ಮಾರ್ಕನು 6 : 1 (IRVKN)
ಯೇಸುವಿನ ಸ್ವಂತ ಊರಿನವರು ಆತನನ್ನು ತಾತ್ಸಾರಮಾಡಿದ್ದು
ಮತ್ತಾ 13:54-58; ಲೂಕ 4:15-30 ಯೇಸು ಅಲ್ಲಿಂದ ಹೊರಟು ತನ್ನ ಊರಿಗೆ ಬಂದನು; ಆತನ ಶಿಷ್ಯರು ಆತನನ್ನು ಹಿಂಬಾಲಿಸಿದರು.
ಮಾರ್ಕನು 6 : 2 (IRVKN)
ಸಬ್ಬತ್ ದಿನ ಬಂದಾಗ ಆತನು ಅಲ್ಲಿಯ ಸಭಾಮಂದಿರದಲ್ಲಿ ಉಪದೇಶಮಾಡತೊಡಗಿದನು. ಅಲ್ಲಿ ನೆರದಿದ್ದ ಜನರು ಯೇಸುವಿನ ಬೋಧನೆಯನ್ನು ಕೇಳಿ ಬೆರಗಾದರು. “ಈತನಿಗೆ ಈ ಬೋಧನೆಯ ಮಾತುಗಳು ಎಲ್ಲಿಂದ ಬಂದಿತು? ಈತನು ಪಡೆದಿರುವ ಜ್ಞಾನವಾದರೂ ಎಂಥದ್ದು? ಈತನ ಕೈಯಿಂದ ಇಂತಹ ಅದ್ಭುತಕಾರ್ಯಗಳು ಆಗುವುದಾದರು ಹೇಗೆ?
ಮಾರ್ಕನು 6 : 3 (IRVKN)
ಈತನು ಆ ಬಡಗಿಯಲ್ಲವೇ? ಈತನು ಮರಿಯಳ ಮಗನಲ್ಲವೇ? ಈತನು ಯಾಕೋಬ, ಯೋಸೆ, ಯೂದ, ಸೀಮೋನ ಇವರ ಅಣ್ಣನಲ್ಲವೇ? ಈತನ ತಂಗಿಯರು ಇಲ್ಲಿ ನಮ್ಮಲ್ಲಿಯೇ ಇದ್ದಾರಲ್ಲವೇ?” ಎಂದು ಹೇಳುತ್ತಾ ಯೇಸುವನ್ನು ತಾತ್ಸಾರ ಮಾಡಿದರು.
ಮಾರ್ಕನು 6 : 4 (IRVKN)
ಯೇಸು ಅವರಿಗೆ, “ಪ್ರವಾದಿಯು ಬೇರೆ ಎಲ್ಲಿದ್ದರೂ ಅವನಿಗೆ ಗೌರವ ಉಂಟು; ಆದರೆ ಸ್ವಂತ ದೇಶದಲ್ಲಿಯೂ, ಸ್ವಂತ ಜನರಲ್ಲಿಯೂ, ಸ್ವಂತ ಮನೆಯಲ್ಲಿಯೂ ಗೌರವವಿಲ್ಲ” ಎಂದು ಹೇಳಿದನು.
ಮಾರ್ಕನು 6 : 5 (IRVKN)
ಆತನು ಅಲ್ಲಿ ಕೆಲವು ರೋಗಿಗಳ ಮೇಲೆ ಕೈಯಿಟ್ಟು ಸ್ವಸ್ಥಮಾಡಿದನೇ ಹೊರತು ಬೇರೆ ಯಾವ ಮಹತ್ಕಾರ್ಯವನ್ನೂ ಮಾಡುವುದಕ್ಕಾಗಲಿಲ್ಲ.
ಮಾರ್ಕನು 6 : 6 (IRVKN)
ಅವರ ಅಪನಂಬಿಕೆಗೆ ಆತನು ಆಶ್ಚರ್ಯಪಟ್ಟನು. ಆ ನಂತರ ಯೇಸು ಸುತ್ತಮುತ್ತಲಿನ ಊರುಗಳಲ್ಲಿ ಬೋಧಿಸಿದನು.
