ಲೂಕನು 24 : 1 (IRVKN)
ಯೇಸುವಿನ ಪುನರುತ್ಥಾನ
ಮತ್ತಾ 28:1-10; ಮಾರ್ಕ 16:1-8; ಯೋಹಾ 20:1-10
ಆ ಸ್ತ್ರೀಯರು ವಾರದ ಮೊದಲನೆಯ ದಿನದಲ್ಲಿ ಇನ್ನೂ ಮೊಬ್ಬಿರುವಾಗಲೇ ಎದ್ದು, ತಾವು ಸಿದ್ಧಮಾಡಿದ್ದ ಸುಗಂಧದ್ರವ್ಯಗಳನ್ನು ತೆಗೆದುಕೊಂಡು ಸಮಾಧಿಗೆ ಬಂದರು.
ಲೂಕನು 24 : 2 (IRVKN)
ಸಮಾಧಿಗೆ ಮುಚ್ಚಿದ ಕಲ್ಲು ಅಲ್ಲಿಂದ ಉರುಳಿಸಲ್ಪಟ್ಟಿರುವುದನ್ನು ಕಂಡು,
ಲೂಕನು 24 : 3 (IRVKN)
ಒಳಕ್ಕೆ ಹೋಗಿ ನೋಡಿದಾಗ ಯೇಸು ಕರ್ತನ ದೇಹವು ಅಲ್ಲಿ ಕಾಣಲಿಲ್ಲ.
ಲೂಕನು 24 : 4 (IRVKN)
ಈ ವಿಷಯವಾಗಿ ಅವರಿಗೆ ಗಲಿಬಿಲಿ ಉಂಟಾದಾಗ ಹೊಳೆಯುವ ಉಡುಪನ್ನು ಧರಿಸಿದ್ದ ಇಬ್ಬರು ಪುರುಷರು ಫಕ್ಕನೆ ಅವರ ಬಳಿಯಲ್ಲಿ ನಿಂತುಕೊಂಡರು.
ಲೂಕನು 24 : 5 (IRVKN)
ಆ ಸ್ತ್ರೀಯರು ಭಯಹಿಡಿದವರಾಗಿ ತಲೆ ತಗ್ಗಿಸಿಕೊಂಡು ನಿಂತಿರುವಾಗ ಆ ಪುರುಷರು ಅವರಿಗೆ, “ಸತ್ತವರೊಳಗೆ ಬದುಕಿರುವವನನ್ನು ಹುಡುಕುವುದೇನು?
ಲೂಕನು 24 : 6 (IRVKN)
(6-7)ಆತನು ಇಲ್ಲಿ ಇಲ್ಲ, ಜೀವಿತನಾಗಿ ಎದ್ದಿದ್ದಾನೆ. ಆತನು ಇನ್ನೂ ಗಲಿಲಾಯದಲ್ಲಿದ್ದಾಗ, ಮನುಷ್ಯಕುಮಾರನು ಪಾಪಿಗಳಾದ ಮನುಷ್ಯರ ಕೈಗೆ ಒಪ್ಪಿಸಲ್ಪಟ್ಟು, ಶಿಲುಬೆಗೆ ಹಾಕಲ್ಪಟ್ಟು, ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದು ಬರುವುದು ಅಗತ್ಯವೆಂದು ನಿಮಗೆ ಹೇಳಿದ್ದನ್ನು ನೆನಪಿಗೆ ತಂದುಕೊಳ್ಳಿರಿ” ಎಂದು ಹೇಳಿದನು.
ಲೂಕನು 24 : 7 (IRVKN)
ಲೂಕನು 24 : 8 (IRVKN)
ಸ್ತ್ರೀಯರು ಆತನ ಮಾತುಗಳನ್ನು ನೆನಪಿಗೆ ತಂದುಕೊಂಡು,
ಲೂಕನು 24 : 9 (IRVKN)
ಸಮಾಧಿಯ ಬಳಿಯಿಂದ ಹಿಂತಿರುಗಿ ಹೋಗಿ ಆ ಸಂಗತಿಗಳನ್ನೆಲ್ಲಾ ಹನ್ನೊಂದು ಮಂದಿ ಶಿಷ್ಯರಿಗೂ ಉಳಿದವರೆಲ್ಲರಿಗೂ ತಿಳಿಸಿದರು.
