ಕೀರ್ತನೆಗಳು 35 : 1 (IRVKN)
ವೈರಿಗಳಿಂದ ಬಿಡಿಸಬೇಕೆಂಬ ವಿಜ್ಞಾಪನೆ *ದಾವೀದನ ಕೀರ್ತನೆ.
ಕೀರ್ತ 7 *ಯೆಹೋವನೇ, ನನ್ನ ಸಂಗಡ ವ್ಯಾಜ್ಯ ಮಾಡುವವರೊಡನೆ ವ್ಯಾಜ್ಯಮಾಡು; ನನ್ನ ಮೇಲೆ ಯುದ್ಧ ಮಾಡುವವರ ಸಂಗಡ ಯುದ್ಧ ಮಾಡು.
ಕೀರ್ತನೆಗಳು 35 : 2 (IRVKN)
ಖೇಡ್ಯ ಮತ್ತು ಗುರಾಣಿಯನ್ನು ಹಿಡಿದುಕೊಂಡು, ನನಗೆ ಸಹಾಯಕನಾಗಿ ನಿಲ್ಲು.
ಕೀರ್ತನೆಗಳು 35 : 3 (IRVKN)
ನೀನು ಭರ್ಜಿಯನ್ನೂ ಹಾಗೂ ಯುದ್ಧದ ಕೊಡಲಿಯನ್ನೂ ಹಿಡಿದು, ನನ್ನನ್ನು ಹಿಂದಟ್ಟುವ ವೈರಿಗಳನ್ನು ಎದುರಿಸು; “ನಾನೇ ನಿನ್ನ ರಕ್ಷಣೆ” ಎಂದು ಅಭಯಕೊಡು.
ಕೀರ್ತನೆಗಳು 35 : 4 (IRVKN)
ನನ್ನ ಪ್ರಾಣವನ್ನು ತೆಗೆಯಬೇಕೆಂದಿರುವವರು ಆಶಾಭಂಗಪಟ್ಟು ಅವಮಾನಹೊಂದಲಿ; ನನಗೆ ಕೇಡನ್ನು ಕಲ್ಪಿಸುವವರು ಕಳವಳದಿಂದ ಹಿಂದಿರುಗಿ ಓಡಲಿ.
ಕೀರ್ತನೆಗಳು 35 : 5 (IRVKN)
ಅವರು ಗಾಳಿ ಹಾರಿಸುವ ಹೊಟ್ಟಿನಂತಾಗಲಿ; ಯೆಹೋವನ ದೂತನು ಅವರನ್ನು ಅಟ್ಟಿಬಿಡಲಿ.
ಕೀರ್ತನೆಗಳು 35 : 6 (IRVKN)
ಕತ್ತಲೆಯೂ, ಜಾರಿಕೆಯೂ ಇರುವ ದಾರಿಯಲ್ಲಿ ಯೆಹೋವನ ದೂತನು ಅವರನ್ನು ಹಿಂದಟ್ಟಲಿ.
ಕೀರ್ತನೆಗಳು 35 : 7 (IRVKN)
ಅವರು ನಿಷ್ಕಾರಣವಾಗಿ ನನಗೆ ಬಲೆಯೊಡ್ಡಿದ್ದಾರೆ; ಕಾರಣವಿಲ್ಲದೆ ನನ್ನ ಪ್ರಾಣವನ್ನು ತೆಗೆಯಬೇಕೆಂದು ಗುಂಡಿಯನ್ನು ತೋಡಿದ್ದಾರೆ.
ಕೀರ್ತನೆಗಳು 35 : 8 (IRVKN)
ಅವನಿಗೆ ನಾಶನವು ಆಕಸ್ಮಾತ್ತಾಗಿ ಬರಲಿ; ತಾನು ಹಾಸಿದ ಬಲೆಯಲ್ಲಿ ತಾನೇ ಸಿಕ್ಕಿಬೀಳಲಿ. ತಾನು ತೋಡಿದ ಕುಣಿಯಲ್ಲಿ ತಾನೇ ಬಿದ್ದುಹೋಗಲಿ.
ಕೀರ್ತನೆಗಳು 35 : 9 (IRVKN)
ಆಗ ನನ್ನ ಮನಸ್ಸಿಗೆ ಯೆಹೋವನ ದೆಸೆಯಿಂದ ಹರ್ಷವುಂಟಾಗುವುದು; ಆತನಿಂದಾದ ರಕ್ಷಣೆಯ ನಿಮಿತ್ತ ಆನಂದಪಡುವೆನು.
ಕೀರ್ತನೆಗಳು 35 : 10 (IRVKN)
ಯೆಹೋವನೇ, ಕುಗ್ಗಿದವನನ್ನು ಬಲಾತ್ಕಾರಿಯಿಂದಲೂ, ದಿಕ್ಕಿಲ್ಲದ ಬಡವನನ್ನು ಸೂರೆಮಾಡುವವನಿಂದಲೂ ತಪ್ಪಿಸಿ ರಕ್ಷಿಸುವಾತನೇ, “ನಿನಗೆ ಸಮಾನರು ಯಾರಿದ್ದಾರೆ?” ಎಂದು ನನ್ನ ಎಲುಬುಗಳೆಲ್ಲಾ ಹೇಳುವವು.
