ಲೂಕನು 1 : 1 (IRVKN)
ಪೀಠಿಕೆ ಸನ್ಮಾನ್ಯನಾದ ಥೆಯೊಫಿಲನೇ, ನಮ್ಮ ಮಧ್ಯೆ ನೆರವೇರಿರುವ ಘಟನೆಗಳನ್ನು ಕ್ರಮವಾಗಿ ಬರೆಯುವುದಕ್ಕೆ ಅನೇಕರು ಪ್ರಯತ್ನಿಸಿದ್ದಾರೆ.
ಲೂಕನು 1 : 2 (IRVKN)
ಪ್ರಾರಂಭದಿಂದಲೂ ಕಣ್ಣಾರೆ ಕಂಡು ಸುವಾರ್ತಾವಾಕ್ಯವನ್ನು ಸಾರುತ್ತಿದ್ದವರು ನಮಗೆ ತಿಳಿಸಿದ ಪ್ರಕಾರ ಆ ಘಟನೆಗಳನ್ನು,
ಲೂಕನು 1 : 3 (IRVKN)
ನಾನು ಅಮೂಲಾಗ್ರವಾಗಿ ವಿಚಾರಿಸಿದ ಅವೆಲ್ಲವನ್ನು ನಿನಗೋಸ್ಕರ ಕ್ರಮಬದ್ಧವಾಗಿ ಬರೆಯುವುದು ಒಳ್ಳೆಯದೆಂದು ನನಗೂ ತೋಚಿತು.
ಲೂಕನು 1 : 4 (IRVKN)
ನಿನಗೆ ಉಪದೇಶಿಸಿರುವ ವಿಷಯಗಳು ಸತ್ಯವಾದವುಗಳೆಂದು ಇದರಿಂದ ನೀನು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು.
ಲೂಕನು 1 : 5 (IRVKN)
ದೇವದೂತನು ಸ್ನಾನಿಕನಾದ ಯೋಹಾನನ ಜನನವನ್ನು ಮುಂತಿಳಿಸಿದ್ದು ಯೂದಾಯದ ಅರಸನಾದ ಹೆರೋದನ ಕಾಲದಲ್ಲಿ ಅಬೀಯನ ಯಾಜಕೀಯ ವರ್ಗಕ್ಕೆ ಸೇರಿದ ಜಕರೀಯನೆಂಬ ಒಬ್ಬ ಯಾಜಕನಿದ್ದನು. ಅವನ ಹೆಂಡತಿಯು ಆರೋನನ ವಂಶದವಳಾಗಿದ್ದಳು. ಆಕೆಯ ಹೆಸರು ಎಲಿಸಬೇತ್.
ಲೂಕನು 1 : 6 (IRVKN)
ಅವರಿಬ್ಬರೂ ಕರ್ತನ ಎಲ್ಲಾ ಆಜ್ಞೆಗಳನ್ನೂ, ನೇಮನಿಷ್ಠೆಗಳನ್ನೂ ಕೈಕೊಂಡು ತಪ್ಪಿಲ್ಲದೆ ನಡೆದುಕೊಳ್ಳುತ್ತಾ ದೇವರ ದೃಷ್ಟಿಯಲ್ಲಿ ನೀತಿವಂತರಾಗಿದ್ದರು.
ಲೂಕನು 1 : 7 (IRVKN)
ಆದರೆ ಎಲಿಸಬೇತಳು ಬಂಜೆಯಾದುದರಿಂದ ಅವರಿಗೆ ಮಕ್ಕಳಿರಲಿಲ್ಲ; ಇದಲ್ಲದೆ ಅವರಿಬ್ಬರೂ ವಯೋವೃದ್ಧರಾಗಿದ್ದರು.
ಲೂಕನು 1 : 8 (IRVKN)
ಒಂದು ದಿನ ಜಕರೀಯನ ವರ್ಗದ ಸರದಿ ಬಂದಾಗ ಅವನು ದೇವರ ಸನ್ನಿಧಿಯಲ್ಲಿ ಯಾಜಕಧರ್ಮವನ್ನು ನಡೆಸುತ್ತಿದ್ದನು.
ಲೂಕನು 1 : 9 (IRVKN)
ದೇವಾಲಯದೊಳಕ್ಕೆ ಹೋಗಿ ಧೂಪವನ್ನರ್ಪಿಸುವುದಕ್ಕೆ ಯಾಜಕರ ಪದ್ಧತಿಯ ಪ್ರಕಾರ ಚೀಟು ಹಾಕಲು ಅದು ಅವನ ಪಾಲಿಗೆ ಬಂದಿತು.
