ಕೀರ್ತನೆಗಳು 109 : 1 (IRVKN)
ರಕ್ಷಣೆಗಾಗಿ ಭಕ್ತನ ಪ್ರಾರ್ಥನೆ *ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ.
ಯಾಜ 26; ಧರ್ಮೋ 28; ಕೀರ್ತ 35; 69; ಮತ್ತಾ 5:38-44 *
ನಾನು ಸ್ತುತಿಸುವ ದೇವರೇ, ಸುಮ್ಮನಿರಬೇಡ.
ಕೀರ್ತನೆಗಳು 109 : 2 (IRVKN)
ದುಷ್ಟರು, ವಂಚಕರು ನನಗೆ ವಿರುದ್ಧವಾಗಿ ಬಾಯ್ದೆರೆದಿದ್ದಾರೆ. ಅವರು ಸುಳ್ಳು ನಾಲಿಗೆಯಿಂದ ನನ್ನೊಡನೆ ಮಾತನಾಡುತ್ತಿದ್ದಾರೆ.
ಕೀರ್ತನೆಗಳು 109 : 3 (IRVKN)
ಅವರು ಹಗೆಯ ನುಡಿಗಳಿಂದ ನನ್ನನ್ನು ಮುತ್ತಿಕೊಂಡು, ಕಾರಣವಿಲ್ಲದೆ ನನ್ನ ಸಂಗಡ ಯುದ್ಧ ಮಾಡಿದ್ದಾರೆ.
ಕೀರ್ತನೆಗಳು 109 : 4 (IRVKN)
ನಾನು ಅವರನ್ನು ಪ್ರೀತಿಸಿದರೂ, ಅವರು ನನ್ನನ್ನು ವಿರೋಧಿಸುತ್ತಾರೆ; ನಾನಾದರೋ ನಿನಗೆ ಮೊರೆಯಿಡುತ್ತೇನೆ.
ಕೀರ್ತನೆಗಳು 109 : 5 (IRVKN)
ಉಪಕಾರಕ್ಕೆ ಅಪಕಾರವನ್ನು ಮಾಡಿದ್ದಾರೆ; ನಾನು ಪ್ರೀತಿಸಿದ್ದಕ್ಕೆ ಪ್ರತಿಯಾಗಿ ನನ್ನನ್ನು ದ್ವೇಷಿಸಿದ್ದಾರೆ.
ಕೀರ್ತನೆಗಳು 109 : 6 (IRVKN)
ದುಷ್ಟ ಅಧಿಕಾರಿಯನ್ನು ಅವರ ಮೇಲೆ ನೇಮಿಸು; ತಪ್ಪು ಹೊರಿಸುವವನನ್ನು ಅವನ ಬಲಗಡೆಯಲ್ಲಿ ನಿಲ್ಲಿಸು.
ಕೀರ್ತನೆಗಳು 109 : 7 (IRVKN)
ನ್ಯಾಯವಿಚಾರಣೆಯಲ್ಲಿ ಅವನು ಅಪರಾಧಿ ಎಂದು ತೀರ್ಪುಹೊಂದಲಿ; ಅವನ ಪ್ರಾರ್ಥನೆಯೂ ಪಾಪವೆಂದು ಎಣಿಸಲ್ಪಡಲಿ.
ಕೀರ್ತನೆಗಳು 109 : 8 (IRVKN)
ಅವನ ಜೀವಿತದ ದಿನಗಳು ಸ್ವಲ್ಪವಾಗಿರಲಿ; ಅವನ ಉದ್ಯೋಗವು ಮತ್ತೊಬ್ಬನಿಗಾಗಲಿ.
ಕೀರ್ತನೆಗಳು 109 : 9 (IRVKN)
ಅವನ ಮಕ್ಕಳು ಅನಾಥರೂ ಮತ್ತು ಹೆಂಡತಿ ವಿಧವೆಯೂ ಆಗಲಿ.
ಕೀರ್ತನೆಗಳು 109 : 10 (IRVKN)
ಅವನ ಮಕ್ಕಳು ತಮ್ಮ ಹಾಳಾದ ಸ್ಥಳಗಳನ್ನು ಬಿಟ್ಟು, ದಿಕ್ಕಿಲ್ಲದವರಂತೆ ಅಲೆಯುತ್ತಾ ಭಿಕ್ಷೆಬೇಡಲಿ.
