ಙ್ಞಾನೋಕ್ತಿಗಳು 12 : 1 (IRVKN)
ತಿಳಿವಳಿಕೆಯನ್ನು ಪ್ರೀತಿಸುವವನು ಶಿಕ್ಷಣವನ್ನು ಪ್ರೀತಿಸುತ್ತಾನೆ, ಮೂರ್ಖನು ಗದರಿಕೆಯನ್ನು ದ್ವೇಷಿಸುತ್ತಾನೆ.
ಙ್ಞಾನೋಕ್ತಿಗಳು 12 : 2 (IRVKN)
ಯೆಹೋವನು ಒಳ್ಳೆಯವನಿಗೆ ದಯೆತೋರಿಸುವನು, ಕುಯುಕ್ತಿಯುಳ್ಳವನನ್ನು ಕೆಟ್ಟವನೆಂದು ನಿರ್ಣಯಿಸುವನು.
ಙ್ಞಾನೋಕ್ತಿಗಳು 12 : 3 (IRVKN)
ಯಾರೂ ದುಷ್ಟತನದಿಂದ ಸ್ಥಿರನಾಗನು, ಶಿಷ್ಟನು ಯಾವಾಗಲೂ ದೃಢಮೂಲನೇ.
ಙ್ಞಾನೋಕ್ತಿಗಳು 12 : 4 (IRVKN)
ಗುಣವತಿಯಾದ ಸ್ತ್ರೀಯು ಪತಿಯ ತಲೆಗೆ ಕಿರೀಟ, ಮಾನ ಕಳೆಯುವವಳು ಪತಿಯ ಎಲುಬಿಗೆ ಕ್ಷಯ.
ಙ್ಞಾನೋಕ್ತಿಗಳು 12 : 5 (IRVKN)
ಶಿಷ್ಟರ ಉದ್ದೇಶ ನ್ಯಾಯ, ದುಷ್ಟರ ಆಲೋಚನೆ ಮೋಸ.
ಙ್ಞಾನೋಕ್ತಿಗಳು 12 : 6 (IRVKN)
ಕೆಟ್ಟವರ ಮಾತು ರಕ್ತಕ್ಕೆ ಹೊಂಚು, ಯಥಾರ್ಥವಂತರ ನುಡಿ ಪ್ರಾಣರಕ್ಷಣೆ.
ಙ್ಞಾನೋಕ್ತಿಗಳು 12 : 7 (IRVKN)
ದುರ್ಜನರು ಕೆಡವಲ್ಪಟ್ಟು ನಿರ್ಮೂಲರಾಗುವರು, ಸಜ್ಜನರ ಮನೆಯು ಸ್ಥಿರವಾಗಿ ನಿಲ್ಲುವುದು.
ಙ್ಞಾನೋಕ್ತಿಗಳು 12 : 8 (IRVKN)
ಬುದ್ಧಿವಂತನನ್ನು ಅವನ ಬುದ್ಧಿಗೆ ತಕ್ಕಂತೆ ಹೊಗಳುವರು, ವಕ್ರಬುದ್ಧಿಯುಳ್ಳವನನ್ನು ತಿರಸ್ಕರಿಸುವರು.
ಙ್ಞಾನೋಕ್ತಿಗಳು 12 : 9 (IRVKN)
ಹೊಟ್ಟೆಗಿಲ್ಲದ ಡಾಂಭಿಕನಿಗಿಂತಲೂ ಸೇವಕನುಳ್ಳ ಸಾಧಾರಣ ಮನುಷ್ಯನ ಸ್ಥಿತಿಯೇ ಲೇಸು.
ಙ್ಞಾನೋಕ್ತಿಗಳು 12 : 10 (IRVKN)
ಶಿಷ್ಟನು ತನ್ನ ಪಶುಗಳ ಕ್ಷೇಮವನ್ನು ಲಕ್ಷಿಸುತ್ತಾನೆ, ದುಷ್ಟನ ವಾತ್ಸಲ್ಯವೋ ಕ್ರೂರತನವೇ.
ಙ್ಞಾನೋಕ್ತಿಗಳು 12 : 11 (IRVKN)
ದುಡಿದು ಹೊಲಗೇಯುವವನು ಹೊಟ್ಟೆತುಂಬಾ ಉಣ್ಣುವನು, ವ್ಯರ್ಥಕಾರ್ಯಾಸಕ್ತನು ಬುದ್ಧಿಹೀನನೇ.
ಙ್ಞಾನೋಕ್ತಿಗಳು 12 : 12 (IRVKN)
ಕೆಡುಕರ ಕೊಳ್ಳೆಯು ದುಷ್ಟರಿಗೆ ಇಷ್ಟ, ಆದರೆ ಶಿಷ್ಟರ ಬುಡ ಫಲದಾಯಕ.
ಙ್ಞಾನೋಕ್ತಿಗಳು 12 : 13 (IRVKN)
ದುಷ್ಟನು ತನ್ನ ತುಟಿಗಳ ದೋಷದಿಂದ ಬೋನಿಗೆ ಬೀಳುವನು, ಶಿಷ್ಟನು ಇಕ್ಕಟ್ಟಿನಿಂದ ಪಾರಾಗುವನು.
ಙ್ಞಾನೋಕ್ತಿಗಳು 12 : 14 (IRVKN)
ಬಾಯಿಯ ಫಲವಾಗಿ ಮನುಷ್ಯನು ಬೇಕಾದಷ್ಟು ಸುಖವನ್ನು ಅನುಭವಿಸುವನು, ಅವನ ಕೈಕೆಲಸದ ಫಲವು ಅವನಿಗೆ ಪ್ರಾಪ್ತವಾಗುವುದು.
