ಯಾಜಕಕಾಂಡ 7 : 1 (IRVKN)
ಪ್ರಾಯಶ್ಚಿತ್ತಯಜ್ಞದ ನಿಯಮಗಳು “ ‘ಪ್ರಾಯಶ್ಚಿತ್ತಯಜ್ಞದ ನಿಯಮಗಳು: ಆ ಯಜ್ಞವು ಮಹಾಪರಿಶುದ್ಧವಾದದ್ದು.
ಯಾಜಕಕಾಂಡ 7 : 2 (IRVKN)
ಸರ್ವಾಂಗಹೋಮಪಶುವನ್ನು ವಧಿಸುವ ಸ್ಥಳದಲ್ಲೇ ಪ್ರಾಯಶ್ಚಿತ್ತಯಜ್ಞದ ಪಶುವನ್ನು ವಧಿಸಬೇಕು. ಯಾಜಕನು ಅದರ ರಕ್ತವನ್ನು ಯಜ್ಞವೇದಿಯ ಸುತ್ತಲೂ ಎರಚಬೇಕು.
ಯಾಜಕಕಾಂಡ 7 : 3 (IRVKN)
ಅವನು ಅದರ ಕೊಬ್ಬನ್ನೆಲ್ಲಾ ಅಂದರೆ,
ಯಾಜಕಕಾಂಡ 7 : 4 (IRVKN)
ಬಾಲದ ಕೊಬ್ಬನ್ನು, ಅಂಗಾಂಶದ ಕೊಬ್ಬನ್ನು, ಎರಡು ಮೂತ್ರಪಿಂಡಗಳನ್ನು, ಇವುಗಳ ಮೇಲೆ ಸೊಂಟದಲ್ಲಿರುವ ಕೊಬ್ಬನ್ನು, ಕಳಿಜದ ಮೇಲಿನಿಂದ ಮೂತ್ರಪಿಂಡಗಳ ತನಕ ಇರುವ ಕೊಬ್ಬನ್ನು ತೆಗೆಯಬೇಕು.
ಯಾಜಕಕಾಂಡ 7 : 5 (IRVKN)
ಯಾಜಕನು ಅದನ್ನು ಯಜ್ಞವೇದಿಯ ಮೇಲೆ ಯೆಹೋವನಿಗೆ ಹೋಮಮಾಡಬೇಕು. ಅದು ಪ್ರಾಯಶ್ಚಿತ್ತ ಯಜ್ಞವಾಗಿದೆ.
ಯಾಜಕಕಾಂಡ 7 : 6 (IRVKN)
ಹೋಮಶೇಷವನ್ನು ಯಾಜಕರಲ್ಲಿ ಗಂಡಸರೆಲ್ಲರೂ ತಿನ್ನಬಹುದು; ಅದು ಮಹಾಪರಿಶುದ್ಧವಾದುದರಿಂದ ಪವಿತ್ರಸ್ಥಳದೊಳಗೆ ಅದನ್ನು ತಿನ್ನಬೇಕು.
ಯಾಜಕಕಾಂಡ 7 : 7 (IRVKN)
ಪ್ರಾಯಶ್ಚಿತ್ತಯಜ್ಞದ ಹೋಮಶೇಷದ ವಿಷಯದಲ್ಲಿಯೂ ಮತ್ತು ದೋಷಪರಿಹಾರಕ ಯಜ್ಞದ ಹೋಮಶೇಷದ ವಿಷಯದಲ್ಲಿಯೂ ಒಂದೇ ನಿಯಮಯುಂಟು; ಹೇಗೆಂದರೆ ಆ ಹೋಮಶೇಷವು ದೋಷಪರಿಹಾರವನ್ನು ಮಾಡಿಸುವ ಯಾಜಕನಿಗೆ ಸಲ್ಲತಕ್ಕದ್ದು.
ಯಾಜಕಕಾಂಡ 7 : 8 (IRVKN)
ಯಾರಾದರೂ ಸರ್ವಾಂಗಹೋಮಕ್ಕಾಗಿ ಪಶುವನ್ನು ತಂದಾಗ ಅದರ ಚರ್ಮವು ಆ ಪಶುವನ್ನು ಸಮರ್ಪಿಸುವ ಯಾಜಕನದ್ದಾಗಿಯೇ ಇರಬೇಕು.