ಕೀರ್ತನೆಗಳು 35 : 11 (IRVKN)
ನ್ಯಾಯವಿರುದ್ಧ ಸಾಕ್ಷಿಗಳು ನನಗೆ ವಿರುದ್ಧವಾಗಿ ಎದ್ದಿದ್ದಾರೆ; ನಾನರಿಯದ ಸಂಗತಿಗಳ ವಿಷಯದಲ್ಲಿ ನನ್ನನ್ನು ವಿಚಾರಿಸುತ್ತಾರೆ.
ಕೀರ್ತನೆಗಳು 35 : 12 (IRVKN)
ಅವರು ಉಪಕಾರಕ್ಕೆ ಅಪಕಾರವನ್ನೇ ಮಾಡುತ್ತಾರೆ; ನಾನು ದಿಕ್ಕಿಲ್ಲದವನಾದೆನು.
ಕೀರ್ತನೆಗಳು 35 : 13 (IRVKN)
ನಾನಾದರೋ ಅವರ ಅಸ್ವಸ್ಥಕಾಲದಲ್ಲಿ ಗೋಣಿ ತಟ್ಟನ್ನೇ ಕಟ್ಟಿಕೊಂಡಿದ್ದೆನು; ಉಪವಾಸದಿಂದ ನನ್ನ ಆತ್ಮವನ್ನು ನೋಯಿಸಿದೆನು. * ಅಥವಾ ನನ್ನ ತಲೆಬಾಗಿ ಪ್ರಾರ್ಥಿಸಿದನು. ಅಥವಾ ನನ್ನ ಪ್ರಾರ್ಥನೆಯು ನನ್ನ ಎದೆಗೆ ತಿರುಗಿತು. ನನ್ನ ಪ್ರಾರ್ಥನೆಯು ಕೇಳಲ್ಪಡಲಿಲ್ಲ.
ಕೀರ್ತನೆಗಳು 35 : 14 (IRVKN)
ಅಸ್ವಸ್ಥನಾದವನನ್ನು ಸ್ನೇಹಿತನೋ, ಅಣ್ಣನೋ ಎಂದು ಭಾವಿಸಿ ನಡೆದುಕೊಂಡೆನು; ತಾಯಿ ಸತ್ತದ್ದಕ್ಕಾಗಿ ದುಃಖಿಸುವವನಂತೆ ನಾನು ತಲೆಬಾಗಿ ಅಳುತ್ತಿದ್ದೆನು.
ಕೀರ್ತನೆಗಳು 35 : 15 (IRVKN)
ಆದರೂ ನನಗೆ ಆಪತ್ತು ಬಂದಾಗ, ಅವರು ಸಂತೋಷಿಸುತ್ತಾ ಕೂಡಿಕೊಂಡರು; ನಿರಾಕಾರಣವಾಗಿ ಈ ಭ್ರಷ್ಟರು ನನಗೆ ವಿರುದ್ಧವಾಗಿ ಕೂಡಿ ಕೊಂಡಾಡಿದರು, ಸೂರೆ ಮಾಡುವುದನ್ನು ಬಿಡಲೇ ಇಲ್ಲ.
ಕೀರ್ತನೆಗಳು 35 : 16 (IRVKN)
ಆಹಾರಕ್ಕೋಸ್ಕರ ಪರಿಹಾಸ್ಯಮಾಡುವ ಮೂರ್ಖರ ಸಂಗಡ, ನನ್ನ ಮೇಲೆ ಹಲ್ಲುಕಡಿಯುತ್ತಾರೆ.
ಕೀರ್ತನೆಗಳು 35 : 17 (IRVKN)
ಕರ್ತನೇ, ಇನ್ನೆಷ್ಟರ ವರೆಗೆ ಸುಮ್ಮನೆ ನೋಡುತ್ತಾ ಇರುವಿ? ಅವರ ಅಪಾಯದಿಂದ ನನ್ನ ಪ್ರಾಣವನ್ನು ಬಿಡಿಸು; ನನ್ನ ಪರಮಪ್ರಿಯ ಪ್ರಾಣವನ್ನು ಆ ಸಿಂಹಗಳ ಬಾಯಿಗೆ ಸಿಕ್ಕದಂತೆ ತಪ್ಪಿಸು.
ಕೀರ್ತನೆಗಳು 35 : 18 (IRVKN)
ಆಗ ನಾನು ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು; ಬಹುಜನರ ಮುಂದೆ ಸ್ತುತಿಸುವೆನು.
ಕೀರ್ತನೆಗಳು 35 : 19 (IRVKN)
ಅವಶ್ಯವಿಲ್ಲದ ವಿರೋಧಿಗಳು ನನ್ನ ವಿಷಯದಲ್ಲಿ ಹಿಗ್ಗುವುದಕ್ಕೆ ಅವಕಾಶಕೊಡಬೇಡ; ನಿಷ್ಕಾರಣ ವೈರಿಗಳ ಕಣ್ಣುಸನ್ನೆಗೆ ಆಸ್ಪದಕೊಡಬೇಡ.
