ಅರಣ್ಯಕಾಂಡ 14 : 1 (IRVKN)
ಜನರು ಮೋಶೆಯ ವಿರುದ್ಧ ತಿರುಗಿಬಿದ್ದು ನಾಶವಾದದ್ದು ಆಗ ಜನಸಮೂಹದವರೆಲ್ಲರೂ ತಮ್ಮ ಸ್ವರ ಎತ್ತಿ ಆ ರಾತ್ರಿಯೆಲ್ಲಾ ಗೋಳಾಡಿದರು.
ಅರಣ್ಯಕಾಂಡ 14 : 2 (IRVKN)
ಇಸ್ರಾಯೇಲರೆಲ್ಲರೂ ಮೋಶೆ ಮತ್ತು ಆರೋನರಿಗೆ ವಿರುದ್ಧವಾಗಿ ಗುಣುಗುಟ್ಟಿ, “ನಾವು ಈ ಮರುಭೂಮಿಯಲ್ಲಿ ಸಾಯುವುದಕ್ಕಿಂತ ಐಗುಪ್ತ ದೇಶದಲ್ಲಿಯೇ ಸತ್ತಿದ್ದರೆ ಎಷ್ಟೋ ಒಳ್ಳೆಯದಾಗಿತ್ತು
ಅರಣ್ಯಕಾಂಡ 14 : 3 (IRVKN)
ಯೆಹೋವನು ನಮ್ಮನ್ನು ಯಾಕೆ ಕತ್ತಿಯ ಬಾಯಿಂದ ಸಾಯಿಸುವುದಕ್ಕೆ ಈ ದೇಶಕ್ಕೆ ಕರೆದುಕೊಂಡು ಬಂದನು. ನಮ್ಮ ಹೆಂಡತಿಯರು ಮತ್ತು ಮಕ್ಕಳು ಬೇರೆಯವರ ಪಾಲಾಗುವರು. ನಾವು ಐಗುಪ್ತ ದೇಶಕ್ಕೆ ತಿರುಗಿ ಹೋಗುವುದು ಒಳ್ಳೆಯದಲ್ಲವೇ” ಎಂದು ಮಾತನಾಡಿಕೊಂಡರು.
ಅರಣ್ಯಕಾಂಡ 14 : 4 (IRVKN)
ಹೀಗೆ ಅವರು ಒಬ್ಬರ ಸಂಗಡಲೊಬ್ಬರು, “ನಾವು ಬೇರೆ ನಾಯಕನನ್ನು ನೇಮಿಸಿಕೊಂಡು ಐಗುಪ್ತ ದೇಶಕ್ಕೆ ಹಿಂತಿರುಗಿ ಹೋಗೋಣ” ಎಂದು ಮಾತನಾಡಿಕೊಂಡರು.
ಅರಣ್ಯಕಾಂಡ 14 : 5 (IRVKN)
ಆಗ ಮೋಶೆ ಮತ್ತು ಆರೋನರು ಇಸ್ರಾಯೇಲರ ಸರ್ವಸಮೂಹದವರ ಮುಂದೆ ಅಡ್ಡಬಿದ್ದರು.
ಅರಣ್ಯಕಾಂಡ 14 : 6 (IRVKN)
ಕಾನಾನ್ ದೇಶವನ್ನು ಸಂಚರಿಸಿ ನೋಡಿದವರಲ್ಲಿ ನೂನನ ಮಗನಾದ ಯೆಹೋಶುವನು ಮತ್ತು ಯೆಫುನ್ನೆಯ ಮಗನಾದ ಕಾಲೇಬನೂ ತಮ್ಮ ಬಟ್ಟೆಗಳನ್ನು ಹರಿದುಕೊಂಡರು.
ಅರಣ್ಯಕಾಂಡ 14 : 7 (IRVKN)
ಅವರು ಇಸ್ರಾಯೇಲರ ಸರ್ವಸಮೂಹದವರಿಗೆ ಹೀಗೆ ಹೇಳಿದರು, “ನಾವು ಸಂಚರಿಸಿ ನೋಡಿದ ದೇಶವು ಅತ್ಯುತ್ತಮವಾದದ್ದು.