ಯಾಜಕಕಾಂಡ 7 : 9 (IRVKN)
ಒಲೆಯಲ್ಲಾಗಲಿ, ಕಬ್ಬಿಣದ ಹಂಚಿನಲ್ಲಾಗಲಿ ಅಥವಾ ಬಾಂಡ್ಲಿಯಲ್ಲಾಗಲಿ ಬೇಯಿಸಿದ ನೈವೇದ್ಯಪದಾರ್ಥವೆಲ್ಲಾ ಸಮರ್ಪಿಸುವ ಯಾಜಕನಿಗೆ ಆಗಬೇಕು.
ಯಾಜಕಕಾಂಡ 7 : 10 (IRVKN)
ಆದರೆ ಎಣ್ಣೆ ಹೊಯ್ದ ಹಿಟ್ಟನ್ನಾಗಲಿ ಅಥವಾ ಬರೀ ಹಿಟ್ಟನ್ನಾಗಲಿ ಯಾರಾದರೂ ನೈವೇದ್ಯಕ್ಕಾಗಿ ತಂದಾಗ ಅದನ್ನು ಆರೋನನ ವಂಶದವರೆಲ್ಲರೂ ಸಮಾನವಾಗಿ ಅನುಭವಿಸಬೇಕು.
ಯಾಜಕಕಾಂಡ 7 : 11 (IRVKN)
“ ‘ಜನರು ಯೆಹೋವನಿಗೆ ಅರ್ಪಿಸುವ ಸಮಾಧಾನಯಜ್ಞದ ನಿಯಮಗಳು ಇವೇ.
ಯಾಜಕಕಾಂಡ 7 : 12 (IRVKN)
ಯಾರಾದರೂ ಕೃತಜ್ಞತೆಯನ್ನು ತೋರಿಸುವುದಕ್ಕಾಗಿ ಸಮಾಧಾನಯಜ್ಞವನ್ನು ಯೆಹೋವನಿಗೆ ಮಾಡುವುದಾದರೆ ಅದರೊಡನೆ ಎಣ್ಣೆ ಮಿಶ್ರವಾದ ಹುಳಿಯಿಲ್ಲದ ಕಡುಬುಗಳನ್ನು ಮತ್ತು ಎಣ್ಣೆಯಿಂದ ಪೂರಾ ನೆನಸಿದ ಗೋದಿ ಹಿಟ್ಟಿನ ಹೋಳಿಗೆಗಳನ್ನು ಸಮರ್ಪಿಸಬೇಕು.
ಯಾಜಕಕಾಂಡ 7 : 13 (IRVKN)
ಕೃತಜ್ಞತೆಯನ್ನು ತೋರಿಸುವುದಕ್ಕಾಗಿ ಸಮಾಧಾನಯಜ್ಞದಲ್ಲಿ ಒಪ್ಪಿಸುವ ಪಶುವಿನೊಡನೆ ಹುಳಿರೊಟ್ಟಿಗಳನ್ನು ಸಮರ್ಪಿಸಬೇಕು.
ಯಾಜಕಕಾಂಡ 7 : 14 (IRVKN)
ಸಮರ್ಪಿಸಿದ ಪ್ರತಿಯೊಂದು ವಿಧವಾದ ಯಜ್ಞದ ಪದಾರ್ಥಗಳಲ್ಲಿಯೂ ಒಂದೊಂದನ್ನು ಯೆಹೋವನಿಗೋಸ್ಕರ ಪ್ರತ್ಯೇಕಿಸಬೇಕು. ಅವು ಯಜ್ಞವೇದಿಗೆ ಯಜ್ಞಪಶುವಿನ ರಕ್ತವನ್ನು ಎರಚಿದ ಯಾಜಕನಿಗೆ ಅರ್ಪಿಸಬೇಕು.
ಯಾಜಕಕಾಂಡ 7 : 15 (IRVKN)
ಕೃತಜ್ಞತೆಯ ಯಜ್ಞಪಶುವಿನ ಮಾಂಸವನ್ನು ಯಜ್ಞವು ನಡೆದ ದಿನದಲ್ಲೇ ಭೋಜನ ಮಾಡಬೇಕು; ಮರುದಿನದ ವರೆಗೆ ಸ್ವಲ್ಪವನ್ನಾದರೂ ಉಳಿಸಬಾರದು.
ಯಾಜಕಕಾಂಡ 7 : 16 (IRVKN)
“ ‘ಯಾರಾದರೂ ಹರಕೆಯನ್ನು ಸಲ್ಲಿಸುವುದಕ್ಕಾಗಲಿ, ಸ್ವ ಇಚ್ಛೆಯಿಂದಾಗಲಿ ಅಂತಹ ಯಜ್ಞವನ್ನು ಮಾಡಿಸಿದರೆ ಅದನ್ನು ಸಮರ್ಪಿಸಿದ ದಿನದಲ್ಲೇ ಅದರ ಮಾಂಸವನ್ನು ಊಟಮಾಡಬೇಕು; ಆದರೆ ಉಳಿದದ್ದನ್ನು ಮರುದಿನದಲ್ಲಿ ತಿನ್ನಬಹುದು.
