ಯಾಜಕಕಾಂಡ 15 : 1 (IRVKN)
ಜನನೇಂದ್ರಿಯದ ಸ್ರಾವದಿಂದುಂಟಾಗುವ ಅಶುದ್ಧತೆ ಯೆಹೋವನು ಮೋಶೆ ಮತ್ತು ಆರೋನರೊಂದಿಗೆ ಮಾತನಾಡಿ,
ಯಾಜಕಕಾಂಡ 15 : 2 (IRVKN)
“ನೀವು ಇಸ್ರಾಯೇಲರಿಗೆ ಆಜ್ಞಾಪಿಸಬೇಕಾದದ್ದೇನೆಂದರೆ, ‘ಒಬ್ಬನ ಜನನೇಂದ್ರಿಯದಲ್ಲಿ ಮೇಹಸ್ರಾವವಾದರೆ ಅದರಿಂದ ಅವನು ಅಶುದ್ಧನಾಗುವನು.
ಯಾಜಕಕಾಂಡ 15 : 3 (IRVKN)
ಆ ಸ್ರಾವವು ಹರಿಯುತ್ತಿದ್ದರು ಅಥವಾ ನಿಂತುಹೋಗಿದ್ದರು ಆ ದೇಹಸ್ಥಿತಿಯಿಂದ ಅವನು ಅಶುದ್ಧನು.
ಯಾಜಕಕಾಂಡ 15 : 4 (IRVKN)
ಅಂಥವನು ಮಲಗಿರುವ ಪ್ರತಿಯೊಂದು ಹಾಸಿಗೆಯೂ ಮತ್ತು ಕುಳಿತಿರುವ ಪ್ರತಿಯೊಂದು ಆಸನವೂ ಅಶುದ್ಧವು.
ಯಾಜಕಕಾಂಡ 15 : 5 (IRVKN)
ಅವನ ಹಾಸಿಗೆಯನ್ನು ಮುಟ್ಟಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು; ಅವನು ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರುವನು.
ಯಾಜಕಕಾಂಡ 15 : 6 (IRVKN)
ಸ್ರಾವವುಳ್ಳವನು ಕುಳಿತಿದ್ದ ಆಸನದ ಮೇಲೆ ಕುಳಿತುಕೊಂಡವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು, ಅವನು ಆ ಸಾಯಂಕಾಲದ ವರೆಗೆ ಅಶುದ್ಧನಾಗಿರುವನು.
ಯಾಜಕಕಾಂಡ 15 : 7 (IRVKN)
ಅವನ ಶರೀರವನ್ನು ಮುಟ್ಟಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು, ಅವನು ಆ ಸಾಯಂಕಾಲದ ವರೆಗೆ ಅಶುದ್ಧನಾಗಿರುವನು.
ಯಾಜಕಕಾಂಡ 15 : 8 (IRVKN)
ಶುದ್ಧನಾಗಿರುವವನ ಮೇಲೆ ಸ್ರಾವವುಳ್ಳವನು ಉಗುಳಿದರೆ ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು; ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.
ಯಾಜಕಕಾಂಡ 15 : 9 (IRVKN)
ಸ್ರಾವವುಳ್ಳವನು ಕುಳಿತ್ತಿದ್ದ ತಡಿಯು ಅಶುದ್ಧವು.
ಯಾಜಕಕಾಂಡ 15 : 10 (IRVKN)
ಅವನ ಕೆಳಗಿದ್ದ ಯಾವ ವಸ್ತುವನ್ನಾದರೂ ಮುಟ್ಟಿದವನು ಸಾಯಂಕಾಲದ ವರೆಗೆ ಅಶುದ್ಧನಾಗಿರುವನು. ಅಂತಹ ವಸ್ತುವನ್ನು ಎತ್ತಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು; ಅವನು ಸಾಯಂಕಾಲದ ವರೆಗೆ ಅಶುದ್ಧನಾಗಿರುವನು.
ಯಾಜಕಕಾಂಡ 15 : 11 (IRVKN)
ಸ್ರಾವವುಳ್ಳವನು ಕೈಗಳನ್ನು ತೊಳೆದುಕೊಳ್ಳದೆ ಯಾವನನ್ನು ಮುಟ್ಟಿದರೂ ಆ ಮನುಷ್ಯನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು, ಅವನು ಸಾಯಂಕಾಲದ ವರೆಗೆ ಅಶುದ್ಧನಾಗಿರುವನು.
