ಅರಣ್ಯಕಾಂಡ 35 : 1 (IRVKN)
ಲೇವಿಯರಿಗೆ ಕೊಡಲಾದ ಊರುಗಳು ಯೊರ್ದನ್ ನದಿಯ ತೀರದಲ್ಲಿ ಯೆರಿಕೋ ಪಟ್ಟಣದ ಹತ್ತಿರವಿರುವ ಮೋವಾಬ್ಯರ ಮೈದಾನದಲ್ಲಿ ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
ಅರಣ್ಯಕಾಂಡ 35 : 2 (IRVKN)
“ಇಸ್ರಾಯೇಲರು ತಾವು ಹೊಂದುವ ಸ್ವತ್ತಿನಲ್ಲಿ ಕೆಲವು ಪಟ್ಟಣಗಳನ್ನೂ, ಆ ಪಟ್ಟಣಗಳ ಸುತ್ತಲಿನ ಭೂಮಿಯನ್ನೂ ಲೇವಿಯರಿಗೆ ವಾಸಕ್ಕಾಗಿ ಕೊಡಬೇಕೆಂದು ಅವರಿಗೆ ಆಜ್ಞಾಪಿಸು.
ಅರಣ್ಯಕಾಂಡ 35 : 3 (IRVKN)
ಆ ಪಟ್ಟಣಗಳು ಲೇವಿಯರ ವಾಸ ಸ್ಥಳವಾಗುವುದು. ಸುತ್ತಲಿರುವ ಭೂಮಿಗಳು ಅವರ ದನಕುರಿಗಳಿಗಾಗಿಯೂ ಮತ್ತು ಪಶುಗಳಿಗಾಗಿಯೂ ಇರುವವು.
ಅರಣ್ಯಕಾಂಡ 35 : 4 (IRVKN)
ನೀವು ಲೇವಿಯರಿಗೆ ಕೊಡುವ ಪಟ್ಟಣಗಳು ಸುತ್ತಲಿನ ಭೂಮಿಯ ಪ್ರತಿಯೊಂದು ಪಟ್ಟಣಗಳ ಗೋಡೆಯಿಂದ ನಾಲ್ಕು ಕಡೆಯಲ್ಲಿಯೂ ಸಾವಿರ ಮೊಳದಷ್ಟು ವಿಸ್ತರಿಸಿಕೊಂಡಿರಬೇಕು.
ಅರಣ್ಯಕಾಂಡ 35 : 5 (IRVKN)
ನೀವು ಪಟ್ಟಣದ ಹೊರಗಡೆ ಪೂರ್ವ ದಿಕ್ಕಿನಲ್ಲಿ ಎರಡು ಸಾವಿರ ಮೊಳ, ದಕ್ಷಿಣದಲ್ಲಿ ಎರಡು ಸಾವಿರ ಮೊಳ, ಪಶ್ಚಿಮದಲ್ಲಿ ಎರಡು ಸಾವಿರ ಮೊಳ, ಉತ್ತರದಲ್ಲಿ ಎರಡು ಸಾವಿರ ಮೊಳ, ಅಳೆಯಬೇಕು. ಮಧ್ಯದಲ್ಲಿ ಪಟ್ಟಣಗಳಿರಬೇಕು. ಹೀಗೆ ಅವರ ಪಟ್ಟಣಗಳ ಉಪನಗರಗಳು ಇರಬೇಕು.
ಅರಣ್ಯಕಾಂಡ 35 : 6 (IRVKN)
ಮನುಷ್ಯನನ್ನು ಹತ್ಯೆಮಾಡಿದವರು ಆಶ್ರಯಕ್ಕಾಗಿ ಓಡಿ ಹೋಗುವುದಕ್ಕೋಸ್ಕರ ನೀವು ನೇಮಿಸುವ ಆರು ಆಶ್ರಯನಗರಗಳನ್ನೂ, ಬೇರೆ ನಲ್ವತ್ತೆರಡು ಪಟ್ಟಣಗಳನ್ನೂ ಅಂತು ನಲ್ವತ್ತೆಂಟು ಪಟ್ಟಣಗಳನ್ನು ಲೇವಿಯರಿಗೆ ಕೊಡಬೇಕು.
