ಅರಣ್ಯಕಾಂಡ 19 : 1 (IRVKN)
{ಮನುಷ್ಯನ ಶವವು ಸೋಂಕಿದಾಗ ಮಾಡಬೇಕಾದ ಆಚಾರವನ್ನು ಕುರಿತದ್ದು} [PS] ಯೆಹೋವನು ಮೋಶೆ ಮತ್ತು ಆರೋನರಿಗೆ ಹೀಗೆ ಆಜ್ಞಾಪಿಸಿದನು,
ಅರಣ್ಯಕಾಂಡ 19 : 2 (IRVKN)
“ಯೆಹೋವನಾದ ನಾನು ಒಂದು ನಿಯಮವನ್ನು ನೇಮಿಸಿದ್ದೇನೆ, ಅದೇನೆಂದರೆ: ಎಂದೂ ನೊಗವನ್ನು ಹೊರದ ಮತ್ತು ಯಾವ ದೋಷವಿಲ್ಲದ ಪೂರ್ಣಾಂಗವಾದ ಕೆಂದಾಕಳನ್ನು ನಿಮಗೆ ತಂದುಕೊಡಬೇಕೆಂದು ಇಸ್ರಾಯೇಲರಿಗೆ ಆಜ್ಞಾಪಿಸು.
ಅರಣ್ಯಕಾಂಡ 19 : 3 (IRVKN)
ಅದನ್ನು ನೀವು ಯಾಜಕನಾದ ಎಲ್ಲಾಜಾರನ ಕೈಗೆ ಒಪ್ಪಿಸಬೇಕು. ಅವನು ಅದನ್ನು ಪಾಳೆಯದ ಹೊರಗೆ ಹೊರಡಿಸಿಕೊಂಡು ಹೋಗಿ ತನ್ನ ಎದುರೇ ಒಬ್ಬನ ಕೈಯಿಂದ ವಧೆಮಾಡಿಸಬೇಕು.
ಅರಣ್ಯಕಾಂಡ 19 : 4 (IRVKN)
ತರುವಾಯ ಯಾಜಕನಾದ ಎಲ್ಲಾಜಾರನು ಅದರ ರಕ್ತದಲ್ಲಿ ಸ್ವಲ್ಪವನ್ನು ಬೆರಳಿನಿಂದ ದೇವದರ್ಶನದ ಗುಡಾರದ ಮುಂಭಾಗದ ಕಡೆಗೆ ಏಳು ಸಾರಿ ಚಿಮಿಕಿಸಬೇಕು.
ಅರಣ್ಯಕಾಂಡ 19 : 5 (IRVKN)
ಆಗ ಅವನು ಆ ಆಕಳನ್ನು ಚರ್ಮ, ಮಾಂಸ, ರಕ್ತ, ಕಲ್ಮಷಗಳ ಸಹಿತವಾಗಿ ತನ್ನ ಎದುರಿನಲ್ಲಿಯೇ ಸುಡಿಸಿಬಿಡಬೇಕು.
ಅರಣ್ಯಕಾಂಡ 19 : 6 (IRVKN)
ಯಾಜಕನು ದೇವದಾರುಮರದ ಕಟ್ಟಿಗೆಯನ್ನೂ, ಹಿಸ್ಸೋಪ್ ಗಿಡದ ಬರಲನ್ನೂ, ರಕ್ತವರ್ಣವುಳ್ಳ ದಾರವನ್ನೂ ತೆಗೆದುಕೊಂಡು ಆ ಆಕಳನ್ನು ಸುಡುವ ಬೆಂಕಿಯಲ್ಲಿ ಹಾಕಬೇಕು.
ಅರಣ್ಯಕಾಂಡ 19 : 7 (IRVKN)
ಆ ಯಾಜಕನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿದ ನಂತರ ಪಾಳೆಯದೊಳಗೆ ಬರಬಹುದು. ಆದರೆ ಆ ದಿನದ ಸಾಯಂಕಾಲದವರೆಗೆ ಅವನು ಅಶುದ್ಧನಾಗಿರಬೇಕು.
ಅರಣ್ಯಕಾಂಡ 19 : 8 (IRVKN)
ಆ ಆಕಳನ್ನು ಸುಟ್ಟವನೂ ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿ ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರಬೇಕು. [PE][PS]
ಅರಣ್ಯಕಾಂಡ 19 : 9 (IRVKN)
“ಶುದ್ಧನಾದವನೊಬ್ಬನು ಆ ಆಕಳಿನ ಬೂದಿಯನ್ನು ಕೂಡಿಸಿ ಪಾಳೆಯದ ಹೊರಗೆ ಶುದ್ಧವಾದ ಸ್ಥಳದಲ್ಲಿ ಇಡಬೇಕು. ಅದನ್ನು ಇಸ್ರಾಯೇಲರ ಸಮೂಹದವರ ಉಪಯೋಗಕ್ಕಾಗಿ ನೀವು ಜೋಪಾನಮಾಡಬೇಕು. ಆದುದರಿಂದ ಶುದ್ಧೀಕರಣದ ನೀರನ್ನು ಸಿದ್ಧಪಡಿಸುವುದಕ್ಕಾಗಿ ಅದನ್ನು ಅಲ್ಲೇ ಇಟ್ಟಿರಬೇಕು. ಅದು ಅಶುದ್ಧವಾದದ್ದು.