ಲೂಕನು 1 : 10 (IRVKN)
ಧೂಪವನ್ನು ಅರ್ಪಿಸುವ ಹೊತ್ತಿನಲ್ಲಿ ಜನಸಮೂಹದವರೆಲ್ಲರು ಹೊರಗೆ ನಿಂತು ಪ್ರಾರ್ಥಿಸುತ್ತಿರಲಾಗಿ,
ಲೂಕನು 1 : 11 (IRVKN)
ಕರ್ತನ ದೂತನು ಧೂಪಪೀಠದ ಬಲಗಡೆಯಲ್ಲಿ ನಿಂತುಕೊಂಡವನಾಗಿ ಅವನಿಗೆ ಕಾಣಿಸಿಕೊಂಡನು.
ಲೂಕನು 1 : 12 (IRVKN)
ಜಕರೀಯನು ಅವನನ್ನು ಕಂಡು ತತ್ತರಗೊಂಡು ಭಯಭ್ರಾಂತನಾದನು.
ಲೂಕನು 1 : 13 (IRVKN)
ಆದರೆ ಆ ದೂತನು ಅವನಿಗೆ, “ಜಕರೀಯನೇ, ಭಯಪಡಬೇಡ; ದೇವರು ನಿನ್ನ ವಿಜ್ಞಾಪನೆ ಕೇಳಿದ್ದಾನೆ; ನಿನ್ನ ಹೆಂಡತಿಯಾದ ಎಲಿಸಬೇತಳು ನಿನಗೆ ಒಬ್ಬ ಮಗನನ್ನು ಹೆರುವಳು. ನೀನು ಅವನಿಗೆ ಯೋಹಾನನೆಂದು ಹೆಸರಿಡಬೇಕು.
ಲೂಕನು 1 : 14 (IRVKN)
ನಿನಗೆ ಸಂತೋಷವೂ ಉಲ್ಲಾಸವೂ ಉಂಟಾಗುವುದು; ಮತ್ತು ಅವನು ಹುಟ್ಟಿದ್ದಕ್ಕೆ ಬಹುಜನರು ಸಂತೋಷಪಡುವರು.
ಲೂಕನು 1 : 15 (IRVKN)
ಅವನು ಕರ್ತನ ದೃಷ್ಟಿಯಲ್ಲಿ ಮಹಾಪುರುಷನಾಗಿರುವನು; ದ್ರಾಕ್ಷಾರಸವನ್ನಾಗಲಿ, ಯಾವ ಮದ್ಯವನ್ನಾಗಲಿ ಕುಡಿಯಬಾರದು; ಅವನು ಹುಟ್ಟಿದಂದಿನಿಂದಲೇ ಪವಿತ್ರಾತ್ಮಭರಿತನಾಗಿರುವನು.
ಲೂಕನು 1 : 16 (IRVKN)
ಇಸ್ರಾಯೇಲರಲ್ಲಿ ಅನೇಕರನ್ನು ಅವರ ದೇವರಾಗಿರುವ ಕರ್ತನ ಕಡೆಗೆ ತಿರುಗಿಸುವನು.
ಲೂಕನು 1 : 17 (IRVKN)
ಅವನು ಎಲೀಯನ ಗುಣಶಕ್ತಿಗಳಿಂದ ಕೂಡಿದವನಾಗಿ ಕರ್ತನ ಮುಂದೂತನಾಗಿ ಹೋಗುವನು. ತಂದೆಗಳ ಹೃದಯವನ್ನು ಮಕ್ಕಳ ಕಡೆಗೂ, ಅವಿಧೇಯರನ್ನು ನೀತಿವಂತರ ಜ್ಞಾನದ ಕಡೆಗೂ ತಿರುಗಿಸಿ, ಕರ್ತನಿಗಾಗಿ ಜನರನ್ನು ಸಿದ್ಧಪಡಿಸುವನು” ಎಂದು ಹೇಳಿದನು.
