ಮಲಾಕಿಯ 2 : 1 (IRVKN)
ಅಯೋಗ್ಯ ಯಾಜಕರ ಖಂಡನೆ ಯಾಜಕರೇ, ಈ ಅಪ್ಪಣೆಯು ಈಗ ನಿಮಗಾಗಿದೆ.
ಮಲಾಕಿಯ 2 : 2 (IRVKN)
ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ನಾಮವನ್ನು ಘನಪಡಿಸಬೇಕೆಂಬ ಆಜ್ಞೆಯನ್ನು ನೀವು ಆಲಿಸಿ ಮನನಮಾಡಿ ಅರ್ಥಮಾಡಿಕೊಳ್ಳದಿದ್ದರೆ, ನಾನು ನಿಮಗೆ ಶಾಪವನ್ನು ಬರಮಾಡುವೆನು, ನಿಮಗೆ ಆಶೀರ್ವಾದವಾಗಿ ದಯಪಾಲಿಸಿದವುಗಳೆಲ್ಲವನ್ನೂ ಶಪಿಸುವೆನು; ಹೌದು, ಈ ನನ್ನ ಆಜ್ಞೆಯನ್ನು ನಿಮ್ಮಲ್ಲಿ ಯಾರೂ ಮನದಟ್ಟು ಮಾಡಿಕೊಳ್ಳದ ಕಾರಣ ನಾನು ನಿಮ್ಮನ್ನು ಶಪಿಸುತ್ತೇನೆ.
ಮಲಾಕಿಯ 2 : 3 (IRVKN)
ಗಮನವಿಟ್ಟು ಕೇಳಿ, ನಿಮ್ಮ ಸಂತಾನ ಬೆಳೆಯದಂತೆ ಶಪಿಸುವೆ; ನಿಮ್ಮ ಮೇಲೆ ಯಜ್ಞಪಶುಗಳ ಸಗಣಿಯನ್ನು ಎರಚುವೆನು. ಈ ಅವಮಾನದಿಂದ ನೀವು ತಿಪ್ಪೆಯ ಪಾಲಾಗುವಿರಿ.
ಮಲಾಕಿಯ 2 : 4 (IRVKN)
ನಾನು ಲೇವಿಯರೊಂದಿಗೆ* ಲೇವಿಯರೊಂದಿಗೆ ಲೇವಿ ಸಂತಾನದವರು. ಮಾಡಿಕೊಂಡ ಒಡಂಬಡಿಕೆಯು ನೆಲೆಗೊಳ್ಳಬೇಕೆಂದು ಈ ಅಪ್ಪಣೆಯನ್ನು ನಿಮಗೆ ಹೇಳಿಕಳುಹಿಸಿದ್ದೇನೆಂಬುದು ನಿಮಗೆ ಗೊತ್ತಾಗಬೇಕು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.
ಮಲಾಕಿಯ 2 : 5 (IRVKN)
“ನಾನು ಲೇವಿಯರೊಂದಿಗೆ ಮಾಡಿಕೊಂಡ ಒಡಂಬಡಿಕೆ ಜೀವದಾತ ಹಾಗು ಬದುಕಿನಲ್ಲಿ ಶಾಂತಿ, ಸುಖ ತರುವಂಥ ಒಡಂಬಡಿಕೆ. ಅವರು ಭಯ ಭಕ್ತಿಯಿಂದ ಬಾಳಲೆಂದೇ ನಾನು ಅದನ್ನು ಅವರಿಗೆ ವಿಧಿಸಿದೆನು. ಅದರಂತೆ ಅವರು ನನ್ನಲ್ಲಿ ಭಯಭಕ್ತಿಯಿಟ್ಟು ನನ್ನ ನಾಮಕ್ಕೆ ಹೆದರಿ ನಡೆದುಕೊಂಡರು.
ಮಲಾಕಿಯ 2 : 6 (IRVKN)
ಅವರ ಬಾಯಲ್ಲಿ ಸತ್ಯಬೋಧನೆಯು ನೆಲೆಸಿತ್ತು, ಅವರ ತುಟಿಗಳಲ್ಲಿ ಅಪವಾದದ ಮಾತುಗಳು ಬರಲಿಲ್ಲ. ಅವರು ಶಾಂತಿಯಿಂದಲೂ, ಸದ್ಧರ್ಮದಿಂದಲೂ ನನ್ನೊಂದಿಗೆ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಾ ಬಹು ಜನರನ್ನು ಪಾಪದ ಕಡೆಯಿಂದ ತಿರುಗಿಸಿದರು.