ಅರಣ್ಯಕಾಂಡ 19 : 10 (IRVKN)
ಆ ಕೆಂದಾಕಳ ಬೂದಿಯನ್ನು ಕೂಡಿಸಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರಬೇಕು. ಇದು ಇಸ್ರಾಯೇಲರಿಗೂ ಮತ್ತು ಅವರಲ್ಲಿರುವ ಪ್ರವಾಸಿಗರಿಗೂ ಶಾಶ್ವತ ನಿಯಮವಾಗಿದೆ. [PE][PS]
ಅರಣ್ಯಕಾಂಡ 19 : 11 (IRVKN)
“ಮನುಷ್ಯನ ಶವ ಸೋಂಕಿದವನು ಏಳು ದಿನಗಳವರೆಗೆ ಅಶುದ್ಧನಾಗಿರಬೇಕು.
ಅರಣ್ಯಕಾಂಡ 19 : 12 (IRVKN)
ಮೂರನೆಯ ದಿನದಲ್ಲಿ ಆ ಬೂದಿಯಿಂದ ದೋಷಪರಿಹಾರ ಮಾಡಿಕೊಂಡು ಏಳನೆಯ ದಿನದಲ್ಲಿ ಶುದ್ಧನಾಗುವನು. ಮೂರನೆಯ ದಿನದಲ್ಲಿ ಅವನು ದೋಷಪರಿಹಾರ ಮಾಡಿಕೊಳ್ಳದೆ ಹೋದರೆ ಏಳನೆಯ ದಿನದಲ್ಲಿಯೂ ಶುದ್ಧನಾಗುವುದಿಲ್ಲ.
ಅರಣ್ಯಕಾಂಡ 19 : 13 (IRVKN)
ಮನುಷ್ಯನ ಶವ ಸೋಂಕಿದವನು ದೋಷಪರಿಹಾರವನ್ನು ಮಾಡಿಕೊಳ್ಳದೆಹೋದರೆ ಅವನು ಯೆಹೋವನ ಗುಡಾರವನ್ನು ಅಪವಿತ್ರಪಡಿಸುವನು. ಅಂಥವನನ್ನು ಇಸ್ರಾಯೇಲರಿಂದ ತೆಗೆದುಹಾಕಬೇಕು. ಶುದ್ಧೀಕರಣದ ನೀರನ್ನು ತನ್ನ ಮೇಲೆ ಚಿಮಿಕಿಸಿಕೊಳ್ಳದೆ ಇರುವುದರಿಂದ ಅವನು ಅಶುದ್ಧನು. ಅವನ ಅಶುದ್ಧತ್ವವು ಇನ್ನೂ ಅವನ ಮೇಲೆ ಇರುವುದು. [PE][PS]
ಅರಣ್ಯಕಾಂಡ 19 : 14 (IRVKN)
“ಯಾರಾದರೂ ಡೇರೆಯಲ್ಲಿ ಸತ್ತರೆ ಅವನ ವಿಷಯವಾದ ನಿಯಮವೇನೆಂದರೆ: ಆ ಡೇರೆಯಲ್ಲಿರುವವರೆಲ್ಲರೂ ಮತ್ತು ಅದರೊಳಗೆ ಪ್ರವೇಶಿಸುವವರು ಏಳು ದಿನಗಳವರೆಗೆ ಅಶುದ್ಧರಾಗಿರಬೇಕು.
ಅರಣ್ಯಕಾಂಡ 19 : 15 (IRVKN)
ಮುಚ್ಚಳ ಹಾಕದೆ ತೆರೆದಿರುವ ಎಲ್ಲಾ ಪಾತ್ರೆಗಳು ಅಶುದ್ಧವಾಗಿರುವವು.