ಲೂಕನು 24 : 10 (IRVKN)
ಆ ಸ್ತ್ರೀಯರು ಯಾರಾರೆಂದರೆ ಮಗ್ದಲದ ಮರಿಯಳು, ಯೋಹಾನಳು, ಯಾಕೋಬನ ತಾಯಿಯಾದ ಮರಿಯಳು ಇವರೇ. ಇವರ ಜೊತೆಯಲ್ಲಿದ್ದ ಬೇರೆ ಸ್ತ್ರೀಯರು ಸಹ ಅಪೊಸ್ತಲರಿಗೆ ಆ ಸಂಗತಿಗಳನ್ನು ಹೇಳಿದರು.
ಲೂಕನು 24 : 11 (IRVKN)
ಅವರು ನಂಬಲಿಲ್ಲ ಏಕೆಂದರೆ ಆ ಮಾತುಗಳು ಅವರಿಗೆ ಬರೀ ಹರಟೆಯಾಗಿ ತೋರಿದವು.
ಲೂಕನು 24 : 12 (IRVKN)
ಆದರೆ ಪೇತ್ರನು ಎದ್ದು ಸಮಾಧಿ ಬಳಿಗೆ ಓಡಿಹೋಗಿ, ಬೊಗ್ಗಿ ನೋಡಿ, ನಾರುಬಟ್ಟೆಗಳನ್ನು ಮಾತ್ರ ಕಂಡು, ನಡೆದ ಸಂಗತಿಗೆ ತನ್ನಲ್ಲಿ ಆಶ್ಚರ್ಯಪಡುತ್ತಾ ಹೊರಟು ಹೋದನು.
ಲೂಕನು 24 : 13 (IRVKN)
ಎಮ್ಮಾಹು ಹಳ್ಳಿಗೆ ಪ್ರಯಾಣ
ಮಾರ್ಕ 16:12,13
ಅದೇ ದಿನದಲ್ಲಿ ಶಿಷ್ಯರಲ್ಲಿ ಇಬ್ಬರು ಯೆರೂಸಲೇಮಿನಿಂದ ಸುಮಾರು ಏಳು ಮೈಲು ದೂರದಲ್ಲಿದ್ದ ಎಮ್ಮಾಹು ಎಂಬ ಹಳ್ಳಿಗೆ ಹೋಗುತ್ತಾ,
ಲೂಕನು 24 : 14 (IRVKN)
ಸಂಭವಿಸಿದ ಈ ಎಲ್ಲಾ ಕಾರ್ಯಗಳ ವಿಷಯವಾಗಿ ಸಂಭಾಷಣೆಮಾಡುತ್ತಿದ್ದರು.
ಲೂಕನು 24 : 15 (IRVKN)
ಅವರು ಸಂಭಾಷಣೆಯಲ್ಲಿ ಚರ್ಚಿಸುತ್ತಿರುವಾಗ ಯೇಸು ತಾನೇ ಹತ್ತಿರಕ್ಕೆ ಬಂದು ಅವರ ಜೊತೆಯಲ್ಲಿ ಸಾಗಿದನು.
ಲೂಕನು 24 : 16 (IRVKN)
ಅವರ ಕಣ್ಣುಕಟ್ಟಿದಂತೆ ಇದುದ್ದರಿಂದ ಅವರು ಆತನ ಗುರುತನ್ನು ಹಿಡಿಯಲಿಲ್ಲ.
ಲೂಕನು 24 : 17 (IRVKN)
ಯೇಸು, “ನೀವು ಮಾರ್ಗದಲ್ಲಿ ಹೋಗುತ್ತಾ ಚರ್ಚಿಸಿ ಮಾತನಾಡಿಕೊಳ್ಳುವ ಈ ಸಂಗತಿಗಳೇನು” ಎಂದು ಕೇಳಲು, ಅವರು ದುಃಖದ ಮುಖವುಳ್ಳವರಾಗಿ ನಿಂತರು.