ಯಾಜಕಕಾಂಡ 15 : 12 (IRVKN)
ಸ್ರಾವವುಳ್ಳವನು ಮುಟ್ಟಿದ ಮಣ್ಣಿನ ಪಾತ್ರೆಯನ್ನು ಒಡೆದುಬಿಡಬೇಕು. ಅವನು ಮರದ ಪಾತ್ರೆಯನ್ನು ಮುಟ್ಟಿದರೆ ಅದನ್ನು ನೀರಿನಿಂದ ತೊಳೆಯಬೇಕು.
ಯಾಜಕಕಾಂಡ 15 : 13 (IRVKN)
“ ‘ಸ್ರಾವವುಳ್ಳವನ ಸ್ರಾವವು ನಿಂತು ವಾಸಿಯಾದಾಗ, ಅವನು ಶುದ್ಧಮಾಡಿಸಿಕೊಳ್ಳುವುದಕ್ಕೆ ಆ ದಿನದಿಂದ ಏಳು ದಿನಗಳನ್ನು ಲೆಕ್ಕಮಾಡಿ, ತನ್ನ ಬಟ್ಟೆಗಳನ್ನು ಒಗೆದುಕೊಂಡು, ಹರಿಯುವ ನೀರಿನಿಂದ ತನ್ನ ಶರೀರವನ್ನು ತೊಳೆದುಕೊಂಡು ಶುದ್ಧನಾಗುವನು.
ಯಾಜಕಕಾಂಡ 15 : 14 (IRVKN)
ಎಂಟನೆಯ ದಿನದಲ್ಲಿ ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ತೆಗೆದುಕೊಂಡು ದೇವದರ್ಶನದ ಗುಡಾರದ ಬಾಗಿಲಿಗೆ ಯೆಹೋವನ ಸನ್ನಿಧಿಗೆ ಬಂದು ಯಾಜಕನಿಗೆ ಒಪ್ಪಿಸಬೇಕು.
ಯಾಜಕಕಾಂಡ 15 : 15 (IRVKN)
ಯಾಜಕನು ದೋಷಪರಿಹಾರಕ ಯಜ್ಞಕ್ಕಾಗಿ ಒಂದನ್ನು ಮತ್ತು ಸರ್ವಾಂಗಹೋಮಕ್ಕಾಗಿ ಇನ್ನೊಂದನ್ನು ಸಮರ್ಪಿಸಬೇಕು. ಹೀಗೆ ಯಾಜಕನು ಅವನ ಸ್ರಾವದ ವಿಷಯದಲ್ಲಿ ಯೆಹೋವನ ಸನ್ನಿಧಿಯಲ್ಲಿ ಅವನಿಗಾಗಿ ದೋಷಪರಿಹಾರ ಮಾಡುವನು.
ಯಾಜಕಕಾಂಡ 15 : 16 (IRVKN)
“ ‘ಒಬ್ಬನಿಗೆ ವೀರ್ಯಸ್ಖಲನವಾದರೆ ಅವನು ಸರ್ವಾಂಗ ಸ್ನಾನಮಾಡಬೇಕು, ಅವನು ಆ ಸಾಯಂಕಾಲದವರೆಗೆ ಅಶುದ್ಧನಾಗಿರುವನು.
ಯಾಜಕಕಾಂಡ 15 : 17 (IRVKN)
ಯಾವ ಬಟ್ಟೆಯ ಮೇಲಾಗಲಿ ಅಥವಾ ತೊಗಲಿನ ಮೇಲಾಗಲಿ ವೀರ್ಯವು ಬಿದ್ದರೆ ಅದನ್ನು ನೀರಿನಿಂದ ತೊಳೆಯಬೇಕು, ಅದು ಸಾಯಂಕಾಲದ ವರೆಗೆ ಅಶುದ್ಧವಾಗಿರುವುದು.
ಯಾಜಕಕಾಂಡ 15 : 18 (IRVKN)
ಪುರುಷನಿಗೆ ಸ್ತ್ರೀಸಂಗದಿಂದ ವೀರ್ಯಸ್ಖಲನವಾದರೆ ಅವರಿಬ್ಬರೂ ಸ್ನಾನಮಾಡಿಕೊಳ್ಳಬೇಕು; ಅವರು ಸಾಯಂಕಾಲದ ವರೆಗೆ ಅಶುದ್ಧರಾಗಿರುವರು.