ಮಲಾಕಿಯ 2 : 7 (IRVKN)
ಜ್ಞಾನಾನುಸಾರವಾಗಿ ಮಾತನಾಡುವುದು ಯಾಜಕನ ತುಟಿಗಳ ಧರ್ಮವಷ್ಟೆ; ಅವನು ಸೇನಾಧೀಶ್ವರನಾದ ಯೆಹೋವನ ದೂತನಾಗಿರುವ ಕಾರಣ ಜನರು ಅವನ ಬಾಯಿಂದ ಧರ್ಮೋಪದೇಶವನ್ನು ಕೇಳುವುದು ಧರ್ಮ. ನೀವೋ ದಾರಿತಪ್ಪಿದ್ದೀರಿ;
ಮಲಾಕಿಯ 2 : 8 (IRVKN)
“ನಿಮ್ಮ ಧರ್ಮೋಪದೇಶದಿಂದ ಬಹು ಜನರನ್ನು ಮುಗ್ಗರಿಸುವ ಹಾಗೆ ಮಾಡಿದ್ದೀರಿ; ಲೇವಿಯ ಒಡಂಬಡಿಕೆಯನ್ನು ಭಂಗಪಡಿಸಿದ್ದೀರಿ” ಇದು ಸೇನಾಧೀಶ್ವರನಾದ ಯೆಹೋವನ ನುಡಿ.
ಮಲಾಕಿಯ 2 : 9 (IRVKN)
“ನೀವು ನನ್ನ ಮಾರ್ಗಗಳನ್ನು ಅನುಸರಿಸದೆ ನಿಮ್ಮ ಧರ್ಮನಿಯಮ ಉಪದೇಶದಲ್ಲಿ ಪಕ್ಷಪಾತ ತೋರಿಸಿದ್ದರಿಂದ ನಾನಂತೂ ನಿಮ್ಮನ್ನು ಎಲ್ಲಾ ಜನರ ಮುಂದೆ ಅವಮಾನ ಹೊಂದುವಂತೆ ಅವರು ನಿಮ್ಮನ್ನು ಹೀಯಾಳಿಸಿ ಕೀಳಾಗಿ ಕಾಣುವಂತೆ ಮಾಡುವೆನು.”
ಮಲಾಕಿಯ 2 : 10 (IRVKN)
ಅವಿಧೇಯ ಗೃಹಸ್ಥರ ಖಂಡನೆ ನಮ್ಮೆಲ್ಲರಿಗೂ ಒಬ್ಬನೇ ತಂದೆ; ಒಬ್ಬನೇ ದೇವರು ನಮ್ಮನ್ನು ಸೃಷ್ಟಿಮಾಡಿದವನಲ್ಲಾ; ಹೀಗಿರಲು ನಾವು ಒಬ್ಬರಿಗೊಬ್ಬರು ದ್ರೋಹಮಾಡಿ ದೇವರು ನಮ್ಮ ಪೂರ್ವಿಕರೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಹೊಲೆಮಾಡುವುದೇಕೆ?
ಮಲಾಕಿಯ 2 : 11 (IRVKN)
ಯೆಹೂದವು ದ್ರೋಹಮಾಡಿದೆ, ಇಸ್ರಾಯೇಲಿನಲ್ಲಿಯೂ, ಯೆರೂಸಲೇಮಿನಲ್ಲಿಯೂ ಒಂದು ದುರಾಚಾರವು ನಡೆಯುತ್ತಿದೆ; ಯೆಹೂದವು ಅನ್ಯದೇವತೆಯನ್ನು ಆರಾಧಿಸುವ ಮಹಿಳೆಯರನ್ನು ಮದುವೆಯಾಗಿ ಯೆಹೋವನ ಪ್ರಿಯ ದೇವಾಲಯವನ್ನು ಹೊಲೆಗೆಡಿಸಿದೆ.
ಮಲಾಕಿಯ 2 : 12 (IRVKN)
ಇಂಥ ಕೆಲಸವನ್ನು ನಡೆಸಿದ ಪ್ರತಿಯೊಬ್ಬನ ಕುಟುಂಬದಲ್ಲಿ ಎಬ್ಬಿಸುವವರಾಗಲಿ, ಉತ್ತರ ಕೊಡುವವರಾಗಲಿ ಎಲ್ಲರನ್ನೂ ಯೆಹೋವನು ಯಾಕೋಬಿನ ಗುಡಾರಗಳೊಳಗಿಂದ ನಿರ್ಮೂಲಮಾಡುವನು; ಸೇನಾಧೀಶ್ವರನಾದ ಯೆಹೋವನಿಗೆ ನೈವೇದ್ಯ ತಂದು ಅರ್ಪಿಸುವವನನ್ನು ಕಡಿದುಬಿಡುವನು.
