ಕೀರ್ತನೆಗಳು 139 : 1 (IRVKN)
ಸರ್ವಜ್ಞಾನಿ, ಸರ್ವವ್ಯಾಪಿ ಅದ ದೇವರು *ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ. *ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ ತಿಳಿದುಕೊಂಡಿದ್ದೀ;
ಕೀರ್ತನೆಗಳು 139 : 2 (IRVKN)
ನಾನು ಕುಳಿತುಕೊಳ್ಳುವುದು, ಏಳುವುದು ನಿನಗೆ ಗೊತ್ತಿದೆ, ದೂರದಿಂದಲೇ ನನ್ನ ಆಲೋಚನೆಗಳನ್ನು ಬಲ್ಲವನಾಗಿರುತ್ತಿ.
ಕೀರ್ತನೆಗಳು 139 : 3 (IRVKN)
ನಾನು ನಡೆಯುವುದನ್ನು, ಮಲಗುವುದನ್ನು ಶೋಧಿಸಿ ಗ್ರಹಿಸಿಕೊಳ್ಳುತ್ತಿ, ನನ್ನ ನಡತೆಯೆಲ್ಲಾ ನಿನಗೆ ಗೋಚರವಾಗಿದೆ.
ಕೀರ್ತನೆಗಳು 139 : 4 (IRVKN)
ಯೆಹೋವನೇ, ನನ್ನ ನಾಲಿಗೆಯ ಮಾತುಗಳಲ್ಲಿ, ನೀನು ಅರಿಯದೆ ಇರುವಂಥದು ಒಂದೂ ಇಲ್ಲ.
ಕೀರ್ತನೆಗಳು 139 : 5 (IRVKN)
ಸುತ್ತಲೂ ನನ್ನನ್ನು ಆವರಿಸಿ, ನಿನ್ನ ಕೈಯನ್ನು ನನ್ನ ಮೇಲೆ ಇಟ್ಟಿದ್ದಿ.
ಕೀರ್ತನೆಗಳು 139 : 6 (IRVKN)
ಇಂಥ ಜ್ಞಾನವು ನನಗೆ ಬಹು ಆಶ್ಚರ್ಯವಾಗಿದೆ; ಅದು ಉನ್ನತವಾದದ್ದು, ನನಗೆ ನಿಲುಕುವುದಿಲ್ಲ.
ಕೀರ್ತನೆಗಳು 139 : 7 (IRVKN)
ನಾನು ನಿನ್ನ ಆತ್ಮಕ್ಕೆ ತಪ್ಪಿಸಿಕೊಳ್ಳುವಂತೆ ಎಲ್ಲಿಗೆ ಹೋಗಲಿ? ನಿನ್ನ ಕಣ್ಣಿಗೆ ಮರೆಯಾಗುವಂತೆ ಎಲ್ಲಿಗೆ ಓಡಲಿ?
ಕೀರ್ತನೆಗಳು 139 : 8 (IRVKN)
ಮೇಲಣ ಲೋಕಕ್ಕೆ ಏರಿಹೋದರೆ ಅಲ್ಲಿ ನೀನಿರುತ್ತಿ, ಪಾತಾಳಕ್ಕೆ ಹೋಗಿ ಮಲಗಿಕೊಂಡೇನೆಂದರೆ ಅಲ್ಲಿಯೂ ನೀನಿರುವಿ.
ಕೀರ್ತನೆಗಳು 139 : 9 (IRVKN)
ಅರುಣನ ರೆಕ್ಕೆಗಳನ್ನು ಕಟ್ಟಿಕೊಂಡು ಹಾರಿಹೋಗಿ, ಸಮುದ್ರದ ಕಟ್ಟಕಡೆಯಲ್ಲಿ ವಾಸಮಾಡಲು ಪ್ರಯತ್ನಿಸಿದರೆ,
ಕೀರ್ತನೆಗಳು 139 : 10 (IRVKN)
ಅಲ್ಲಿಯೂ ನಿನ್ನ ಕೈ ನನ್ನನ್ನು ನಡೆಸುವುದು; ನಿನ್ನ ಬಲಗೈ ನನ್ನನ್ನು ಹಿಡಿದಿರುವುದು.
ಕೀರ್ತನೆಗಳು 139 : 11 (IRVKN)
ಕಾರ್ಗತ್ತಲೆಯು ನನ್ನನ್ನು ಕವಿಯುವುದು, “ಹಗಲು ಹೋಗಿ ನನ್ನ ಸುತ್ತಲು ಇರುಳಾಗುವುದು” ಎಂದು ಹೇಳಿಕೊಂಡರೇನು?
ಕೀರ್ತನೆಗಳು 139 : 12 (IRVKN)
ನಿನಗೆ ಕತ್ತಲೆಯು ಕತ್ತಲೆಯಲ್ಲ; ಇರುಳು ಹಗಲಾಗಿಯೇ ಇರುತ್ತದೆ, ಕತ್ತಲು ಬೆಳಕುಗಳೆರಡೂ ನಿನಗೆ ಒಂದೇ.
