ನೆಹೆಮಿಯ 4 : 1 (IRVKN)
ಪೌಳಿಗೋಡೆಯನ್ನು ಕಟ್ಟುವುದಕ್ಕೆ ಅಡ್ಡಿ ಮಾಡಿದ್ದು ನಾವು ಪೌಳಿಗೋಡೆಯನ್ನು ಕಟ್ಟುತ್ತಿದ್ದ ಸುದ್ದಿಯು ಸನ್ಬಲ್ಲಟನಿಗೆ ಗೊತ್ತಾದಾಗ ಅವನು ಬಹಳ ಹೊಟ್ಟೆಕಿಚ್ಚಿನಿಂದ ಕೋಪಗೊಂಡು ಯೆಹೂದ್ಯರನ್ನು ಗೇಲಿ ಮಾಡಿದನು.
ನೆಹೆಮಿಯ 4 : 2 (IRVKN)
ತನ್ನ ಸಹೋದರರ ಮತ್ತು ಸಮಾರ್ಯದ ಸೈನ್ಯದವರ ಮುಂದೆಯೂ, “ಬಲಹೀನರಾದ ಈ ಯೆಹೂದ್ಯರು ಮಾಡುವುದೇನು? ಇವರು ತಮ್ಮನ್ನು ಬಲಪಡಿಸಿಕೊಳ್ಳಬೇಕೆಂದಿರುವರೋ? ಯಜ್ಞವನ್ನರ್ಪಿಸುವರೋ? ಈ ದಿನವೇ ಈ ಕೆಲಸವನ್ನು ಮುಗಿಸುವರೇನು? ಸುಟ್ಟುಹೋದ ಪಟ್ಟಣದ ಧೂಳಿನ ರಾಶಿಯೊಳಗೆ ಹುಗಿದುಹೋದ ಕಲ್ಲುಗಳನ್ನು ಬದುಕಿಸಲೂ ಸಾಧ್ಯವೇ?” ಎಂದು ಹೇಳಿದನು.
ನೆಹೆಮಿಯ 4 : 3 (IRVKN)
ಅವನ ಬಳಿಯಲ್ಲಿ ನಿಂತಿದ್ದ ಅಮ್ಮೋನಿಯಾದ ಟೋಬೀಯನು, “ಅವರು ಹೇಗೆ ಕಟ್ಟಿದ್ದರೂ ಅವರು ಕಟ್ಟುವ ಕಲ್ಲುಗೋಡೆಯ ಮೇಲೆ ನರಿ ಹಾರಿದರೆ ಅದು ಉರುಳಿ ಬಿದ್ದು ಹೋಗುವುದು” ಎಂದನು.
ನೆಹೆಮಿಯ 4 : 4 (IRVKN)
ನಮ್ಮ ದೇವರೇ ಕೇಳು, ಅವರು ನಮ್ಮನ್ನು ಎಷ್ಟು ಹೀಯಾಳಿಸುತ್ತಿದ್ದಾರೆ! ಈ ನಿಂದೆಯನ್ನು ಅವರ ತಲೆಯ ಮೇಲೆಯೇ ಬರಮಾಡು. ಅವರು ದೇಶಭ್ರಷ್ಟರಾಗಿ ಸೂರೆಹೋಗುವಂತೆ ಮಾಡು.
ನೆಹೆಮಿಯ 4 : 5 (IRVKN)
ಅವರ ಅಪರಾಧವನ್ನು ಕ್ಷಮಿಸಬೇಡ; ನಿನ್ನೆದುರಿಗಿರುವ ಅವರ ಅಪರಾಧವನ್ನು ಅಳಿಸಿಬಿಡಬೇಡ. ಕಟ್ಟುವವರ ಮುಂದೆಯೇ ಅವರು ನಿನ್ನನ್ನು ಕೆಣಕಿ ಕೋಪಗೊಳಿಸಿದ್ದಾರಲ್ಲಾ.
ನೆಹೆಮಿಯ 4 : 6 (IRVKN)
ಆದರೂ ನಾವು ಕಟ್ಟುವ ಕೆಲಸವನ್ನು ಮುಂದುವರಿಸಿದೆವು. ಜನರು ಅದಕ್ಕೆ ಮನಸ್ಸು ಕೊಟ್ಟಿದ್ದರಿಂದ ಗೋಡೆಯೆಲ್ಲಾ ಅರ್ಧ ಎತ್ತರದವರೆಗೂ ಸಮನಾಗಿ ಕಟ್ಟಲಾಯಿತು.
