ಕೀರ್ತನೆಗಳು 36 : 1 (IRVKN)
ದುಷ್ಟರ ದುರ್ಲಕ್ಷಣ ಮತ್ತು ದೇವರ ಮಹಾಪ್ರೀತಿ *ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಯೆಹೋವನ ಸೇವಕನಾದ ದಾವೀದನ ಕೀರ್ತನೆ. *ಪಾಪವು ದುಷ್ಟನ ಮನಸ್ಸಿನೊಳಗೆ ನುಡಿಯುತ್ತಿರುವುದರಿಂದ ಅವನ ಕಣ್ಣೆದುರಿಗೆ ದೇವರ ಭಯವೇ ಇಲ್ಲ.
ಕೀರ್ತನೆಗಳು 36 : 2 (IRVKN)
ಅದು ಅವನನ್ನು ವಂಚಿಸಿ, “ನಿನ್ನ ದ್ರೋಹವು ಬೈಲಿಗೆ ಬರುವುದಿಲ್ಲ ಮತ್ತು ನಿನಗೆ ಕೇಡು ತರುವುದಿಲ್ಲ” ಎಂದು ಊದಿಬಿಡುತ್ತದೆ.
ಕೀರ್ತನೆಗಳು 36 : 3 (IRVKN)
ಅವನ ಬಾಯಿಂದ ಕೆಡುಕೂ, ವಂಚನೆಯೂ ಬರುತ್ತವೆ; ವಿವೇಕಮಾರ್ಗವನ್ನೂ, ಪರಹಿತವನ್ನೂ ಬಿಟ್ಟೇಬಿಟ್ಟಿದ್ದಾನೆ.
ಕೀರ್ತನೆಗಳು 36 : 4 (IRVKN)
ಹಾಸಿಗೆಯ ಮೇಲೆ ಇರುವಾಗಲೂ ಕೆಡುಕನ್ನೇ ಯೋಚಿಸುತ್ತಿರುವನು; ದುಷ್ಟ ಮಾರ್ಗದಲ್ಲಿ ನಿಂತುಕೊಂಡಿದ್ದಾನೆ; ಎಂಥ ದುಷ್ಕೃತ್ಯಕ್ಕೂ ಹೇಸುವುದಿಲ್ಲ.
ಕೀರ್ತನೆಗಳು 36 : 5 (IRVKN)
ಯೆಹೋವನೇ, ನಿನ್ನ ಪ್ರೀತಿಯು ಆಕಾಶದಷ್ಟು ಉನ್ನತವಾಗಿದೆ; ನಿನ್ನ ನಂಬಿಗಸ್ತಿಕೆಯು ಮೇಘಮಾರ್ಗವನ್ನು ಮುಟ್ಟುತ್ತದೆ.
ಕೀರ್ತನೆಗಳು 36 : 6 (IRVKN)
ನಿನ್ನ ನೀತಿಯು ದಿವ್ಯಪರ್ವತಗಳಂತೆಯೂ, ನಿನ್ನ ನ್ಯಾಯವು ಮಹಾಸಾಗರದಂತೆಯೂ ಇವೆ; ಯೆಹೋವನೇ, ನೀನು ಮನುಷ್ಯರನ್ನೂ, ಮೃಗಗಳನ್ನೂ ಸಂರಕ್ಷಿಸುತ್ತೀ.
ಕೀರ್ತನೆಗಳು 36 : 7 (IRVKN)
ದೇವರೇ, ನಿನ್ನ ಪ್ರೀತಿ ಎಷ್ಟೋ ಅಮೂಲ್ಯವಾದದ್ದು; ಮಾನವರು ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುತ್ತಾರೆ.
ಕೀರ್ತನೆಗಳು 36 : 8 (IRVKN)
ನಿನ್ನ ಮಂದಿರದ ಸಮೃದ್ಧಿಯಿಂದ ಅವರನ್ನು ಸಂತೃಪ್ತಿಪಡಿಸುತ್ತೀ; ನಿನ್ನ ಸಂಭ್ರಮಪ್ರವಾಹದಲ್ಲಿ ಅವರಿಗೆ ಪಾನಮಾಡಿಸುತ್ತೀ.
ಕೀರ್ತನೆಗಳು 36 : 9 (IRVKN)
ನಿನ್ನ ಬಳಿಯಲ್ಲಿ ಜೀವದ ಬುಗ್ಗೆ ಉಂಟಲ್ಲಾ; ನಿನ್ನ ತೇಜಸ್ಸು ನಮಗೆ ಬೆಳಕು ಕೊಡುತ್ತದೆ.
ಕೀರ್ತನೆಗಳು 36 : 10 (IRVKN)
ನಿನ್ನನ್ನು ಅರಿತವರಿಗೆ ನಿನ್ನ ಪ್ರೀತಿಯನ್ನು ಯಾವಾಗಲೂ ದಯಪಾಲಿಸು; ಯಥಾರ್ಥಚಿತ್ತರಿಗೆ ನಿನ್ನ ನ್ಯಾಯವನ್ನು ನಿರಂತರವೂ ಅನುಗ್ರಹಿಸು.
ಕೀರ್ತನೆಗಳು 36 : 11 (IRVKN)
ಗರ್ವಿಷ್ಠರ ಕಾಲಕೆಳಗೆ ನಮ್ಮನ್ನು ಬೀಳಿಸಬೇಡ; ದುರ್ಜನರಿಂದ ನಾವು ದೇಶಭ್ರಷ್ಟರಾಗದಂತೆ ಮಾಡು.
ಕೀರ್ತನೆಗಳು 36 : 12 (IRVKN)
ಇಗೋ, ಕೆಡುಕರು ಕೆಡವಲ್ಪಟ್ಟು ಏಳಲಾರದೆ ಬಿದ್ದಿದ್ದಾರೆ.

1 2 3 4 5 6 7 8 9 10 11 12