ಲೂಕನು 1 : 19 (IRVKN)
ಜಕರೀಯನು ಆ ದೂತನಿಗೆ, “ಈ ಮಾತು ನೆರವೇರುವುದೆಂದು ನಾನು ತಿಳಿದುಕೊಳ್ಳುವುದಾದರೂ ಹೇಗೆ? ನಾನು ಮುದುಕನು; ನನ್ನ ಹೆಂಡತಿಗೂ ಮುಪ್ಪಿನ ವಯಸ್ಸು” ಎಂದು ಹೇಳಿದನು. ಅದಕ್ಕೆ ಆ ದೂತನು, “ನಾನು ದೇವರ ಸನ್ನಿಧಿಯಲ್ಲಿ ನಿಲ್ಲುವ ಗಬ್ರಿಯೇಲನು; ನಿನ್ನೊಂದಿಗೆ ಮಾತನಾಡಿ ಈ ಶುಭವಾರ್ತೆಯನ್ನು ನಿನಗೆ ತಿಳಿಸುವುದಕ್ಕಾಗಿ ನಾನು ಕಳುಹಿಸಲ್ಪಟ್ಟಿದ್ದೇನೆ.
ಲೂಕನು 1 : 20 (IRVKN)
ಇಗೋ, ಈ ನನ್ನ ಮಾತು ತಕ್ಕ ಸಮಯದಲ್ಲಿ ನೆರವೇರುವುದು; ಆದರೆ ನೀನು ಇದನ್ನು ನಂಬದೆಹೋದುದರಿಂದ ಅದೆಲ್ಲಾ ಸಂಭವಿಸುವ ದಿನದ ವರೆಗೂ ಮಾತನಾಡಲಾರದೆ ಮೂಕನಾಗಿರುವೆ” ಎಂದು ಅವನಿಗೆ ಉತ್ತರಕೊಟ್ಟನು.
ಲೂಕನು 1 : 21 (IRVKN)
ಇತ್ತ ಜನರು ಜಕರೀಯನಿಗಾಗಿ ಕಾದುಕೊಂಡಿದ್ದು ಅವನು ದೇವಾಲಯದೊಳಗೆ ತಡಮಾಡಿದ್ದಕ್ಕೆ ಆಶ್ಚರ್ಯಪಟ್ಟರು.
ಲೂಕನು 1 : 22 (IRVKN)
ಅವನು ಹೊರಗೆ ಬಂದಾಗ ಅವರ ಕೂಡ ಏನೂ ಮಾತನಾಡಲಾರದೆ ಇರಲು ಅವರು, ಇವನಿಗೆ ದೇವಾಲಯದಲ್ಲಿ ಏನೋ ದಿವ್ಯ ದರ್ಶನವಾಗಿರಬೇಕು ಎಂದು ತಿಳಿದುಕೊಂಡರು. ಜಕರೀಯನು ಅವರಿಗೆ ಕೈಸನ್ನೆ ಮಾಡುತ್ತಾ ಮೂಕನಾಗಿಯೇ ಇದ್ದನು.
ಲೂಕನು 1 : 23 (IRVKN)
ಆತನ ಯಾಜಕವರ್ಗದ ಸೇವೆಯ ದಿನಗಳು ಮುಗಿದ ನಂತರ ಜಕರೀಯನು ತನ್ನ ಮನೆಗೆ ಹೋದನು.
ಲೂಕನು 1 : 24 (IRVKN)
ಕೆಲವು ದಿನಗಳಾದ ನಂತರ ಅವನ ಹೆಂಡತಿಯಾದ ಎಲಿಸಬೇತಳು ಬಸುರಾಗಿ ಐದು ತಿಂಗಳು ಮನೆಯಲ್ಲೇ ಮರೆಯಾಗಿದ್ದಳು.
ಲೂಕನು 1 : 25 (IRVKN)
“ಕರ್ತನು ಈ ವಯಸ್ಸಿನಲ್ಲಿ ನನ್ನನ್ನು ಕಟಾಕ್ಷಿಸಿ, ನನಗೆ ಈ ರೀತಿಯಾಗಿ ಮಾಡಿ, ಜನರ ಮಧ್ಯದಲ್ಲಿ ನನಗಿದ್ದ ಅವಮಾನವನ್ನು ಪರಿಹರಿಸಿದ್ದಾನಲ್ಲಾ” ಎಂದು ಹೇಳಿದಳು.
