ಪ್ರಲಾಪಗಳು 1 : 1 (IRVKN)
ಯೆರೂಸಲೇಮಿನವರ ದುಃಖ ಅಯ್ಯೋ, ಜನಭರಿತವಾಗಿದ್ದ ನಗರಿಯು ಒಂಟಿಯಾಗಿ ಕುಳಿತುಬಿಟ್ಟಳಲ್ಲಾ! ಜನಾಂಗಗಳಲ್ಲಿ ರತ್ನವಾಗಿದ್ದವಳು ವಿಧವೆಯಾದಳು, ಸಂಸ್ಥಾನಗಳಲ್ಲಿ ಶಿರೋಮಣಿಯಾಗಿದ್ದವಳು ಗುಲಾಮಳಾದಳು.
ಪ್ರಲಾಪಗಳು 1 : 2 (IRVKN)
ರಾತ್ರಿಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಾ ಗೋಳಾಡುವುದರಿಂದ ಕಣ್ಣೀರು ಕೆನ್ನೆಗಳ ಮೇಲೆ ನಿಂತೇ ಇದೆ; ಆಕೆಯ ಬಹುಮಂದಿ ಪ್ರಿಯರಲ್ಲಿ ಯಾರೂ ಸಂತೈಸರು; ಆಕೆಯ ಮಿತ್ರರೆಲ್ಲಾ ದ್ರೋಹಮಾಡಿ ಶತ್ರುಗಳಾಗಿದ್ದಾರೆ.
ಪ್ರಲಾಪಗಳು 1 : 3 (IRVKN)
ಯೆಹೂದವೆಂಬಾಕೆಯು ಘೋರವಾದ ಸೇವೆ ಮತ್ತು ಶ್ರಮೆಗಳಿಂದ ತಪ್ಪಿಸಿಕೊಳ್ಳಬೇಕೆಂದು ವಲಸೆಹೋಗಿದ್ದಾಳೆ; ಮ್ಲೇಚ್ಛರ ಮಧ್ಯದಲ್ಲಿ ನೆಮ್ಮದಿಯಿಲ್ಲದೆ ವಾಸಮಾಡುತ್ತಿದ್ದಾಳೆ; ಆಕೆಯು ಇಕ್ಕಟ್ಟಿಗೆ ಸಿಕ್ಕಿಕೊಂಡಿರುವಾಗಲೇ ಆಕೆಯ ಹಿಂಸಕರೆಲ್ಲಾ ಆಕೆಯನ್ನು ಹಿಂದಟ್ಟಿ ಹಿಡಿದರು.
ಪ್ರಲಾಪಗಳು 1 : 4 (IRVKN)
ಯಾರೂ ಮಹೋತ್ಸವಗಳಿಗೆ ಬಾರದೆ ಇರುವುದರಿಂದ ಚೀಯೋನಿಗೆ ಹೋಗುವ ದಾರಿಗಳು ಬಿಕೋ ಎನ್ನುತ್ತಿವೆ; ಅದರ ಬಾಗಿಲುಗಳೆಲ್ಲಾ ಹಾಳು ಬಿದ್ದಿವೆ, ಅಲ್ಲಿನ ಯಾಜಕರು ನರಳಾಡುತ್ತಾರೆ; ಅಲ್ಲಿನ ಕನ್ಯೆಯರು ವ್ಯಥೆಪಡುತ್ತಾರೆ, ನಗರಿಗೆ ನಗರಿಯೇ ಶೋಕದಿಂದ ತುಂಬಿದೆ.
ಪ್ರಲಾಪಗಳು 1 : 5 (IRVKN)
ಅದರ ಲೆಕ್ಕವಿಲ್ಲದ ದ್ರೋಹಗಳಿಗಾಗಿ ಯೆಹೋವನು ಅದನ್ನು ವ್ಯಥೆಗೊಳಿಸಿದ್ದಾನೆ; ಅದರ ವಿರೋಧಿಗಳು ಅದಕ್ಕೆ ಅಧಿಪತಿಗಳಾಗಿದ್ದಾರೆ, ಅದರ ಶತ್ರುಗಳು ನೆಮ್ಮದಿಯಲ್ಲಿದ್ದಾರೆ; ಅದರ ಎಳೆಕೂಸುಗಳು ವಿರೋಧಿಗಳ ವಶದಲ್ಲಿ ಸೆರೆಹೋಗಿವೆ.