ಅರಣ್ಯಕಾಂಡ 14 : 8 (IRVKN)
ಯೆಹೋವನು ನಮ್ಮನ್ನು ಮೆಚ್ಚಿಕೊಂಡರೆ ಹಾಲೂ, ಜೇನೂ ಹರಿಯುವ ಆ ದೇಶಕ್ಕೆ ನಮ್ಮನ್ನು ಸೇರಿಸಿ ಅದನ್ನು ನಮ್ಮ ಸ್ವಾಧೀನಕ್ಕೆ ಕೊಡುವನು.
ಅರಣ್ಯಕಾಂಡ 14 : 9 (IRVKN)
ಹೀಗಿರುವುದರಿಂದ ಯೆಹೋವನಿಗೆ ತಿರುಗಿಬೀಳಬೇಡಿರಿ. ಇದಲ್ಲದೆ ಆ ದೇಶದ ಜನರಿಗೆ ಭಯಪಡಬೇಡಿರಿ. ಏಕೆಂದರೆ ನಾವು ಅವರನ್ನು ಸುಲಭವಾಗಿ ಜಯಿಸಿಬಿಡುವೆವು. ಅವರಿಗೆ ನೆರಳಾಗಿದ್ದ ದೇವರು ಅವರನ್ನು ಕೈಬಿಟ್ಟಿದ್ದಾನೆ, ಯೆಹೋವನು ನಮ್ಮ ಸಂಗಡ ಇದ್ದಾನೆ. ಅವರಿಗೆ ಭಯಪಡಬೇಡಿರಿ” ಎಂದರು.
ಅರಣ್ಯಕಾಂಡ 14 : 10 (IRVKN)
ಆದರೆ ಜನಸಮೂಹದವರೆಲ್ಲರೂ ಅವರ ಮಾತುಗಳನ್ನು ಕೇಳದೆ, ಅವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಹೇಳಿಕೊಳ್ಳುತ್ತಿರುವಾಗ, ಯೆಹೋವನ ತೇಜಸ್ಸು ದೇವದರ್ಶನದ ಗುಡಾರದಲ್ಲಿ ಪ್ರಕಾಶಿಸಿ ಇಸ್ರಾಯೇಲರೆಲ್ಲರಿಗೂ ಕಾಣಿಸಿಕೊಂಡಿತು.
ಅರಣ್ಯಕಾಂಡ 14 : 11 (IRVKN)
ಯೆಹೋವನು ಮೋಶೆಗೆ, “ಈ ಜನರು ಇನ್ನು ಎಷ್ಟರವರೆಗೆ ನನ್ನನ್ನು ಅಲಕ್ಷ್ಯಮಾಡುವರು? ನಾನು ನಡೆಸಿದ ಎಲ್ಲಾ ಮಹತ್ಕಾರ್ಯಗಳನ್ನು ಇವರು ಪ್ರತ್ಯಕ್ಷವಾಗಿ ನೋಡಿದಾಗ್ಯೂ ಇನ್ನು ಎಷ್ಟು ದಿನ ನನ್ನನ್ನು ನಂಬದೆ ಇರುವರು?
ಅರಣ್ಯಕಾಂಡ 14 : 12 (IRVKN)
ನಾನು ಇವರಿಗೆ ವ್ಯಾಧಿಯನ್ನು ಉಂಟುಮಾಡಿ ಇವರನ್ನು ನಿರ್ಮೂಲಮಾಡುವೆನು. ಈ ಜನರಿಗಿಂತ ನಿನ್ನನ್ನು ದೊಡ್ಡದಾಗಿಯೂ, ಬಲಿಷ್ಠವಾಗಿಯೂ ಇರುವ ಜನಾಂಗವಾಗುವಂತೆ ಮಾಡುವೆನು” ಎಂದು ಹೇಳಿದನು.
