ಯಾಜಕಕಾಂಡ 5 : 1 (IRVKN)
ಅಶುದ್ಧತೆಗೆ ಕಾರಣವಾಗುವ ಸಂಗತಿಗಳು “ ‘ನ್ಯಾಯಾಧಿಕಾರಿಯು ತಿಳಿಸಬೇಕೆಂದು ಆಣೆ ಇಟ್ಟರೂ, ಯಾವನಾದರೂ ತಾನು ಕಂಡು ಕೇಳಿದ್ದನ್ನು ತಿಳಿಸದೆಹೋದರೆ ಅವನು ಪಾಪಕ್ಕೆ ಗುರಿಯಾಗುವನು.
ಯಾಜಕಕಾಂಡ 5 : 2 (IRVKN)
ಯಾವನಿಗಾದರೂ ಅಶುದ್ಧವಾದ ಕಾಡುಮೃಗ, ಪಶು ಮತ್ತು ಜಂತು ಇವುಗಳ ಹೆಣವಾಗಲಿ ಅಥವಾ ಬೇರೆ ಯಾವ ಅಶುದ್ಧವಸ್ತುವಾಗಲಿ ತಗಲಿದರೆ, ದೇವರು ಅದನ್ನು ಅಶುದ್ಧ ಎಂದು ಪರಿಗಣಿಸುವುದರಿಂದ ಅವನಿಗೆ ತಿಳಿಯದೆ ಹೋದರೂ ಅವನು ಅಶುದ್ಧನೂ ಮತ್ತು ದೋಷಿಯೂ ಆಗಿರುವನು.
ಯಾಜಕಕಾಂಡ 5 : 3 (IRVKN)
ಮನುಷ್ಯದೇಹದಿಂದ ಉಂಟಾದ ಯಾವುದಾದರೂ ಒಂದು ಅಶುದ್ಧವಸ್ತು ತಗಲಿದ್ದು ಅವನಿಗೆ ತಿಳಿಯದೆ ಹೋದರೂ ಅದು ಅವನಿಗೆ ತಿಳಿದುಬಂದಾಗ ಅವನು * 12-14 ನೋಡಿರಿ ದೋಷಿಯಾಗುವನು.
ಯಾಜಕಕಾಂಡ 5 : 4 (IRVKN)
ಯಾವನಾದರೂ ಆಲೋಚಿಸದೆ ಮೇಲಿಗಾಗಲಿ ಅಥವಾ ಕೇಡಿಗಾಗಲಿ ಯಾವುದಾದರೂ ಆಣೆಯಿಟ್ಟುಕೊಂಡರೆ, ಅದು ಅವನಿಗೆ ತಿಳಿಯದೆ ಹೋದರೂ ತಿಳಿದುಬಂದಾಗ ಅವನು ಇದರಿಂದಲೂ ದೋಷಿಯಾಗುವನು.
ಯಾಜಕಕಾಂಡ 5 : 5 (IRVKN)
ಅವನು ಈ ವಿಷಯಗಳಲ್ಲಿ ಯಾವುದಾದರೂ ಒಂದರಲ್ಲಿ ದೋಷಿಯಾದಾಗ ತಾನು ಮಾಡಿದ ತಪ್ಪನ್ನು ಒಪ್ಪಿಕೊಳ್ಳಬೇಕು.
ಯಾಜಕಕಾಂಡ 5 : 6 (IRVKN)
ಅವನು ದೋಷದ ಪ್ರಾಯಶ್ಚಿತ್ತಕ್ಕಾಗಿ ಹೆಣ್ಣು ಕುರಿಯನ್ನಾಗಲಿ ಅಥವಾ ಹೆಣ್ಣು ಮೇಕೆಯನ್ನಾಗಲಿ ಯೆಹೋವನಿಗೆ ಸಮರ್ಪಿಸಬೇಕು. ಯಾಜಕನು ಅವನಿಗೋಸ್ಕರ ದೋಷಪರಿಹಾರ ಮಾಡುವನು.
ಯಾಜಕಕಾಂಡ 5 : 7 (IRVKN)
“ ‘ಕುರಿಯನ್ನು ಕೊಡುವುದಕ್ಕೆ ಅವನಿಗೆ ಗತಿಯಿಲ್ಲದ ಪಕ್ಷದಲ್ಲಿ ದೋಷದ ಪ್ರಾಯಶ್ಚಿತ್ತಕ್ಕಾಗಿ ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ತೆಗೆದುಕೊಂಡು ಬಂದು, ಒಂದನ್ನು ದೋಷಪರಿಹಾರಕ ಯಜ್ಞವಾಗಿ ಮತ್ತೊಂದನ್ನು ಸರ್ವಾಂಗಹೋಮವಾಗಿ ಯೆಹೋವನಿಗೆ ಸಮರ್ಪಿಸಬೇಕು.