ಮಾರ್ಕನು 6 : 7 (IRVKN)
ಯೇಸು ಸುವಾರ್ತೆ ಸಾರುವುದಕ್ಕೆ ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಕಳುಹಿಸಿದ್ದು
ಮತ್ತಾ 9:35-10:14; ಲೂಕ 9:1-6 ತಾನು ಆಯ್ಕೆಮಾಡಿಕೊಂಡ ಹನ್ನೆರಡು ಮಂದಿ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದನು. ಕಳುಹಿಸುವಾಗ ಆತನು ಅವರಿಗೆ ದೆವ್ವಗಳ ಮೇಲೆ ಅಧಿಕಾರ ಕೊಟ್ಟು,
ಮಾರ್ಕನು 6 : 8 (IRVKN)
“ಕೋಲು ಹೊರತು ಪ್ರಯಾಣಕ್ಕೆ ಏನೂ ತೆಗೆದುಕೊಂಡು ಹೋಗಬೇಡಿರಿ; ಬುತ್ತಿ, ಚೀಲ, ಸೊಂಟಪಟ್ಟಿಯಲ್ಲಿ ಹಣ ಬೇಡ.
ಮಾರ್ಕನು 6 : 9 (IRVKN)
ಚಪ್ಪಲಿಗಳನ್ನು ಹಾಕಿಕೊಳ್ಳಬಹುದು, ಆದರೆ ಎರಡು ಅಂಗಿಗಳನ್ನು ಧರಿಸಬೇಡಿರಿ” ಎಂದು ಅಪ್ಪಣೆಕೊಟ್ಟನು.
ಮಾರ್ಕನು 6 : 10 (IRVKN)
ಇದಲ್ಲದೆ ಆತನು ಅವರಿಗೆ, “ನೀವು ಎಲ್ಲಿಯಾದರೂ ಒಂದು ಮನೆಗೆ ಹೋದಾಗ ಆ ಸ್ಥಳದಿಂದ ಹೊರಡುವವರೆಗೂ ಅಲ್ಲೇ ಉಳಿದುಕೊಳ್ಳಿರಿ.
ಮಾರ್ಕನು 6 : 11 (IRVKN)
ಮತ್ತು ಯಾವ ಸ್ಥಳದವರಾದರೂ ನಿಮ್ಮನ್ನು ಸೇರಿಸಿಕೊಳ್ಳದೆಯೂ ನೀವು ಹೇಳುವುದನ್ನು ಕೇಳದೆಯೂ ಹೋದರೆ ಆ ಸ್ಥಳದಿಂದ ಹೊರಡುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ; ಅದು ಅವರ ವಿರುದ್ಧ ಸಾಕ್ಷಿಯಾಗಿರಲಿ” ಎಂದು ಹೇಳಿದನು.
ಮಾರ್ಕನು 6 : 12 (IRVKN)
ಅವರು ಹೊರಟು ಹೋಗಿ ಜನರಿಗೆ, “ನೀವು ನಿಮ್ಮ ಪಾಪಗಳನ್ನು ಬಿಟ್ಟು ಮಾನಸಾಂತರ ಹೊಂದಬೇಕು” ಎಂದು ಸಾರಿ ಹೇಳಿದರು.
ಮಾರ್ಕನು 6 : 13 (IRVKN)
ಅನೇಕ ದೆವ್ವಗಳನ್ನು ಬಿಡಿಸಿ ಅನೇಕ ರೋಗಿಗಳಿಗೆ ಎಣ್ಣೆ ಹಚ್ಚಿ ಗುಣಪಡಿಸಿದರು.