ಲೂಕನು 24 : 18 (IRVKN)
ಅವರಲ್ಲಿ ಕ್ಲೆಯೋಫನೆಂಬವನು ಆತನಿಗೆ, “ಯೆರೂಸಲೇಮಿಗೆ ಬಂದ ಪರಸ್ಥಳದವರೆಲ್ಲರಿಗೂ ಈ ದಿನಗಳಲ್ಲಿ ನಡೆದಿರುವ ಸಂಗತಿಗಳು ಗೊತ್ತಿರಲಾಗಿ ನಿನಗೆ ಮಾತ್ರ ಗೊತ್ತಿಲ್ಲವೋ?” ಎಂದು ಕೇಳಲು,
ಲೂಕನು 24 : 19 (IRVKN)
ಆತನು ಅವರನ್ನು, “ಯಾವ ಸಂಗತಿಗಳು” ಎಂದು ಕೇಳಿದನು. ಅದಕ್ಕೆ ಅವರು, “ನಜರೇತಿನವನಾದ ಯೇಸುವಿನ ಸಂಗತಿಗಳೇ. ಆತನು ದೇವರ ಮುಂದೆ ಮತ್ತು ಮನುಷ್ಯರ ಮುಂದೆ ಕೃತ್ಯದಲ್ಲಿಯೂ ಮಾತಿನಲ್ಲಿಯೂ ಉನ್ನತನಾದ ಪ್ರವಾದಿಯಾಗಿದ್ದನು.
ಲೂಕನು 24 : 20 (IRVKN)
ಆತನನ್ನು ಮುಖ್ಯಯಾಜಕರೂ ನಮ್ಮ ಅಧಿಕಾರಿಗಳೂ ಮರಣದಂಡನೆಗೆ ಒಪ್ಪಿಸಿಕೊಟ್ಟು ಶಿಲುಬೆಗೆ ಹಾಕಿಸಿದರು.
ಲೂಕನು 24 : 21 (IRVKN)
ನಾವಾದರೋ ಇಸ್ರಾಯೇಲ್ ಜನರನ್ನು ಬಿಡಿಸತಕ್ಕವನು ಆತನೇ ಎಂದು ನಿರೀಕ್ಷಿಸಿಕೊಂಡಿದ್ದೆವು. ಇದು ಮಾತ್ರವಲ್ಲದೆ ಆ ಕಾರ್ಯಗಳು ನಡೆದು ಇಂದಿಗೆ ಮೂರನೆಯ ದಿನ.
ಲೂಕನು 24 : 22 (IRVKN)
(22-23)ಆದರೆ ನಮ್ಮಲ್ಲಿ ಕೆಲವು ಮಂದಿ ಸ್ತ್ರೀಯರು ಬೆಳಗಾಗುವಾಗ ಸಮಾಧಿಯ ಬಳಿಗೆ ಹೋಗಿ ಆತನ ದೇಹವನ್ನು ಕಾಣದೇ, ಅಲ್ಲಿಂದ ಬಂದು ತಮಗೆ ದೇವದೂತರ ದರ್ಶನವಾಯಿತೆಂತಲೂ, ಆತನು ಬದುಕಿದ್ದಾನೆಂದು ಅವರು ಹೇಳಿದರೆಂತಲೂ ತಿಳಿಸಿ ನಮಗೆ ಅತ್ಯಾಶ್ಚರ್ಯವನ್ನುಂಟುಮಾಡಿದರು.
ಲೂಕನು 24 : 23 (IRVKN)
ಲೂಕನು 24 : 24 (IRVKN)
ನಮ್ಮ ಸಂಗಡ ಇದ್ದವರಲ್ಲಿ ಕೆಲವರು ಸಮಾಧಿಗೆ ಹೋಗಿ ಆ ಸ್ತ್ರೀಯರು ಹೇಳಿದ ಪ್ರಕಾರವೇ ಕಂಡರು. ಆತನನ್ನು ಮಾತ್ರ ಕಾಣಲಿಲ್ಲ” ಎಂದು ಹೇಳಿದರು.
ಲೂಕನು 24 : 25 (IRVKN)
ಯೇಸು ಅವರಿಗೆ, “ಎಲಾ ಬುದ್ಧಿಯಿಲ್ಲದವರೇ, ಪ್ರವಾದಿಗಳು ಹೇಳಿದ್ದೆಲ್ಲವನ್ನು ನಂಬದ ಮಂದ ಹೃದಯವುಳ್ಳವರೇ,
ಲೂಕನು 24 : 26 (IRVKN)
ಕ್ರಿಸ್ತನು ಇಂಥ ಶ್ರಮೆಗಳನ್ನು ಅನುಭವಿಸಿ ತನ್ನ ಮಹಿಮಾಪದವಿಗೆ ಸೇರುವುದು ಅಗತ್ಯವಾಗಿತ್ತಲ್ಲವೇ” ಎಂದು ಹೇಳಿದನು.