ಅರಣ್ಯಕಾಂಡ 35 : 7 (IRVKN)
ನೀವು ಲೇವಿಯರಿಗೆ ಹುಲ್ಲುಗಾವಲುಗಳ ಸಂಗಡ ಕೊಡಬೇಕಾದ ಸಮಸ್ತ ಪಟ್ಟಣಗಳು ನಲ್ವತ್ತೆಂಟಾಗಿರಬೇಕು.
ಅರಣ್ಯಕಾಂಡ 35 : 8 (IRVKN)
ಇಸ್ರಾಯೇಲರ ಸ್ವತ್ತಿನಲ್ಲಿ ಆಯಾ ಕುಲದ ಸ್ವತ್ತಿನ ಪ್ರಮಾಣಕ್ಕೆ ತಕ್ಕ ಹಾಗೆ ಹೆಚ್ಚಾದ ಜನರುಳ್ಳವರಿಂದ ಹೆಚ್ಚಾಗಿಯೂ, ಕಡಿಮೆಯಾದ ಜನರಿಂದ ಕಡಿಮೆಯಾಗಿಯೂ ಲೇವಿಯರಿಗೋಸ್ಕರ ಊರುಗಳನ್ನು ಕೊಡಿಸಬೇಕು.”
ಅರಣ್ಯಕಾಂಡ 35 : 9 (IRVKN)
ಆಶ್ರಯ ಪಟ್ಟಣಗಳು ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
ಅರಣ್ಯಕಾಂಡ 35 : 10 (IRVKN)
“ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ನೀವು ಯೊರ್ದನ್ ನದಿಯನ್ನು ದಾಟಿ ಕಾನಾನ್ ದೇಶವನ್ನು ಸೇರಿದ ನಂತರ,
ಅರಣ್ಯಕಾಂಡ 35 : 11 (IRVKN)
ಆಶ್ರಯ ಸ್ಥಾನಗಳಾಗುವುದಕ್ಕೆ ಪಟ್ಟಣಗಳನ್ನು ನೇಮಿಸಬೇಕು. ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಅವುಗಳಲ್ಲಿ ಒಂದಕ್ಕೆ ಓಡಿಹೋಗಿ ಸುರಕ್ಷಿತನಾಗಿರಬಹುದು.
ಅರಣ್ಯಕಾಂಡ 35 : 12 (IRVKN)
ಅವನು ಸಭೆಯವರಿಂದ ತೀರ್ಪು ಹೊಂದುವುದಕ್ಕಿಂತ ಮೊದಲೇ ಹತವಾದವನ ಸಮೀಪಬಂಧುವಿನಿಂದ ಸಾಯದಂತೆ ಆ ಆಶ್ರಯ ಪಟ್ಟಣಗಳು ನಿಮ್ಮೊಳಗೆ ಇರಬೇಕು.
ಅರಣ್ಯಕಾಂಡ 35 : 13 (IRVKN)
ಹೀಗೆ ಆರು ಪಟ್ಟಣಗಳನ್ನು ಆಶ್ರಯದ ಪಟ್ಟಣಗಳಾಗಿ ನೇಮಿಸಬೇಕು.
ಅರಣ್ಯಕಾಂಡ 35 : 14 (IRVKN)
ನೀವು ಯೊರ್ದನ್ ನದಿಯ ಆಚೆಯಲ್ಲಿ ಮೂರು ಮತ್ತು ಕಾನಾನ್ ದೇಶದಲ್ಲಿ ಮೂರು ಪಟ್ಟಣಗಳನ್ನು ನೇಮಿಸಬೇಕು. ಅವು ಆಶ್ರಯದ ಪಟ್ಟಣಗಳಾಗಿ ಇರಬೇಕು.