ಮಾರ್ಕನು 6 : 14 (IRVKN)
ಸ್ನಾನಿಕನಾದ ಯೋಹಾನನ ಶಿರಚ್ಛೇದನ
ಮತ್ತಾ 14:1-12; ಲೂಕ 9:7-9; 3:19,20 ಅಷ್ಟರಲ್ಲಿ ಅರಸನಾದ ಹೆರೋದನು ಯೇಸುವಿನ ಹೆಸರು ಪ್ರಸಿದ್ಧಿಗೆ ಬಂದಿರುವ ವಿಷಯ ಕೇಳಿದನು ಮತ್ತು ಜನರು ಆತನ ವಿಷಯದಲ್ಲಿ, “ಸ್ನಾನಿಕನಾದ ಯೋಹಾನನೇ ತಿರುಗಿ ಬದುಕಿ ಬಂದಿದ್ದಾನೆ; ಆದುದರಿಂದ ಮಹತ್ಕಾರ್ಯಗಳನ್ನು ನಡಿಸುವ ಶಕ್ತಿ ಈತನಲ್ಲಿ ಇದೆ” ಎಂದು ಹೇಳುತ್ತಿದ್ದರು.
ಮಾರ್ಕನು 6 : 15 (IRVKN)
ಕೆಲವರು, “ಇವನು ಎಲೀಯನೆಂತಲೂ” ಮತ್ತೆ ಕೆಲವರು, “ಇವನು ಪ್ರಾಚೀನ ಕಾಲದ ಪ್ರವಾದಿಗಳಂತಿರುವ ಒಬ್ಬ ಪ್ರವಾದಿಯೆಂತಲೂ” ಹೇಳಿದರು.
ಮಾರ್ಕನು 6 : 16 (IRVKN)
ಆದರೆ ಹೆರೋದನು ಆತನ ಸುದ್ದಿಯನ್ನು ಕೇಳಿ, “ನಾನು ಶಿರಚ್ಛೇದನ ಮಾಡಿಸಿದ ಯೋಹಾನನೇ ತಿರುಗಿ ಬದುಕಿ ಬಂದಿದ್ದಾನೆ” ಎಂದು ಹೇಳಿದನು.
ಮಾರ್ಕನು 6 : 17 (IRVKN)
ಹೆರೋದನು ತಾನೇ ಕಳುಹಿಸಿ ಯೋಹಾನನನ್ನು ಹಿಡಿದು ಬಂಧಿಸಿ ಸೆರೆಮನೆಯಲ್ಲಿ ಹಾಕಿಸಿದ್ದನು. ಹೆರೋದ್ಯಳ ನಿಮಿತ್ತ ಹಾಗೆ ಮಾಡಿದ್ದನು; ಏಕೆಂದರೆ ಅವನು ತನ್ನ ಅಣ್ಣನಾದ ಫಿಲಿಪ್ಪನ ಹೆಂಡತಿ ಹೆರೋದ್ಯಳನ್ನು ಮದುವೆಯಾಗಿದ್ದನು.
ಮಾರ್ಕನು 6 : 18 (IRVKN)
ಇದರ ನಿಮಿತ್ತ ಯೋಹಾನನು ಹೆರೋದನಿಗೆ, “ನಿನ್ನ ಅಣ್ಣನ ಹೆಂಡತಿಯು ಆತನು ಬದುಕಿರುವಾಗಲೇ ನಿನ್ನವಳ್ಳಾಗಿರುವುದು ಅಧರ್ಮವಲ್ಲವೇ” ಎಂದು ಹೇಳುತ್ತಿದ್ದನು.
ಮಾರ್ಕನು 6 : 19 (IRVKN)
ಇದರಿಂದ ಹೆರೋದ್ಯಳು ಸಹ ಯೋಹಾನನ ಮೇಲೆ ದ್ವೇಷವಿಟ್ಟುಕೊಂಡು ಅವನನ್ನು ಕೊಲ್ಲಿಸಬೇಕೆಂದಿದ್ದರೂ ಸಾಧ್ಯವಾಗಲಿಲ್ಲ.
ಮಾರ್ಕನು 6 : 20 (IRVKN)
ಏಕೆಂದರೆ ಹೆರೋದನು ಯೋಹಾನನನ್ನು ನೀತಿವಂತನೆಂದೂ ಪರಿಶುದ್ಧನೆಂದೂ ತಿಳಿದು ಭಯಪಟ್ಟು ಅವನಿಗೆ ಯಾವ ಅಪಾಯವೂ ಬಾರದಂತೆ ಕಾಪಾಡಿದ್ದನು. ಇದಲ್ಲದೆ ಯೋಹಾನನು ಹೇಳುತ್ತಿದ್ದ ಸಂದೇಶವನ್ನು ಅವನು ಕೇಳಿದಾಗ ಮನಸ್ಸಿನಲ್ಲಿ ಅಸಮಾಧಾನ ಉಂಟಾದರೂ ಅವನ ಮಾತನ್ನು ಸಂತೋಷದಿಂದ ಕೇಳುತ್ತಿದ್ದನು.