ಯಾಜಕಕಾಂಡ 5 : 8 (IRVKN)
ಅವನು ಅವುಗಳನ್ನು ಯಾಜಕನ ಬಳಿಗೆ ತಂದಾಗ ಯಾಜಕನು ಮೊದಲು ದೋಷಪರಿಹಾರಾರ್ಥವಾದದ್ದನ್ನು ಸಮರ್ಪಿಸಬೇಕು. ಅವನು ಅದರ ಕುತ್ತಿಗೆ ಮುರಿಯಬೇಕು; ಆದರೆ ತಲೆಯನ್ನು ಪೂರ್ಣವಾಗಿ ತೆಗೆದುಬಿಡಬಾರದು.
ಯಾಜಕಕಾಂಡ 5 : 9 (IRVKN)
ಆಗ ಅವನು ದೋಷಪರಿಹಾರಾರ್ಥವಾದ ಆ ಪಕ್ಷಿಯ ರಕ್ತದಲ್ಲಿ ಸ್ವಲ್ಪವನ್ನು ಯಜ್ಞವೇದಿಯ ಪಕ್ಕಕ್ಕೆ ಚಿಮುಕಿಸಿ ಉಳಿದ ರಕ್ತವನ್ನು ಯಜ್ಞವೇದಿಯ ಬುಡದಲ್ಲಿ ಸುರಿಯಬೇಕು. ಅದು ದೋಷಪರಿಹಾರಕ ಯಜ್ಞ.
ಯಾಜಕಕಾಂಡ 5 : 10 (IRVKN)
ಅವನು ಎರಡನೆಯ ಪಕ್ಷಿಯನ್ನು ನಿಯಮಗಳಿಗೆ ಅನುಸಾರವಾಗಿ ಅದೇ ರೀತಿಯಲ್ಲಿ ಸರ್ವಾಂಗಹೋಮ ಮಾಡಬೇಕು. ಅವನ ತಪ್ಪಿನ ನಿಮಿತ್ತ ಯಾಜಕನು ಹೀಗೆ ದೋಷಪರಿಹಾರವನ್ನು ಮಾಡಿದಾಗ ಅವನಿಗೆ ಕ್ಷಮಾಪಣೆಯಾಗುವುದು.
ಯಾಜಕಕಾಂಡ 5 : 11 (IRVKN)
“ ‘ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ಕೊಡುವುದಕ್ಕೂ ಗತಿಯಿಲ್ಲದೆ ಹೋದರೆ, ಅವನು ದೋಷಪರಿಹಾರಕ್ಕಾಗಿ ಒಂದು ಕಿಲೋಗ್ರಾಂ. ಮೂರು ಸೇರು ಗೋದಿಹಿಟ್ಟನ್ನು ತರಬೇಕು. ಆ ಹೋಮದ್ರವ್ಯವು ದೋಷಪರಿಹಾರಾರ್ಥವಾಗಿ ಇರುವುದರಿಂದ ಅದರ ಮೇಲೆ ಎಣ್ಣೆಯನ್ನು ಹೊಯ್ಯಬಾರದು ಅಥವಾ ಧೂಪವನ್ನು ಇಡಬಾರದು.
ಯಾಜಕಕಾಂಡ 5 : 12 (IRVKN)
ಅವನು ಯಾಜಕನ ಬಳಿಗೆ ಅದನ್ನು ತಂದನಂತರ ಅದು ದೈವಾರ್ಪಿತವೆಂದು ಸೂಚಿಸುವುದಕ್ಕಾಗಿ ಯಾಜಕನು ಅದರಲ್ಲಿ ಒಂದು ಹಿಡಿಯನ್ನು ತೆಗೆದುಕೊಂಡು ಯೆಹೋವನಿಗೆ ಸಮರ್ಪಿಸಿದ ಹೋಮದ್ರವ್ಯಗಳ ಮೇಲೆ ಯಜ್ಞವೇದಿಯಲ್ಲಿ ಹೋಮಮಾಡಬೇಕು; ಅದು ದೋಷಪರಿಹಾರಕ ಯಜ್ಞ.
