ಪ್ರಲಾಪಗಳು 5 : 1 (IRVKN)
ದಯೆತೋರೆಂದು ಯೆಹೋವನಲ್ಲಿ ಪ್ರಾರ್ಥನೆ ಯೆಹೋವನೇ, ನಮಗಾದ ದುರ್ಗತಿಯನ್ನು ನೆನಪಿಗೆ ತಂದುಕೋ; ನಾವು ಗುರಿಯಾಗಿರುವ ಅವಮಾನವನ್ನು ದೃಷ್ಟಿಸಿ ನೋಡು.
ಪ್ರಲಾಪಗಳು 5 : 2 (IRVKN)
ನಮ್ಮ ಸ್ವತ್ತು ಪರರ ಪಾಲಾಗಿದೆ, ನಮ್ಮ ಮನೆಗಳು ಪರರ ಕೈವಶವಾಗಿವೆ.
ಪ್ರಲಾಪಗಳು 5 : 3 (IRVKN)
ನಾವು ತಂದೆಯಿಲ್ಲದ ಅನಾಥರು, ನಮ್ಮ ತಾಯಂದಿರು ವಿಧವೆಯರಾಗಿದ್ದಾರೆ.
ಪ್ರಲಾಪಗಳು 5 : 4 (IRVKN)
ನೀರು ನಮ್ಮದಾದರೂ ಕೊಂಡುಕೊಂಡು ಕುಡಿಯುತ್ತೇವೆ; ಸೌದೆ ಸ್ವಂತವಾದರೂ ಕ್ರಯಕ್ಕೆ ತೆಗೆದುಕೊಳ್ಳುತ್ತೇವೆ.
ಪ್ರಲಾಪಗಳು 5 : 5 (IRVKN)
ನಮ್ಮನ್ನು ಹಿಂದಟ್ಟುವವರು ನಮ್ಮ ಕುತ್ತಿಗೆಯನ್ನು ಹಿಡಿದಿದ್ದಾರೆ, ಬಳಲಿಹೋಗಿದ್ದೇವೆ, ಯಾವ ವಿಶ್ರಾಂತಿಯೂ ಇಲ್ಲ.
ಪ್ರಲಾಪಗಳು 5 : 6 (IRVKN)
ಹೇಗಾದರೂ ಹೊಟ್ಟೆ ತುಂಬಾ ಅನ್ನ ತಿನ್ನೋಣ ಎಂದು ಐಗುಪ್ತ್ಯರಿಗೂ ಮತ್ತು ಅಶ್ಶೂರ್ಯರಿಗೂ ಅಧೀನರಾದೆವು.
ಪ್ರಲಾಪಗಳು 5 : 7 (IRVKN)
ನಮ್ಮ ಪೂರ್ವಿಕರು ಪಾಪಮಾಡಿ ಇಲ್ಲದೆ ಹೋದರು; ಅವರ ದೋಷಫಲವನ್ನು ನಾವು ಅನುಭವಿಸಬೇಕಾಯಿತು.
ಪ್ರಲಾಪಗಳು 5 : 8 (IRVKN)
ಗುಲಾಮರಾಗಿದ್ದವರು ನಮಗೆ ದಣಿಗಳಾದರು, ಅವರ ಕೈಯಿಂದ ನಮ್ಮನ್ನು ಬಿಡಿಸುವವರೇ ಇಲ್ಲ.
ಪ್ರಲಾಪಗಳು 5 : 9 (IRVKN)
ಆಹಾರಕ್ಕೋಸ್ಕರ ಬೆಳೆಯನ್ನು ಕೊಯ್ಯುತ್ತಿರುವಾಗ ಅರಣ್ಯದವರ ಕತ್ತಿಯಿಂದ ಪ್ರಾಣಾಪಾಯಕ್ಕೆ ಗುರಿಯಾಗಿದ್ದೇವೆ.
ಪ್ರಲಾಪಗಳು 5 : 10 (IRVKN)
ಕ್ಷಾಮಕಾಲದ ಭೀಕರ ಜ್ವರದಿಂದ ನಮ್ಮ ಚರ್ಮವು ಒಲೆಯಂತೆ ಸುಡುತ್ತದೆ.
ಪ್ರಲಾಪಗಳು 5 : 11 (IRVKN)
ಚೀಯೋನಿನ ಸತಿಯರ ಮತ್ತು ಯೆಹೂದದ ಊರುಗಳ ಕನ್ಯೆಯರ ಅತ್ಯಾಚಾರವಾಗುತ್ತಿದೆ.