ಮಾರ್ಕನು 6 : 21 (IRVKN)
ಆದರೆ ಹೆರೋದ್ಯಳಿಗೆ ಅನುಕೂಲವಾದ ದಿನ ಬಂದಿತು; ಹೇಗೆಂದರೆ ಹೆರೋದನು ತನ್ನ ಜನ್ಮದಿನದಂದು ಪ್ರಭುಗಳಿಗೂ, ಸಹಸ್ರಾಧಿಪತಿಗಳಿಗೂ, ಗಲಿಲಾಯ ಸೀಮೆಯ ಮುಖ್ಯಸ್ಥರಿಗೂ ಔತಣವನ್ನು ಏರ್ಪಡಿಸಿದಾಗ,
ಮಾರ್ಕನು 6 : 22 (IRVKN)
ಹೆರೋದ್ಯಳ ಮಗಳು ಒಳಕ್ಕೆ ಬಂದು ನಾಟ್ಯವಾಡಿ ಹೆರೋದನನ್ನೂ ಅವನ ಸಂಗಡ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದ ಅತಿಥಿಗಳನ್ನೂ ಮೆಚ್ಚಿಸಿದಳು. ಅರಸನು ಆ ಹುಡುಗಿಗೆ, “ನಿನಗೆ ಬೇಕಾದದ್ದನ್ನು ಕೇಳಿಕೋ, ಕೊಡುತ್ತೇನೆ.
ಮಾರ್ಕನು 6 : 23 (IRVKN)
ನೀನು ಏನು ಕೇಳಿಕೊಂಡರೂ ಸರಿ, ನನ್ನ ರಾಜ್ಯದಲ್ಲಿ ಅರ್ಧವನ್ನು ಕೇಳಿದರೂ, ನಿನಗೆ ಕೊಡುತ್ತೇನೆ” ಎಂದು ಪ್ರಮಾಣಮಾಡಿದನು.
ಮಾರ್ಕನು 6 : 24 (IRVKN)
ಆಗ ಅವಳು ಹೊರಕ್ಕೆ ಹೋಗಿ, “ನಾನು ಏನು ಕೇಳಿಕೊಳ್ಳಲಿ?” ಎಂದು ತನ್ನ ತಾಯಿಯನ್ನು ಕೇಳಲಾಗಿ ಅವಳು, “ಸ್ನಾನಿಕನಾದ ಯೋಹಾನನ ತಲೆಯನ್ನು ಕೇಳಿಕೋ” ಅಂದಳು.
ಮಾರ್ಕನು 6 : 25 (IRVKN)
ಕೂಡಲೆ ಅವಳು ಅರಸನ ಬಳಿಗೆ ಅವಸರದಿಂದ ಬಂದು, “ಈ ಕ್ಷಣದಲ್ಲೇ ಸ್ನಾನಿಕನಾದ ಯೋಹಾನನ ತಲೆಯನ್ನು * ದೊಡ್ಡ ತಟ್ಟೆ ಪರಾತಿನಲ್ಲಿ ನನಗೆ ತರಿಸಿಕೊಡಬೇಕು, ಇದೇ ನನ್ನ ಬೇಡಿಕೆ” ಎಂದು ಕೇಳಿಕೊಂಡಳು.
ಮಾರ್ಕನು 6 : 26 (IRVKN)
ಅದಕ್ಕೆ ಅರಸನಿಗೆ ಬಹು ದುಃಖವಾಯಿತು. ಅದರೂ ಅತಿಥಿಗಳೆಲ್ಲರ ಮುಂದೆ ತಾನು ಮಾಡಿದ ಪ್ರಮಾಣದ ನಿಮಿತ್ತ ಅವಳ ಕೋರಿಕೆಯನ್ನು ನಿರಾಕರಿಸಲಾಗಲಿಲ್ಲ.