ಕೀರ್ತನೆಗಳು 109 : 11 (IRVKN)
ಸಾಲಕೊಟ್ಟವನು ಅವನ ಆಸ್ತಿಯನ್ನೆಲ್ಲಾ ಕಸಿದುಕೊಳ್ಳಲಿ; ಪರರು ಅವನ ಕಷ್ಟಾರ್ಜಿತವನ್ನು ಸುಲಿದುಕೊಳ್ಳಲಿ.
ಕೀರ್ತನೆಗಳು 109 : 12 (IRVKN)
ಅವನಿಗೆ ಯಾರೂ ಕೃಪೆತೋರಿಸದಿರಲಿ, ದಿಕ್ಕಿಲ್ಲದ ಅವನ ಮಕ್ಕಳಿಗೆ ಯಾರೂ ದಯೆತೋರದಿರಲಿ,
ಕೀರ್ತನೆಗಳು 109 : 13 (IRVKN)
ಅವನ ಸಂತತಿಯು ನಿರ್ಮೂಲವಾಗಲಿ; ಎರಡನೆಯ ತಲೆಯಲ್ಲಿಯೇ ಅದು ನಿರ್ನಾಮವಾಗಿ ಹೋಗಲಿ.
ಕೀರ್ತನೆಗಳು 109 : 14 (IRVKN)
ಯೆಹೋವನು ಅವನ ಹಿರಿಯರ ಪಾಪವನ್ನು ಮರೆಯದಿರಲಿ; ಅವನ ತಾಯಿಯ ಪಾಪವು ಅಳಿದುಹೋಗದಿರಲಿ.
ಕೀರ್ತನೆಗಳು 109 : 15 (IRVKN)
ಅವು ಯೆಹೋವನ ಜ್ಞಾಪಕದಲ್ಲಿ ಇದ್ದೇ ಇರಲಿ. ಆತನು ಅವರ ಹೆಸರನ್ನು ಭೂಮಿಯಿಂದ ತೆಗೆದುಹಾಕಲಿ.
ಕೀರ್ತನೆಗಳು 109 : 16 (IRVKN)
ಏಕೆಂದರೆ ಅವನು ಕರುಣೆ ತೋರಿಸುವುದನ್ನು ಮರೆತುಬಿಟ್ಟನು, ಬಡವನನ್ನು, ದೀನನನ್ನು, ಮನಗುಂದಿದವನನ್ನು ಹಿಂಸಿಸಿ ಕೊಲ್ಲಬೇಕೆಂದು ಯತ್ನಿಸಿದನು.
ಕೀರ್ತನೆಗಳು 109 : 17 (IRVKN)
ಶಪಿಸುವುದು ಅವನಿಗೆ ಇಷ್ಟವಾಗಿತ್ತು, ಅದೇ ಅವನಿಗೆ ಬರಲಿ! ಆಶೀರ್ವದಿಸುವುದು ಅವನಿಗೆ ಇಷ್ಟವಿರಲ್ಲಿಲ್ಲ, ಅದು ಅವನಿಂದ ದೂರವಿರಲಿ!
ಕೀರ್ತನೆಗಳು 109 : 18 (IRVKN)
ಅವನು ಶಾಪವನ್ನೇ ವಸ್ತ್ರವನ್ನಾಗಿ ಹೊದ್ದುಕೊಳ್ಳಲಿ, ಅದು ನೀರಿನಂತೆ ಅವನ ಅಂತರಂಗದಲ್ಲಿಯೂ, ಎಣ್ಣೆಯಂತೆ ಎಲುಬುಗಳಲ್ಲಿಯೂ ಸೇರಲಿ.
ಕೀರ್ತನೆಗಳು 109 : 19 (IRVKN)
ಶಾಪವೇ ಅವನ ಹೊದಿಕೆಯಂತೆಯೂ, ನಿತ್ಯವಾದ ನಡುಕಟ್ಟಿನಂತೆಯೂ ಆಗಲಿ.
ಕೀರ್ತನೆಗಳು 109 : 20 (IRVKN)
ನನ್ನನ್ನು ಎದುರಿಸಿ ಕೀಳುಮಾತನಾಡುವವರಿಗೆ ಯೆಹೋವನಿಂದ ಬರುವ ಪ್ರತಿಫಲವು ಇದೇ ಆಗಿರಲಿ.