ಲೂಕನು 24 : 27 (IRVKN)
ಮೋಶೆಯ ಮತ್ತು ಎಲ್ಲಾ ಪ್ರವಾದಿಗಳ ಗ್ರಂಥಗಳು ಮೊದಲುಗೊಂಡು ಸಮಸ್ತ ಗ್ರಂಥಗಳಲ್ಲಿ ತನ್ನ ವಿಷಯವಾಗಿರುವ ಸೂಚನೆಗಳನ್ನು ಅವರಿಗೆ ವಿವರಿಸಿದನು.
ಲೂಕನು 24 : 28 (IRVKN)
ಅವರು ಹೋಗುತ್ತಿರುವ ಹಳ್ಳಿಯ ಸಮೀಪಕ್ಕೆ ಬಂದಾಗ ಆತನು ಅವರನ್ನು ದಾಟಿ ಇನ್ನೂ ಮುಂದಕ್ಕೆ ಹೋಗುವವನಂತೆ ತೋರ್ಪಡಿಸಿಕೊಂಡನು.
ಲೂಕನು 24 : 29 (IRVKN)
ಆದರೆ ಅವರು, “ನಮ್ಮ ಸಂಗಡ ಇರು. ಸಂಜೆಯಾಯಿತು, ಹೊತ್ತು ಇಳಿಯುತ್ತಾ ಬಂದಿತು” ಎಂದು ಆತನಿಗೆ ಹೇಳಿ ಬಲವಂತ ಮಾಡಲು, ಆತನು ಅವರ ಕೂಡ ಇರುವುದಕ್ಕೆ ಹೋದನು.
ಲೂಕನು 24 : 30 (IRVKN)
ಆತನು ಅವರ ಸಂಗಡ ಊಟಕ್ಕೆ ಕುಳಿತುಕೊಂಡಾಗ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ, ಮುರಿದು ಅವರಿಗೆ ಕೊಡುತ್ತಿರಲಾಗಿ,
ಲೂಕನು 24 : 31 (IRVKN)
ಅವರ ಕಣ್ಣುಗಳು ತೆರೆದವು. ಆಗ ಅವರು ಆತನ ಗುರುತು ಹಿಡಿದರು. ಆತನು ಅವರ ಕಣ್ಣಿಗೆ ಕಾಣದಂತೆ ಮಾಯವಾದನು.
ಲೂಕನು 24 : 32 (IRVKN)
ಆಗ ಅವರು ಒಬ್ಬರಿಗೊಬ್ಬರು, “ಆತನು ದಾರಿಯಲ್ಲಿ ನಮ್ಮ ಸಂಗಡ ಮಾತನಾಡಿದಾಗಲೂ, ಗ್ರಂಥಗಳ ಅರ್ಥವನ್ನು ನಮಗೆ ಬಿಡಿಸಿ ಹೇಳಿದಾಗಲೂ, ನಮ್ಮ ಹೃದಯವು ನಮ್ಮೊಳಗೆ ಕುದಿಯಿತಲ್ಲವೇ?” ಎಂದು ಹೇಳಿಕೊಂಡು,
ಲೂಕನು 24 : 33 (IRVKN)
ಅದೇ ಗಳಿಗೆಯಲ್ಲಿ ಎದ್ದು ಯೆರೂಸಲೇಮಿಗೆ ಹಿಂತಿರುಗಿ ಹೋದರು. ಅಲ್ಲಿ ಹನ್ನೊಂದು ಮಂದಿ ಶಿಷ್ಯರೂ ಅವರ ಸಂಗಡ ಇದ್ದವರೂ ಒಟ್ಟಾಗಿ ಕೂಡಿಕೊಂಡಿದ್ದರು.
ಲೂಕನು 24 : 34 (IRVKN)
“ಕರ್ತನು ಎದ್ದದ್ದು ನಿಜ. ಆತನು ಸೀಮೋನನಿಗೆ ಕಾಣಿಸಿಕೊಂಡನು” ಎಂದು ಹೇಳುತ್ತಿದ್ದರು.
ಲೂಕನು 24 : 35 (IRVKN)
ಆಗ ಅವರಿಬ್ಬರು ದಾರಿಯಲ್ಲಿ ನಡೆದ ಸಂಗತಿಯನ್ನೂ ರೊಟ್ಟಿ ಮುರಿಯುವುದರಲ್ಲಿ ತಾವು ಆತನ ಗುರುತು ಹಿಡಿದೆವೆಂಬುದನ್ನೂ ವಿವರಿಸಿದರು.