ಲೂಕನು 1 : 26 (IRVKN)
ದೇವದೂತನು ಯೇಸುವಿನ ಜನನವನ್ನು ಮುಂತಿಳಿಸಿದ್ದು ಎಲಿಸಬೇತಳು ಗರ್ಭಿಣಿಯಾದ ಆರನೆಯ ತಿಂಗಳಲ್ಲಿ, ದೇವರು ಗಬ್ರಿಯೇಲನೆಂಬ ತನ್ನ ದೂತನನ್ನು ಗಲಿಲಾಯ ಸೀಮೆಯ, ನಜರೇತೆಂಬ ಊರಿಗೆ, ಒಬ್ಬ ಕನ್ನಿಕೆಯ ಬಳಿಗೆ ಕಳುಹಿಸಿದನು;
ಲೂಕನು 1 : 27 (IRVKN)
ಆ ಕನ್ನಿಕೆಯ ಹೆಸರು ಮರಿಯಳು; ಆಕೆಗೆ ದಾವೀದನ ಮನೆತನದ ಯೋಸೇಫನೆಂಬ ಪುರುಷನೊಂದಿಗೆ ನಿಶ್ಚಿತಾರ್ಥವಾಗಿತ್ತು.
ಲೂಕನು 1 : 28 (IRVKN)
ಆ ದೂತನು ಆಕೆಯ ಬಳಿಗೆ ಬಂದು “ದೇವರ ದಯೆ ಹೊಂದಿದವಳೇ, ನಿನಗೆ ಶುಭವಾಗಲಿ ಕರ್ತನು ನಿನ್ನ ಸಂಗಡ ಇದ್ದಾನೆ” ಅಂದನು.
ಲೂಕನು 1 : 29 (IRVKN)
ಆಕೆಯು ಆ ಮಾತಿಗೆ ತಬ್ಬಿಬ್ಬಾಗಿ, ಇದೆಂಥ ಆಶೀರ್ವಾದ ಎಂದು ಯೋಚನೆಮಾಡುತ್ತಿದ್ದಳು.
ಲೂಕನು 1 : 30 (IRVKN)
ಆ ದೂತನು ಆಕೆಗೆ, “ಮರಿಯಳೇ, ಹೆದರಬೇಡ; ನಿನಗೆ ದೇವರ ಕೃಪೆ ದೊರಕಿದೆ.
ಲೂಕನು 1 : 31 (IRVKN)
ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸುವೆಂದು ಹೆಸರಿಡಬೇಕು.
ಲೂಕನು 1 : 32 (IRVKN)
ಆತನು ಮಹಾಪುರುಷನಾಗುವನು, ಪರಾತ್ಪರನಾದ ದೇವರ ಕುಮಾರನೆಂದು ಕರೆಯಲ್ಪಡುವನು; ಇದಲ್ಲದೆ ದೇವರಾಗಿರುವ ಕರ್ತನು ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು.
ಲೂಕನು 1 : 33 (IRVKN)
ಆತನು ಯಾಕೋಬನ ವಂಶವನ್ನು ಸದಾಕಾಲ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇರದು” ಎಂದು ಹೇಳಿದನು.
ಲೂಕನು 1 : 34 (IRVKN)
ಆಗ ಮರಿಯಳು ಆ ದೂತನಿಗೆ, “ಇದು ಹೇಗಾದೀತು? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ” ಎಂದು ಕೇಳಿದಳು.
ಲೂಕನು 1 : 35 (IRVKN)
ಅದಕ್ಕೆ ದೂತನು, “ಪವಿತ್ರಾತ್ಮನು ನಿನ್ನ ಮೇಲೆ ಬರುವನು; ಪರಾತ್ಪರನಾದ ದೇವರ ಶಕ್ತಿಯು ನಿನ್ನನ್ನು ಅವರಿಸುವುದು; ಆದುದರಿಂದ ನಿನಗೆ ಹುಟ್ಟುವ ಆ ಪವಿತ್ರ ಶಿಶು ದೇವರ ಮಗನೆನಿಸಿಕೊಳ್ಳುವನು.
ಲೂಕನು 1 : 36 (IRVKN)
ಇಗೋ, ನಿನ್ನ ಬಂಧುವಾದ ಎಲಿಸಬೇತಳಿದ್ದಾಳಲ್ಲಾ, ಆಕೆ ಸಹ ಮುಪ್ಪಿನವಳಾದರೂ ಗರ್ಭಿಣಿಯಾಗಿದ್ದಾಳೆ; ಆಕೆಯ ಗರ್ಭದಲ್ಲಿ ಗಂಡು ಮಗುವಿದೆ; ಬಂಜೆಯೆನಿಸಿಕೊಂಡಿದ್ದ ಆಕೆಗೆ ಈಗ ಆರನೆಯ ತಿಂಗಳು.
ಲೂಕನು 1 : 37 (IRVKN)
ದೇವರಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ” ಅಂದನು.