ಕೀರ್ತನೆಗಳು 109 : 21 (IRVKN)
ಕರ್ತನೇ, ಯೆಹೋವನೇ, ನಿನ್ನ ಕೃಪೆಯು ಹಿತಕರವಾಗಿದೆ; ನಿನ್ನ ಹೆಸರಿನ ನಿಮಿತ್ತ ನನ್ನ ಪಕ್ಷವನ್ನು ಹಿಡಿದು ರಕ್ಷಿಸು.
ಕೀರ್ತನೆಗಳು 109 : 22 (IRVKN)
ನಾನು ಬಡವನೂ, ದೀನನೂ ಆಗಿದ್ದೇನಲ್ಲಾ! ನನ್ನ ಹೃದಯದಲ್ಲಿ ಅಲಗು ನೆಟ್ಟಂತಾಗಿದೆ.
ಕೀರ್ತನೆಗಳು 109 : 23 (IRVKN)
ಸಂಜೆಯ ನೆರಳಿನಂತೆ ಗತಿಸಿಹೋಗುತ್ತಿದ್ದೇನೆ; ಗಾಳಿಯು ಬಡಿದುಕೊಂಡು ಹೋಗುವ ಮಿಡತೆಯಂತಿದ್ದೇನೆ.
ಕೀರ್ತನೆಗಳು 109 : 24 (IRVKN)
ಉಪವಾಸದಿಂದ ನನ್ನ ಮೊಣಕಾಲುಗಳು ಬಲಹೀನವಾದವು; ನನ್ನ ದೇಹವು ಎಣ್ಣೆಯಿಲ್ಲದೆ ಕ್ಷೀಣವಾಯಿತು.
ಕೀರ್ತನೆಗಳು 109 : 25 (IRVKN)
ನಾನು ಜನರ ಪರಿಹಾಸ್ಯಕ್ಕೆ ಗುರಿಯಾಗಿದ್ದೇನೆ; ನನ್ನನ್ನು ನೋಡುವವರು ತಲೆಯಾಡಿಸುತ್ತಾರೆ.
ಕೀರ್ತನೆಗಳು 109 : 26 (IRVKN)
ಯೆಹೋವನೇ, ನನ್ನ ದೇವರೇ, ಸಹಾಯಮಾಡು; ನಿನ್ನ ಕೃಪೆಗೆ ತಕ್ಕಂತೆ ರಕ್ಷಿಸು.
ಕೀರ್ತನೆಗಳು 109 : 27 (IRVKN)
ಆಗ ಅವರು ಇದು ನಿನ್ನ ಕೈಕೆಲಸವೆಂದೂ, ಯೆಹೋವನಾದ ನೀನೇ ಇದನ್ನು ಮಾಡಿದೆ ಎಂದು ತಿಳಿದುಕೊಳ್ಳುವರು.
ಕೀರ್ತನೆಗಳು 109 : 28 (IRVKN)
ಅವರು ಶಪಿಸಲಿ, ಚಿಂತೆಯಿಲ್ಲ; ನೀನು ಆಶೀರ್ವದಿಸುವಿ. ಅವರು ಎದ್ದು ಅಪಮಾನ ಹೊಂದುವರು. ಆದರೆ ನಿನ್ನ ಸೇವಕನಾದ ನಾನು ಉಲ್ಲಾಸಿಸುವೆನು.
ಕೀರ್ತನೆಗಳು 109 : 29 (IRVKN)
ಮಾನಭಂಗವೇ ನನ್ನ ವಿರೋಧಿಗಳಿಗೆ ವಸ್ತ್ರವಾಗಲಿ; ನಾಚಿಕೆಯೇ ಅವರ ಹೊದಿಕೆಯಾಗಲಿ.
ಕೀರ್ತನೆಗಳು 109 : 30 (IRVKN)
ಯೆಹೋವನನ್ನು ಬಹಳವಾಗಿ ಕೊಂಡಾಡುವೆನು; ಜನಸಮೂಹದ ಮಧ್ಯದಲ್ಲಿ ಆತನನ್ನು ಕೀರ್ತಿಸುವೆನು.
ಕೀರ್ತನೆಗಳು 109 : 31 (IRVKN)
ಆತನು ದೀನನ ಬಲಗಡೆಯಲ್ಲಿ ನಿಂತುಕೊಂಡು, ಪ್ರಾಣಶಿಕ್ಷೆ ವಿಧಿಸುವವರ ಕೈಯಿಂದ ತಪ್ಪಿಸಿ ರಕ್ಷಿಸುವನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31