ಪ್ರಲಾಪಗಳು 1 : 6 (IRVKN)
ಚೀಯೋನ್ ನಗರಿಯ ವೈಭವವೆಲ್ಲಾ ಕಳೆದುಹೋಗಿದೆ; ಅಲ್ಲಿನ ಪ್ರಧಾನರು ಮೇವಿಲ್ಲದ ಜಿಂಕೆಗಳಂತೆ ಬಲಗುಂದಿ ಹಿಡಿಯಲು ಬೆನ್ನತ್ತಿದವರಿಗೆ ಬೆನ್ನುಕೊಟ್ಟು ಓಡಿಹೋಗಿದ್ದಾರೆ.
ಪ್ರಲಾಪಗಳು 1 : 7 (IRVKN)
ಯೆರೂಸಲೇಮ್ ಪುರಿಯು ದಿಕ್ಕಾಪಾಲಾಗಿ ಅಲೆದು ಕಷ್ಟಪಡುವಾಗ ಪುರಾತನಕಾಲದಿಂದ ತನಗಿದ್ದ ವೈಭವವನ್ನು ಜ್ಞಾಪಿಸಿಕೊಳ್ಳುತ್ತಾಳೆ. ಆಕೆಗೆ ಯಾರ ಸಹಾಯವೂ ಇಲ್ಲದೆ ಆಕೆಯ ಜನರು ವಿರೋಧಿಯ ಕೈಗೆ ಸಿಕ್ಕಿದಾಗ ಹಾಳುಬಿದ್ದಿರುವ ಆಕೆಯನ್ನು ವೈರಿಗಳು ನೋಡಿ ಹಾಸ್ಯಮಾಡಿದರು.
ಪ್ರಲಾಪಗಳು 1 : 8 (IRVKN)
ಯೆರೂಸಲೇಮು ಪಾಪಮಾಡಿ ಅಶುದ್ಧಳಾಗಿದ್ದಾಳೆ; ಮೊದಲು ಆಕೆಯನ್ನು ಸನ್ಮಾನಿಸುತ್ತಿದ್ದವರು ಈಗ ಆಕೆಯ ಮಾನಭಂಗವನ್ನು ಕಂಡು ಹೀನೈಸುತ್ತಾರೆ; ಆಕೆಯು ಮುಖಮುಚ್ಚಿ ದುಃಖಿಸುತ್ತಾಳೆ.
ಪ್ರಲಾಪಗಳು 1 : 9 (IRVKN)
ಆಕೆಯ ನೆರಿಗೆಯು ಹೊಲಸಾಗಿತ್ತು, ಮುಂದಿನ ಗತಿಯೇನೆಂದು ಮನಸ್ಸಿಗೆ ತರಲಿಲ್ಲ; ಆದಕಾರಣ ವಿಪರೀತ ಹೀನಸ್ಥಿತಿಯಲ್ಲಿ ಬಿದ್ದು ಬಿಟ್ಟಳು; ಸಂತೈಸುವವರೇ ಇಲ್ಲ. “ಯೆಹೋವನೇ, ನನ್ನ ಕಷ್ಟವನ್ನು ಲಕ್ಷಿಸು; ನನ್ನ ಶತ್ರು ಹೆಚ್ಚಳಪಡುತ್ತಾನಲ್ಲಾ” ಎಂದು ಮೊರೆಯಿಡುತ್ತಾಳೆ.
ಪ್ರಲಾಪಗಳು 1 : 10 (IRVKN)
ವಿರೋಧಿಯು ಕೈಚಾಚಿ ಅವಳ ಭೋಗ್ಯವಸ್ತುಗಳನ್ನೆಲ್ಲಾ ಬಾಚಿಬಿಟ್ಟನು; “ಮ್ಲೇಚ್ಛರು ನಿನ್ನ ಸಭೆಗೆ ಸೇರಬಾರದು” ಎಂದು ನೀನು ಆಜ್ಞಾಪಿಸಿದರೂ ಅಂಥವರೇ ತನ್ನಲ್ಲಿನ ಪವಿತ್ರಾಲಯದೊಳಗೆ ಸೇರುವುದನ್ನು ಆಕೆಯು ಕಾಣಬೇಕಾಯಿತು.
ಪ್ರಲಾಪಗಳು 1 : 11 (IRVKN)
ಆಕೆಯ ಜನರೆಲ್ಲಾ ನರಳುತ್ತಾರೆ, ಅವರು ಅನ್ನವನ್ನು ಹುಡುಕಿಕೊಳ್ಳುವ ಗತಿ ಬಂತು, ಪ್ರಾಣಾಧಾರವಾದ ಆಹಾರಕ್ಕಾಗಿ ತಮ್ಮ ಅಮೂಲ್ಯ ವಸ್ತುಗಳನ್ನೂ ಕೊಟ್ಟುಬಿಟ್ಟಿದ್ದಾರೆ, “ಯೆಹೋವನೇ, ನೋಡು, ಕಟಾಕ್ಷಿಸು, ನಾನು ತುಚ್ಛಳಾದೆನಲ್ಲಾ” ಎಂದು ಪ್ರಲಾಪಿಸುತ್ತಾಳೆ.