ಅರಣ್ಯಕಾಂಡ 19 : 16 (IRVKN)
ಬಯಲಿನಲ್ಲಿರುವ ಯಾವನಾದರೂ ಕತ್ತಿಯಿಂದ ಕೊಲ್ಲಲ್ಪಟ್ಟವನಾದರೂ, ಯಾವನಿಗಾದರೂ ಮನುಷ್ಯನ ಶವವಾಗಲಿ, ಮನುಷ್ಯನ ಎಲುಬಾಗಲಿ, ಸಮಾಧಿಯಾಗಲಿ ಸೋಂಕಿದರೆ ಅವನು ಏಳು ದಿನಗಳವರೆಗೆ ಅಶುದ್ಧನಾಗಿರಬೇಕು. [PE][PS]
ಅರಣ್ಯಕಾಂಡ 19 : 17 (IRVKN)
“ಅಶುದ್ಧನಾದವನನ್ನು ಶುದ್ಧಪಡಿಸಬೇಕಾದರೆ ಆ ದೋಷಪರಿಹಾರಕವಾದ ಬೂದಿಯಲ್ಲಿ ಸ್ವಲ್ಪವನ್ನು ಪಾತ್ರೆಯಲ್ಲಿ ಇಟ್ಟು, ಅದರ ಮೇಲೆ ಶುದ್ಧವಾದ ನೀರನ್ನು ಹಾಕಬೇಕು.
ಅರಣ್ಯಕಾಂಡ 19 : 18 (IRVKN)
ಆಗ ಶುದ್ಧನಾದವನೊಬ್ಬನು ಆ ನೀರನ್ನು ಹಿಸ್ಸೋಪ್ ಗಿಡದ ಬರಲಿಂದ ಮನುಷ್ಯನು ಸತ್ತ ಆ ಡೇರೆಯ ಮೇಲೆಯೂ, ಅದರಲ್ಲಿದ್ದ ಸಾಮಾನುಗಳ ಮತ್ತು ಮನುಷ್ಯರ ಮೇಲೆಯೂ ಚಿಮಿಕಿಸಬೇಕು. ಹಾಗೆಯೇ ಎಲುಬಾಗಲಿ, ಹತವಾದವನ ಅಥವಾ ಬೇರೆ ಮನುಷ್ಯನ ಶವವಾಗಲಿ, ಸಮಾಧಿಯಾಗಲಿ ಯಾವನಿಗೆ ಸೋಂಕುವುದೋ ಅವನ ಮೇಲೆಯೂ ನೀರನ್ನು ಚಿಮಿಕಿಸಬೇಕು.
ಅರಣ್ಯಕಾಂಡ 19 : 19 (IRVKN)
ಶುದ್ಧನಾದವನು ಮೂರನೆಯ ದಿನದಲ್ಲಿಯೂ, ಏಳನೆಯ ದಿನದಲ್ಲಿಯೂ ಅಶುದ್ಧನಾದವನ ಮೇಲೆ ಅದನ್ನು ಚಿಮಿಕಿಸಬೇಕು. ಅಶುದ್ಧನಾದವನು ಏಳನೆಯ ದಿನದಲ್ಲಿ ದೋಷಪರಿಹಾರ ಹೊಂದಿದವನಾಗಿ ತನ್ನ ಬಟ್ಟೆಗಳನ್ನು ಒಗೆದುಕೊಂಡು, ಸ್ನಾನಮಾಡಿ ಸಾಯಂಕಾಲದಲ್ಲಿ ಶುದ್ಧನಾಗುವನು.
ಅರಣ್ಯಕಾಂಡ 19 : 20 (IRVKN)
ಅಶುದ್ಧನಾಗಿ ದೋಷಪರಿಹಾರ ಮಾಡಿಕೊಳ್ಳದವನು ಯೆಹೋವನ ಆಲಯವನ್ನು ಅಪವಿತ್ರಪಡಿಸಿದ ಕಾರಣ ಸಭೆಯಿಂದ ತೆಗೆಯಲ್ಪಡಬೇಕು. ಶುದ್ಧೀಕರಣದ ನೀರನ್ನು ತನ್ನ ಮೇಲೆ ಚಿಮಿಕಿಸಿಕೊಳ್ಳದೆ ಹೋದುದರಿಂದ ಅವನು ಅಶುದ್ಧನಾಗುವನು. [PE][PS]
ಅರಣ್ಯಕಾಂಡ 19 : 21 (IRVKN)
“ಇದು ಇಸ್ರಾಯೇಲರಿಗೆ ಶಾಶ್ವತ ನಿಯಮವಾಗಿರುವುದು. ಶುದ್ಧೀಕರಣದ ಆ ನೀರನ್ನು ಚಿಮಿಕಿಸಿದವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು ಮತ್ತು ಆ ನೀರು ಯಾರಿಗೆ ಸೋಂಕುವುದೋ ಅವನು ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರಬೇಕು.
ಅರಣ್ಯಕಾಂಡ 19 : 22 (IRVKN)
ಅಶುದ್ಧನಿಗೆ ಸೋಂಕಿದ ವಸ್ತು ಯಾವುದೇ ಆಗಲಿ ಅಶುದ್ಧವೆಂದು ನೀವು ತಿಳಿದುಕೊಳ್ಳಬೇಕು. ಅದು ಯಾರಿಗೆ ಸೋಂಕುವುದೋ ಅವನೂ ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರಬೇಕು.” [PE]
❮
❯