ನ್ಯಾಯಸ್ಥಾಪಕರು 21 : 1 (IRVKN)
ಹತರಾಗದೆ ಉಳಿದ ಬೆನ್ಯಾಮೀನ್ಯರಿಗೆ ಹೆಂಡತಿಯರನ್ನು ದೊರಕಿಸಿದ್ದು ಇಸ್ರಾಯೇಲರೆಲ್ಲರೂ ಮಿಚ್ಪೆಯಲ್ಲಿದ್ದಾಗ ತಾವು ಬೆನ್ಯಾಮೀನ್ಯರಿಗೆ ತಮ್ಮ ಹೆಣ್ಣುಗಳನ್ನು ಕೊಡುವುದಿಲ್ಲವೆಂದು ಆಣೆಯಿಟ್ಟಿದ್ದರು.
ನ್ಯಾಯಸ್ಥಾಪಕರು 21 : 2 (IRVKN)
ಅವರು ಬೇತೇಲಿಗೆ ಬಂದು ಸಾಯಂಕಾಲದವರೆಗೆ ದೇವರ ಮುಂದೆ ಕುಳಿತು, ಗಟ್ಟಿಯಾಗಿ ಅಳುತ್ತಾ,
ನ್ಯಾಯಸ್ಥಾಪಕರು 21 : 3 (IRVKN)
“ಯೆಹೋವನೇ, ಇಸ್ರಾಯೇಲ್ಯರ ದೇವರೇ, ನಮ್ಮಲ್ಲಿ ಹೀಗೆ ಯಾಕೆ ಆಯಿತು? ಇಸ್ರಾಯೇಲರ ಒಂದು ಕುಲವು ಹಾಳಾಗಿ ಹೋಯಿತಲ್ಲಾ” ಎಂದು ಕೂಗಿದರು.
ನ್ಯಾಯಸ್ಥಾಪಕರು 21 : 4 (IRVKN)
ಮರುದಿನ ಅವರು ಬೆಳಿಗ್ಗೆ ಎದ್ದು ಯಜ್ಞವೇದಿಯನ್ನು ಕಟ್ಟಿ ಸರ್ವಾಂಗಹೋಮಗಳನ್ನೂ, ಸಮಾಧಾನಯಜ್ಞಗಳನ್ನೂ ಸಮರ್ಪಿಸಿದರು.
ನ್ಯಾಯಸ್ಥಾಪಕರು 21 : 5 (IRVKN)
ಮತ್ತು ಯೆಹೋವನ ಮುಂದೆ ಸಭೆ ಸೇರಿದಾಗ, ಬಾರದೆ ಇದ್ದಂಥ ಇಸ್ರಾಯೇಲರು ಯಾರಾರೆಂದು ವಿಚಾರಮಾಡಿದರು. ಯಾಕೆಂದರೆ ಮಿಚ್ಪೆಯಲ್ಲಿ, “ಯೆಹೋವನ ಸನ್ನಿಧಿಗೆ ಬಾರದವರನ್ನು ಕೊಂದು ಹಾಕುವೆವು” ಎಂದು ಆಣೆಯಿಟ್ಟು ಪ್ರಮಾಣಮಾಡಿದ್ದರು.
ನ್ಯಾಯಸ್ಥಾಪಕರು 21 : 6 (IRVKN)
ಇಸ್ರಾಯೇಲರು ತಮ್ಮ ಬಂಧುಗಳಾದ ಬೆನ್ಯಾಮೀನ್ಯರ ಅವಸ್ಥೆಯನ್ನು ಕಂಡು ದುಃಖದಿಂದ, “ಅಯ್ಯೋ, ಇಸ್ರಾಯೇಲರಾದ ನಮ್ಮಲ್ಲಿ ಒಂದು ಕುಲವು ಕಡಿಮೆಯಾಯಿತಲ್ಲಾ;
ನ್ಯಾಯಸ್ಥಾಪಕರು 21 : 7 (IRVKN)
ಜೀವದಿಂದುಳಿದವರಿಗೆ ಹೆಂಡತಿಯರನ್ನು ದೊರಕಿಸಿಕೊಡುವುದು ಹೇಗೆ? ನಮ್ಮ ಹೆಣ್ಣುಗಳನ್ನು ಅವರಿಗೆ ಕೊಡುವುದಿಲ್ಲವೆಂದು ಯೆಹೋವನ ಹೆಸರಿನಲ್ಲಿ ಆಣೆಯಿಟ್ಟಿದ್ದೇವಲ್ಲಾ” ಎಂದು ಗೋಳಾಡಿದರು.
ನ್ಯಾಯಸ್ಥಾಪಕರು 21 : 8 (IRVKN)
ಮಿಚ್ಪೆಯಲ್ಲಿ ಯೆಹೋವನ ಮುಂದೆ ಸಭೆ ಸೇರಿದಾಗ, ಅದಕ್ಕೆ ಬಾರದಿದ್ದ ಇಸ್ರಾಯೇಲರು ಯಾರಾದರೂ ಇದ್ದಾರೋ ಎಂದು ವಿಚಾರಿಸಿದಾಗ ಯಾಬೇಷ್‍ ಗಿಲ್ಯಾದಿನಿಂದ ಒಬ್ಬನೂ ಬರಲಿಲ್ಲವೆಂದು ಗೊತ್ತಾಯಿತು.
ನ್ಯಾಯಸ್ಥಾಪಕರು 21 : 9 (IRVKN)
ಜನರನ್ನು ಲೆಕ್ಕಿಸಿದಾಗ ಯಾಬೇಷ್ ಗಿಲ್ಯಾದಿನಿಂದ ಯಾರೂ ಬರಲಿಲ್ಲವೆಂಬುದು ದೃಢವಾಯಿತು.