ಯಾಜಕಕಾಂಡ 15 : 19 (IRVKN)
“ ‘ಸ್ತ್ರೀಗೆ ರಕ್ತಸ್ರಾವವಾದರೆ ಅವಳು ಏಳು ದಿನಗಳ ತನಕ ಪ್ರತ್ಯೇಕವಾಗಿರಬೇಕು. ಅವಳನ್ನು ಮುಟ್ಟಿದವರು ಆ ದಿನದ ಸಾಯಂಕಾಲದ ವರೆಗೆ ಅಶುದ್ಧರಾಗಿರುವರು.
ಯಾಜಕಕಾಂಡ 15 : 20 (IRVKN)
ಅವಳು ಮುಟ್ಟಾಗಿರುವಾಗ ಯಾವುದರ ಮೇಲೆ ಮಲಗಿದರು ಅಥವಾ ಕುಳಿತುಕೊಂಡರು ಅದು ಅಶುದ್ಧವಾಗಿರುವುದು.
ಯಾಜಕಕಾಂಡ 15 : 21 (IRVKN)
ಅವಳ ಹಾಸಿಗೆಯನ್ನು ಮುಟ್ಟಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು; ಅವನು ಸಾಯಂಕಾಲದ ವರೆಗೆ ಅಶುದ್ಧನಾಗಿರುವನು.
ಯಾಜಕಕಾಂಡ 15 : 22 (IRVKN)
ಅವಳು ಯಾವುದರ ಮೇಲೆ ಕುಳಿತ್ತಿದ್ದಳೋ ಅದನ್ನು ಮುಟ್ಟಿದವರು ಅವರ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು; ಅವರು ಸಾಯಂಕಾಲದ ವರೆಗೆ ಅಶುದ್ಧರಾಗಿರುವರು.
ಯಾಜಕಕಾಂಡ 15 : 23 (IRVKN)
ಅವಳು ಮಲಗಿದ್ದ ಹಾಸಿಗೆಯ ಮೇಲಾಗಲಿ ಅಥವಾ ಕುಳಿತ್ತಿದ್ದ ಸ್ಥಳದ ಮೇಲಾಗಲಿ ಇದ್ದ ಯಾವುದನ್ನಾದರೂ ಮುಟ್ಟಿದವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.
ಯಾಜಕಕಾಂಡ 15 : 24 (IRVKN)
ಪುರುಷನು ಒಂದು ವೇಳೆ ಅಂಥವಳೊಡನೆ ಸಂಗಮಿಸಿದರೆ, ಅವಳ ಋತುಸ್ರಾವ ಅವನಿಗೆ ತಗುಲಿದರೆ, ಅವನು ಏಳು ದಿನಗಳ ತನಕ ಅಶುದ್ಧನಾಗಿರುವನು. ಅಷ್ಟರಲ್ಲಿ ಅವನು ಯಾವ ಹಾಸಿಗೆಯ ಮೇಲೆ ಮಲಗಿಕೊಂಡರೂ ಅದು ಅಶುದ್ಧವಾಗಿರುವುದು.
ಯಾಜಕಕಾಂಡ 15 : 25 (IRVKN)
“ ‘ಸ್ತ್ರೀಗೆ ಮುಟ್ಟಿನ ಕಾಲದಲ್ಲಿ ಮಾತ್ರವಲ್ಲದೆ ಬೇರೆ ದಿನಗಳಲ್ಲಿಯೂ ರಕ್ತಸ್ರಾವವಾದರೆ, ಇಲ್ಲವೆ ಮುಟ್ಟಿನ ಕಾಲಕ್ಕಿಂತ ಹೆಚ್ಚು ದಿನಗಳು ರಕ್ತಸ್ರಾವವಾದರೆ ಅವಳು ತಿಂಗಳಿನ ಮುಟ್ಟಿನಿಂದ ಹೇಗೆ ಅಶುದ್ಧಳೋ ಹಾಗೆಯೇ ಆ ಸ್ರಾವವಾಗುವ ದಿನಗಳಲ್ಲೆಲ್ಲಾ ಅಶುದ್ಧಳಾಗಿರುವಳು.