ನೆಹೆಮಿಯ 4 : 7 (IRVKN)
ಸನ್ಬಲ್ಲಟನೂ, ಟೋಬೀಯನೂ, ಅರಬಿಯರೂ, ಅಮ್ಮೋನಿಯರೂ, ಅಷ್ಡೋದಿನವರೂ ಯೆರೂಸಲೇಮಿನ ಗೋಡೆಯ ಜೀರ್ಣೋದ್ಧಾರ ಕಾರ್ಯವು ಮುಂದುವರಿದು, ಅದರ ಸಂದುಗಳು ತಿರುಗಿ ಸರಿಯಾಗುತ್ತಾ ಬರುವುದನ್ನು ಕೇಳಿ ಬಹುಕೋಪಗೊಂಡರು.
ನೆಹೆಮಿಯ 4 : 8 (IRVKN)
ನಾವು ಒಟ್ಟಾಗಿ ಯೆರೂಸಲೇಮಿನವರಿಗೆ ವಿರುದ್ಧವಾಗಿ ಯುದ್ಧಕ್ಕೆ ಹೋಗಿ ಅವರನ್ನು ಗಲಿಬಿಲಿಗೊಳಿಸೋಣ ಎಂದು ಒಳಸಂಚು ಮಾಡಿಕೊಂಡರು.
ನೆಹೆಮಿಯ 4 : 9 (IRVKN)
ನಾವಾದರೋ ನಮ್ಮ ದೇವರಿಗೆ ಮೊರೆಯಿಟ್ಟು ಅವರಿಗೆ ವಿರುದ್ಧವಾಗಿ ಅವರು ಬರುವ ದಾರಿಯಲ್ಲಿ ಹಗಲಿರುಳು ಕಾವಲುಗಾರರನ್ನಿರಿಸಿದೆವು.
ನೆಹೆಮಿಯ 4 : 10 (IRVKN)
ಇತ್ತ ಯೆಹೂದ್ಯರು, “ಹೊರೆ ಹೊರುವವರ ಬಲವು ಕುಂದಿಹೋಯಿತು, ಧೂಳಿನ ರಾಶಿಯು ವಿಪರೀತವಾಗಿದೆ; ಈ ಗೋಡೆಯನ್ನು ಕಟ್ಟುವುದು ನಮ್ಮಿಂದ ಆಗುವುದಿಲ್ಲ” ಎಂದರು.
ನೆಹೆಮಿಯ 4 : 11 (IRVKN)
ಮತ್ತು ನಮ್ಮ ವಿರೋಧಿಗಳು, “ಅವರಿಗೆ ತಿಳಿಯದಂತೆ, ಗೋಚರವಾಗದಂತೆ ಫಕ್ಕನೆ ಅವರೊಳಗೆ ನುಗ್ಗಿ ಅವರನ್ನು ಕೊಂದು ಕೆಲಸವನ್ನು ನಿಲ್ಲಿಸಿಬಿಡೋಣ” ಎಂದುಕೊಳ್ಳುತ್ತಿದ್ದರು.
ನೆಹೆಮಿಯ 4 : 12 (IRVKN)
ಅವರ ನೆರೆಯೂರುಗಳಲ್ಲಿ ವಾಸಿಸುತ್ತಿದ್ದ ಯೆಹೂದ್ಯರು ಬಂದು ಬಂದು ನಮಗೆ, ನೀವು ಯಾವ ಕಡೆಗೆ ತಿರುಗಿಕೊಂಡರೂ ಎಲ್ಲಾ ಕಡೆಗಳಿಂದಲೂ ಅವರು ನಮ್ಮ ವಿರುದ್ಧವಾಗಿ ಯುದ್ಧಕ್ಕೆ ಬರುತ್ತಾರೆ ಎಂದು ಪದೇ ಪದೇ ಬಂದು ತಿಳಿಸುತ್ತಿದ್ದರು.
