ಪ್ರಲಾಪಗಳು 2 : 1 (IRVKN)
ಯೆರೂಸಲೇಮಿಗೆ ಯೆಹೋವನು ಕೊಟ್ಟ ಶಿಕ್ಷೆ ಅಯ್ಯೋ, ಕರ್ತನು ಕೋಪಗೊಂಡು ಚೀಯೋನ್ ನಗರಿಗೆ ಮೋಡವು ಕವಿಯುವಂತೆ ಮಾಡಿದ್ದಾನಲ್ಲಾ! ಆತನು ತನ್ನ ಸಿಟ್ಟನ್ನು ತೀರಿಸಿಕೊಂಡ ದಿನದಲ್ಲಿ ತನ್ನ ಪಾದಪೀಠವನ್ನು ನೆನಪಿಗೆ ತಾರದೆ ಇಸ್ರಾಯೇಲಿನ ಶಿರೋಮಣಿಯನ್ನು ಆಕಾಶದಿಂದ ಭೂಮಿಗೆ ತಳ್ಳಿಬಿಟ್ಟನು.
ಪ್ರಲಾಪಗಳು 2 : 2 (IRVKN)
ಕರ್ತನು ಕನಿಕರಪಡದೆ ಯಾಕೋಬಿನ ಗೋಮಾಳಗಳನ್ನು ನಾಶಪಡಿಸಿ, ಯೆಹೂದದ ಕೋಟೆಗಳನ್ನು ರೌದ್ರದಿಂದ ಕೆಡವಿ ನೆಲಸಮಮಾಡಿ, ರಾಜ್ಯವನ್ನೂ ಮತ್ತು ಅಲ್ಲಿನ ಸರದಾರರನ್ನೂ ಹೀನಸ್ಥಿತಿಗೆ ತಂದಿದ್ದಾನೆ.
ಪ್ರಲಾಪಗಳು 2 : 3 (IRVKN)
ಆತನು ಶತ್ರುವಿನ ಮೇಲೆತ್ತಿದ ಬಲಗೈಯನ್ನು ಹಿಂದೆಗೆದು, ಇಸ್ರಾಯೇಲಿನ ಕೊಂಬನ್ನು ರೋಷಾಗ್ನಿಯಿಂದ ತೀರಾ ಕಡಿದುಹಾಕಿ, ಸುತ್ತಮುತ್ತಲು ನುಂಗುವ ಅಗ್ನಿಜ್ವಾಲೆಯಂತೆ ಯಾಕೋಬನ್ನು ದಹಿಸಿಬಿಟ್ಟಿದ್ದಾನೆ.
ಪ್ರಲಾಪಗಳು 2 : 4 (IRVKN)
ವೈರಿಯ ಹಾಗೆ ಬಿಲ್ಲನ್ನು ಬೊಗ್ಗಿಸಿ, ವಿರೋಧಿಯಂತೆ ಬಲಗೈಯೆತ್ತಿ ನಿಂತು, ಸುಂದರ ಪ್ರಜೆಯನ್ನೆಲ್ಲಾ ಸಂಹರಿಸಿದ್ದಾನೆ; ಚೀಯೋನ್ ಗುಡಾರದ ಮೇಲೆ ತನ್ನ ರೋಷಾಗ್ನಿಯನ್ನು ಸುರಿಸಿದ್ದಾನೆ.
ಪ್ರಲಾಪಗಳು 2 : 5 (IRVKN)
ಕರ್ತನು ವೈರಿಯಾಗಿ ಇಸ್ರಾಯೇಲನ್ನು ನುಂಗಿದ್ದಾನೆ; ಅದರ ಅರಮನೆಗಳನ್ನೆಲ್ಲಾ ತಿಂದುಬಿಟ್ಟು ಅದರ ಕೋಟೆಕೊತ್ತಲಗಳನ್ನು ನಾಶಮಾಡಿದ್ದಾನೆ; ಯೆಹೂದ ಸೀಮೆಯಲ್ಲಿ ಪ್ರಲಾಪ ಮತ್ತು ಗೋಳಾಟವನ್ನು ಹೆಚ್ಚಿಸಿದ್ದಾನೆ.