ಲೂಕನು 1 : 38 (IRVKN)
ಆಗ ಮರಿಯಳು “ಇಗೋ, ನಾನು ಕರ್ತನ ದಾಸಿ; ನಿನ್ನ ಮಾತಿನಂತೆ ನನಗಾಗಲಿ” ಅಂದಳು. ಆ ಮೇಲೆ ಆ ದೂತನು ಆಕೆಯ ಬಳಿಯಿಂದ ಹೊರಟುಹೋದನು.
ಲೂಕನು 1 : 39 (IRVKN)
ಮರಿಯಳು ಎಲಿಜಬೇತಳನ್ನು ಭೇಟಿಯಾದದ್ದು ಇದಾದ ನಂತರ ಮರಿಯಳು ಎದ್ದು ತ್ವರೆಯಾಗಿ ಯೆಹೂದದ ಮಲೆನಾಡಿನಲ್ಲಿರುವ ಒಂದು ಊರಿಗೆ ಹೋದಳು.
ಲೂಕನು 1 : 40 (IRVKN)
ಜಕರೀಯನ ಮನೆಯನ್ನು ಸೇರಿ ಎಲಿಸಬೇತಳಿಗೆ ವಂದಿಸಿದಳು.
ಲೂಕನು 1 : 41 (IRVKN)
ಎಲಿಸಬೇತಳು ಮರಿಯಳ ವಂದನೆಯನ್ನು ಕೇಳುತ್ತಲೇ ಆಕೆಯ ಗರ್ಭದಲ್ಲಿದ್ದ ಕೂಸು ಕುಣಿದಾಡಿತು ಮತ್ತು ಎಲಿಸಬೇತಳು ಪವಿತ್ರಾತ್ಮಭರಿತಳಾದಳು.
ಲೂಕನು 1 : 42 (IRVKN)
ಆಗ ಆಕೆಯು ಮಹಾಧ್ವನಿಯಿಂದ ಕೂಗಿ, “ನೀನು ಸ್ತ್ರೀಯರೊಳಗೆ ಧನ್ಯಳು, ಮತ್ತು ನಿನ್ನಲ್ಲಿ ಹುಟ್ಟುವ ಕೂಸು ಆಶೀರ್ವಾದ ಹೊಂದಿದ್ದು.
ಲೂಕನು 1 : 43 (IRVKN)
ನನ್ನ ಕರ್ತನ ತಾಯಿಯು ನನ್ನ ಬಳಿಗೆ ಬರುವಷ್ಟು ಸೌಭಾಗ್ಯ ನನಗೆ ಎಲ್ಲಿಂದಾಯಿತು?
ಲೂಕನು 1 : 44 (IRVKN)
ಇಗೋ, ನಿನ್ನ ವಂದನೆಯು ನನ್ನ ಕಿವಿಗೆ ಬೀಳುತ್ತಲೇ ಕೂಸು ನನ್ನ ಗರ್ಭದಲ್ಲಿ ಉಲ್ಲಾಸದಿಂದ ಕುಣಿದಾಡಿತು.
ಲೂಕನು 1 : 45 (IRVKN)
ಕರ್ತನು ನಿನಗೆ ಹೇಳಿದ ಮಾತುಗಳು ನೆರವೇರುವವು ಅಂದಳು. ಇದನ್ನು ನಂಬಿದವಳಾದ ನೀನು ಧನ್ಯಳು.”
ಲೂಕನು 1 : 46 (IRVKN)
ಮರಿಯಳ ಸ್ತುತಿಗೀತೆ ಆಗ ಮರಿಯಳು, “ನನ್ನ ಪ್ರಾಣವು ಕರ್ತನನ್ನು ಕೊಂಡಾಡುತ್ತದೆ,
ಲೂಕನು 1 : 47 (IRVKN)
ನನ್ನ ಆತ್ಮವು ನನ್ನ ರಕ್ಷಕನಾದ ದೇವರಲ್ಲಿ ಉಲ್ಲಾಸಗೊಂಡಿದೆ.