ಅರಣ್ಯಕಾಂಡ 35 : 15 (IRVKN)
ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಇಸ್ರಾಯೇಲನಾಗಲಿ, ಪರದೇಶದವನಾಗಲಿ ಮತ್ತು ನಿಮ್ಮಲ್ಲಿ ಇಳಿದುಕೊಂಡವನಾಗಲಿ ಆ ಆರು ಪಟ್ಟಣಗಳೊಳಗೆ ಒಂದಕ್ಕೆ ಓಡಿಹೋಗಿ ಆಶ್ರಯಹೊಂದಬಹುದು.
ಅರಣ್ಯಕಾಂಡ 35 : 16 (IRVKN)
“ ‘ಯಾವನಾದರೂ ಕಬ್ಬಿಣದ ಆಯುಧದಿಂದ ಮತ್ತೊಬ್ಬನನ್ನು ಹೊಡೆದು ಕೊಂದರೆ ಅವನು ನರಹತ್ಯೆ ಮಾಡಿದವನೆಂದು ನೀವು ನಿರ್ಣಯಿಸಬೇಕು. ಅಂಥವನಿಗೆ ಮರಣಶಿಕ್ಷೆಯಾಗಬೇಕು.
ಅರಣ್ಯಕಾಂಡ 35 : 17 (IRVKN)
ಯಾವನಾದರೂ ಮನುಷ್ಯನನ್ನು ಕೊಲ್ಲುವಷ್ಟು ದೊಡ್ಡ ಕಲ್ಲನ್ನು ಕೈಯಲ್ಲಿ ಹಿಡಿದು ಮತ್ತೊಬ್ಬನನ್ನು ಹೊಡೆದು ಕೊಂದರೆ ಅವನು ನರಹತ್ಯೆ ಮಾಡಿದವನೇ. ಅವನಿಗೆ ಮರಣಶಿಕ್ಷೆಯಾಗಬೇಕು.
ಅರಣ್ಯಕಾಂಡ 35 : 18 (IRVKN)
ಯಾವನಾದರೂ ಮನುಷ್ಯನನ್ನು ಕೊಲ್ಲುವಷ್ಟು ದೊಡ್ಡ ಮರದ ಆಯುಧವನ್ನು ಕೈಯಲ್ಲಿ ಹಿಡಿದು ಮತ್ತೊಬ್ಬನನ್ನು ಹೊಡೆದು ಕೊಂದರೆ ಅವನು ನರಹತ್ಯೆಮಾಡಿದವನೇ. ಅವನಿಗೆ ಮರಣಶಿಕ್ಷೆಯಾಗಬೇಕು.
ಅರಣ್ಯಕಾಂಡ 35 : 19 (IRVKN)
ನರಹತ್ಯೆಮಾಡಿದವನು ಎಲ್ಲಿ ಸಿಕ್ಕಿದರೂ ಅವನನ್ನು ಕೊಲ್ಲಬೇಕಾದವನು ಯಾರೆಂದರೆ ಹತವಾದವನ ಸಮೀಪಬಂಧುವೇ.
ಅರಣ್ಯಕಾಂಡ 35 : 20 (IRVKN)
ಯಾವನಾದರೂ ಮತ್ತೊಬ್ಬನನ್ನು ಹಗೆಮಾಡಿ ನೂಕುವುದರಿಂದಾಗಲಿ, ಸಮಯ ನೋಡಿಕೊಂಡು ಅವನ ಮೇಲೆ ಏನಾದರೂ ಎಸೆಯುವುದರಿಂದಾಗಲಿ,
ಅರಣ್ಯಕಾಂಡ 35 : 21 (IRVKN)
ಇಲ್ಲವೆ ದ್ವೇಷದಿಂದ ಕೈಯಾರೆ ಹೊಡೆಯುವುದರಿಂದಾಗಲಿ ಕೊಂದರೆ ಅವನು ನರಹತ್ಯೆಮಾಡಿದವನೇ. ಅವನಿಗೆ ಮರಣಶಿಕ್ಷೆಯಾಗಬೇಕು. ಹತವಾದವನ ಸಮೀಪಬಂಧುವು ಅವನನ್ನು ಎಲ್ಲಿ ಕಂಡರೂ ಕೊಲ್ಲಬೇಕು.