ಯಾಜಕಕಾಂಡ 7 : 17 (IRVKN)
ಮೂರನೆಯ ದಿನದ ವರೆಗೆ ಉಳಿದದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
ಯಾಜಕಕಾಂಡ 7 : 18 (IRVKN)
ಆ ಯಜ್ಞಪಶುವಿನ ಮಾಂಸದಲ್ಲಿ ಸ್ವಲ್ಪವನ್ನಾದರೂ ಮೂರನೆಯ ದಿನದಲ್ಲಿ ಊಟಮಾಡಿದರೆ ಆ ಯಜ್ಞವು ಸಮರ್ಪಕವಾದದ್ದಲ್ಲ; ಅರ್ಪಿಸಿದವನಿಗೆ ಅದರಿಂದ ಫಲವೇನೂ ದೊರೆಯುವುದಿಲ್ಲ. ಅದು ಅಸಹ್ಯವಾದುದರಿಂದ ಅದನ್ನು ತಿಂದವನು ಆ ಪಾಪದ ಫಲವನ್ನು ಅನುಭವಿಸಬೇಕು.
ಯಾಜಕಕಾಂಡ 7 : 19 (IRVKN)
ಅಶುದ್ಧವಾದ ವಸ್ತುವಿಗೆ ಸೋಂಕಿದ ಮಾಂಸವನ್ನು ತಿನ್ನದೆ ಬೆಂಕಿಯಲ್ಲಿ ಸುಟ್ಟುಬಿಡಬೇಕು. ಶುದ್ಧರಾಗಿರುವವರೆಲ್ಲರೂ ಯಜ್ಞಪಶುವಿನ ಮಾಂಸವನ್ನು ತಿನ್ನಬಹುದು.
ಯಾಜಕಕಾಂಡ 7 : 20 (IRVKN)
ಯಾವನಾದರೂ ಅಶುದ್ಧನಾಗಿದ್ದು, ಯೆಹೋವನಿಗೆ ಸಮರ್ಪಿತವಾದ ಸಮಾಧಾನ ಯಜ್ಞಪಶುವಿನ ಮಾಂಸವನ್ನು ತಿಂದರೆ ಅವನು ತನ್ನ ಕುಲದಿಂದ ಬಹಿಷ್ಕರಿಸಲ್ಪಡಬೇಕು.
ಯಾಜಕಕಾಂಡ 7 : 21 (IRVKN)
ಯಾವನಿಗಾದರೂ ಮನುಷ್ಯದೇಹದಿಂದ ಉಂಟಾದ ಅಶುದ್ಧವಸ್ತು ಅಥವಾ ಅಶುದ್ಧ ಮೃಗ ಮತ್ತು ನಿಷಿದ್ಧವಸ್ತು ಇವುಗಳಲ್ಲಿ ಯಾವುದಾದರೂ ಸೋಂಕಿದರೆ ಮತ್ತು ಅವನು ಯೆಹೋವನಿಗೆ ಸಮರ್ಪಿತವಾದ ಯಜ್ಞಪಶುವಿನ ಮಾಂಸವನ್ನು ತಿಂದರೆ ತನ್ನ ಕುಲದಿಂದ ಬಹಿಷ್ಕರಿಸಲ್ಪಡಬೇಕು’ ” ಎಂದು ಹೇಳಿದನು.
ಯಾಜಕಕಾಂಡ 7 : 22 (IRVKN)
ಕೊಬ್ಬು ಮತ್ತು ರಕ್ತ ಭೋಜನವನ್ನು ನಿಷೇಧಿಸಿದ್ದು ಯೆಹೋವನು ಮೋಶೆಗೆ,
ಯಾಜಕಕಾಂಡ 7 : 23 (IRVKN)
“ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು, ‘ನೀವು ಎತ್ತು, ಕುರಿ ಮತ್ತು ಆಡುಗಳ ಕೊಬ್ಬನ್ನು ತಿನ್ನಬಾರದು.
ಯಾಜಕಕಾಂಡ 7 : 24 (IRVKN)
ಅಂತಹ ಪಶುವು ರೋಗದಿಂದ ಸತ್ತರೆ ಇಲ್ಲವೇ ಕಾಡುಮೃಗವು ಕೊಂದರೆ, ಅದರ ಕೊಬ್ಬನ್ನು ಬೇರೆ ಕೆಲಸಕ್ಕೆ ಉಪಯೋಗಿಸಬಹುದೇ ಹೊರತು ಎಷ್ಟು ಮಾತ್ರವೂ ತಿನ್ನಬಾರದು.
