ಙ್ಞಾನೋಕ್ತಿಗಳು 13 : 1 (IRVKN)
ಜ್ಞಾನಿಯಾದ ಮಗನು ತಂದೆಯ ನೀತಿ ಶಿಕ್ಷಣವನ್ನು ಕೇಳುವನು, ಧರ್ಮನಿಂದಕನೋ ಗದರಿಕೆಯನ್ನು ಕೇಳನು.
ಙ್ಞಾನೋಕ್ತಿಗಳು 13 : 2 (IRVKN)
ಬಾಯಿಯ ಫಲವಾಗಿ ಮನುಷ್ಯನು ಸುಖವನ್ನು ಅನುಭವಿಸುವನು, ಬಲಾತ್ಕಾರವೇ ದ್ರೋಹಿಗಳ ಕೋರಿಕೆ.
ಙ್ಞಾನೋಕ್ತಿಗಳು 13 : 3 (IRVKN)
ಬಾಯನ್ನು ಕಾಯುವವನು ಜೀವವನ್ನು ಕಾಯುತ್ತಾನೆ, ತುಟಿಗಳನ್ನು ತೆರೆದುಬಿಡುವವನು ನಾಶವಾಗುವನು.
ಙ್ಞಾನೋಕ್ತಿಗಳು 13 : 4 (IRVKN)
ಸೋಮಾರಿಯ ಆಶೆಯು ವ್ಯರ್ಥ, ಉದ್ಯೋಗಿಯ ಆತ್ಮಕ್ಕೆ ಪುಷ್ಟಿ.
ಙ್ಞಾನೋಕ್ತಿಗಳು 13 : 5 (IRVKN)
ಶಿಷ್ಟನು ಮೋಸಕ್ಕೆ ಅಸಹ್ಯಪಟ್ಟು ಅದನ್ನು ಮಾಡಲಾರನು, ದುಷ್ಟನ ನಡತೆಯು ಹೇಸಿಕೆಗೂ, ನಾಚಿಕೆಗೂ ಆಸ್ಪದ.
ಙ್ಞಾನೋಕ್ತಿಗಳು 13 : 6 (IRVKN)
ಧರ್ಮವು ನಿರ್ದೋಷಿಯನ್ನು ಕಾಯುವುದು, ಅಧರ್ಮವು ದೋಷಿಯನ್ನು ಕೆಡವಿಬಿಡುವುದು.
ಙ್ಞಾನೋಕ್ತಿಗಳು 13 : 7 (IRVKN)
ಒಬ್ಬನು ಧನವನ್ನು ಸಂಗ್ರಹಿಸಿದರೂ, ಏನೂ ಇಲ್ಲದ ದರಿದ್ರನ ಹಾಗೆ ವರ್ತಿಸುತ್ತಾನೆ, ಮತ್ತೊಬ್ಬನು ಧನವನ್ನೆಲ್ಲಾ ವೆಚ್ಚಮಾಡಿ ಬಡವನಾದರೂ, ಬಹು ಐಶ್ವರ್ಯವಂತನ ಹಾಗೆ ವರ್ತಿಸುತ್ತಾನೆ.
ಙ್ಞಾನೋಕ್ತಿಗಳು 13 : 8 (IRVKN)
ಧನವಂತನ ಪ್ರಾಣರಕ್ಷಣೆಗೆ ಅವನ ಧನವೇ ಕ್ರಯ, ಬಡವನಿಗೆ ಯಾವ ಬೆದರಿಕೆಯೂ ಇಲ್ಲ.
ಙ್ಞಾನೋಕ್ತಿಗಳು 13 : 9 (IRVKN)
ಶಿಷ್ಟರ ಬೆಳಕು ಬೆಳಗುವುದು, ದುಷ್ಟರ ದೀಪವು ಆರುವುದು.
ಙ್ಞಾನೋಕ್ತಿಗಳು 13 : 10 (IRVKN)
ಹೆಮ್ಮೆಯ ಫಲವು ಕಲಹವೇ, ಬುದ್ಧಿವಾದಕ್ಕೆ ಕಿವಿಗೊಡುವವರಲ್ಲಿ ಜ್ಞಾನ.
ಙ್ಞಾನೋಕ್ತಿಗಳು 13 : 11 (IRVKN)
ಸುಮ್ಮನೆ ಸಿಕ್ಕಿದ ಸಂಪತ್ತು ಕ್ಷಯಿಸುವುದು, ದುಡಿದು ಕೂಡಿಸಿಕೊಂಡವನಿಗೆ ಅಭಿವೃದ್ಧಿಯಾಗುವುದು.
ಙ್ಞಾನೋಕ್ತಿಗಳು 13 : 12 (IRVKN)
ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವುದು, ಕೈಗೂಡಿದ ಇಷ್ಟಾರ್ಥವು ಜೀವವೃಕ್ಷವು.