ನೆಹೆಮಿಯ 4 : 13 (IRVKN)
ಆಗ ನಾನು ಜನರಿಗೆ ಕತ್ತಿ, ಬಿಲ್ಲು, ಬರ್ಜಿಗಳನ್ನು ಹಿಡಿದುಕೊಂಡು ಗೋಡೆಯ ಹಿಂದಣ ತಗ್ಗಾದ ಬಯಲುಗಳಲ್ಲಿ ಗೋತ್ರಗೋತ್ರಗಳಾಗಿ ನಿಲ್ಲಬೇಕೆಂದು ಆಜ್ಞಾಪಿಸಿದೆನು.
ನೆಹೆಮಿಯ 4 : 14 (IRVKN)
ಆಗ ನಾನು ಅವರನ್ನು ಸಂದರ್ಶಿಸಿ ಅವರ ಮುಂದೆ ನಿಂತು ಶ್ರೀಮಂತರನ್ನೂ, ಅಧಿಕಾರಿಗಳನ್ನೂ, ಉಳಿದ ಜನರನ್ನೂ ಉದ್ದೇಶಿಸಿ, “ನಿಮ್ಮ ಹಗೆಗಳಿಗೆ ಹೆದರಬೇಡಿರಿ; ಮಹೋನ್ನತನೂ, ಭಯಂಕರನೂ ಆಗಿರುವ ಕರ್ತನನ್ನು ನೆನಪುಮಾಡಿಕೊಂಡು ನಿಮ್ಮ ಸಹೋದರರಿಗಾಗಿಯೂ, ಗಂಡು ಹೆಣ್ಣು ಮಕ್ಕಳಿಗಾಗಿಯೂ, ಹೆಂಡತಿಯರಿಗಾಗಿಯೂ, ನಿಮ್ಮ ಮನೆಗಳಿಗೋಸ್ಕರವೂ ಹೋರಾಡಿರಿ” ಎಂದು ಹೇಳಿದೆನು.
ನೆಹೆಮಿಯ 4 : 15 (IRVKN)
ನಮ್ಮ ಶತ್ರುಗಳು ತಮ್ಮ ಉದ್ದೇಶ ನಮಗೆ ಗೊತ್ತಾಯಿತೆಂದೂ ದೇವರು ಅದನ್ನು ವ್ಯರ್ಥಮಾಡಿದನೆಂದೂ ತಿಳಿದುಕೊಂಡಾಗ ಅವರು ನಮ್ಮನ್ನು ಬಿಟ್ಟು ಹೋದರು. ನಾವೆಲ್ಲರೂ ನಮ್ಮ ನಮ್ಮ ಪೌಳಿಗೋಡೆಯ ಕೆಲಸವನ್ನು ಪುನಃ ಪ್ರಾರಂಭಿಸಲು ತೊಡಗಿದೆವು.
ನೆಹೆಮಿಯ 4 : 16 (IRVKN)
ಅಂದಿನಿಂದ ನನ್ನ ಸ್ವಂತ ಆಳುಗಳಲ್ಲಿ ಅರ್ಧ ಮಂದಿ ಕೆಲಸದಲ್ಲಿ ಸಹಾಯಮಾಡಿದರು, ಅರ್ಧ ಮಂದಿ ಕವಚವನ್ನು ಧರಿಸಿಕೊಂಡು ಬರ್ಜಿ, ಗುರಾಣಿ, ಬಿಲ್ಲುಗಳನ್ನು ಹಿಡಿದುಕೊಂಡು ನಿಂತರು. ಅದೇ ಪ್ರಕಾರ ಈ ಕಾರ್ಯಕ್ಕಾಗಿ ನೇಮಿಸಲ್ಪಟ್ಟ ಅಧಿಕಾರಿಗಳು ಗೋಡೆಕಟ್ಟುವ ಯೆಹೂದ್ಯರ ಹಿಂದೆ ನಿಂತರು.
ನೆಹೆಮಿಯ 4 : 17 (IRVKN)
ಹೊರೆ ಹೊರುವವರು ಒಂದು ಕೈಯಿಂದ ಹೊರೆಹೊತ್ತುಕೊಳ್ಳುತ್ತಾ ಇನ್ನೊಂದು ಕೈಯಿಂದ ಈಟಿ ಹಿಡಿದುಕೊಳ್ಳುತ್ತಿದ್ದರು.