ಅರಣ್ಯಕಾಂಡ 14 : 13 (IRVKN)
ಅದಕ್ಕೆ ಮೋಶೆಯು ಯೆಹೋವನಿಗೆ, “ನೀನು ಹೀಗೆ ಮಾಡುವುದಾದರೆ ಐಗುಪ್ತ್ಯರು ಈ ಸುದ್ದಿಯನ್ನು ಕೇಳುವರು. ಅವರ ಕೈಯಿಂದ ನೀನು ಈ ಜನರನ್ನು ಭುಜಪರಾಕ್ರಮದಿಂದ ಬಿಡಿಸಿದ ಈ ಸಂಗತಿಯನ್ನು ಈ ಕಾನಾನ್ ದೇಶದ ನಿವಾಸಿಗಳಿಗೆ ತಿಳಿಸುವರು.
ಅರಣ್ಯಕಾಂಡ 14 : 14 (IRVKN)
ಅಲ್ಲದೆ ಯೆಹೋವನಾದ ನೀನು ಇಸ್ರಾಯೇಲರ ಮಧ್ಯದಲ್ಲಿ ಇರುವ ಸಂಗತಿಯನ್ನು, ನೀನು ಇಸ್ರಾಯೇಲರಿಗೆ ಪ್ರತ್ಯಕ್ಷವಾಗಿ ಕಾಣಿಸಿಕೊಳ್ಳುವುದನ್ನು, ಹಗಲಿನಲ್ಲಿ ಮೇಘಸ್ತಂಭದಲ್ಲಿಯೂ, ರಾತ್ರಿಯಲ್ಲಿ ಅಗ್ನಿಸ್ತಂಭದಲ್ಲಿಯೂ ಇದ್ದು ಇವರ ಮುಂದೆ ನಡೆದುಹೋಗುವುದಾಗಿ ಹಾಗೂ ನೀನಿರುವ ಮೇಘವು ಇಸ್ರಾಯೇಲರ ಮೇಲೆ ಇರುವುದಾಗಿಯೂ ಈ ದೇಶದವರು ಕೇಳಿದ್ದಾರೆ.
ಅರಣ್ಯಕಾಂಡ 14 : 15 (IRVKN)
ಹೀಗಿರಲಾಗಿ ನೀನು ಒಂದೇ ಪೆಟ್ಟಿನಿಂದ ಈ ಜನರನ್ನೆಲ್ಲಾ ಸಾಯಿಸಿದರೆ ನಿನ್ನ ಪ್ರಖ್ಯಾತಿಯನ್ನು ಕೇಳಿದ ಜನಾಂಗದವರು ನಿನ್ನ ವಿಷಯದಲ್ಲಿ,
ಅರಣ್ಯಕಾಂಡ 14 : 16 (IRVKN)
“ ‘ಯೆಹೋವನು ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶದಲ್ಲಿ ಆ ಜನರನ್ನು ಸೇರಿಸುವುದಕ್ಕೆ ಶಕ್ತಿಸಾಲದೆ, ಅವರನ್ನು ಅರಣ್ಯದಲ್ಲಿ ಕೊಂದುಹಾಕಿಬಿಟ್ಟನು’ ಎಂದು ಮಾತನಾಡಿಕೊಳ್ಳುವರು.
ಅರಣ್ಯಕಾಂಡ 14 : 17 (IRVKN)
ಈಗ ನೀನು ಹೇಳಿದ ಪ್ರಕಾರ ಯೆಹೋವನ ಬಲವು ದೊಡ್ಡದಾಗಿರಲಿ ಎಂದು ಬೇಡಿಕೊಳ್ಳುತ್ತೇನೆ. ನಿನ್ನ ವಿಷಯದಲ್ಲಿ,
ಅರಣ್ಯಕಾಂಡ 14 : 18 (IRVKN)
‘ಯೆಹೋವನು ದೀರ್ಘಶಾಂತನು, ದಯೆಯುಳ್ಳವನು, ಅಪರಾಧ ಪಾಪಗಳನ್ನು ಕ್ಷಮಿಸುವವನು, ಆದರೂ ಅಪರಾಧಿಗಳನ್ನು ಶಿಕ್ಷಿಸದೆ ಬಿಡದವನು, ತಂದೆಗಳ ಪಾಪಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುವವನು’ ಎಂದು ಹೇಳಿದ್ದಿ.