ಮಲಾಕಿಯ 2 : 13 (IRVKN)
ಇನ್ನೊಂದು ಕೆಲಸವನ್ನು ಮಾಡುತ್ತೀರಿ - ಯೆಹೋವನ ಯಜ್ಞವೇದಿಯನ್ನು ನರಳಾಟದಿಂದಲೂ, ಗೋಳಾಟದಿಂದಲೂ ಕಣ್ಣೀರಿನಿಂದಲೂ ತುಂಬಿಸಿ ಮುಚ್ಚುತ್ತೀರಿ; ಆದಕಾರಣ ಆತನು ನಿಮ್ಮ ನೈವೇದ್ಯವನ್ನು ಇನ್ನು ಲಕ್ಷಿಸನು, ನಿಮ್ಮ ಕೈಯಿಂದ ಅದನ್ನು ಪ್ರಸನ್ನನಾಗಿ ಸ್ವೀಕರಿಸನು.
ಮಲಾಕಿಯ 2 : 14 (IRVKN)
“ಇದಕ್ಕೆ ಕಾರಣವೇನೆಂದು ಕೇಳುತ್ತೀರೋ? ನಿನಗೂ, ನಿನ್ನ ಯೌವನ ಪ್ರಾಯದ ಹೆಂಡತಿಗೂ ಆದ ಒಡಂಬಡಿಕೆಗೆ ಯೆಹೋವನೇ ಸಾಕ್ಷಿಯಾಗಿದ್ದಾನಲ್ಲಾ, ನಿನ್ನ ಸಹಚರಿಣಿಯೂ, ನಿನ್ನ ಒಡಂಬಡಿಕೆಯ ಪತ್ನಿಯಾದ ಆಕೆಗೆ ದ್ರೋಹಮಾಡಿದ್ದೀ.
ಮಲಾಕಿಯ 2 : 15 (IRVKN)
ದೇವರು ನಿನ್ನ ಮತ್ತು ನಿನ್ನ ಪತ್ನಿಯ ತನುಮನಗಳನ್ನು ಒಂದು ಮಾಡಿ ಒಡಂಬಡಿಸಲಿಲ್ಲವೇ? ದೇವರ ಉದ್ದೇಶವೇನು? ದೇವರ ಮಕ್ಕಳಾಗಿ ಬಾಳುವ ಸಂತಾನ ದಯಪಾಲಿಸುವ ಉದ್ದೇಶ ಆತನದಾಗಿತ್ತು. ಆದುದರಿಂದ ಮದುವೆಯಾದ ಪತ್ನಿಗೆ ದ್ರೋಹಮಾಡದೆ ಪ್ರತಿಯೊಬ್ಬನೂ ಎಚ್ಚರಿಕೆಯಿಂದಿರಲಿ.”
ಮಲಾಕಿಯ 2 : 16 (IRVKN)
ಇಸ್ರಾಯೇಲಿನ ದೇವರಾದ ಯೆಹೋವನು ಇಂತೆನ್ನುತ್ತಾನೆ, “ನಾನು ಪತ್ನಿತ್ಯಾಗವನ್ನೂ, ಹೆಂಡತಿಗೆ ಅನ್ಯಾಯ ಮಾಡುವವನನ್ನೂ ಹಗೆಮಾಡುತ್ತೇನೆ” ಇದು ಸೇನಾಧೀಶ್ವರನಾದ ಯೆಹೋವನ ನುಡಿ. “ಆದಕಾರಣ ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ, ದ್ರೋಹಮಾಡಬೇಡಿರಿ.”
ಮಲಾಕಿಯ 2 : 17 (IRVKN)
ನ್ಯಾಯತೀರ್ಪಿನ ದಿನ ಸನ್ನಿಹಿತ ನೀವು ಯೆಹೋವನನ್ನು ನಿಮ್ಮ ಮಾತುಗಳಿಂದ ಬೇಸರಗೊಳಿಸಿದ್ದೀರಿ. “ಯಾವ ವಿಷಯದಲ್ಲಿ ಆತನನ್ನು ಬೇಸರಗೊಳಿಸಿದ್ದೇವೆ ಅನ್ನುತ್ತೀರಾ? ಪ್ರತಿಯೊಬ್ಬ ದುರಾಚಾರಿಯು ಯೆಹೋವನ ದೃಷ್ಟಿಗೆ ಒಳ್ಳೆಯವನು. ಅವರೇ ಆತನಿಗೆ ಇಷ್ಟ. ನ್ಯಾಯತೀರಿಸುವ ದೇವರು ಎಲ್ಲಿದ್ದಾನೆ?” ಎಂದು ನೀವು ಕೇಳುವುದರಿಂದ ಆತನ ಗಮನದಲ್ಲಿ ಇದ್ದೀರಿ.

1 2 3 4 5 6 7 8 9 10 11 12 13 14 15 16 17