ಅರಣ್ಯಕಾಂಡ 35 : 22 (IRVKN)
“ ‘ಆದರೆ ಒಬ್ಬನು ಯಾವ ದ್ವೇಷವೂ ಇಲ್ಲದೆ ಆಕಸ್ಮಾತ್ತಾಗಿ ನೂಕುವುದರಿಂದಾಗಲಿ, ಹಾನಿಮಾಡುವ ಸಮಯವನ್ನು ನೋಡಿಕೊಳ್ಳದೆ ಏನಾದರೂ ಎಸೆಯುವುದರಿಂದಾಗಲಿ,
ಅರಣ್ಯಕಾಂಡ 35 : 23 (IRVKN)
ಕೊಲ್ಲುವಷ್ಟು ದೊಡ್ಡ ಕಲ್ಲನ್ನು ತಿಳಿಯದೆ ಬೀಳಿಸುವುದರಿಂದಾಗಲಿ ಮತ್ತೊಬ್ಬನು ಸತ್ತರೆ ಅವನು ಆ ಮನುಷ್ಯನಿಗೆ ವೈರಿಯಾಗಿರದೆಯೂ ಹಾನಿಯನ್ನು ಮಾಡಬೇಕೆಂಬ ಅಭಿಪ್ರಾಯವಿಲ್ಲದೆಯೂ ಇದ್ದ ಪಕ್ಷಕ್ಕೆ,
ಅರಣ್ಯಕಾಂಡ 35 : 24 (IRVKN)
ಸಭೆಯವರು ಹತ್ಯೆಮಾಡಿದವನಿಗೂ, ಹತವಾದವನ ಸಮೀಪಬಂಧುವಿಗೂ ಈ ಸಂಗತಿಗಳಿಗೆ ಅನುಸಾರವಾಗಿ ನ್ಯಾಯತೀರಿಸಬೇಕು.
ಅರಣ್ಯಕಾಂಡ 35 : 25 (IRVKN)
ಸಭೆಯು ಹತ್ಯಮಾಡಿದವನನ್ನು ಆ ಸಮೀಪ ಬಂಧುವಿನ ಕೈಯಿಂದ ತಪ್ಪಿಸಿ ಅವನು ಓಡಿಹೋಗಿದ್ದ ಆಶ್ರಯನಗರಕ್ಕೆ ತಿರುಗಿ ಸೇರಿಸಬೇಕು. ಪಟ್ಟಾಭಿಷೇಕ ಹೊಂದಿದ ಮಹಾಯಾಜಕನು ಜೀವದಿಂದಿರುವ ತನಕ ಅವನು ಆ ಪಟ್ಟಣದಲ್ಲೇ ವಾಸಿಸಬೇಕು.
ಅರಣ್ಯಕಾಂಡ 35 : 26 (IRVKN)
“ ‘ಆ ಹತ್ಯೆಮಾಡಿದವನು ಯಾವಾಗಲಾದರೂ ತಾನು ಓಡಿಹೋಗಿದ್ದು ಆಶ್ರಯಪಟ್ಟಣದ ಮೇರೆಯ ಹೊರಗೆ ಹೋಗಿರುವಾಗ,
ಅರಣ್ಯಕಾಂಡ 35 : 27 (IRVKN)
ಹತವಾದವನ ಸಮೀಪಬಂಧುವು ಅವನನ್ನು ಆಶ್ರಯಪಟ್ಟಣದ ಹೊರಗೆ ಕಂಡು ಕೊಂದುಹಾಕಿದರೆ ಅವನು ಕೊಲೆಪಾತಕನಾಗುವುದಿಲ್ಲ.