ಮಾರ್ಕನು 6 : 27 (IRVKN)
ಕೂಡಲೆ ತನ್ನ † ಕಾವಲುಗಾರ ಮೈಗಾವಲಿನ ಸಿಪಾಯಿಗಳಲ್ಲಿ ಒಬ್ಬನಿಗೆ, ನೀನು ಹೋಗಿ ಯೋಹಾನನ ತಲೆಯನ್ನು ತಂದುಕೊಡು ಎಂದು ಅಪ್ಪಣೆಕೊಟ್ಟು ಕಳುಹಿಸಿದನು;
ಮಾರ್ಕನು 6 : 28 (IRVKN)
ಅವನು ಹೋಗಿ ಸೆರೆಮನೆಯಲ್ಲಿ ಅವನ ತಲೆಯನ್ನು ಕಡಿದು ಒಂದು ಪರಾತಿನಲ್ಲಿ ತಂದು ಆ ಹುಡುಗಿಗೆ ಕೊಟ್ಟನು. ಆ ಹುಡುಗಿ ಅದನ್ನು ತನ್ನ ತಾಯಿಗೆ ಕೊಟ್ಟಳು.
ಮಾರ್ಕನು 6 : 29 (IRVKN)
ಯೋಹಾನನ ಶಿಷ್ಯರು ಈ ಸಂಗತಿಗಳನ್ನು ಕೇಳಿ ಅವರು ಬಂದು ಅವನ ಶವವನ್ನು ತೆಗೆದುಕೊಂಡು ಹೋಗಿ ಸಮಾಧಿಯಲ್ಲಿ ಇಟ್ಟರು.
ಮಾರ್ಕನು 6 : 30 (IRVKN)
ಯೇಸು ಐದು ಸಾವಿರ ಜನರಿಗೆ ಊಟಮಾಡಿಸಿದ್ದು
ಮತ್ತಾ 14:13-36; ಲೂಕ 9:10-17; ಯೋಹಾ 6:1-21 [‡ ಮಾರ್ಕ 6: 7 ]ಅಪೊಸ್ತಲರು ಯೇಸುವಿನ ಬಳಿಗೆ ಕೂಡಿ ಬಂದು ತಾವು ಮಾಡಿದ್ದನ್ನೂ ಉಪದೇಶಿಸಿದ್ದನ್ನೂ ಆತನಿಗೆ ತಿಳಿಸಿದರು.
ಮಾರ್ಕನು 6 : 31 (IRVKN)
ಆತನು ಅವರಿಗೆ, “ನೀವು ಮಾತ್ರ ಏಕಾಂತ ಸ್ಥಳಕ್ಕೆ ಬಂದು ಸ್ವಲ್ಪ ವಿಶ್ರಮಿಸಿಕೊಳ್ಳಿರಿ” ಎಂದು ಹೇಳಿದನು. ಏಕೆಂದರೆ ಬಹಳ ಮಂದಿ ಬರುತ್ತಾ ಹೋಗುತ್ತಾ ಇದ್ದುದರಿಂದ ಅವರಿಗೆ ಊಟಮಾಡುವುದಕ್ಕೂ ಸಮಯವಿರಲಿಲ್ಲ.
ಮಾರ್ಕನು 6 : 32 (IRVKN)
ಆಗ ಅವರು ತಾವಾಗಿಯೇ ದೋಣಿಯಲ್ಲಿ ಹೊರಟು ಏಕಾಂತ ಸ್ಥಳಕ್ಕೆ ಹೋದರು.
ಮಾರ್ಕನು 6 : 33 (IRVKN)
ಆದರೆ ಅವರು ಹೋಗುವುದನ್ನು ಬಹು ಜನರು ನೋಡಿ ಅವರನ್ನು ಗುರುತಿಸಿ ಎಲ್ಲಾ ಊರುಗಳಿಂದ ಕಾಲುನಡಿಗೆಯಾಗಿ ಓಡಿ ಅವರಿಗಿಂತ ಮೊದಲೇ ಅಲ್ಲಿ ಸೇರಿದರು.