ಪ್ರಲಾಪಗಳು 2 : 6 (IRVKN)
ತನ್ನ ಸಾನ್ನಿಧ್ಯದ ಗುಡಾರವನ್ನು ತೋಟದ ಗುಡಿಸಲನ್ನೋ ಎಂಬಂತೆ ಹಾಳುಮಾಡಿ, ತನ್ನ ಉತ್ಸವಸ್ಥಾನವನ್ನು ನಾಶಪಡಿಸಿದ್ದಾನೆ; ಮಹೋತ್ಸವಗಳು ಮತ್ತು ಸಬ್ಬತ್ ದಿನಗಳು ಚೀಯೋನಿನಲ್ಲಿ ಯಾರ ನೆನಪಿಗೂ ಬಾರದಂತೆ ಮಾಡಿ ಯೆಹೋವನು ಅತಿರೋಷಗೊಂಡು ರಾಜನನ್ನೂ ಮತ್ತು ಯಾಜಕರನ್ನೂ ಧಿಕ್ಕರಿಸಿದ್ದಾನೆ.
ಪ್ರಲಾಪಗಳು 2 : 7 (IRVKN)
ಕರ್ತನು ತನ್ನ ಯಜ್ಞವೇದಿಯನ್ನು ತಿರಸ್ಕರಿಸಿ, ತನ್ನ ಪವಿತ್ರಾಲಯಕ್ಕೆ ಅಸಹ್ಯಪಟ್ಟು, ಚೀಯೋನಿನ ಅರಮನೆಗಳ ಗೋಡೆಗಳನ್ನು ಶತ್ರು ವಶಮಾಡಿದ್ದಾನೆ; ಉತ್ಸವದಿನದಲ್ಲಿ ಘೋಷಿಸುವಂತೆ ಶತ್ರುಗಳು ಯೆಹೋವನ ಮಂದಿರದಲ್ಲಿ ಜಯಘೋಷವೆತ್ತಿದ್ದಾರೆ.
ಪ್ರಲಾಪಗಳು 2 : 8 (IRVKN)
ಯೆಹೋವನು ಚೀಯೋನ್ ನಗರಿಯ ಕೋಟೆಯನ್ನು ನಾಶಪಡಿಸಬೇಕೆಂದು ನೂಲನ್ನು ಎಳೆದಿದ್ದಾನೆ; ಹಾಳು ಮಾಡುತ್ತಿರುವ ತನ್ನ ಕೈಯನ್ನು ಹಿಂದೆಗೆಯದೆ ಪೌಳಿಗೋಡೆಯೂ ಮತ್ತು ಕೋಟೆಯೂ ಮೊರೆಯುವಂತೆ ಮಾಡಿದ್ದಾನೆ; ಅವೆರಡೂ ಕುಸಿದುಹೋಗಿವೆ.
ಪ್ರಲಾಪಗಳು 2 : 9 (IRVKN)
ಚೀಯೋನಿನ ಹೆಬ್ಬಾಗಿಲುಗಳು ನೆಲದಲ್ಲಿ ಹೂತುಕೊಂಡಿವೆ; ಅದರ ಅಗುಳಿಗಳನ್ನು ಮುರಿದು ಚೂರು ಚೂರು ಮಾಡಿದ್ದಾನೆ; ಅದರ ಅರಸನೂ ಮತ್ತು ಸರದಾರರೂ ಮೋಶೆಯ ಧರ್ಮೋಪದೇಶವನ್ನು ಬೋಧಿಸದ ಅನ್ಯಜನಾಂಗಗಳೊಳಗೆ ಸೇರಿಕೊಂಡಿದ್ದಾರೆ; ಅದರ ಪ್ರವಾದಿಗಳಿಗೆ ಯೆಹೋವನಿಂದ ಯಾವ ದರ್ಶನವೂ ಇಲ್ಲ.