ಯಾಜಕಕಾಂಡ 5 : 13 (IRVKN)
ಮೇಲೆ ಕಂಡ ವಿಷಯಗಳಲ್ಲಿ ಯಾವ ವಿಧವಾಗಿ ಅವನು ದೋಷಿಯಾದರೂ, ಯಾಜಕನು ಅವನಿಗೋಸ್ಕರ ಹೀಗೆ ದೋಷಪರಿಹಾರವನ್ನು ಮಾಡಿದನಂತರ ಅವನಿಗೆ ಕ್ಷಮಾಪಣೆಯಾಗುವುದು. ಧಾನ್ಯನೈವೇದ್ಯ ದ್ರವ್ಯದಲ್ಲಿ ಉಳಿದದ್ದು ಹೇಗೆ ಯಾಜಕನಿಗೆ ಸಲ್ಲುತ್ತದೋ ಇದರಲ್ಲಿಯೂ ಉಳಿದದ್ದು ಯಾಜಕನಿಗೆ ಸಲ್ಲಬೇಕು.’ ”
ಯಾಜಕಕಾಂಡ 5 : 14 (IRVKN)
ಪ್ರಾಯಶ್ಚಿತ್ತ ಯಜ್ಞ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ,
ಯಾಜಕಕಾಂಡ 5 : 15 (IRVKN)
“ಯಾವನಾದರೂ ಯೆಹೋವನಿಗೆ ಸಲ್ಲಿಸಬೇಕಾದ ದೇವರ ವಸ್ತುಗಳನ್ನು ಸಮರ್ಪಿಸುವುದರಲ್ಲಿ ಅಜಾಗ್ರತೆಯಿಂದ ದ್ರೋಹಮಾಡಿ ದೋಷಕ್ಕೆ ಒಳಗಾದರೆ ಅವನು ಆ ಅಪರಾಧದ ಪ್ರಾಯಶ್ಚಿತ್ತಕ್ಕಾಗಿ ಪೂರ್ಣಾಂಗವಾದ ಟಗರನ್ನು ಆಡುಕುರಿಗಳ ಹಿಂಡಿನಿಂದ ತೆಗೆದುಕೊಂಡು ಬಂದು ಯೆಹೋವನಿಗೆ ಸಮರ್ಪಿಸಬೇಕು ಅಥವಾ ದೇವರ ಸೇವೆಗೆ ನೇಮಕವಾದ ಎರಡು ಬೆಳ್ಳಿ ನಾಣ್ಯ ಅಥವಾ ಹೆಚ್ಚು ಬೆಲೆ ಬಾಳುವ ಟಗರನ್ನು ಹಿಂಡಿನಿಂದ ತಂದು ಅರ್ಪಿಸಬೇಕು.
ಯಾಜಕಕಾಂಡ 5 : 16 (IRVKN)
ಅವನು ತಾನು ಅನ್ಯಾಯವಾಗಿ ಇಟ್ಟುಕೊಂಡಿರುವ ದೇವರ ಪವಿತ್ರ ವಸ್ತುಗಳನ್ನು ಮಾತ್ರವಲ್ಲದೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಯಾಜಕನಿಗೆ ತಂದುಕೊಡಬೇಕು. ಅವನು ಪ್ರಾಯಶ್ಚಿತ್ತಕ್ಕಾಗಿ ತಂದ ಟಗರಿನಿಂದ ಯಾಜಕನು ಅವನಿಗೋಸ್ಕರ ದೋಷಪರಿಹಾರ ಮಾಡಿದಾಗ ಅವನಿಗೆ ಕ್ಷಮಾಪಣೆಯಾಗುವುದು.
ಯಾಜಕಕಾಂಡ 5 : 17 (IRVKN)
“ಯಾವನಾದರೂ ಯೆಹೋವನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದನ್ನಾದರೂ ಮಾಡಿ ದೋಷಕ್ಕೆ ಒಳಗಾದರೆ, ಅದು ಅವನಿಗೆ ತಿಳಿಯದೆ ಹೋದರೂ ಅವನು ಅದರಿಂದ ಅಪರಾಧಿಯಾಗಿ ತನ್ನ ಪಾಪಫಲವನ್ನು ಅನುಭವಿಸಬೇಕು.
ಯಾಜಕಕಾಂಡ 5 : 18 (IRVKN)
ಅವನು ಪ್ರಾಯಶ್ಚಿತ್ತಕ್ಕಾಗಿ ಹಿಂಡಿನಿಂದ ಯೋಗ್ಯವಾಗಿ ತೋರುವ ಪೂರ್ಣಾಂಗವಾದ ಟಗರನ್ನು ಯಾಜಕನ ಬಳಿಗೆ ತೆಗೆದುಕೊಂಡು ಬರಬೇಕು. ಅವನು ತಿಳಿಯದೆ ಮಾಡಿದ ತಪ್ಪನ್ನು ಪರಿಹರಿಸುವುದಕ್ಕಾಗಿ ಯಾಜಕನು ಅವನಿಗೋಸ್ಕರ ದೋಷಪರಿಹಾರ ಮಾಡಬೇಕು; ಆಗ ಅವನಿಗೆ ಕ್ಷಮಾಪಣೆಯಾಗುವುದು.
ಯಾಜಕಕಾಂಡ 5 : 19 (IRVKN)
ಅವನು ಅಪರಾಧಿಯಾದುದರಿಂದ ಯೆಹೋವನ ಸನ್ನಿಧಿಯಲ್ಲಿ ಈ ಪ್ರಾಯಶ್ಚಿತ್ತಯಜ್ಞವನ್ನು ಮಾಡಬೇಕು.”

1 2 3 4 5 6 7 8 9 10 11 12 13 14 15 16 17 18 19