ಪ್ರಲಾಪಗಳು 5 : 12 (IRVKN)
ರಾಜಪುತ್ರರ ಕೈಗಳನ್ನು ಗಲ್ಲಿಗೆ ನೇತುಹಾಕಿದ್ದಾರೆ; ವೃದ್ಧರು ಮಾನಭಂಗಪಟ್ಟರು.
ಪ್ರಲಾಪಗಳು 5 : 13 (IRVKN)
ಯುವಭಟರಿಗೆ ಬೀಸುವ ಕಲ್ಲನ್ನು ಹೊರುವ ಗತಿ ಬಂತು; ಮಕ್ಕಳು ಸೌದೆಹೊರೆ ಹೊತ್ತು ಮುಗ್ಗರಿಸಬೇಕಾಯಿತು.
ಪ್ರಲಾಪಗಳು 5 : 14 (IRVKN)
ವೃದ್ಧರು ಇನ್ನು ಚಾವಡಿಯಲ್ಲಿ ಸೇರರು, ಯುವಕರು ಇನ್ನು ವಾದ್ಯಬಾರಿಸರು.
ಪ್ರಲಾಪಗಳು 5 : 15 (IRVKN)
ನಮ್ಮ ಹೃದಯಾನಂದವು ತೀರಿತು, ನಮ್ಮ ನಾಟ್ಯ ನಲಿವುಗಳು ದುಃಖವಾಗಿ ಮಾರ್ಪಟ್ಟಿವೆ.
ಪ್ರಲಾಪಗಳು 5 : 16 (IRVKN)
ಕಿರೀಟವು ನಮ್ಮ ತಲೆಯ ಮೇಲಿಂದ ಬಿದ್ದು ಹೋಗಿದೆ, ಅಯ್ಯೋ, ನಮ್ಮ ಗತಿಯನ್ನು ಏನು ಹೇಳೋಣ! ನಾವು ಪಾಪಮಾಡಿದವರೇ ಸರಿ!
ಪ್ರಲಾಪಗಳು 5 : 17 (IRVKN)
ನಮ್ಮ ಹೃದಯವು ಕುಂದಿದೆ ಮತ್ತು ನಮ್ಮ ಕಣ್ಣುಗಳು ಮೊಬ್ಬಾಗಿವೆ.
ಪ್ರಲಾಪಗಳು 5 : 18 (IRVKN)
ಯಾಕೆಂದರೆ ನರಿಗಳು ಹಾಳಾಗಿರುವ ಚೀಯೋನ್ ಪರ್ವತದ ಬಳಿ ಸಂಚರಿಸುತ್ತವೆ.
ಪ್ರಲಾಪಗಳು 5 : 19 (IRVKN)
ಆದರೆ ಯೆಹೋವನೇ, ನೀನು ಶಾಶ್ವತವಾಗಿ ನೆಲೆಗೊಂಡಿದ್ದೀ, ತಲತಲಾಂತರಕ್ಕೂ ನಿನ್ನ ಸಿಂಹಾಸನವು ಸ್ಥಿರವಾಗಿರುವುದು.
ಪ್ರಲಾಪಗಳು 5 : 20 (IRVKN)
ನೀನು ನಮ್ಮನ್ನು ಸಂಪೂರ್ಣವಾಗಿ ಮರೆತಿರುವುದೇಕೆ? ಏಕೆ ನಮ್ಮನ್ನು ಇಷ್ಟುಕಾಲ ಕೈಬಿಟ್ಟಿದ್ದೀ?
ಪ್ರಲಾಪಗಳು 5 : 21 (IRVKN)
ಯೆಹೋವನೇ, ನೀನು ನಮ್ಮ ಮೇಲೆ ಬಲು ಸಿಟ್ಟುಗೊಂಡು ನಮ್ಮನ್ನು ಸಂಪೂರ್ಣವಾಗಿ ತ್ಯಜಿಸಿಬಿಟ್ಟಿದ್ದೀಯೋ?
ಪ್ರಲಾಪಗಳು 5 : 22 (IRVKN)
ಪೂರ್ವಕಾಲದ ಸುಸ್ಥಿತಿಯನ್ನು ನಮಗೆ ಮತ್ತೆ ದಯಪಾಲಿಸು. ನಮ್ಮನ್ನು ನಿನ್ನ ಕಡೆಗೆ ತಿರುಗಿಸು; ನೀನು ತಿರುಗಿಸಿದ ಹಾಗೆ ತಿರುಗುವೆವು;

1 2 3 4 5 6 7 8 9 10 11 12 13 14 15 16 17 18 19 20 21 22