ಯಾಜಕಕಾಂಡ 7 : 25 (IRVKN)
ಮನುಷ್ಯರು ಯೆಹೋವನಿಗೆ ಹೋಮಮಾಡುವಂತಹ ಪಶು ಜಾತಿಯ ಕೊಬ್ಬನ್ನು ಯಾವನಾದರೂ ತಿಂದರೆ ಅವನು ಕುಲದಿಂದ ಬಹಿಷ್ಕಾರಕ್ಕೆ ಒಳಗಾಗುವನು.
ಯಾಜಕಕಾಂಡ 7 : 26 (IRVKN)
ಪಕ್ಷಿಯದಾಗಲಿ ಅಥವಾ ಪಶುವಿನದಾಗಲಿ ಯಾವ ರಕ್ತವನ್ನು ನೀವು ಎಲ್ಲಿಯೂ ಊಟಮಾಡಬಾರದು.
ಯಾಜಕಕಾಂಡ 7 : 27 (IRVKN)
ರಕ್ತಭೋಜನವನ್ನು ಮಾಡಿದವನು ಕುಲದಿಂದ ಬಹಿಷ್ಕಾರಕ್ಕೆ ಒಳಗಾಗುವನು’ ” ಎಂದು ಹೇಳಿದನು.
ಯಾಜಕಕಾಂಡ 7 : 28 (IRVKN)
ಯಾಜಕನ ಪಾಲು ಯೆಹೋವನು ಮೋಶೆಯೊಂದಿಗೆ ಮಾತನಾಡಿ,
ಯಾಜಕಕಾಂಡ 7 : 29 (IRVKN)
“ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು, ‘ಸಮಾಧಾನಯಜ್ಞದ ಪಶುಗಳನ್ನು ಯೆಹೋವನಿಗೆ ಸಮರ್ಪಿಸುವವನು ಆ ಯಜ್ಞದ್ರವ್ಯಗಳಲ್ಲಿ ಯೆಹೋವನಿಗೆ ಸಲ್ಲಬೇಕಾದದ್ದನ್ನು ತಂದುಕೊಡಬೇಕು.
ಯಾಜಕಕಾಂಡ 7 : 30 (IRVKN)
ಯೆಹೋವನಿಗೆ ಹೋಮರೂಪವಾಗಿ ಸಮರ್ಪಿಸಬೇಕಾದುದನ್ನು ಅಂದರೆ ಪಶುವಿನ ಕೊಬ್ಬನ್ನು ತನ್ನ ಕೈಯಿಂದಲೇ ಕೊಡಬೇಕು. ಅದರೊಂದಿಗೆ ಅದರ ಎದೆಯ ಭಾಗವನ್ನು ನೈವೇದ್ಯರೂಪವಾಗಿ ಯೆಹೋವನ ಸನ್ನಿಧಿಯಲ್ಲಿ ನಿವಾಳಿಸುವುದಕ್ಕಾಗಿ ತಂದು ಸಮರ್ಪಿಸಬೇಕು.
ಯಾಜಕಕಾಂಡ 7 : 31 (IRVKN)
ಯಾಜಕನು ಆ ಕೊಬ್ಬನ್ನು ಯಜ್ಞವೇದಿಯ ಮೇಲೆ ಹೋಮಮಾಡಬೇಕು; ಎದೆಯ ಭಾಗವು ಆರೋನನಿಗೂ ಮತ್ತು ಅವನ ವಂಶದವರಿಗೂ ಸೇರಬೇಕು.
ಯಾಜಕಕಾಂಡ 7 : 32 (IRVKN)
ನೀವು ಸಮಾಧಾನಯಜ್ಞದ್ರವ್ಯಗಳಲ್ಲಿ ಬಲತೊಡೆಯನ್ನು ಯಾಜಕನಿಗೋಸ್ಕರ ಪ್ರತ್ಯೇಕಿಸಿ ಕೊಡಬೇಕು.
ಯಾಜಕಕಾಂಡ 7 : 33 (IRVKN)
ಆರೋನನ ವಂಶದವರಲ್ಲಿ ಯಾವನು ಆ ಯಜ್ಞಪಶುವಿನ ರಕ್ತವನ್ನು ಮತ್ತು ಕೊಬ್ಬನ್ನು ಸಮರ್ಪಿಸುತ್ತಾನೋ ಅದರ ಬಲತೊಡೆಯು ಅವನ ಭಾಗವಾಗಿರಬೇಕು.