ನೆಹೆಮಿಯ 4 : 18 (IRVKN)
ಪೌಳಿಗೋಡೆಯನ್ನು ಕಟ್ಟುವವರಲ್ಲಿ ಪ್ರತಿಯೊಬ್ಬನು ತನ್ನ ತನ್ನ ಕತ್ತಿಯನ್ನು ಸೊಂಟಕ್ಕೆ ಬಿಗಿದುಕೊಂಡು ಕಟ್ಟುತ್ತಿದ್ದನು. ನಾನಂತೂ ಕೊಂಬೂದುವವನೊಬ್ಬನನ್ನು ನನ್ನ ಬಳಿಯಲ್ಲಿರಿಸಿಕೊಂಡಿದ್ದೆ.
ನೆಹೆಮಿಯ 4 : 19 (IRVKN)
ನಾನು ಶ್ರೀಮಂತರಿಗೂ, ಅಧಿಕಾರಿಗಳಿಗೂ ಉಳಿದ ಜನರಿಗೂ, “ನಾವು ಮಾಡುವ ಕೆಲಸವು ಬಹಳ ದೊಡ್ಡದೂ, ಅನೇಕ ಸ್ಥಳಗಳಲ್ಲಿ ನಡೆಯುವಂಥದ್ದೂ ಆಗಿದೆ; ನಾವು ಗೋಡೆಯ ಮೇಲೆ ಚದರಿ ಒಬ್ಬರಿಗೊಬ್ಬರು ದೂರವಾಗಿರುತ್ತೇವೆ.
ನೆಹೆಮಿಯ 4 : 20 (IRVKN)
ನಿಮಗೆ ಕೊಂಬಿನ ಧ್ವನಿಯು ಯಾವ ಸ್ಥಳದಿಂದ ಕೇಳಿಬರುವುದೋ ಆ ಸ್ಥಳಕ್ಕೆ ನಮ್ಮ ಹತ್ತಿರ ಕೂಡಿಬನ್ನಿರಿ. ನಮ್ಮ ದೇವರು ನಮಗೋಸ್ಕರ ಯುದ್ಧ ಮಾಡುವನು” ಎಂದು ಹೇಳಿದೆನು.
ನೆಹೆಮಿಯ 4 : 21 (IRVKN)
ಹೀಗೆ ನಾವು ಅರುಣೋದಯದಿಂದ ನಕ್ಷತ್ರಗಳು ಮೂಡುವವರೆಗೂ ಕೆಲಸ ಮಾಡುತ್ತಿದ್ದೆವು. ನನ್ನ ಸೇವಕರಲ್ಲಿ ಅರ್ಧ ಮಂದಿ ಬರ್ಜಿಯನ್ನು ಹಿಡಿದುಕೊಂಡಿದ್ದರು.
ನೆಹೆಮಿಯ 4 : 22 (IRVKN)
ಇದಲ್ಲದೆ, ನಾನು ಆ ಸಮಯದಲ್ಲಿ ಜನರಿಗೆ, “ನಿಮ್ಮ ಆಳುಗಳು ರಾತ್ರಿಯಲ್ಲಿ ನಮಗೆ ಕಾವಲಾಗಿರುವಂತೆಯು ಹಾಗೂ ಹಗಲಿನಲ್ಲಿ ಕೆಲಸ ನಡಿಸುವಂತೆಯು ನೀವು ನಿಮ್ಮ ನಿಮ್ಮ ಆಳುಗಳೊಡನೆ ಯೆರೂಸಲೇಮಿನಲ್ಲಿಯೇ ವಾಸಮಾಡಬೇಕು” ಎಂದು ಅಪ್ಪಣೆ ಮಾಡಿದೆನು.
ನೆಹೆಮಿಯ 4 : 23 (IRVKN)
ನಾನೂ ನನ್ನ ಸಹೋದರರೂ, ಸೇವಕರೂ, ಮೈಗಾವಲಿನವರೂ ನಮ್ಮ ಬಟ್ಟೆಗಳನ್ನು ಬದಲಾಯಿಸಿರಲಿಲ್ಲ. ಪ್ರತಿಯೊಬ್ಬನು ನೀರನ್ನು ಮತ್ತು ಆಯುಧಗಳನ್ನು ಹಿಡಿದುಕೊಂಡಿದ್ದೆವು* ಪ್ರತಿಯೊಬ್ಬನು ನೀರನ್ನು ಮತ್ತು ಆಯುಧಗಳನ್ನು ಹಿಡಿದುಕೊಂಡಿದ್ದೆವು ಅಥವಾ ಪ್ರತಿಯೊಬ್ಬನು ಆಯುಧಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದೆವು. .
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23