ಙ್ಞಾನೋಕ್ತಿಗಳು 13 : 13 (IRVKN)
ದೇವರ ವಾಕ್ಯವನ್ನು ಉಲ್ಲಂಘಿಸುವವನು ನಾಶವಾಗುವನು, ಆಜ್ಞೆಯನ್ನು ಭಯಭಕ್ತಿಯಿಂದ ಕೈಕೊಳ್ಳುವವನು ಸಫಲವನ್ನು ಹೊಂದುವನು.
ಙ್ಞಾನೋಕ್ತಿಗಳು 13 : 14 (IRVKN)
ಜ್ಞಾನಿಯ ಬೋಧನೆ ಜೀವದ ಬುಗ್ಗೆ, ಅದನ್ನಾಲಿಸುವವನು ಮೃತ್ಯುಪಾಶದಿಂದ ತಪ್ಪಿಸಿಕೊಳ್ಳುವನು.
ಙ್ಞಾನೋಕ್ತಿಗಳು 13 : 15 (IRVKN)
ಸುಬುದ್ಧಿಯು ದಯಾಸ್ಪದವು, ದ್ರೋಹಿಯ ಮಾರ್ಗವು ನಾಶಕರ.
ಙ್ಞಾನೋಕ್ತಿಗಳು 13 : 16 (IRVKN)
ಪ್ರತಿಯೊಬ್ಬ ಜಾಣನು ತನ್ನ ಕೆಲಸವನ್ನು ತಿಳಿವಳಿಕೆಯಿಂದ ನಡೆಸುವನು, ಮೂಢನು ತನ್ನ ಮೂರ್ಖತನವನ್ನು ತೋರ್ಪಡಿಸುವನು.
ಙ್ಞಾನೋಕ್ತಿಗಳು 13 : 17 (IRVKN)
ಕೆಟ್ಟ ದೂತನು ಕೇಡಿಗೆ ಬೀಳುವನು, ನಂಬಿಗಸ್ತನಾದ ರಾಯಭಾರಿಯು ಕ್ಷೇಮದಾಯಕನು.
ಙ್ಞಾನೋಕ್ತಿಗಳು 13 : 18 (IRVKN)
ಶಿಕ್ಷೆಯನ್ನು ತ್ಯಜಿಸುವವನಿಗೆ ಬಡತನ ಮತ್ತು ಅವಮಾನ, ಗದರಿಕೆಯನ್ನು ಗಮನಿಸುವವನಿಗೆ ಮಾನ.
ಙ್ಞಾನೋಕ್ತಿಗಳು 13 : 19 (IRVKN)
ಇಷ್ಟಸಿದ್ಧಿ ಮನಸ್ಸಿಗೆ ಸಿಹಿ, ಕೆಟ್ಟದ್ದನ್ನು ಬಿಡುವುದು ಮೂಢರಿಗೆ ಕಹಿ.
ಙ್ಞಾನೋಕ್ತಿಗಳು 13 : 20 (IRVKN)
ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು, ಜ್ಞಾನಹೀನರ ಒಡನಾಡಿ ಸಂಕಟಪಡುವನು.
ಙ್ಞಾನೋಕ್ತಿಗಳು 13 : 21 (IRVKN)
ಅಮಂಗಳವು ಪಾಪಿಗಳನ್ನು ಹಿಂಬಾಲಿಸುವುದು, ಮಂಗಳವು ಸಜ್ಜನರಿಗೆ ಪ್ರತಿಫಲವಾಗುವುದು.
ಙ್ಞಾನೋಕ್ತಿಗಳು 13 : 22 (IRVKN)
ಒಳ್ಳೆಯವನ ಆಸ್ತಿ ಸಂತತಿಯವರಿಗೆ ಬಾಧ್ಯ, ಪಾಪಿಯ ಸೊತ್ತು ಸಜ್ಜನರಿಗೆ ಗಂಟು.
ಙ್ಞಾನೋಕ್ತಿಗಳು 13 : 23 (IRVKN)
ಬಡವರಿಗೆ ಬಂಜರು ಭೂಮಿಯೂ ಬಹು ಬೆಳೆಯನ್ನೀಯುವುದು, ಅನ್ಯಾಯದಿಂದ ಹಾಳಾದ ಸುದ್ದಿಯು ಉಂಟು.
ಙ್ಞಾನೋಕ್ತಿಗಳು 13 : 24 (IRVKN)
ಬೆತ್ತ ಹಿಡಿಯದ ತಂದೆ ಮಗನಿಗೆ ಶತ್ರು, ಸುಶಿಕ್ಷಣವನ್ನು ನೀಡುವ ತಂದೆ ಮಗನಿಗೆ ಮಿತ್ರ.
ಙ್ಞಾನೋಕ್ತಿಗಳು 13 : 25 (IRVKN)
ಶಿಷ್ಟನು ಹೊಟ್ಟೆತುಂಬಾ ಉಣ್ಣುವನು, ದುಷ್ಟನ ಹೊಟ್ಟೆ ಹಸಿದಿರುವುದು.
❮
❯