ಪ್ರಲಾಪಗಳು 2 : 10 (IRVKN)
ಚೀಯೋನ್ ನಗರಿಯ ಹಿರಿಯರು ನೆಲದಲ್ಲಿ ಮೌನವಾಗಿ ಕುಕ್ಕರಿಸಿದ್ದಾರೆ; ತಲೆಯ ಮೇಲೆ ಧೂಳನ್ನು ತೂರಿಕೊಂಡು, ಗೋಣಿ ತಟ್ಟನ್ನು ಸುತ್ತಿಕೊಂಡಿದ್ದಾರೆ; ಯೆರೂಸಲೇಮಿನ ಕನ್ಯೆಯರು ತಲೆಗಳನ್ನು ನೆಲಕ್ಕೆ ಬೊಗ್ಗಿಸಿದ್ದಾರೆ.
ಪ್ರಲಾಪಗಳು 2 : 11 (IRVKN)
ಕಣ್ಣೀರು ಸುರಿಸಿ ಸುರಿಸಿ ನನ್ನ ಕಣ್ಣು ಇಂಗಿ ಹೋಗಿದೆ, ನನ್ನ ಕರುಳು ಕುದಿಯುತ್ತದೆ, ನನ್ನ ಜನವೆಂಬ ಕನ್ಯೆಯು ಹಾಳಾಗಿ ಮಕ್ಕಳುಮರಿಗಳು ಪಟ್ಟಣದ ಚೌಕಗಳಲ್ಲಿ ಮೂರ್ಛೆ ಹೋದುದರಿಂದ ನನ್ನ ಕರುಳು ಕರಗಿದೆ.
ಪ್ರಲಾಪಗಳು 2 : 12 (IRVKN)
ಮಕ್ಕಳು ಗಾಯಪಟ್ಟವರಂತೆ ಪಟ್ಟಣದ ಚೌಕಗಳಲ್ಲಿ ಮೂರ್ಛೆಹೋಗಿ ತಾಯಿಯ ಎದೆಯ ಮೇಲೆ ಬಿದ್ದು, “ಅಮ್ಮಾ ತಿನ್ನಲಿಕ್ಕೆ ಧಾನ್ಯ ಇಲ್ಲವೋ? ಕುಡಿಯಲಿಕ್ಕೆ ದ್ರಾಕ್ಷಿಯರಸ ಇಲ್ಲವೋ?” ಎಂದು ಗೋಳಿಡುತ್ತವೆ.
ಪ್ರಲಾಪಗಳು 2 : 13 (IRVKN)
ಯೆರೂಸಲೇಮ್ ಕನ್ಯೆಯೇ, ನಾನು ನಿನಗೆ ಏನು ಹೇಳಲಿ, ನಿನ್ನನ್ನು ಯಾವುದಕ್ಕೆ ಹೋಲಿಸಲಿ? ಚೀಯೋನ್ ಕನ್ಯೆಯೇ, ನಿನ್ನನ್ನು ಸಂತೈಸಲು ಸಮಾಧಾನಕರ ಮಾತುಗಳನ್ನು ಎಲ್ಲಿಂದ ತರಲಿ? ನಿನ್ನ ನಾಶನವು ಸಾಗರದಷ್ಟು ಅಪಾರ, ನಿನ್ನನ್ನು ಯಾರು ಸ್ವಸ್ಥಮಾಡಬಲ್ಲರು?
ಪ್ರಲಾಪಗಳು 2 : 14 (IRVKN)
ನಿನ್ನ ಪ್ರವಾದಿಗಳು ಕಂಡ ದರ್ಶನ, ಹೇಳಿದ ಪ್ರವಾದನೆಯ ವಾಕ್ಯಗಳು ವ್ಯರ್ಥ, ನಿಸ್ಸಾರ; ಅವರು ನಿನ್ನ ದೋಷವನ್ನು ಬೈಲಿಗೆ ತಾರದ ಕಾರಣ ನಿನ್ನ ದುರವಸ್ಥೆಯು ನೀಗಲಿಲ್ಲ; ನಿನ್ನ ವಿಷಯವಾಗಿ ಅವರಿಗೆ ಕಂಡುಬಂದ ವ್ಯರ್ಥ ದೈವೋಕ್ತಿಗಳು ನೀನು ಗಡೀಪಾರಾಗಿ ಒಯ್ಯಲ್ಪಡುವುದಕ್ಕೆ ಆಸ್ಪದವಾದವು.