ಲೂಕನು 24 : 36 (IRVKN)
ಯೇಸು ತನ್ನ ಶಿಷ್ಯರಿಗೆ ಪ್ರತ್ಯಕ್ಷನಾದದ್ದು
ಮತ್ತಾ 28:16-20; ಮಾರ್ಕ 16:14-18; ಯೋಹಾ 20:19-23; ಅ. ಕೃ. 1:6-8
ಅವರು ಈ ಸಂಗತಿಗಳನ್ನು ಕುರಿತು ಮಾತನಾಡುತ್ತಿರುವಾಗ ಯೇಸುವೇ ಅವರ ನಡುವೆ ನಿಂತು, “ನಿಮಗೆ ಸಮಾಧಾನವಾಗಲಿ” ಎಂದು ಅವರಿಗೆ ಹೇಳಿದನು* “ನಿಮಗೆ ಸಮಾಧಾನವಾಗಲಿ” ಕೆಲವು ಪ್ರತಿಗಳಲ್ಲಿ ಈ ಮೇಲಿನ ಭಾಗ ಇಲ್ಲ. .
ಲೂಕನು 24 : 37 (IRVKN)
ಅವರು ದಿಗಿಲುಬಿದ್ದು ಭಯಹಿಡಿದವರಾಗಿ ತಾವು ಕಂಡದ್ದನ್ನು ಭೂತವೆಂದು ಭಾವಿಸಿದರು.
ಲೂಕನು 24 : 38 (IRVKN)
ಆತನು ಅವರಿಗೆ, “ಯಾಕೆ ಕಳವಳಗೊಳ್ಳುತ್ತೀರಿ? ನಿಮ್ಮ ಹೃದಯಗಳಲ್ಲಿ ಅನುಮಾನಗಳು ಹುಟ್ಟುವುದೇಕೆ?
ಲೂಕನು 24 : 39 (IRVKN)
ನನ್ನ ಕೈಗಳನ್ನೂ ನನ್ನ ಕಾಲುಗಳನ್ನೂ ನೋಡಿರಿ. ನಾನೇ ಅಲ್ಲವೇ, ನನ್ನನ್ನು ಮುಟ್ಟಿ ನೋಡಿರಿ. ನಿಮಗೆ ಕಾಣುವ ಪ್ರಕಾರ ನನಗೆ ಮಾಂಸವೂ ಎಲುಬುಗಳೂ ಉಂಟು. ಅವು ಭೂತಕ್ಕಿಲ್ಲ” ಎಂದು ಹೇಳಿದನು.
ಲೂಕನು 24 : 40 (IRVKN)
ಇದನ್ನು ಹೇಳಿದ ಮೇಲೆ ಆತನು ತನ್ನ ಕೈಗಳನ್ನೂ ಕಾಲುಗಳನ್ನೂ ಅವರಿಗೆ ತೋರಿಸಿದನು.
ಲೂಕನು 24 : 41 (IRVKN)
ಆದರೆ ಅವರು ಸಂತೋಷಭರಿತರಾಗಿ ಇನ್ನೂ ನಂಬದೇ ಆಶ್ಚರ್ಯಪಡುತ್ತಿರಲಾಗಿ ಆತನು, “ತಿನ್ನತಕ್ಕ ಪದಾರ್ಥವೇನಾದರೂ ನಿಮ್ಮಲ್ಲುಂಟೋ?” ಎಂದು ಅವರನ್ನು ಕೇಳಲು,
ಲೂಕನು 24 : 42 (IRVKN)
ಅವರು ಸುಟ್ಟ ಮೀನಿನ ಒಂದು ತುಂಡನ್ನು ಆತನಿಗೆ ಕೊಟ್ಟರು.
ಲೂಕನು 24 : 43 (IRVKN)
ಆತನು ಅದನ್ನು ತೆಗೆದುಕೊಂಡು ಅವರ ಮುಂದೆ ತಿಂದನು.
ಲೂಕನು 24 : 44 (IRVKN)
ತರುವಾಯ ಯೇಸು, “ನಾನು ನಿಮ್ಮ ಸಂಗಡ ಇದ್ದಾಗ ಇದೆಲ್ಲಾ ನಿಮಗೆ ತಿಳಿಸಲಿಲ್ಲವೇ? ನನ್ನ ವಿಷಯವಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿಯೂ, ಪ್ರವಾದಿಗಳ ಗ್ರಂಥಗಳಲ್ಲಿಯೂ, ಕೀರ್ತನೆಗಳಲ್ಲಿಯೂ ಬರೆದಿರುವುದೆಲ್ಲಾ ನೆರವೇರುವುದು ಅಗತ್ಯವೆಂದು ನಿಮಗೆ ಹೇಳಲಿಲ್ಲವೇ?” ಅಂದನು.