ಪ್ರಲಾಪಗಳು 1 : 12 (IRVKN)
ಹಾದುಹೋಗುವವರೇ, ನಿಮ್ಮಲ್ಲಿ ಯಾರಿಗೂ ನನ್ನ ಚಿಂತೆ ಇಲ್ಲವೋ? ಯೆಹೋವನು ಅತಿ ರೋಷಗೊಂಡು ನನ್ನನ್ನು ಬಾಧಿಸಿ ನನಗೆ ಉಂಟುಮಾಡಿದ ವ್ಯಥೆಯನ್ನು ನೀವು ನೋಡಿ ಇಂಥಾ ವ್ಯಥೆಯು ಇನ್ನೆಲ್ಲಾದರೂ ಉಂಟೋ ಯೋಚಿಸಿರಿ.
ಪ್ರಲಾಪಗಳು 1 : 13 (IRVKN)
ಆತನು ಮೇಲಣ ಲೋಕದಿಂದ ಬೆಂಕಿಯನ್ನು ಕಳುಹಿಸಿದ್ದಾನೆ, ಅದು ನನ್ನ ಎಲುಬುಗಳನೆಲ್ಲಾ ವ್ಯಾಪಿಸಿದೆ; ನನ್ನ ಕಾಲುಗಳಿಗೆ ಬಲೆಯೊಡ್ಡಿದ್ದಾನೆ, ನನ್ನನ್ನು ಹಿಂದಕ್ಕೆ ತಿರುಗಿಸಿದ್ದಾನೆ, ನಾನು ಹಾಳುಬಿದ್ದು ಸದಾ ಬಳಲುವಂತೆ ಮಾಡಿದ್ದಾನೆ.
ಪ್ರಲಾಪಗಳು 1 : 14 (IRVKN)
ಆತನ ಕೈ, ನನ್ನ ದ್ರೋಹಗಳನ್ನು ನನ್ನ ಮೇಲೆ ನೊಗವು ಇರುವಂತೆ ನನ್ನನ್ನು ಬಿಗಿದಿದೆ. ಆ ದ್ರೋಹಗಳು ಹುರಿಗೊಂಡು ನನ್ನ ಕುತ್ತಿಗೆಯನ್ನು ಸುತ್ತಿಕೊಂಡಿವೆ; ನನ್ನ ಬಲವನ್ನು ಕುಂದಿಸಿದ್ದಾನೆ; ನಾನು ಎದುರಿಸಲಾರದವರ ಕೈಗೆ ಕರ್ತನು ನನ್ನನ್ನು ಸಿಕ್ಕಿಸಿದ್ದಾನೆ.
ಪ್ರಲಾಪಗಳು 1 : 15 (IRVKN)
ಕರ್ತನು ನನ್ನ ಶೂರರನ್ನೆಲ್ಲಾ ನನ್ನ ಕಣ್ಣೆದುರಿಗೆ ಹೊರಳಾಡಿಸಿದ್ದಾನೆ; ನನ್ನ ಯುವಕರನ್ನು ಸದೆಬಡಿದಿದ್ದಾನೆ. ನನ್ನ ಕೇಡಿಗಾಗಿಯೇ ಮಹೋತ್ಸವವನ್ನು ಏರ್ಪಡಿಸಿದ್ದಾನೆ; ಕರ್ತನು ಯೆಹೂದವೆಂಬ ಕನ್ಯೆಯನ್ನು ತೊಟ್ಟಿಯಲ್ಲಿನ ದ್ರಾಕ್ಷಿಯ ಹಾಗೆ ತುಳಿದಿದ್ದಾನೆ.
ಪ್ರಲಾಪಗಳು 1 : 16 (IRVKN)
ಈ ವಿಪತ್ತುಗಳಿಂದ ಗೋಳಾಡುತ್ತಿರುವೆನು, ನನ್ನನ್ನು ಸಂತೈಸಿ ದಣಿವಾರಿಸತಕ್ಕವನು ದೂರವಾಗಿರುವುದರಿಂದ ನನ್ನ ಕಣ್ಣೀರು ಧಾರೆಧಾರೆಯಾಗಿ ಸುರಿಯುವುದು. ಶತ್ರುವು ಗೆದ್ದು ನನ್ನ ಮಕ್ಕಳು ಹಾಳಾದರು.