ಲೂಕನು 1 : 48 (IRVKN)
ಆತನು ತನ್ನ ದಾಸಿಯ ದೀನಸ್ಥಿತಿಯ ಮೇಲೆ ಲಕ್ಷ್ಯವಿಟ್ಟಿದ್ದಾನೆ. ಇಗೋ, ಇಂದಿನಿಂದ ತಲತಲಾಂತರದವರೆಗೆ ಎಲ್ಲರೂ ನನ್ನನ್ನು ಧನ್ಯಳೆಂದು ಹೊಗಳುವರು,
ಲೂಕನು 1 : 49 (IRVKN)
ಏಕೆಂದರೆ ಶಕ್ತನಾಗಿರುವಾತನು ನನಗೆ ದೊಡ್ಡ ಉಪಕಾರಗಳನ್ನು ಮಾಡಿದ್ದಾನೆ; ಆತನ ನಾಮವು ಪರಿಶುದ್ಧವಾದುದು.
ಲೂಕನು 1 : 50 (IRVKN)
ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ದಯೆಯು ತಲತಲಾಂತರದ ವರೆಗೂ ಇರುವುದು.
ಲೂಕನು 1 : 51 (IRVKN)
ಆತನು ತನ್ನ ಭುಜಪರಾಕ್ರಮದಿಂದ ಸೊಕ್ಕಿದ ಮನಸ್ಸುಳ್ಳವರನ್ನು ಚದರಿಸಿಬಿಟ್ಟಿದ್ದಾನೆ.
ಲೂಕನು 1 : 52 (IRVKN)
ಪ್ರಭುಗಳನ್ನು ಸಿಂಹಾಸನಗಳಿಂದ ಕೆಳಗೆ ದೊಬ್ಬಿ, ದೀನಸ್ಥಿತಿಯವರನ್ನು ಉನ್ನತಸ್ಥಿತಿಗೆ ತಂದಿದ್ದಾನೆ.
ಲೂಕನು 1 : 53 (IRVKN)
ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಪಡಿಸಿ, ಸಿರಿವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಟ್ಟಿದ್ದಾನೆ.
ಲೂಕನು 1 : 54 (IRVKN)
(54-55)ಆತನು ನಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದಂತೆ ಅಬ್ರಹಾಮನಿಗೂ ಅವನ ವಂಶದವರಿಗೂ ಯಾವಾಗಲೂ ದಯೆ ತೋರಿಸಬೇಕೆಂಬುದನ್ನು ನೆನಪಿಸಿಕೊಂಡು, ತನ್ನ ಸೇವಕನಾದ ಇಸ್ರಾಯೇಲನಿಗೆ ನೆರವಾಗಿದ್ದಾನೆ” ಎಂದಳು.
ಲೂಕನು 1 : 56 (IRVKN)
56 ಮರಿಯಳು ಸುಮಾರು ಮೂರು ತಿಂಗಳು ಎಲಿಸಬೇತಳ ಬಳಿಯಲ್ಲಿದ್ದು ತನ್ನ ಮನೆಗೆ ಹಿಂತಿರುಗಿ ಹೋದಳು.
ಲೂಕನು 1 : 57 (IRVKN)
ಸ್ನಾನಿಕನಾದ ಯೋಹಾನನ ಜನನ ಹೆರಿಗೆಕಾಲ ಬಂದಾಗ ಎಲಿಸಬೇತಳು ಗಂಡು ಮಗುವನ್ನು ಹೆತ್ತಳು.
ಲೂಕನು 1 : 58 (IRVKN)
ಆಕೆಯ ನೆರೆಹೊರೆಯವರೂ ಬಂಧುಬಾಂಧವರೂ ಆಕೆಯ ಮೇಲೆ ಕರ್ತನು ತನ್ನ ವಿಶೇಷ ದಯೆಯನ್ನು ತೋರಿಸಿದ್ದಾನೆಂಬುದನ್ನು ಕೇಳಿ ಆಕೆಯ ಸಂಗಡ ಸಂತೋಷಪಟ್ಟರು.
ಲೂಕನು 1 : 59 (IRVKN)
ಎಂಟನೆಯ ದಿನದಲ್ಲಿ ಅವರು ಆ ಮಗುವಿಗೆ ಸುನ್ನತಿಮಾಡುವುದಕ್ಕಾಗಿ ಬಂದು ಅದಕ್ಕೆ ಜಕರೀಯನೆಂದು ತಂದೆಯ ಹೆಸರನ್ನು ಇಡಬೇಕೆಂದಿದ್ದರು.