ಙ್ಞಾನೋಕ್ತಿಗಳು 12 : 15 (IRVKN)
ಮೂರ್ಖನ ನಡತೆ ಅವನ ದೃಷ್ಟಿಗೆ ಸರಿ, ಜ್ಞಾನಿಯು ಉಚಿತಾಲೋಚನೆಯನ್ನು ಗಮನಿಸುವನು.
ಙ್ಞಾನೋಕ್ತಿಗಳು 12 : 16 (IRVKN)
ಮೂರ್ಖನ ಸಿಟ್ಟು ತಟ್ಟನೆ ರಟ್ಟಾಗುವುದು, ಜಾಣನು ಅವಮಾನವನ್ನು ಮರೆಮಾಡುವನು.
ಙ್ಞಾನೋಕ್ತಿಗಳು 12 : 17 (IRVKN)
ಸತ್ಯವನ್ನಾಡುವವನು ನ್ಯಾಯವನ್ನು ತೋರ್ಪಡಿಸುವನು, ಸುಳ್ಳುಸಾಕ್ಷಿಯು ಅಸತ್ಯವನ್ನು ನುಡಿಯುವನು.
ಙ್ಞಾನೋಕ್ತಿಗಳು 12 : 18 (IRVKN)
ಕತ್ತಿ ತಿವಿದ ಹಾಗೆ ದುಡುಕಿ ಮಾತನಾಡುವವರುಂಟು, ಜ್ಞಾನವಂತರ ಮಾತು ಸ್ವಸ್ಥತೆಯನ್ನು ತರುವುದು.
ಙ್ಞಾನೋಕ್ತಿಗಳು 12 : 19 (IRVKN)
ಸತ್ಯದ ತುಟಿ ಶಾಶ್ವತ, ಸುಳ್ಳಿನ ನಾಲಿಗೆ ಕ್ಷಣಿಕ.
ಙ್ಞಾನೋಕ್ತಿಗಳು 12 : 20 (IRVKN)
ಕೇಡನ್ನು ಕಲ್ಪಿಸುವವರ ಹೃದಯದಲ್ಲಿ ಮೋಸ, ಹಿತೋಪದೇಶಕರ ಮನಸ್ಸಿನಲ್ಲಿ ಉಲ್ಲಾಸ.
ಙ್ಞಾನೋಕ್ತಿಗಳು 12 : 21 (IRVKN)
ಸಜ್ಜನರಿಗೆ ಯಾವ ಹಾನಿಯೂ ಸಂಭವಿಸದು, ದುರ್ಜನರಿಗೆ ಕೇಡು ತುಂಬಿ ತುಳುಕುವುದು.
ಙ್ಞಾನೋಕ್ತಿಗಳು 12 : 22 (IRVKN)
ಸುಳ್ಳುತುಟಿ ಯೆಹೋವನಿಗೆ ಅಸಹ್ಯವಾಗಿವೆ. ಸತ್ಯವಂತರು ಆತನಿಗೆ ಆನಂದ ತರುತ್ತಾರೆ.
ಙ್ಞಾನೋಕ್ತಿಗಳು 12 : 23 (IRVKN)
ಜಾಣನು ತನ್ನ ಜ್ಞಾನವನ್ನು ಗುಪ್ತಪಡಿಸುವನು, ಮೂಢರ ಮನಸ್ಸು ಮೂರ್ಖತನವನ್ನು ಪ್ರಕಟಿಸುವುದು.
ಙ್ಞಾನೋಕ್ತಿಗಳು 12 : 24 (IRVKN)
ಚುರುಕುಗೈಯವನಿಗೆ ರಾಜ್ಯಾಧಿಕಾರ, ಮೈಗಳ್ಳನಿಗೆ ದಾಸತ್ವದ ಬದುಕು.
ಙ್ಞಾನೋಕ್ತಿಗಳು 12 : 25 (IRVKN)
ಕಳವಳವು ಮನಸ್ಸನ್ನು ಕುಗ್ಗಿಸುವುದು, ಕನಿಕರದ ಮಾತು ಅದನ್ನು ಹಿಗ್ಗಿಸುವುದು.
ಙ್ಞಾನೋಕ್ತಿಗಳು 12 : 26 (IRVKN)
ಸನ್ಮಾರ್ಗಿಯು ನೆರೆಯವನಿಗೆ ಮಾರ್ಗತೋರಿಸುವನು, ದುರ್ಮಾರ್ಗಿಯು ಮಾರ್ಗತಪ್ಪಿಸುವನು.
ಙ್ಞಾನೋಕ್ತಿಗಳು 12 : 27 (IRVKN)
ಮೈಗಳ್ಳನು ಹಿಡಿದ ಬೇಟೆಯನ್ನೂ ಅನುಭವಿಸಲಾರನು, ಸನ್ಮಾರ್ಗದಲ್ಲಿ ನಡೆಯುವವನಿಗೆ ಅಮೂಲ್ಯ ಸಂಪತ್ತು ದೊರಕುವುದು.
ಙ್ಞಾನೋಕ್ತಿಗಳು 12 : 28 (IRVKN)
ಧರ್ಮಮಾರ್ಗದಿಂದ ಜೀವಲಾಭವು, ಆ ಮಾರ್ಗದಲ್ಲಿ ಮರಣವಿಲ್ಲ.
❮
❯