಿಂಕೆಯು ನೀರಿನ ತೊರೆಗಳನ್ನು ಹೇಗೋ, ಹಾಗೆಯೇ ನನ್ನ ಮನಸ್ಸು ನಿನ್ನನ್ನು ಬಯಸುತ್ತದೆ.
ಕೀರ್ತನೆಗಳು 42 : 2 (IRVKN)
ನನ್ನ ಮನಸ್ಸು ದೇವರಿಗಾಗಿ, ಚೈತನ್ಯಸ್ವರೂಪನಾದ ದೇವರಿಗಾಗಿ ಹಾರೈಸುತ್ತದೆ; ನಾನು ಯಾವಾಗ ಹೋಗಿ ದೇವರ ಸನ್ನಿಧಿಯಲ್ಲಿ ಸೇರುವೆನೋ?
ಕೀರ್ತನೆಗಳು 42 : 3 (IRVKN)
“ನಿನ್ನ ದೇವರು ಎಲ್ಲಿ?” ಎಂದು ಜನರು ಯಾವಾಗಲೂ ನನ್ನನ್ನು ಪರಿಹಾಸ್ಯ ಮಾಡುವುದರಿಂದ, ಹಗಲಿರುಳು ನನಗೆ ಕಣ್ಣೀರೇ ಆಹಾರವಾಯಿತು.
ಕೀರ್ತನೆಗಳು 42 : 4 (IRVKN)
ನಾನು ಭಜನೋತ್ಸವದಲ್ಲಿ ಸೇರಿ, ಜನಸಮೂಹದೊಡನೆ ಹರ್ಷಧ್ವನಿಮಾಡುತ್ತಾ, ಸ್ತೋತ್ರಪದಗಳನ್ನು ಹಾಡುತ್ತಾ, ದೇವಾಲಯಕ್ಕೆ ಹೋಗುತ್ತಿದ್ದದ್ದನ್ನೇ ನೆನಪಿಗೆ ತಂದುಕೊಂಡು, ನನ್ನೊಳಗೆ ನಾನೇ ಹಂಬಲಿಸುತ್ತಿರುವೆನು.
ಕೀರ್ತನೆಗಳು 42 : 5 (IRVKN)
ನನ್ನ ಮನವೇ, ನೀನು ಕುಗ್ಗಿ ಹೋಗಿರುವುದೇನು? ಹೀಗೆ ವ್ಯಥೆಪಡುವುದೇಕೆ? ದೇವರನ್ನು ನಿರೀಕ್ಷಿಸು; ಆತನೇ ನನಗೆ ರಕ್ಷಕನೂ ದೇವರೂ ಆಗಿದ್ದಾನೆ. ನಾನು ಇನ್ನೂ ಆತನನ್ನು ಸ್ತುತಿಸುತ್ತಿರುವೆನು.
ಕೀರ್ತನೆಗಳು 42 : 6 (IRVKN)
ನನ್ನ ದೇವರೇ, ನನ್ನ ಪ್ರಾಣವು ಕುಗ್ಗಿಹೋಗಿದೆ; ಆದುದರಿಂದ ಯೊರ್ದನ್ ಹೊಳೆಯ ದೇಶ, ಹೆರ್ಮೋನ್ ಪರ್ವತ, ಮಿಸಾರ್ ಬೆಟ್ಟ ಇವುಗಳಲ್ಲಿರುವವನಾಗಿ ನಿನ್ನನ್ನು ಸ್ಮರಿಸುತ್ತೇನೆ.
ಕೀರ್ತನೆಗಳು 42 : 7 (IRVKN)
ನಿನ್ನ ಜಲಪಾತಗಳಿಂದ ಉಂಟಾಗುವ ಮಹಾಘೋಷವು ಒಂದು ಪ್ರವಾಹವು ಮತ್ತೊಂದು ಪ್ರವಾಹವನ್ನು ಕರೆಯುತ್ತದೋ ಎಂಬಂತಿರುವುದು. ಹಾಗೆಯೇ ನೀನು ಅಲ್ಲಕಲ್ಲೋಲವಾದ ದುಃಖ ಪ್ರವಾಹದ ತೆರೆಗಳನ್ನು ನನ್ನ ತಲೆಯ ಮೇಲಿಂದ ದಾಟಿಸಿದಿಯಲ್ಲಾ.
ಕೀರ್ತನೆಗಳು 42 : 8 (IRVKN)
ಯೆಹೋವನು ಹಗಲಿನಲ್ಲಿ ತನ್ನ ಪ್ರೀತಿಯನ್ನು ನನಗೆ ಅನುಗ್ರಹಿಸುವನು; ರಾತ್ರಿ ವೇಳೆಯಲ್ಲಿಯೂ ಆತನ ಕೀರ್ತನೆ ನನ್ನಲ್ಲಿರುವುದು. ನನ್ನ ಜೀವಾಧಾರಕನಾದ ದೇವರನ್ನು ಪ್ರಾರ್ಥಿಸುವೆನು.
ಕೀರ್ತನೆಗಳು 42 : 9 (IRVKN)
ನಾನು ನನ್ನ ಶರಣನಿಗೆ, “ದೇವರೇ, ಏಕೆ ನನ್ನನ್ನು ಮರೆತುಬಿಟ್ಟಿದ್ದಿ? ನಾನು ಏಕೆ ಶತ್ರುಬಾಧೆಯಿಂದ ದುಃಖಿಸುತ್ತಾ ವಿಕಾರಿಯಾಗಿ ಅಲೆಯಬೇಕು?” ಎಂದು ಮೊರೆಯಿಡುವೆನು.
ಕೀರ್ತನೆಗಳು 42 : 10 (IRVKN)
ನನ್ನ ವಿರೋಧಿಗಳು, “ನಿನ್ನ ದೇವರು ಎಲ್ಲಿ?” ಎಂದು ಯಾವಾಗಲೂ ನನ್ನನ್ನು ಪರಿಹಾಸ್ಯ ಮಾಡುವುದರಿಂದ ನನ್ನ ಎಲುಬುಗಳೆಲ್ಲಾ ಮುರಿದ ಹಾಗಿವೆ.
ಕೀರ್ತನೆಗಳು 42 : 11 (IRVKN)
ನನ್ನ ಮನವೇ, ನೀನು ಕುಗ್ಗಿ ಹೋಗಿರುವುದೇನು? ಹೀಗೆ ವ್ಯಥೆಪಡುವುದೇಕೆ? ದೇವರನ್ನು ನಿರೀಕ್ಷಿಸು; ಆತನೇ ನನಗೆ ರಕ್ಷಕನೂ, ದೇವರೂ ಆಗಿದ್ದಾನೆ; ನಾನು ಇನ್ನೂ ಆತನನ್ನು ಸ್ತುತಿಸುತ್ತಿರುವೆನು.
❮
❯