ಮಾರ್ಕನು 6 : 34 (IRVKN)
ಯೇಸು ದೋಣಿಯಿಂದ ಇಳಿದಾಗ ದೊಡ್ಡ ಜನಸಮೂಹವನ್ನು ನೋಡಿ ಇವರು ಕುರುಬನಿಲ್ಲದ ಕುರಿಗಳ ಹಾಗಿದ್ದಾರಲ್ಲಾ ಎಂದು ಕನಿಕರಪಟ್ಟು ಅವರಿಗೆ ಅನೇಕ ವಿಷಯಗಳನ್ನು ಕುರಿತು ಬೋಧಿಸಲಾರಂಭಿಸಿದನು.
ಮಾರ್ಕನು 6 : 35 (IRVKN)
ಅಷ್ಟರಲ್ಲಿ ಸಂಜೆ ಆಗಿದ್ದರಿಂದ ಆತನ ಶಿಷ್ಯರು ಆತನ ಬಳಿಗೆ ಬಂದು, “ಇದು ನಿರ್ಜನ ಸ್ಥಳ, ಈಗ ಹೊತ್ತು ಬಹಳವಾಯಿತು;
ಮಾರ್ಕನು 6 : 36 (IRVKN)
ಈ ಜನರಿಗೆ ಅಪ್ಪಣೆಕೊಡು; ಇವರು ಸುತ್ತಲಿರುವ ಸೀಮೆಗೂ ಹಳ್ಳಿಗಳಿಗೂ ಹೋಗಿ ತಮ್ಮ ಊಟಕ್ಕೆ ಏನಾದರೂ ಕೊಂಡುಕೊಳ್ಳಲಿ” ಎಂದು ಹೇಳಿದರು.
ಮಾರ್ಕನು 6 : 37 (IRVKN)
ಅದಕ್ಕೆ ಯೇಸು, “ನೀವೇ ಅವರಿಗೆ ಊಟಕ್ಕೇನಾದರೂ ಕೊಡಿರಿ” ಎಂದು ಉತ್ತರಕೊಟ್ಟನು. ಅದಕ್ಕವರು, “ನಾವು ಹೋಗಿ ಇನ್ನೂರು ದಿನಾರಿ ನಾಣ್ಯಗಳ ಬೆಲೆಯಷ್ಟು ರೊಟ್ಟಿಯನ್ನು ಕೊಂಡುಕೊಂಡು ಅವರಿಗೆ ಊಟ ಕೊಡಬೇಕೋ?” ಎಂದು ಹೇಳಲು
ಮಾರ್ಕನು 6 : 38 (IRVKN)
ಆತನು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿ” ಅಂದನು. ಅವರು ವಿಚಾರಿಸಿಕೊಂಡು ಬಂದು, “ನಮ್ಮಲ್ಲಿ ಐದು ರೊಟ್ಟಿ ಮತ್ತು ಎರಡು ಮೀನುಗಳಿವೆ” ಅಂದರು.
ಮಾರ್ಕನು 6 : 39 (IRVKN)
ಆಗ ಆತನು ಅವರಿಗೆ, ಎಲ್ಲರೂ ಹಸಿರುಹುಲ್ಲಿನ ಮೇಲೆ § ಅರ್ಥ ಸಾಲುಸಾಲಾಗಿ. ಪಂಕ್ತಿಪಂಕ್ತಿಯಾಗಿ ಕುಳಿತುಕೊಳ್ಳಲಿ ಎಂದು ಅಪ್ಪಣೆಕೊಟ್ಟಾಗ,
ಮಾರ್ಕನು 6 : 40 (IRVKN)
ಜನರು ಪಂಕ್ತಿಗೆ ನೂರರಂತೆ ಐವತ್ತರಂತೆ ಸಾಲುಸಾಲಾಗಿ ಕುಳಿತುಕೊಂಡರು.