ಲೂಕನು 24 : 45 (IRVKN)
ಆ ಮೇಲೆ ಅವರು ಶಾಸ್ತ್ರ ವಚನಗಳನ್ನು ತಿಳಿದುಕೊಳ್ಳುವಂತೆ ಆತನು ಅವರ ಮನಸ್ಸುಗಳನ್ನು ತೆರೆದನು.
ಲೂಕನು 24 : 46 (IRVKN)
ಅನಂತರ, “ಮೊದಲೇ ಪ್ರಕಟವಾದ ಪ್ರಕಾರ ‘ಕ್ರಿಸ್ತನು ಕಷ್ಟ ಪಟ್ಟು, ಸತ್ತು ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದು ಬರುವನೆಂತಲೂ,
ಲೂಕನು 24 : 47 (IRVKN)
ಅದಲ್ಲದೆ ಜನರು ಪಾಪಕ್ಷಮಾಪಣೆಗೋಸ್ಕರ ಪಶ್ಚಾತ್ತಾಪಟ್ಟು, ದೇವರ ಕಡೆಗೆ ತಿರುಗಿಕೊಳ್ಳಬೇಕೆಂಬ ಈ ಸುವಾರ್ತೆಯು ಯೆರೂಸಲೇಮ್ ಮೊದಲುಗೊಂಡು ಸಮಸ್ತ ದೇಶದವರಿಗೂ ಆತನ ಹೆಸರಿನಲ್ಲಿ ಸಾರಲ್ಪಡಬೇಕು’ ಎಂದು ಬರೆದದೆ.
ಲೂಕನು 24 : 48 (IRVKN)
ಇವುಗಳ ವಿಷಯದಲ್ಲಿ ನೀವೇ ಸಾಕ್ಷಿ ಹೇಳುವವರಾಗಿದ್ದೀರಿ.
ಲೂಕನು 24 : 49 (IRVKN)
ಇಗೋ ನನ್ನ ತಂದೆಯು ವಾಗ್ದಾನ ಮಾಡಿದ ಶಕ್ತಿಯನ್ನು ಪವಿತ್ರಾತ್ಮನನ್ನು ನಿಮಗೆ ಕಳುಹಿಸಿಕೊಡುತ್ತೇನೆ. ದೇವರು ಮೇಲಣ ಲೋಕದಿಂದ ನಿಮಗೆ ಶಕ್ತಿಯನ್ನು ಕೊಡುವ ತನಕ ಈ ಪಟ್ಟಣದಲ್ಲೇ ಕಾದುಕೊಂಡಿರಿ” ಎಂದು ಹೇಳಿದನು.
ಲೂಕನು 24 : 50 (IRVKN)
ಯೇಸುವಿನ ಸ್ವರ್ಗಾರೋಹಣವು
ಮಾರ್ಕ 16:19,20; ಅ. ಕೃ. 1:9-11
ಮತ್ತು ಯೇಸು ಅವರನ್ನು ಬೇಥಾನ್ಯದ ತನಕ ಕರೆದುಕೊಂಡು ಹೋಗಿ, ತನ್ನ ಕೈಗಳನ್ನು ಎತ್ತಿ, ಅವರನ್ನು ಆಶೀರ್ವದಿಸಿದನು.
ಲೂಕನು 24 : 51 (IRVKN)
ಆಶೀರ್ವದಿಸುತ್ತಿರುವಾಗ ಆತನು ಅವರನ್ನು ಬಿಟ್ಟು ಪರಲೋಕಕ್ಕೆ ಒಯ್ಯಲ್ಪಟ್ಟನು.
ಲೂಕನು 24 : 52 (IRVKN)
ಅವರು ಆತನನ್ನು ಆರಾಧಿಸಿ, ಬಹು ಸಂತೋಷದಿಂದ ಯೆರೂಸಲೇಮಿಗೆ ಹಿಂತಿರುಗಿ ಹೋಗಿ,
ಲೂಕನು 24 : 53 (IRVKN)
ನಿರಂತರವಾಗಿ ದೇವಾಲಯದಲ್ಲಿ ದೇವರನ್ನು ಕೊಂಡಾಡುತ್ತಿದ್ದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53