ಲೂಕನು 1 : 60 (IRVKN)
ಈ ವಿಷಯದಲ್ಲಿ ಎಲಿಸಬೇತಳು “ಅದು ಬೇಡ, ಯೋಹಾನನೆಂದು ಹೆಸರಿಡಬೇಕು” ಅನ್ನಲು,
ಲೂಕನು 1 : 61 (IRVKN)
ಅವರು, “ನಿನ್ನ ಬಂಧುಬಾಂಧವರಲ್ಲಿ ಈ ಹೆಸರಿನವರು ಒಬ್ಬರಾದರೂ ಇಲ್ಲವಲ್ಲಾ” ಎಂದು ಆಕೆಗೆ ಹೇಳಿದರು.
ಲೂಕನು 1 : 62 (IRVKN)
ಇದಕ್ಕೆ ಏನು ಹೆಸರಿಡಬೇಕೆಂದಿರುತ್ತೀ ಎಂಬುದಾಗಿ ಜಕರೀಯನಿಗೆ ಸನ್ನೆಮಾಡಿ ಕೇಳಿದರು.
ಲೂಕನು 1 : 63 (IRVKN)
ಅವನು ಒಂದು ಹಲಗೆಯನ್ನು ತರಿಸಿಕೊಂಡು, “ಆತನ ಹೆಸರು ಯೋಹಾನನು” ಎಂದು ಬರೆದನು. ಅದಕ್ಕೆ ಎಲ್ಲರೂ ಆಶ್ಚರ್ಯಪಟ್ಟರು.
ಲೂಕನು 1 : 64 (IRVKN)
ಕೂಡಲೆ ಅವನ ಬಾಯಿ ತೆರೆಯಲ್ಪಟ್ಟು, ನಾಲಿಗೆ ಸಡಿಲವಾಯಿತು, ಅವನು ಮಾತನಾಡುವವನಾಗಿ ದೇವರನ್ನು ಕೊಂಡಾಡಿದನು.
ಲೂಕನು 1 : 65 (IRVKN)
ಇದನ್ನು ಕೇಳಿದ ನೆರೆಹೊರೆಯವರಿಗೆಲ್ಲಾ ಹೆದರಿಕೆಯುಂಟಾಯಿತು ಮತ್ತು ಈ ಎಲ್ಲಾ ಸಂಗತಿಗಳನ್ನು ಕುರಿತು ಯೂದಾಯದ ಮಲೆನಾಡಿನಲ್ಲೆಲ್ಲಾ ಮಾತನಾಡಿಕೊಳ್ಳುತ್ತಿದ್ದರು.
ಲೂಕನು 1 : 66 (IRVKN)
ಈ ಸಂಗತಿಗಳನ್ನು ಕೇಳಿದವರೆಲ್ಲರೂ, “ಆಹಾ, ಈ ಕೂಸು ಎಂಥವನಾಗುವನೋ?” ಅಂದುಕೊಂಡರು, ಆದರೆ ಕರ್ತನ ಅಭಯ ಹಸ್ತವು ಅವನ ಮೇಲೆ ಇತ್ತು.
ಲೂಕನು 1 : 68 (IRVKN)
ಇದಲ್ಲದೆ ಆ ಮಗುವಿನ ತಂದೆಯಾದ ಜಕರೀಯನು ಪವಿತ್ರಾತ್ಮಭರಿತನಾಗಿ ನುಡಿದ ಪ್ರವಾದನೆ ಏನೆಂದರೆ, “ಇಸ್ರಾಯೇಲರ ದೇವರಾಗಿರುವ ಕರ್ತನಿಗೆ ಸ್ತೋತ್ರವು; ತನ್ನ ಪ್ರಜೆಯನ್ನು ಸಂಧಿಸಿ ಅವರಿಗೆ ಬಿಡುಗಡೆಯನ್ನುಂಟುಮಾಡಿದ್ದಾನೆ;
ಲೂಕನು 1 : 69 (IRVKN)
ತನ್ನ ಸೇವಕನಾದ ದಾವೀದನ ಮನೆತನದಲ್ಲಿ, ನಮಗೋಸ್ಕರ ಒಬ್ಬ ರಕ್ಷಣಾವೀರನನ್ನು ಎಬ್ಬಿಸಿದ್ದಾನೆ.
ಲೂಕನು 1 : 70 (IRVKN)
ಆತನು ಪೂರ್ವಕಾಲದಲ್ಲಿಯೇ ತನ್ನ ಪರಿಶುದ್ಧ ಪ್ರವಾದಿಗಳ ಮೂಲಕ ತಾನು ಹೇಳಿದಂತೆಯೇ,
ಲೂಕನು 1 : 71 (IRVKN)
ನಮ್ಮ ವೈರಿಗಳಿಂದಲೂ, ನಮ್ಮನ್ನು ದ್ವೇಷಿಸುವವರೆಲ್ಲರ ಕೈಯಿಂದಲೂ ನಮ್ಮನ್ನು ತಪ್ಪಿಸಿ ರಕ್ಷಿಸಿದ್ದಾನೆ.