ಅರಣ್ಯಕಾಂಡ 14 : 19 (IRVKN)
ನಾವು ಐಗುಪ್ತ ದೇಶದಿಂದ ಬಂದ ದಿನದಿಂದ ಮೊದಲುಗೊಂಡು ಇದುವರೆಗೆ ನೀನು ಈ ಜನರ ಪಾಪಗಳನ್ನು ಕ್ಷಮಿಸಿದ ಪ್ರಕಾರವೇ ಈಗಲೂ ಮಹಾಕೃಪೆಯಿಂದ ಇವರ ಪಾಪವನ್ನು ಕ್ಷಮಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ” ಎಂದು ಪ್ರಾರ್ಥಿಸಿದನು.
ಅರಣ್ಯಕಾಂಡ 14 : 20 (IRVKN)
ಅದಕ್ಕೆ ಯೆಹೋವನು, “ನಿನ್ನ ಪ್ರಾರ್ಥನೆಯ ಮೇರೆಗೆ ನಾನು ಅವರನ್ನು ಕ್ಷಮಿಸಿದ್ದೇನೆ.
ಅರಣ್ಯಕಾಂಡ 14 : 21 (IRVKN)
ಆದರೆ ನನ್ನ ಜೀವದಾಣೆ, ಯೆಹೋವನ ಮಹಿಮೆಯು ಭೂಲೋಕದಲ್ಲೆಲ್ಲಾ ತುಂಬಿರುವುದು.
ಅರಣ್ಯಕಾಂಡ 14 : 22 (IRVKN)
ಈ ಮನುಷ್ಯರೆಲ್ಲರು ಐಗುಪ್ತ ದೇಶದಲ್ಲಿಯೂ, ಮರುಭೂಮಿಯಲ್ಲಿಯೂ, ನಾನು ನಡೆಸಿರುವ ಮಹತ್ಕಾರ್ಯಗಳನ್ನೂ, ನನ್ನ ಮಹಿಮೆಯನ್ನೂ ನೋಡಿದರೂ ನನ್ನ ಮಾತಿಗೆ ಕಿವಿಗೊಡದೆ, ಪದೇ ಪದೇ ನನ್ನನ್ನು ಪರೀಕ್ಷಿಸಿದ್ದರಿಂದ
ಅರಣ್ಯಕಾಂಡ 14 : 23 (IRVKN)
ನಾನು ಅವರ ಪೂರ್ವಿಕರಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ಇವರಲ್ಲಿ ಯಾರೂ ನೋಡುವುದಿಲ್ಲ; ನನ್ನನ್ನು ಅಲಕ್ಷ್ಯಮಾಡಿದ ಇವರಲ್ಲಿ ಯಾರೂ ಅದನ್ನು ನೋಡುವುದಿಲ್ಲ.
ಅರಣ್ಯಕಾಂಡ 14 : 24 (IRVKN)
ನನ್ನ ದಾಸನಾದ ಕಾಲೇಬನಿಗೆ ಅವರಂಥ ಮನಸ್ಸುಳ್ಳವನಾಗಿರದೆ ಮನಃಪೂರ್ವಕವಾಗಿ ನನ್ನ ಮಾತನ್ನು ಅನುಸರಿಸಿ ನಡೆದುದ್ದರಿಂದ ಅವನು ಸಂಚರಿಸಿದ ಆ ದೇಶದಲ್ಲಿ ಅವನನ್ನು ಸೇರಿಸುವೆನು, ಅವನ ಸಂತತಿಯವರು ಅದನ್ನು ಸ್ವಾಧೀನಪಡಿಸಿಕೊಳ್ಳುವರು.
ಅರಣ್ಯಕಾಂಡ 14 : 25 (IRVKN)
ಅಮಾಲೇಕ್ಯರೂ, ಕಾನಾನ್ಯರೂ ಆ ತಗ್ಗಿನಲ್ಲಿ ವಾಸವಾಗಿದ್ದಾರೆ. ನೀವು ನಾಳೆ ಹಿಂದಿರುಗಿ ಕೆಂಪು ಸಮುದ್ರಕ್ಕೆ ಹೋಗುವ ದಾರಿಯಲ್ಲಿ ಅರಣ್ಯಕ್ಕೆ ಪ್ರಯಾಣಮಾಡಬೇಕು” ಎಂದು ಹೇಳಿದನು.