ಪ್ರಲಾಪಗಳು 2 : 15 (IRVKN)
ಹಾದುಹೋಗುವವರೆಲ್ಲರೂ ನಿನ್ನನ್ನು ನೋಡಿ ಚಪ್ಪಾಳೆಹೊಡೆಯುತ್ತಾರೆ, ಯೆರೂಸಲೇಮ್ ನಗರಿಯನ್ನು ಕಂಡು, “ಆಹಾ, ಪರಿಪೂರ್ಣಸುಂದರಿ, ಸಮಸ್ತಲೋಕ ಸಂತೋಷಿಣಿ ಎನ್ನಿಸಿಕೊಳ್ಳುತ್ತಿದ್ದ ಪುರಿಯು ಇದೇ ಏನು? ಛೀ ಛೀ” ಎಂದು ತಲೆಯಾಡಿಸುತ್ತಾರೆ.
ಪ್ರಲಾಪಗಳು 2 : 16 (IRVKN)
ನಿನ್ನ ಶತ್ರುಗಳೆಲ್ಲಾ ನಿನ್ನನ್ನು ನೋಡಿ ಬಾಯಿ ವ್ಯಂಗ್ಯವಾದ ನಗುವಿನಿಂದ ಟೀಕಿಸುತ್ತಾರೆ, ಛೀಗುಟ್ಟಿ, ಹಲ್ಲು ಕಡಿಯುತ್ತಾರೆ; ಆಹಾ, ಆಕೆಯನ್ನು ನುಂಗಿಬಿಟ್ಟಿದ್ದೇವೆ, ನಾವು ನಿರೀಕ್ಷಿಸುತ್ತಿದ್ದ ದಿನವು ಇದೇ, ಈಗ ಬಂದೊದಗಿತು, ಅದನ್ನು ಕಣ್ಣಾರೆ ಕಂಡೆವು ಅಂದುಕೊಳ್ಳುತ್ತಾರೆ.
ಪ್ರಲಾಪಗಳು 2 : 17 (IRVKN)
ಯೆಹೋವನು ತನ್ನ ಸಂಕಲ್ಪವನ್ನು ಸಿದ್ಧಿಗೆ ತಂದು ತಾನು ಪುರಾತನಕಾಲದಲ್ಲಿ ನುಡಿದ ಮಾತನ್ನು ಈಡೇರಿಸಿದ್ದಾನೆ; ಆತನು ಕರುಣಿಸದೆ ನಿನ್ನನ್ನು ಕೆಡವಿ, ನಿನ್ನ ವೈರಿಗಳಿಗೆ ಆನಂದವಾಗುವಂತೆ ಮಾಡಿ ನಿನ್ನ ವಿರೋಧಿಗಳ ಕೊಂಬನ್ನು ಎತ್ತಿದ್ದಾನೆ.