ಯಾಜಕಕಾಂಡ 15 : 26 (IRVKN)
ಆ ಸ್ರಾವವಿರುವ ತನಕ ಅವಳು ಯಾವ ಹಾಸಿಗೆಯ ಮೇಲೆ ಮಲಗಿದರೂ ಅದು ಮುಟ್ಟಿನ ಕಾಲದಲ್ಲಿ ಮಲಗಿದ ಹಾಸಿಗೆಯಂತೆಯೇ ಅಶುದ್ಧವಾಗುವುದು. ಅವಳು ಯಾವುದರ ಮೇಲೆ ಕುಳಿತುಕೊಂಡರೂ ಅದು ಮುಟ್ಟಿನ ಕಾಲದಲ್ಲಿ ಕುಳಿತುಕೊಂಡ ವಸ್ತುವಿನಂತೆ ಅಶುದ್ಧವಾಗಿರುವುದು.
ಯಾಜಕಕಾಂಡ 15 : 27 (IRVKN)
ಆ ವಸ್ತುಗಳನ್ನು ಮುಟ್ಟಿದವನು ಅಶುದ್ಧನಾದ್ದರಿಂದ ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು; ಅವನು ಸಾಯಂಕಾಲದ ವರೆಗೆ ಅಶುದ್ಧನಾಗಿರುವನು.
ಯಾಜಕಕಾಂಡ 15 : 28 (IRVKN)
ಅವಳಿಗೆ ರಕ್ತಸ್ರಾವ ನಿಂತ ದಿನದಿಂದ ಅವಳು ಏಳು ದಿನಗಳನ್ನು ಲೆಕ್ಕ ಹಾಕಿಕೊಂಡ ತರುವಾಯ ಶುದ್ಧಳಾಗುವಳು.
ಯಾಜಕಕಾಂಡ 15 : 29 (IRVKN)
ಎಂಟನೆಯ ದಿನದಲ್ಲಿ ಅವಳು ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ದೇವದರ್ಶನದ ಗುಡಾರದ ಬಾಗಿಲಿಗೆ ಯಾಜಕನ ಬಳಿಗೆ ತರಬೇಕು.
ಯಾಜಕಕಾಂಡ 15 : 30 (IRVKN)
ಯಾಜಕನು ದೋಷಪರಿಹಾರಕ ಯಜ್ಞಕ್ಕಾಗಿ ಒಂದನ್ನು ಮತ್ತು ಸರ್ವಾಂಗಹೋಮಕ್ಕಾಗಿ ಇನ್ನೊಂದನ್ನು ಸಮರ್ಪಿಸಬೇಕು. ಹೀಗೆ ಯಾಜಕನು ಅವಳ ಸ್ರಾವದಿಂದುಂಟಾದ ಅಶುದ್ಧತೆಯ ವಿಷಯವಾಗಿ ಯೆಹೋವನ ಸನ್ನಿಧಿಯಲ್ಲಿ ಅವಳಿಗೋಸ್ಕರ ದೋಷಪರಿಹಾರ ಮಾಡುವನು.
ಯಾಜಕಕಾಂಡ 15 : 31 (IRVKN)
ಯಾಜಕಕಾಂಡ 15 : 32 (IRVKN)
“ ‘ಇಸ್ರಾಯೇಲರು ಅಶುದ್ಧತೆಗೆ ದೂರವಾಗಿರುವಂತೆ ನೀವು ಅವರನ್ನು ಈ ರೀತಿಯಾಗಿ ಕಾಪಾಡಬೇಕು. ಅವರು ಅಪವಿತ್ರರಾಗಿದ್ದು ತಮ್ಮ ಮಧ್ಯದಲ್ಲಿರುವ ನನ್ನ ಗುಡಾರವನ್ನು ಹೊಲೆಮಾಡಿದರೆ ನಾಶವಾಗುವರು. “ ‘ಮೇಹಸ್ರಾವವುಳ್ಳವನು, ವೀರ್ಯಸ್ಖಲನದಿಂದ ಅಶುದ್ಧನಾದವನು,
ಯಾಜಕಕಾಂಡ 15 : 33 (IRVKN)
ಮುಟ್ಟಾದ ಸ್ತ್ರೀಯು, ಸ್ರಾವವುಂಟಾಗುವ ಸ್ತ್ರೀ ಮತ್ತು ಪುರುಷರು, ಅಶುದ್ಧಳಾದ ಸ್ತ್ರೀಯನ್ನು ಸಂಗಮಿಸಿದವನು ಇವರ ವಿಷಯವಾಗಿ ಇದೇ ನಿಯಮ’ ” ಎಂದು ಹೇಳಿದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33