ಅರಣ್ಯಕಾಂಡ 14 : 26 (IRVKN)
ಯೆಹೋವನು ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ,
ಅರಣ್ಯಕಾಂಡ 14 : 27 (IRVKN)
“ನನಗೆ ವಿರುದ್ಧವಾಗಿ ಗುಣುಗುಟ್ಟುವ ಈ ದುಷ್ಟ ಸಮೂಹದವರನ್ನು ನಾನು ಎಷ್ಟು ದಿನ ಸಹಿಸಿಕೊಳ್ಳಲಿ? ಇಸ್ರಾಯೇಲರು ನನಗೆ ವಿರುದ್ಧವಾಗಿ ಗುಣುಗುಟ್ಟುವ ಮಾತುಗಳು ನನಗೆ ಕೇಳಿಸಿದವು.
ಅರಣ್ಯಕಾಂಡ 14 : 28 (IRVKN)
ನೀನು ಅವರಿಗೆ ಹೀಗೆ ಹೇಳಬೇಕು, ‘ಯೆಹೋವನು ಹೇಳುವುದೇನೆಂದರೆ, ನನ್ನ ಜೀವದಾಣೆ, ನೀವು ನನಗೆ ಕೇಳಿಸುವಂತೆ ಅಂದುಕೊಂಡ ಪ್ರಕಾರವೇ ನಾನು ಮಾಡುತ್ತೇನೆ; ನಿಮ್ಮ ಶವಗಳು ಈ ಅರಣ್ಯದಲ್ಲಿಯೇ ಬೀಳುವವು.
ಅರಣ್ಯಕಾಂಡ 14 : 29 (IRVKN)
ನೀವು ನನಗೆ ವಿರುದ್ಧವಾಗಿ ಗುಣುಗುಟ್ಟಿದ್ದರಿಂದ ನಿಮ್ಮಲ್ಲಿ ಎಣಿಕೆಯಾದವರೆಲ್ಲರು ಅಂದರೆ ಇಪ್ಪತ್ತು ವರ್ಷಕ್ಕಿಂತ ಹೆಚ್ಚು ವಯಸ್ಸುಳ್ಳವರೆಲ್ಲರೂ ಅರಣ್ಯದಲ್ಲಿಯೇ ಸಾಯುವರು.
ಅರಣ್ಯಕಾಂಡ 14 : 30 (IRVKN)
ಯೆಫುನ್ನೆಯ ಮಗನಾದ ಕಾಲೇಬನು ಮತ್ತು ನೂನನ ಮಗನಾದ ಯೆಹೋಶುವನು ಇವರಿಬ್ಬರೇ ಹೊರತು ನಿಮ್ಮಲ್ಲಿ ಯಾರೂ ನಿಮ್ಮ ವಾಸಕ್ಕಾಗಿ ನಾನು ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶವನ್ನು ಸೇರುವುದಿಲ್ಲ.
ಅರಣ್ಯಕಾಂಡ 14 : 31 (IRVKN)
ಆದರೆ ಇತರರ ಪಾಲಾಗುವರೆಂದು ನೀವು ಹೇಳಿದ ನಿಮ್ಮ ಚಿಕ್ಕ ಮಕ್ಕಳನ್ನು ಅಲ್ಲಿಗೆ ಸೇರಿಸುವೆನು. ನೀವು ಬೇಡವೆಂದು ಹೇಳಿದ ದೇಶವನ್ನು ಅವರು ಅನುಭವಿಸುವರು.
ಅರಣ್ಯಕಾಂಡ 14 : 32 (IRVKN)
ನೀವಂತೂ ಈ ಅರಣ್ಯದಲ್ಲಿ ಸಾಯುವಿರಿ.