ಪ್ರಲಾಪಗಳು 2 : 18 (IRVKN)
ನಿನ್ನ ಜನರು ಕರ್ತನಿಗೆ ಮನಃಪೂರ್ವಕವಾಗಿ ಮೊರೆಯಿಟ್ಟಿದ್ದಾರೆ; “ಚೀಯೋನ್ ನಗರಿಯ ಕೋಟೆಯವರೇ, ನಿಮ್ಮ ಕಣ್ಣೀರು ಹಗಲಿರುಳೂ ತೊರೆಯಂತೆ ಹರಿಯಲಿ, ನಿಮಗೆ ವಿರಾಮವೇ ಬೇಡ, ಅದು ನಿಮ್ಮ ನೇತ್ರದಿಂದ ನಿಲ್ಲದೆ ಸುರಿಯಲಿ;
ಪ್ರಲಾಪಗಳು 2 : 19 (IRVKN)
ರಾತ್ರಿಯ ಒಂದೊಂದು ಜಾವದ ಆರಂಭದಲ್ಲಿ ಎದ್ದೆದ್ದು ಗೋಳಾಡಿರಿ, ನಿಮ್ಮ ಹೃದಯಸಾರವನ್ನು ನೀರನ್ನೋ ಎಂಬಂತೆ ಕರ್ತನ ಸಮ್ಮುಖದಲ್ಲಿ ಹೊಯ್ದು ಬಿಡಿರಿ; ಪ್ರತಿಯೊಂದು ಬೀದಿಯ ಕೊನೆಕೊನೆಯಲ್ಲಿ ಹಸಿವೆಯಿಂದ ಮೂರ್ಛೆಹೋಗಿರುವ ನಿಮ್ಮ ಮಕ್ಕಳ ಪ್ರಾಣವನ್ನು ಉಳಿಸಬೇಕೆಂದು ಕೈಯೆತ್ತಿ ಪ್ರಾರ್ಥಿಸಿರಿ.”
ಪ್ರಲಾಪಗಳು 2 : 20 (IRVKN)
ಯೆಹೋವನೇ, ಕಟಾಕ್ಷಿಸು; ನೀನು ಇಷ್ಟೆಲ್ಲಾ ಮಾಡಿದ್ದು ಯಾರಿಗೆಂಬುವುದನ್ನು ನೋಡು, ಹೆಂಗಸರು ತಮ್ಮ ಗರ್ಭಫಲವನ್ನು, ತಾವು ನಲಿದಾಡಿಸಿದ ಮಕ್ಕಳನ್ನು ತಾವೇ ಕೊಂದು ತಿನ್ನುವುದು ಘೋರವಾದ ಪಾಪವಲ್ಲವೇ! ಯಾಜಕರೂ ಮತ್ತು ಪ್ರವಾದಿಗಳೂ ಕರ್ತನ ಪವಿತ್ರಾಲಯದಲ್ಲಿ ಹತರಾಗಬೇಕೋ?
ಪ್ರಲಾಪಗಳು 2 : 21 (IRVKN)
ಯುವಕರು ಮತ್ತು ವೃದ್ಧರು ಬೀದಿಗಳಲ್ಲಿ ನೆಲದ ಮೇಲೆ ಬಿದ್ದಿರುತ್ತಾರೆ, ನನ್ನ ತರುಣಿಯರು ಹಾಗು ತರುಣರು ಖಡ್ಗದಿಂದ ಹತರಾಗಿದ್ದಾರೆ; ನೀನು ಕೋಪತೀರಿಸಿಕೊಳ್ಳುವ ದಿನದಲ್ಲಿ ಅವರನ್ನು ಕೊಂದುಹಾಕಿದಿ, ಕನಿಕರಿಸದೆ ಸಂಹರಿಸಿದಿ.
ಪ್ರಲಾಪಗಳು 2 : 22 (IRVKN)
ಮಹೋತ್ಸವಕ್ಕೆ ಕರೆಯಿಸಿದಂತೆ ನನ್ನನ್ನು ಹೆದರಿಸುವ ದಿಗಿಲುಗಳನ್ನು* ಅಥವಾ ಶತ್ರುಗಳನ್ನು. ನನ್ನ ಸುತ್ತುಮುತ್ತಲು ಕರೆಯಿಸಿದ್ದೀ; ಯೆಹೋವನು ಕೋಪತೀರಿಸಿಕೊಳ್ಳುವ ದಿನದಲ್ಲಿ ಯಾರೂ ತಪ್ಪಿಸಿಕೊಳ್ಳಲಿಲ್ಲ, ಯಾರೂ ಉಳಿಯಲಿಲ್ಲ; ನಾನು ನಲಿದಾಡಿಸಿ ಸಾಕಿದವರನ್ನು ನನ್ನ ಶತ್ರುವು ಸಂಹರಿಸಿದ್ದಾನೆ.
❮
❯
1
2
3
4
5
6
7
8
9
10
11
12
13
14
15
16
17
18
19
20
21
22