ಮಾರ್ಕನು 6 : 41 (IRVKN)
ಆ ಮೇಲೆ ಆತನು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಪರಲೋಕದ ಕಡೆಗೆ ನೋಡಿ ದೇವರಿಗೆ ಸ್ತೋತ್ರಮಾಡಿ ಆ ರೊಟ್ಟಿಗಳನ್ನು ಮುರಿದು ಇದನ್ನು ನೀವು ಜನರಿಗೆ ಹಂಚಿರಿ ಎಂದು ಶಿಷ್ಯರ ಕೈಗೆ ಕೊಟ್ಟನು, ಅದೇ ರೀತಿಯಲ್ಲಿ ಆ ಎರಡು ಮೀನುಗಳನ್ನೂ ಆತನು ಎಲ್ಲರಿಗೂ ಹಂಚಿಸಿದನು.
ಮಾರ್ಕನು 6 : 42 (IRVKN)
ಅವರೆಲ್ಲರೂ ತೃಪ್ತರಾಗುವವರೆಗೂ ಊಟಮಾಡಿದರು.
ಮಾರ್ಕನು 6 : 43 (IRVKN)
ರೊಟ್ಟಿಯ ತುಂಡುಗಳನ್ನೂ ಮೀನಿನ ತುಂಡುಗಳನ್ನೂ ಕೂಡಿಸಲಾಗಿ ಹನ್ನೆರಡು ಪುಟ್ಟಿಗಳು ತುಂಬಿದವು.
ಮಾರ್ಕನು 6 : 44 (IRVKN)
ಊಟಮಾಡಿದವರು ಐದು ಸಾವಿರ ಮಂದಿ ಗಂಡಸರು.
ಮಾರ್ಕನು 6 : 45 (IRVKN)
ಯೇಸು ನೀರಿನ ಮೇಲೆ ನಡೆದದ್ದು ಇದಾದ ಕೂಡಲೆ ಯೇಸು ತನ್ನ ಶಿಷ್ಯರಿಗೆ, ನಾನು ಈ ಜನರ ಗುಂಪನ್ನು ಕಳುಹಿಸಿ ಬಿಡುವಷ್ಟರೊಳಗೆ ನೀವು ದೋಣಿಯನ್ನ ಹತ್ತಿ ಮುಂದಾಗಿ ಆಚೇದಡಕ್ಕೆ ಬೇತ್ಸಾಯಿದಕ್ಕೆ ಹೋಗಿರಿ ಎಂದು ಬಲವಂತಮಾಡಿದನು.
ಮಾರ್ಕನು 6 : 46 (IRVKN)
ಆತನು ಜನರನ್ನು ಕಳುಹಿಸಿಕೊಟ್ಟ ನಂತರ ಪ್ರಾರ್ಥನೆ ಮಾಡುವುದಕ್ಕಾಗಿ ಬೆಟ್ಟಕ್ಕೆ ಹೋದನು.
ಮಾರ್ಕನು 6 : 47 (IRVKN)
ಸಂಜೆಯಾದಾಗ ದೋಣಿಯು ಸಮುದ್ರದ ನಡುವೆ ಇತ್ತು; ಯೇಸು ಒಬ್ಬನೇ ದಡದಲ್ಲಿದ್ದನು.
ಮಾರ್ಕನು 6 : 48 (IRVKN)
ಎದುರು ಗಾಳಿ ಬೀಸುತ್ತಿದ್ದುದರಿಂದ ಶಿಷ್ಯರು ಹುಟ್ಟುಗೋಲು ಹಾಕಿ ದಣಿದು ಹೋದದ್ದನ್ನು ಯೇಸು ಕಂಡು ಹೆಚ್ಚುಕಡಿಮೆ ರಾತ್ರಿಯ * ಸುಮಾರು ಮುಂಜಾನೆ ಮೂರು ಗಂಟೆ. ನಾಲ್ಕನೆಯ ಜಾವದಲ್ಲಿ ಸಮುದ್ರದ ಮೇಲೆ ನಡೆದು ಅವರ ಕಡೆಗೆ ಬಂದು ಅವರನ್ನು ದಾಟಿ ಮುಂದಕ್ಕೆ ಹೋಗಬೇಕೆಂದಿದ್ದನು.
ಮಾರ್ಕನು 6 : 49 (IRVKN)
ಆದರೆ ಸಮುದ್ರದ ಮೇಲೆ ನಡೆಯುವ ಆತನನ್ನು ಅವರು ಕಂಡು ಭೂತವೆಂದು ಭಾವಿಸಿ ಅಬ್ಬರಿಸಿ ಕೂಗಿದರು; ಏಕೆಂದರೆ ಅವರೆಲ್ಲರೂ ಆತನನ್ನು ನೋಡಿ ಭಯಭೀತರಾಗಿದ್ದರು.