ಕೀರ್ತನೆಗಳು 139 : 13 (IRVKN)
ನನ್ನ ಅಂತರಿಂದ್ರಿಯಗಳನ್ನು ಉಂಟುಮಾಡಿದವನೂ, ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನಲ್ಲವೋ?
ಕೀರ್ತನೆಗಳು 139 : 14 (IRVKN)
ನೀನು ನನ್ನನ್ನು ಅದ್ಭುತವಾಗಿಯೂ, ವಿಚಿತ್ರವಾಗಿಯೂ ರಚಿಸಿದ್ದರಿಂದ, ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು, ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ.
ಕೀರ್ತನೆಗಳು 139 : 15 (IRVKN)
ನಾನು ಗುಪ್ತಸ್ಥಳದಲ್ಲಿ ಏರ್ಪಡುತ್ತಾ, ಭೂಗರ್ಭದಲ್ಲಿ ರಚಿಸಲ್ಪಡುತ್ತಾ ಇದ್ದಾಗ, ನನ್ನ ಅಸ್ಥಿಪಂಜರವು ನಿನಗೆ ಮರೆಯಾಗಿದ್ದಿಲ್ಲ.
ಕೀರ್ತನೆಗಳು 139 : 16 (IRVKN)
ನಾನು ಇನ್ನೂ ಕೇವಲ ಪಿಂಡವಾಗಿರುವಾಗ, ನಿನ್ನ ಕಣ್ಣುಗಳು ನನ್ನನ್ನು ನೋಡಿದವು, ನನ್ನ ಆಯುಷ್ಕಾಲದ ಪ್ರಥಮದಿನವು ಪ್ರಾರಂಭವಾಗುವ ಮೊದಲೇ, ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು.
ಕೀರ್ತನೆಗಳು 139 : 17 (IRVKN)
ದೇವರೇ, ನಿನ್ನ ಸಂಕಲ್ಪಗಳು ನನ್ನ ಎಣಿಕೆಯಲ್ಲಿ ಎಷ್ಟೋ ಗೌರವವಾಗಿವೆ, ಅವುಗಳು ಎಷ್ಟೋ ಅಸಂಖ್ಯವಾಗಿವೆ.
ಕೀರ್ತನೆಗಳು 139 : 18 (IRVKN)
ಅವುಗಳನ್ನು ಲೆಕ್ಕಿಸುವುದಾದರೆ ಸಮುದ್ರದ ಮರಳಿಗಿಂತ ಹೆಚ್ಚಾಗಿವೆ, ನಾನು ಎಚ್ಚರವಾಗಲು ಮೊದಲಿನಂತೆಯೇ ನಿನ್ನ ಬಳಿಯಲ್ಲಿರುತ್ತೇನೆ.
ಕೀರ್ತನೆಗಳು 139 : 19 (IRVKN)
ಯೆಹೋವನೇ, ನೀನು ದುಷ್ಟರನ್ನು ಸಂಹರಿಸಿಬಿಟ್ಟರೆ, ಎಷ್ಟೋ ಒಳ್ಳೆಯದು. * ರಕ್ತಪ್ರಿಯರೇ ಕೊಲೆಪಾತಕರೇ, ನನ್ನಿಂದ ತೊಲಗಿಹೋಗಿರಿ.
ಕೀರ್ತನೆಗಳು 139 : 20 (IRVKN)
ದೇವರೇ, ಅವರು ನಿನ್ನ ಶತ್ರುಗಳು, ಅಯೋಗ್ಯ ಕಾರ್ಯಕ್ಕಾಗಿ ನಿನ್ನ ಹೆಸರೆತ್ತುತ್ತಾರೆ, ಸುಳ್ಳಾಣೆಯಿಡುತ್ತಾರೆ.
ಕೀರ್ತನೆಗಳು 139 : 21 (IRVKN)
ಯೆಹೋವನೇ, ನಿನ್ನನ್ನು ದ್ವೇಷಿಸುವವರನ್ನು ನಾನು ದ್ವೇಷಿಸುತ್ತೇನಲ್ಲವೋ? ನಿನ್ನ ವಿರೋಧಿಗಳಿಗೆ ನಾನು ಬೇಸರಗೊಳ್ಳುವುದಿಲ್ಲವೋ?
ಕೀರ್ತನೆಗಳು 139 : 22 (IRVKN)
ನಾನು ಅವರನ್ನು ಸಂಪೂರ್ಣವಾಗಿ ದ್ವೇಷಿಸುತ್ತೇನೆ, ಅವರು ನನಗೂ ವೈರಿಗಳೇ ಆಗಿದ್ದಾರೆ.
ಕೀರ್ತನೆಗಳು 139 : 23 (IRVKN)
ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ, ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ತಿಳಿದುಕೋ.
ಕೀರ್ತನೆಗಳು 139 : 24 (IRVKN)
ನನ್ನಲ್ಲಿ ಕೇಡಿನ ಮಾರ್ಗ ಇರುತ್ತದೋ ಏನೋ ನೋಡಿ, ಸನಾತನ ಮಾರ್ಗದಲ್ಲಿ ನನ್ನನ್ನು ನಡೆಸು.

1 2 3 4 5 6 7 8 9 10 11 12 13 14 15 16 17 18 19 20 21 22 23 24