ಅರಣ್ಯಕಾಂಡ 14 : 33 (IRVKN)
ನಿಮ್ಮೆಲ್ಲರ ಶವಗಳು ಈ ಮರುಭೂಮಿಯಲ್ಲಿ ಬೀಳುವವರೆಗೂ ನೀವು ಮಾಡಿದ ದ್ರೋಹದ ಫಲವನ್ನು ನಿಮ್ಮ ಮಕ್ಕಳು ಅನುಭವಿಸುವವರಾಗಿ ನಲ್ವತ್ತು ವರ್ಷ ಮರುಭೂಮಿಯಲ್ಲಿ ವಾಸಿಸಬೇಕು.
ಅರಣ್ಯಕಾಂಡ 14 : 34 (IRVKN)
ನೀವು ಆ ದೇಶವನ್ನು ಸಂಚರಿಸಿ ನೋಡಿದ ನಲ್ವತ್ತು ದಿನಗಳ ಪ್ರಕಾರ, ಒಂದು ದಿನಕ್ಕೆ ಒಂದು ವರ್ಷವಾಗಿ ಈ ಪ್ರಕಾರ ನಲ್ವತ್ತು ವರ್ಷ ನಿಮ್ಮ ಪಾಪಫಲವನ್ನು ಅನುಭವಿಸುವವರಾಗಿ ನಾನು ಕೈಬಿಟ್ಟವರ ಗತಿ ಎಂಥದೆಂದು ತಿಳಿದುಕೊಳ್ಳಬೇಕು.
ಅರಣ್ಯಕಾಂಡ 14 : 35 (IRVKN)
ಇದು ಯೆಹೋವನೆಂಬ ನಾನೇ ಹೇಳಿದ ಮಾತು. ನನಗೆ ವಿರುದ್ಧವಾಗಿ ಸೇರಿರುವ ಈ ದುಷ್ಟ ಸಮೂಹದವರೆಲ್ಲರಿಗೆ ಈ ಮಾತಿನ ಪ್ರಕಾರವೇ ಮಾಡುತ್ತೇನೆ. ಈ ಅರಣ್ಯದಲ್ಲಿಯೇ ಇವರೆಲ್ಲರೂ ಸಾಯಬೇಕು’ ” ಎಂದು ಹೇಳಿದನು.
ಅರಣ್ಯಕಾಂಡ 14 : 36 (IRVKN)
ಆ ದೇಶವನ್ನು ಸಂಚರಿಸಿ ನೋಡುವುದಕ್ಕೆ ಮೋಶೆಯಿಂದ ಕಳುಹಿಸಲ್ಪಟ್ಟ ಮನುಷ್ಯರು ಹಿಂದಿರುಗಿ ಬಂದು ಆ ದೇಶದ ವಿಷಯದಲ್ಲಿ ಅಶುಭ ಸಮಾಚಾರವನ್ನು ಹೇಳಿ ಸರ್ವಸಮೂಹದವರನ್ನು ಮೋಶೆಗೆ ವಿರುದ್ಧವಾಗಿ ಗುಣುಗುಟ್ಟುವಂತೆ ಮಾಡಿದರು.
ಅರಣ್ಯಕಾಂಡ 14 : 37 (IRVKN)
ಅಶುಭ ಸಮಾಚಾರವನ್ನು ತಂದ ಆ ಮನುಷ್ಯರು ಯೆಹೋವನ ಸನ್ನಿಧಿಯಲ್ಲಿ ವ್ಯಾಧಿಯಿಂದ ಸತ್ತರು.
ಅರಣ್ಯಕಾಂಡ 14 : 38 (IRVKN)
ಆ ದೇಶವನ್ನು ಸಂಚರಿಸಿ ನೋಡುವುದಕ್ಕೆ ಹೋಗಿದ್ದ ಮನುಷ್ಯರಲ್ಲಿ ನೂನನ ಮಗನಾದ ಯೆಹೋಶುವನು ಮತ್ತು ಯೆಫುನ್ನೆಯ ಮಗನಾದ ಕಾಲೇಬನು ಮಾತ್ರ ಉಳಿದರು.