ಯಾಜಕಕಾಂಡ 7 : 34 (IRVKN)
ಇಸ್ರಾಯೇಲರು ಸಮಾಧಾನಯಜ್ಞಪಶುವಿನ ಮಾಂಸದಲ್ಲಿ ನೈವೇದ್ಯರೂಪವಾಗಿ ನಿವಾಳಿಸುವ ಎದೆಯ ಭಾಗವನ್ನು ಮತ್ತು ಯಾಜಕನಿಗೋಸ್ಕರ ಪ್ರತ್ಯೇಕಿಸುವ ತೊಡೆಯನ್ನು ನಾನು ತೆಗೆದುಕೊಂಡು ಮಹಾಯಾಜಕನಾದ ಆರೋನನಿಗೂ ಹಾಗು ಅವನ ವಂಶದವರಿಗೂ ಕೊಟ್ಟು ಇವು ಇಸ್ರಾಯೇಲರಿಂದ ಯಾಜಕರಿಗೆ ಯಾವಾಗಲೂ ಸಲ್ಲಬೇಕೆಂದು ಶಾಶ್ವತವಾದ ನಿಯಮವನ್ನು ಮಾಡಿದ್ದೇನೆ’ ” ಎಂದು ಹೇಳಿದನು.
ಯಾಜಕಕಾಂಡ 7 : 35 (IRVKN)
ಯೆಹೋವನಿಗೆ ಹೋಮರೂಪವಾಗಿ ಅರ್ಪಿತವಾದ ದ್ರವ್ಯಗಳಲ್ಲಿ ಇವೇ ಆರೋನನಿಗೂ ಅವನ ವಂಶದವರಿಗೂ ಶಾಶ್ವತವಾಗಿ ಸಲ್ಲತಕ್ಕ ಭಾಗಗಳಾಗಿರುವವು. ಮೋಶೆ ಅವರನ್ನು ಯೆಹೋವನ ಸನ್ನಿಧಿಯಲ್ಲಿ ಯಾಜಕೋದ್ಯೋಗಕ್ಕಾಗಿ ಪ್ರತಿಷ್ಠಿಸಿದ ದಿನದಲ್ಲೇ ಇದು ನೇಮಕವಾಯಿತು.
ಯಾಜಕಕಾಂಡ 7 : 36 (IRVKN)
ಇಸ್ರಾಯೇಲರು ಇವುಗಳನ್ನು ಯಾಜಕರಿಗೆ ಸಲ್ಲಿಸಬೇಕೆಂದು ಯೆಹೋವನು ಮೋಶೆಯ ಮುಖಾಂತರ ಕೈಯಿಂದ ಅವರನ್ನು ಪ್ರತಿಷ್ಠಿಸಿ ಅಭಿಷೇಕಿಸಿದ ದಿನದಲ್ಲೇ ನೇಮಿಸಿದನು.
ಯಾಜಕಕಾಂಡ 7 : 37 (IRVKN)
ಸರ್ವಾಂಗಹೋಮ, ಧಾನ್ಯನೈವೇದ್ಯ, ದೋಷಪರಿಹಾರಕ ಯಜ್ಞ, ಪ್ರಾಯಶ್ಚಿತ್ತಯಜ್ಞ, ಯಾಜಕ ಪ್ರತಿಷ್ಠೆ ಮತ್ತು ಸಮಾಧಾನಯಜ್ಞ ಎಂಬ ಯಜ್ಞಗಳ ವಿಷಯದಲ್ಲಿ ಮೇಲೆ ಹೇಳಿದ ನಿಯಮಗಳನ್ನು ಅನುಸರಿಸಬೇಕು.
ಯಾಜಕಕಾಂಡ 7 : 38 (IRVKN)
ಯೆಹೋವನು ಸೀನಾಯಿ ಬೆಟ್ಟದಲ್ಲಿ ಮೋಶೆಗೆ ಈ ಎಲ್ಲಾ ಆಜ್ಞೆಗಳನ್ನು ಕೊಟ್ಟನು. ಮೋಶೆ ಸೀನಾಯಿ ಅರಣ್ಯದಲ್ಲಿ ಇಸ್ರಾಯೇಲರು ಅರ್ಪಿಸಬೇಕಾದ ಯಜ್ಞವನ್ನು ಯೆಹೋವನಿಗೆ ಸಮರ್ಪಿಸಬೇಕೆಂದು ಆಜ್ಞಾಪಿಸಿ ಅವರಿಗೆ ಮೇಲೆ ಕಂಡ ನಿಯಮಗಳನ್ನು ಕೊಟ್ಟನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38