ಪ್ರಲಾಪಗಳು 1 : 17 (IRVKN)
ಚೀಯೋನ್ ನಗರಿಯು ಕೈಚಾಚಿ ಅಂಗಲಾಚಿದರೂ ಯಾರೂ ಸಂತೈಸರು; ಯಾಕೋಬಿನ ನೆರೆಹೊರೆಯವರು ಅದಕ್ಕೆ ವಿರೋಧಿಗಳಾಗಿರಲಿ ಎಂದು ಯೆಹೋವನು ತೀರ್ಮಾನಿಸಿದ್ದಾನೆ; ಯೆರೂಸಲೇಮು ಅವರ ನಡುವೆ ಹೊಲೆಯಾಗಿ ಬಿದ್ದಿದೆ.
ಪ್ರಲಾಪಗಳು 1 : 18 (IRVKN)
ಯೆಹೋವನು ನೀತಿಸ್ವರೂಪನು, ನಾನಾದರೋ ಆತನ ಆಜ್ಞೆಗಳನ್ನು ಮೀರಿದ ದ್ರೋಹಿ; ಜನಾಂಗಗಳೇ, ನೀವೆಲ್ಲರೂ ಕಿವಿಗೊಡಿರಿ, ನನ್ನ ವ್ಯಥೆಯನ್ನು ನೋಡಿರಿ; ನನ್ನ ಕನ್ಯೆಯರು ಮತ್ತು ಯುವಕರು ಸೆರೆಹೋಗಿದ್ದಾರಲ್ಲಾ!
ಪ್ರಲಾಪಗಳು 1 : 19 (IRVKN)
ನಾನು ಕೂಗಿಕೊಂಡರೂ ನನ್ನ ನಲ್ಲರಿಂದ ನನಗೆ ಮೋಸವಾಯಿತು, ನನ್ನ ಯಾಜಕರೂ ಮತ್ತು ಹಿರಿಯರೂ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದು ಆಹಾರವನ್ನು ಹುಡುಕುವುದರಲ್ಲಿಯೇ ಪಟ್ಟಣದೊಳಗೆ ಪ್ರಾಣಬಿಟ್ಟರು.
ಪ್ರಲಾಪಗಳು 1 : 20 (IRVKN)
ಯೆಹೋವನೇ, ಕಟಾಕ್ಷಿಸು; ನಾನು ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದೇನೆ, ನನ್ನ ಕರುಳು ಕುದಿಯುತ್ತಿದೆ. ನಾನು ಕೇವಲ ದ್ರೋಹಮಾಡಿದ್ದರಿಂದ ನನ್ನ ಹೃದಯವು ನನ್ನೊಳಗೆ ಕುಂದಿಹೋಗಿದೆ; ಮನೆಯ ಹೊರಗೆ ಸಂಹಾರ, ಒಳಗೆ ಪ್ರಾಣಸಂಕಟ.
ಪ್ರಲಾಪಗಳು 1 : 21 (IRVKN)
ಯಾರೂ ನನ್ನನ್ನು ಸಂತೈಸರು; ನನ್ನ ನರಳಾಟದ ಸುದ್ದಿಯು ನನ್ನ ವೈರಿಗಳ ಕಿವಿಗೆ ಬಿದ್ದಿದೆ; ನನ್ನ ಶತ್ರುಗಳೆಲ್ಲಾ ನನಗಾದ ಕೇಡಿನ ಸಮಾಚಾರವನ್ನು ಕೇಳಿ ಅದನ್ನು ಮಾಡಿದವನು ನೀನೇ ಎಂದು ಉಲ್ಲಾಸಪಡುತ್ತಾರೆ. ನೀನು ಮುಂತಿಳಿಸಿದ ದಿನವನ್ನು ಬರಮಾಡುವಾಗ ನನಗಾದ ಗತಿಯು ಅವರಿಗೂ ಆಗಲಿ!
ಪ್ರಲಾಪಗಳು 1 : 22 (IRVKN)
ಅವರು ಮಾಡಿದ ಕೆಡುಕೆಲ್ಲಾ ನಿನ್ನ ಚಿತ್ತಕ್ಕೆ ಮುಟ್ಟಲಿ; ನೀನು ನನ್ನ ಎಲ್ಲಾ ದ್ರೋಹಗಳಿಗೆ ಪ್ರತಿಯಾಗಿ ನನಗೆ ಮಾಡಿದಂತೆ ಅವರಿಗೂ ಮಾಡು; ನನ್ನ ನರಳಾಟವು ಬಹಳವಾಗಿದೆ, ನನ್ನ ಎದೆಯು ಕುಂದಿಹೋಗಿದೆ.
❮
❯
1
2
3
4
5
6
7
8
9
10
11
12
13
14
15
16
17
18
19
20
21
22