ಅರಣ್ಯಕಾಂಡ 14 : 39 (IRVKN)
ಮೋಶೆ ಯೆಹೋವನ ಮಾತುಗಳನ್ನೆಲ್ಲಾ ಇಸ್ರಾಯೇಲರಿಗೆ ತಿಳಿಸಲಾಗಿ ಅವರು ಬಹಳ ದುಃಖಪಟ್ಟರು.
ಅರಣ್ಯಕಾಂಡ 14 : 40 (IRVKN)
ಮರುದಿನ ಬೆಳಿಗ್ಗೆ ಜನರು ಎದ್ದು, “ನಾವು ಪಾಪ ಮಾಡಿರುವುದು ನಿಜ; ಯೆಹೋವನು ವಾಗ್ದಾನ ಮಾಡಿದ ಸ್ಥಳಕ್ಕೆ ಹತ್ತೋಣ ಬನ್ನಿ” ಎಂದು ಹೇಳಿಕೊಳ್ಳುತ್ತಾ ಆ ಬೆಟ್ಟದ ಮೇಲಕ್ಕೆ ಹತ್ತಿಹೋದರು.
ಅರಣ್ಯಕಾಂಡ 14 : 41 (IRVKN)
ಆದರೆ ಮೋಶೆ ಅವರಿಗೆ, “ನೀವು ಯಾಕೆ ಹೀಗೆ ಮಾಡಿ ಯೆಹೋವನ ಆಜ್ಞೆಯನ್ನು ಮೀರುತ್ತೀರಿ? ಇದು ಸಫಲವಾಗುವುದಿಲ್ಲ.
ಅರಣ್ಯಕಾಂಡ 14 : 42 (IRVKN)
ಯೆಹೋವನು ನಿಮ್ಮ ಸಂಗಡ ಇರುವುದಿಲ್ಲ, ಹತ್ತಬೇಡಿರಿ. ನೀವು ಶತ್ರುಗಳ ಮುಂದೆ ನಿಲ್ಲಲಾರದೆ ಬಿದ್ದು ಸತ್ತುಹೋಗುವಿರಿ.
ಅರಣ್ಯಕಾಂಡ 14 : 43 (IRVKN)
ಅಲ್ಲಿ ಅಮಾಲೇಕ್ಯರೂ, ಕಾನಾನ್ಯರೂ ನಿಮ್ಮ ಎದುರಿನಲ್ಲಿ ಇರುವುದರಿಂದ ನೀವು ಅವರ ಕತ್ತಿಯಿಂದ ಸತ್ತುಹೋಗುವಿರಿ. ನೀವು ಯೆಹೋವನ ಮಾತನ್ನು ಅನುಸರಿಸದೆ ತಿರುಗಿಬಿದ್ದ ಕಾರಣ ಆತನು ನಿಮ್ಮೊಂದಿಗೆ ಇರುವುದಿಲ್ಲ” ಎಂದು ಹೇಳಿದನು.
ಅರಣ್ಯಕಾಂಡ 14 : 44 (IRVKN)
ಆದರೂ ಅವರು ಹಟಮಾಡಿ ಆ ಬೆಟ್ಟವನ್ನು ಹತ್ತಿದರು. ಯೆಹೋವನ ಒಡಂಬಡಿಕೆಯ ಮಂಜೂಷವಾಗಲಿ ಮೋಶೆಯಾಗಲಿ ಪಾಳೆಯವನ್ನು ಬಿಟ್ಟು ಹೊರಡಲಿಲ್ಲ.
ಅರಣ್ಯಕಾಂಡ 14 : 45 (IRVKN)
ಆಗ ಆ ಬೆಟ್ಟದ ಸೀಮೆಯಲ್ಲಿ ವಾಸವಾಗಿದ್ದ ಅಮಾಲೇಕ್ಯರೂ ಮತ್ತು ಕಾನಾನ್ಯರೂ ಇಳಿದು ಬಂದು ಇಸ್ರಾಯೇಲರನ್ನು ಹೊಡೆದು ಹೊರ್ಮಾ ಪಟ್ಟಣದವರೆಗೂ ಬೆನ್ನಟ್ಟಿ ಸಂಹರಿಸಿದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45