ಕೀರ್ತನೆಗಳು 16 : 1 (IRVKN)
ಯೆಹೋವನ ಸೇವೆಯು ಪೂರ್ಣಾನಂದಕರವಾದದ್ದು ದಾವೀದನ ಕಾವ್ಯ. ದೇವರೇ, ನಾನು ನಿನ್ನ ಶರಣಾಗತನು; ನನ್ನನ್ನು ಕಾಪಾಡು.
ಕೀರ್ತನೆಗಳು 16 : 2 (IRVKN)
ನಾನು ಯೆಹೋವನನ್ನು ಕುರಿತು, “ನೀನೇ ನನ್ನ ಒಡೆಯನು; ನನ್ನ ಸುಖವು ನಿನ್ನಲ್ಲಿಯೇ ಹೊರತು ಬೇರೆ ಇಲ್ಲ” ಎಂದು ಹೇಳುವೆನು.
ಕೀರ್ತನೆಗಳು 16 : 3 (IRVKN)
ಭೂಲೋಕದಲ್ಲಿರುವ ದೇವಜನರ ವಿಷಯದಲ್ಲಿ, “ಇವರೇ ಶ್ರೇಷ್ಠರು, ಇವರೇ ನನಗೆ ಇಷ್ಟರಾದವರು” ಎಂದು ಹೇಳುವೆನು.
ಕೀರ್ತನೆಗಳು 16 : 4 (IRVKN)
ಇತರ ದೇವರುಗಳನ್ನು ಅವಲಂಬಿಸಿದವರಿಗೆ ಬಹಳ ಕಷ್ಟನಷ್ಟಗಳು ಉಂಟಾಗುವವು. ಅವರಂತೆ ನಾನು ರಕ್ತವನ್ನು ಪಾನದ್ರವ್ಯವಾಗಿ ಸಮರ್ಪಿಸುವುದೇ ಇಲ್ಲ; ಅವರ ನಾಮಗಳನ್ನಾದರೂ ಉಚ್ಚರಿಸುವುದಿಲ್ಲ.
ಕೀರ್ತನೆಗಳು 16 : 5 (IRVKN)
ನನ್ನ ಪಾಲೂ, ನನ್ನ ಪಾನವೂ ಯೆಹೋವನೇ, ನೀನೇ ನನ್ನ ಸ್ವತ್ತನ್ನು ಭದ್ರಗೊಳಿಸುತ್ತೀ.
ಕೀರ್ತನೆಗಳು 16 : 6 (IRVKN)
ನನಗೆ ಪ್ರಾಪ್ತವಾಗಿರುವ ಸ್ವತ್ತು ರಮಣೀಯವಾದದ್ದು; ಅದು ನನಗೆ ಸಂತೃಪ್ತಿಕರವಾಗಿದೆ.
ಕೀರ್ತನೆಗಳು 16 : 7 (IRVKN)
ಯೆಹೋವನು ನನಗೆ ಆಲೋಚನೆಯನ್ನು ಹೇಳಿಕೊಡುತ್ತಾನೆ; ನಾನು ಆತನನ್ನು ಕೊಂಡಾಡುವೆನು. ರಾತ್ರಿಯ ಸಮಯಗಳಲ್ಲಿ ನನ್ನ ಅಂತರಾತ್ಮವು ನನ್ನನ್ನು ಬೋಧಿಸುತ್ತದೆ.
ಕೀರ್ತನೆಗಳು 16 : 8 (IRVKN)
ನಾನು ಯೆಹೋವನನ್ನು ಯಾವಾಗಲೂ ನನ್ನೆದುರಿನಲ್ಲಿಯೇ ಇಟ್ಟುಕೊಂಡಿದ್ದೇನೆ; ಆತನು ನನ್ನ ಬಲಗಡೆಯಲ್ಲಿ ಇರುವುದರಿಂದ ನಾನು ಎಂದಿಗೂ ಕದಲುವುದಿಲ್ಲ.
ಕೀರ್ತನೆಗಳು 16 : 9 (IRVKN)
ಆದಕಾರಣ ನನ್ನ ಹೃದಯವು ಹರ್ಷಿಸುತ್ತದೆ; ನನ್ನ ಮನವು ಉಲ್ಲಾಸಗೊಳ್ಳುತ್ತದೆ; ನನ್ನ ಶರೀರವೂ ಸುರಕ್ಷಿತವಾಗಿರುವುದು.
ಕೀರ್ತನೆಗಳು 16 : 10 (IRVKN)
ಏಕೆಂದರೆ ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ಬಿಡುವುದಿಲ್ಲ; ನಿನ್ನ ಭಕ್ತನಿಗೆ ಅಧೋಲೋಕವನ್ನು ನೋಡಗೊಡಿಸುವುದಿಲ್ಲ.
ಕೀರ್ತನೆಗಳು 16 : 11 (IRVKN)
ನೀನು ನನಗೆ ಜೀವಮಾರ್ಗವನ್ನು ತಿಳಿಯಪಡಿಸುವಿ; ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷವಿದೆ; ನಿನ್ನ ಬಲಗೈಯಲ್ಲಿ ಶಾಶ್ವತ ಭಾಗ್ಯವಿದೆ.

1 2 3 4 5 6 7 8 9 10 11