ಅರಣ್ಯಕಾಂಡ 35 : 28 (IRVKN)
ಮಹಾಯಾಜಕನು ಜೀವದಿಂದಿರುವ ತನಕ ಅವನು ಆಶ್ರಯ ಪಟ್ಟಣದೊಳಗೆ ಇರಬೇಕಾಗಿತ್ತು. ಮಹಾಯಾಜಕನು ತೀರಿಹೋದ ನಂತರ ಅವನು ತನ್ನ ಸ್ವಾಸ್ತ್ಯವಿರುವ ಸ್ಥಳಕ್ಕೆ ಹೋಗಬಹುದು.
ಅರಣ್ಯಕಾಂಡ 35 : 29 (IRVKN)
“ ‘ನೀವೂ, ನಿಮ್ಮ ಸಂತತಿಯವರೂ ನಿಮ್ಮ ಎಲ್ಲಾ ವಾಸಸ್ಥಳಗಳಲ್ಲಿ ಈ ಮಾತುಗಳಿಗೆ ಅನುಸಾರವಾಗಿ ನ್ಯಾಯತೀರಿಸಬೇಕು.
ಅರಣ್ಯಕಾಂಡ 35 : 30 (IRVKN)
ಯಾವನಾದರೂ ಮತ್ತೊಬ್ಬನನ್ನು ಕೊಂದಾಗ ನೀವು ಸಾಕ್ಷಿಗಳನ್ನು ವಿಚಾರಿಸಿಕೊಂಡು ಅವನಿಗೆ ಮರಣಶಿಕ್ಷೆಯನ್ನು ವಿಧಿಸಬಾರದು.
ಅರಣ್ಯಕಾಂಡ 35 : 31 (IRVKN)
“ ‘ಮರಣಶಿಕ್ಷೆಗೆ ಪಾತ್ರನಾದ ಕೊಲೆಪಾತಕನನ್ನು ಉಳಿಸುವುದಕ್ಕೆ ಈಡನ್ನು ತೆಗೆದುಕೊಳ್ಳಬಾರದು. ಅವನಿಗೆ ಮರಣಶಿಕ್ಷೆಯೇ ಆಗಬೇಕು.
ಅರಣ್ಯಕಾಂಡ 35 : 32 (IRVKN)
ನೀವು ಆಶ್ರಯಪಟ್ಟಣಕ್ಕೆ ಓಡಿಹೋದವನಿಂದ ಧನವನ್ನು ತೆಗೆದುಕೊಂಡು ಮಹಾಯಾಜಕನು ಜೀವದಿಂದಿರುವಾಗಲೇ ಸ್ವಸ್ಥಳಕ್ಕೆ ಹೋಗಗೊಡಿಸಬಾರದು. ಅವನಿಗೆ ಮರಣಶಿಕ್ಷೆಯೇ ಆಗಬೇಕು.
ಅರಣ್ಯಕಾಂಡ 35 : 33 (IRVKN)
“ ‘ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇಶವು ಅಪವಿತ್ರವಾಗುವುದಿಲ್ಲ. ರಕ್ತವು ದೇಶವನ್ನು ಅಪವಿತ್ರ ಮಾಡುವುದು. ಕೊಲ್ಲಲ್ಪಟ್ಟವನ ರಕ್ತಕ್ಕಾಗಿ ಕೊಂದವನ ರಕ್ತದಿಂದಲೇ ಹೊರತು ಬೇರೆ ಪ್ರಾಯಶ್ಚಿತ್ತವಿಲ್ಲ.
ಅರಣ್ಯಕಾಂಡ 35 : 34 (IRVKN)
ನೀವು ವಾಸಿಸುವ ದೇಶವನ್ನು ಅಪವಿತ್ರಮಾಡಬಾರದು. ಯೆಹೋವನೆಂಬ ನಾನೇ ಇಸ್ರಾಯೇಲರ ಮಧ್ಯದಲ್ಲಿ ವಾಸಿಸುತ್ತೇನೆ.’ ”

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34