ಮಾರ್ಕನು 6 : 50 (IRVKN)
ಕೂಡಲೆ ಆತನು ಅವರನ್ನು ಮಾತನಾಡಿಸಿ ಅವರಿಗೆ, “ಧೈರ್ಯವಾಗಿರಿ, ನಾನೇ, ಹೆದರಬೇಡಿರಿ” ಎಂದು ಹೇಳಿದನು.
ಮಾರ್ಕನು 6 : 51 (IRVKN)
ತರುವಾಯ ಆತನು ದೋಣಿಯನ್ನು ಹತ್ತಿ ಅವರ ಬಳಿಗೆ ಬರಲು ಆ ಬಿರುಗಾಳಿಯು ನಿಂತುಹೋಯಿತು. ಆಗ ಅವರು ತಮ್ಮೊಳಗೆ ಬಹು ಆಶ್ಚರ್ಯಪಟ್ಟರು.
ಮಾರ್ಕನು 6 : 52 (IRVKN)
[† ಮಾರ್ಕ 8:17; ಮತ್ತಾ 16:8, 9 ]ಏಕೆಂದರೆ ಅವರು ರೊಟ್ಟಿಯ ವಿಷಯವಾದ ಮಹತ್ಕಾರ್ಯವನ್ನು ಗ್ರಹಿಸಿರಲಿಲ್ಲ; ಅವರ ಹೃದಯವು ಕಠಿಣವಾಗಿತ್ತು.
ಮಾರ್ಕನು 6 : 53 (IRVKN)
ಅವರು ಸಮುದ್ರವನ್ನು ದಾಟಿ ಗೆನೆಜರೇತ್ ಪ್ರದೇಶದ ದಡಕ್ಕೆ ಮುಟ್ಟಿ ದೋಣಿಯನ್ನು ಕಟ್ಟಿದರು.
ಮಾರ್ಕನು 6 : 54 (IRVKN)
ಅವರು ದೋಣಿಯಿಂದ ಇಳಿದ ಕೂಡಲೇ ಅಲ್ಲಿಯ ಜನರು ಯೇಸುವಿನ ಗುರುತು ಹಿಡಿದು,
ಮಾರ್ಕನು 6 : 55 (IRVKN)
ಆ ಸೀಮೆಯಲ್ಲೆಲ್ಲಾ ಓಡಾಡಿ ರೋಗಿಯಾಗಿದ್ದವರನ್ನು ‡ ಹಿಡಿಯುಳ್ಳ ಹುಲ್ಲಿನ ಹಾಸಿಗೆ, ಮೆತ್ತಗೆ ಇರುವ ಹಾಸಿಗೆ. ದೋಲಿಯ ಮೇಲೆ ಹಾಕಿಕೊಂಡು ಆತನು ಎಲ್ಲಿದ್ದಾನೆಂದು ಕೇಳಿದರೋ ಅಲ್ಲಿಗೆ ತೆಗೆದುಕೊಂಡು ಹೋದರು.
ಮಾರ್ಕನು 6 : 56 (IRVKN)
ಆತನು ಯಾವ ಗ್ರಾಮಗಳಿಗೆ, ಯಾವ ಊರು ಹಳ್ಳಿಗಳಿಗೆ ಹೋದರೂ ಅಲ್ಲಿಯವರು ರೋಗಿಗಳನ್ನು ತಂದು ಸಂತೆಬೀದಿಗಳಲ್ಲಿ ಇಟ್ಟು, ಆತನ ಉಡುಪಿನ ಅಂಚನ್ನಾದರೂ ಮುಟ್ಟಗೊಡಿಸಬೇಕೆಂದು ಆತನನ್ನು ಬೇಡಿಕೊಂಡರು; ಆತನನ್ನು ಮುಟ್ಟಿದವರೆಲ್ಲರೂ ಗುಣಹೊಂದಿದರು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52
53
54
55
56