ಕೀರ್ತನೆಗಳು 35 : 20 (IRVKN)
ಅವರ ಮಾತುಗಳು ಸಮಾಧಾನಕರವಾದವುಗಳಲ್ಲ; ದೇಶದ ಸಾಧುಜನರನ್ನು ಕೆಡಿಸುವುದಕ್ಕೆ ಮೋಸವನ್ನು ಕಲ್ಪಿಸುತ್ತಾರೆ.
ಕೀರ್ತನೆಗಳು 35 : 21 (IRVKN)
ಅವರು ನನ್ನನ್ನು ನೋಡಿ ಬಾಯಿಕಿಸಿದು, “ಆಹಾ, ಆಹಾ, ನಮ್ಮ ಕಣ್ಣು ಕಂಡಿತಲ್ಲಾ” ಎಂದು ಅನ್ನುತ್ತಾರೆ.
ಕೀರ್ತನೆಗಳು 35 : 22 (IRVKN)
ಯೆಹೋವನೇ, ನೀನೇ ನೋಡಿದಿಯಲ್ಲವೇ; ಸುಮ್ಮನಿರಬೇಡ; ನನ್ನ ಒಡೆಯನೇ, ನನ್ನಿಂದ ದೂರವಾಗಿರುವುದೇಕೆ?
ಕೀರ್ತನೆಗಳು 35 : 23 (IRVKN)
ನನ್ನ ದೇವರೇ, ಎದ್ದು ನನಗಾಗಿ ನ್ಯಾಯವನ್ನು ನಿರ್ಣಯಿಸು; ನನ್ನ ಕರ್ತನೇ, ಎಚ್ಚೆತ್ತು ನನ್ನ ವಿವಾದವನ್ನು ವಿಚಾರಿಸು.
ಕೀರ್ತನೆಗಳು 35 : 24 (IRVKN)
ಯೆಹೋವನೇ, ನನ್ನ ದೇವರೇ, ನಿನ್ನ ನೀತಿಗನುಸಾರವಾಗಿ ನನಗೆ ತೀರ್ಪುಕೊಡು; ನನ್ನ ವಿಷಯದಲ್ಲಿ ಹಿಗ್ಗುವುದಕ್ಕೆ ಶತ್ರುಗಳಿಗೆ ಆಸ್ಪದವಿರಬಾರದು.
ಕೀರ್ತನೆಗಳು 35 : 25 (IRVKN)
ಆಹಾ, ನಮ್ಮ ಆಶೆ ನೆರವೇರಿತು ಅಂದುಕೊಳ್ಳುವುದಕ್ಕೆ ಅವರಿಗೆ ಅವಕಾಶವಿರಬಾರದು; † ಅಥವಾ ಅವನನ್ನು ನುಂಗಿಬಿಟ್ಟಿದ್ದೇವೆಂದು. ಅವನನ್ನು ಸಂಪೂರ್ಣವಾಗಿ ನಾಶಮಾಡಿಬಿಟ್ಟಿದ್ದೇವೆಂದು ಅವರು ಕೊಚ್ಚಿಕೊಳ್ಳಬಾರದು.
ಕೀರ್ತನೆಗಳು 35 : 26 (IRVKN)
ನನ್ನ ಕೇಡಿನಲ್ಲಿ ಹಿಗ್ಗುವವರೆಲ್ಲರು ಆಶಾಭಂಗಪಟ್ಟು ಅವಮಾನಹೊಂದಲಿ; ನನ್ನನ್ನು ಹೀಯಾಳಿಸಿ ಆತ್ಮಸ್ತುತಿಮಾಡಿಕೊಳ್ಳುವವರು, ಅವಮಾನವನ್ನೂ, ಅಪಕೀರ್ತಿಯನ್ನೂ ಹೊಂದಲಿ.
ಕೀರ್ತನೆಗಳು 35 : 27 (IRVKN)
ನನ್ನ ನ್ಯಾಯಸ್ಥಾಪನೆಯನ್ನು ಬಯಸುವವರು ಆನಂದದೊಡನೆ ಜಯಧ್ವನಿಮಾಡಲಿ; ತನ್ನ ಸೇವಕನ ಹಿತವನ್ನು ಕೋರುವ ಯೆಹೋವನಿಗೆ ಸ್ತೋತ್ರ ಎಂದು ಯಾವಾಗಲೂ ಹೇಳುವವರಾಗಲಿ.
ಕೀರ್ತನೆಗಳು 35 : 28 (IRVKN)
ನನ್ನ ನಾಲಿಗೆಯು ನಿನ್ನ ನೀತಿಯನ್ನೂ ಮಹಿಮೆಯನ್ನೂ ದಿನವೆಲ್ಲಾ ವರ್ಣಿಸುವುದು.
❮
❯