ಕೀರ್ತನೆಗಳು 39 : 1 (IRVKN)
ಮನುಷ್ಯನ ಅಸ್ಥಿರತೆಯನ್ನು ದೇವರ ಮುಂದೆ ಅರಿಕೆಮಾಡುವುದು *ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಯೆದೂತೂನನ ರಾಗದ ಪ್ರಕಾರ ಹಾಡತಕ್ಕದ್ದು; ದಾವೀದನ ಕೀರ್ತನೆ. *“ನನ್ನ ನಾಲಿಗೆ ಪಾಪಕ್ಕೆ ಹೋಗದಂತೆ ಜಾಗರೂಕನಾಗಿರುವೆನು, ದುಷ್ಟರು ನನ್ನ ಮುಂದೆ ಇರುವಾಗ ಬಾಯಿಗೆ ಕಡಿವಾಣ ಹಾಕಿಕೊಂಡಿರುವೆನು” ಅಂದುಕೊಂಡೆನು.
ಕೀರ್ತನೆಗಳು 39 : 2 (IRVKN)
ನಾನು ಮೌನವಾಗಿದ್ದೆನು; ಒಳ್ಳೆಯದನ್ನಾದರೂ ಆಡದೆ ಸುಮ್ಮನಿದ್ದೆನು; ಆದರೆ ನನ್ನ ಸಂಕಟವು ಹೆಚ್ಚಿತು.
ಕೀರ್ತನೆಗಳು 39 : 3 (IRVKN)
ನನ್ನ ಹೃದಯವು ಆತಂಕದಿಂದ ಕೂಡಿತ್ತು; ನಾನು ಹೆಚ್ಚಾಗಿ ಯೋಚಿಸುತ್ತಿರುವಲ್ಲಿ ತಾಪ ಹೆಚ್ಚಿತು. ಆಗ ನಾನು ಬಾಯಿ ಬಿಟ್ಟು,
ಕೀರ್ತನೆಗಳು 39 : 4 (IRVKN)
“ಯೆಹೋವನೇ, ನನಗೆ ಅವಸಾನವುಂಟೆಂದೂ, ನನ್ನ ಜೀವಮಾನವು ಅತ್ಯಲ್ಪವೆಂದೂ, ನಾನು ಎಷ್ಟೋ ಅಸ್ಥಿರನೆಂದೂ ನನಗೆ ತಿಳಿಯಪಡಿಸು.
ಕೀರ್ತನೆಗಳು 39 : 5 (IRVKN)
ನನ್ನ ಆಯುಷನ್ನು ಗೇಣುದ್ದವಾಗಿ ಮಾಡಿದ್ದೀಯಲ್ಲಾ; ನನ್ನ ಜೀವಿತಕಾಲ ನಿನ್ನ ಎಣಿಕೆಯಲ್ಲಿ ಏನೂ ಅಲ್ಲ” ಅಂದೆನು. ಮನುಷ್ಯನೆಂಬವನು ಎಷ್ಟು ಸ್ಥಿರನೆಂದು ಕಂಡರೂ ಬರಿ ಉಸಿರೇ. QSS ಸೆಲಾ SE
ಕೀರ್ತನೆಗಳು 39 : 6 (IRVKN)
ನರರು ಮಾಯಾರೂಪವಾದ ನೆರಳಿನಂತೆ ಸಂಚರಿಸುವವರು; ಅವರು ಸುಮ್ಮಸುಮ್ಮನೆ ಗಡಿಬಿಡಿಮಾಡುವವರು; ಆಸ್ತಿಯನ್ನು ಕೂಡಿಸಿಟ್ಟುಕೊಳ್ಳುತ್ತಾರೆ, ಆದರೆ ಅದು ಯಾರ ಪಾಲಾಗುವುದೋ ತಾವೇ ತಿಳಿಯರು.
ಕೀರ್ತನೆಗಳು 39 : 7 (IRVKN)
“ಹೀಗಿರಲಾಗಿ ಕರ್ತನೇ, ನಾನು ಇನ್ನು ಯಾವುದಕ್ಕೆ ಕಾದುಕೊಳ್ಳಲಿ? ನೀನೇ ನನ್ನ ನಿರೀಕ್ಷೆ.
ಕೀರ್ತನೆಗಳು 39 : 8 (IRVKN)
ಎಲ್ಲಾ ದ್ರೋಹಗಳಿಂದ ನನ್ನನ್ನು ಬಿಡುಗಡೆಮಾಡು; ಮೂರ್ಖರ ನಿಂದೆಗೆ ಗುರಿಮಾಡಬೇಡ.
ಕೀರ್ತನೆಗಳು 39 : 9 (IRVKN)
ನೀನೇ ಇದನ್ನು ಬರಮಾಡಿದ್ದರಿಂದ ನಾನು ಏನೂ ಹೇಳದೆ ಮೌನವಾಗಿರುವೆನು.
ಕೀರ್ತನೆಗಳು 39 : 10 (IRVKN)
ನಿನ್ನ ದಂಡನೆಯನ್ನು ತೊಲಗಿಸು; ನಿನ್ನ ಕೈಹೊಡೆತದಿಂದ ಸಾಯುವ ಹಾಗಿದ್ದೇನಲ್ಲಾ.
ಕೀರ್ತನೆಗಳು 39 : 11 (IRVKN)
ನೀನು ನರನನ್ನು ಪಾಪದ ನಿಮಿತ್ತ ಗದರಿಸಿ ಶಿಕ್ಷಿಸುವಾಗ, ಅವನ ಚೆಲುವಿಕೆಯು ನುಸಿ ಹತ್ತಿತೋ ಎಂಬಂತೆ ಹಾಳಾಗಿ ಹೋಗುತ್ತದೆ. ಮನುಷ್ಯನೆಂಬವನು ಬರಿ ಉಸಿರೇ. QSS ಸೆಲಾ SE
ಕೀರ್ತನೆಗಳು 39 : 12 (IRVKN)
ಯೆಹೋವನೇ, ನನ್ನ ಪ್ರಾರ್ಥನೆಯನ್ನು ಲಾಲಿಸು; ನನ್ನ ಮೊರೆಗೆ ಕಿವಿಗೊಡು. ನನ್ನ ಕಣ್ಣೀರನ್ನು ನೋಡು, ಸುಮ್ಮನಿರಬೇಡ. ನನ್ನ ಪೂರ್ವಿಕರಂತೆಯೇ ನಾನು ನಿನ್ನ ಮರೆಹೊಕ್ಕಿರುವ ಪ್ರವಾಸಿಯೂ, ಪರದೇಶದವನೂ ಆಗಿದ್ದೇನಲ್ಲಾ.
ಕೀರ್ತನೆಗಳು 39 : 13 (IRVKN)
ನಾನು ಅಗಲಿ ಹೋಗಿ ಇಲ್ಲವಾಗುವುದಕ್ಕೆ ಮೊದಲು, ಸ್ವಲ್ಪ ಸಂತೋಷಪಡುವಂತೆ ನಿನ್ನ ಕೋಪದೃಷ್ಟಿಯನ್ನು ನನ್ನ ಕಡೆಯಿಂದ ತಿರುಗಿಸಿಕೊಳ್ಳಬೇಕು, ದೇವಾ.”
❮
❯
1
2
3
4
5
6
7
8
9
10
11
12
13