ಲೂಕನು 1 : 72 (IRVKN)
(72-73)ಆತನು ನಮ್ಮ ಪೂರ್ವಿಕರಿಗೆ ದಯೆಯನ್ನು ತೋರಿಸುವುದರ ಮೂಲಕ ನಮ್ಮ ಮೂಲಪಿತೃವಾದ ಅಬ್ರಹಾಮನಿಗೆ ಪ್ರಮಾಣಮಾಡಿ ಕೊಟ್ಟ ತನ್ನ ಪರಿಶುದ್ಧವಾದ ಒಡಂಬಡಿಕೆಯನ್ನು ನೆನಪಿಸಿಕೊಳ್ಳುವವನಾಗಿದ್ದಾನೆ.
ಲೂಕನು 1 : 74 (IRVKN)
(74-75)ಹೀಗೆ ನಾವು ನಮ್ಮ ವೈರಿಗಳ ಕೈಯಿಂದ ಬಿಡುಗಡೆಹೊಂದಿ ಭಯವಿಲ್ಲದವರಾಗಿದ್ದು, ನಮ್ಮ ಜೀವಮಾನದಲ್ಲೆಲ್ಲಾ ನಿರ್ಮಲಚಿತ್ತದಿಂದಲೂ ನೀತಿಯಿಂದಲೂ ತನ್ನ ಸನ್ನಿಧಿಯಲ್ಲಿ ಸೇವೆಮಾಡುವಂತೆ ನಮಗೆ ಅನುಕೂಲಮಾಡಿದ್ದಾನೆ.
ಲೂಕನು 1 : 76 (IRVKN)
ಮಗುವೇ, ನೀನಾದರೋ ಪರಾತ್ಪರನಾದ ದೇವರ ಪ್ರವಾದಿಯೆನಿಸಿಕೊಳ್ಳುವಿ. ನೀನು ಕರ್ತನ ಮುಂದೆ ಹೋಗಿ ಆತನ ಹಾದಿಗಳನ್ನು ಸಿದ್ಧಮಾಡುವವನಾಗಿಯೂ,
ಲೂಕನು 1 : 77 (IRVKN)
(77-78)ನಮ್ಮ ದೇವರು ಅತ್ಯಂತಕರುಣೆಯಿಂದ ದಯಪಾಲಿಸುವ ಪಾಪಕ್ಷಮೆಯೆಂಬ ರಕ್ಷಣೆಯ ತಿಳಿವಳಿಕೆಯನ್ನು ಆತನ ಪ್ರಜೆಗೆ ತಿಳಿಸಿಕೊಡುವವನಾಗಿಯೂ ಇರುವಿ. ಆ ಕರುಣೆಯಿಂದಲೇ ನಮಗೆ ಮೇಲಿನಿಂದ ಅರುಣೋದಯವು ಉಂಟಾಗಿ,
ಲೂಕನು 1 : 79 (IRVKN)
ಅದು ಕತ್ತಲಲ್ಲಿಯೂ, ಮರಣಾಂಧಕಾರದಲ್ಲಿಯೂ ವಾಸಿಸುತ್ತಿದ್ದ ನಮಗೆ ಬೆಳಕನ್ನು ಕೊಟ್ಟು ನಮ್ಮ ಕಾಲುಗಳನ್ನು ಸಮಾಧಾನದ ಮಾರ್ಗದಲ್ಲಿ ಸೇರಿಸಿ ನಡಿಸುವುದು.”
ಲೂಕನು 1 : 80 (IRVKN)
80 ಆ ಬಾಲಕನು ಬೆಳೆದು ಆತ್ಮದಲ್ಲಿ ಬಲವುಳ್ಳವನಾದನು. ಮತ್ತು ಇಸ್ರಾಯೇಲ್ ಜನರಿಗೆ ತನ್ನನ್ನು ತೋರ್ಪಡಿಸಿಕೊಳ್ಳುವ ದಿನದವರೆಗೂ ಮರುಭೂಮಿಯ ಪ್ರದೇಶಗಳಲ್ಲಿ ಇದ್ದನು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52
53
54
55
56
57
58
59
60
61
62
63
64
65
66
67
68
69
70
71
72
73
74
75
76
77
78
79
80