ನ್ಯಾಯಸ್ಥಾಪಕರು 21 : 10 (IRVKN)
ಆಗ ಅವರು ತಮ್ಮಲ್ಲಿಂದ ಹನ್ನೆರಡು ಸಾವಿರ ಮಂದಿ ಪರಾಕ್ರಮಶಾಲಿಗಳನ್ನು ಆರಿಸಿಕೊಂಡು ಅವರಿಗೆ, “ನೀವು ಯಾಬೇಷ್ ಗಿಲ್ಯಾದಿಗೆ ಹೋಗಿ ಎಲ್ಲಾ ನಿವಾಸಿಗಳನ್ನೂ, ಸ್ತ್ರೀಯರನ್ನೂ, ಚಿಕ್ಕ ಮಕ್ಕಳನ್ನೂ ಬಿಡದೆ ಸಂಹರಿಸಬೇಕು;
ನ್ಯಾಯಸ್ಥಾಪಕರು 21 : 11 (IRVKN)
ಹೇಗೂ ಪುರುಷರನ್ನು, ಮದುವೆಯಾದ ಸ್ತ್ರೀಯರನ್ನೂ ನಿರ್ಮೂಲಮಾಡುವುದು ನಿಮ್ಮ ಕೆಲಸ” ಎಂದು ಆಜ್ಞಾಪಿಸಿ ಕಳುಹಿಸಿದರು.
ನ್ಯಾಯಸ್ಥಾಪಕರು 21 : 12 (IRVKN)
ಯಾಬೇಷ್ ಗಿಲ್ಯಾದಿನಲ್ಲಿ ಇನ್ನೂ ಮದುವೆಯಾಗದಿದ್ದ ನಾನೂರು ಮಂದಿ ಯುವತಿಯರಿದ್ದರು. ಪಟ್ಟಣವನ್ನು ಸಂಹರಿಸುವುದಕ್ಕೆ ಹೋದವರು ಇವರನ್ನು ಉಳಿಸಿ, ಕಾನಾನ್ ದೇಶದ ಶೀಲೋವಿನಲ್ಲಿದ್ದ ಪಾಳೆಯಕ್ಕೆ ತೆಗೆದುಕೊಂಡು ಬಂದರು.
ನ್ಯಾಯಸ್ಥಾಪಕರು 21 : 13 (IRVKN)
ಅನಂತರ ಸರ್ವಸಭೆಯವರು ರಿಮ್ಮೋನ್ ಗಿರಿಯಲ್ಲಿದ್ದ ಬೆನ್ಯಾಮೀನ್ಯರ ಬಳಿಗೆ ದೂತರನ್ನು ಕಳುಹಿಸಿ ಅವರಲ್ಲಿ ಸಮಾಧಾನ ವಾಕ್ಯವನ್ನು ಪ್ರಕಟಿಸಲು ಅವರು ತಿರುಗಿ ಬಂದರು.
ನ್ಯಾಯಸ್ಥಾಪಕರು 21 : 14 (IRVKN)
ಇಸ್ರಾಯೇಲರು ತಾವು ಯಾಬೇಷ್ ಗಿಲ್ಯಾದಿನಿಂದ ಉಳಿಸಿ ತಂದ ಕನ್ಯೆಯರನ್ನು ಅವರಿಗೆ ಮದುವೆಮಾಡಿಕೊಟ್ಟರು; ಆದರೂ ಅನೇಕರಿಗೆ ಕನ್ಯೆಯರು ದೊರೆಯಲಿಲ್ಲ.
ನ್ಯಾಯಸ್ಥಾಪಕರು 21 : 15 (IRVKN)
ಯೆಹೋವನು ಇಸ್ರಾಯೇಲಿನ ಕುಲಗಳಲ್ಲಿ ಬೆನ್ಯಾಮೀನರನ್ನು ಬೇರ್ಪಡಿಸಿದ್ದರಿಂದ ಜನರು ಬೆನ್ಯಾಮೀನ್ಯರ ವಿಷಯದಲ್ಲಿ ದುಃಖಪಟ್ಟರು.
ನ್ಯಾಯಸ್ಥಾಪಕರು 21 : 16 (IRVKN)
ಸಭೆಯ ಹಿರಿಯರು, “ಉಳಿದಿರುವ ಬೆನ್ಯಾಮೀನ್ಯರಿಗೋಸ್ಕರ ಹೆಂಡತಿಯರನ್ನು ದೊರಕಿಸಿ ಕೊಡುವುದು ಹೇಗೆ? ಅವರ ಸ್ತ್ರೀಯರೆಲ್ಲಾ ಸಂಹಾರವಾದರಲ್ಲಾ.
ನ್ಯಾಯಸ್ಥಾಪಕರು 21 : 17 (IRVKN)
ಇಸ್ರಾಯೇಲ್ಯರ ಒಂದು ಪೂರ್ಣ ಕುಲವು ಅಳಿದುಹೋಗಬಾರದು; ತಪ್ಪಿಸಿಕೊಂಡು ಉಳಿದಿರುವ ಬೆನ್ಯಾಮೀನರಿಗೆ ಬಾಧ್ಯಸ್ಥರು ಹುಟ್ಟುಬೇಕಲ್ಲಾ.
ನ್ಯಾಯಸ್ಥಾಪಕರು 21 : 18 (IRVKN)
ಬೆನ್ಯಾಮೀನ್ಯರಿಗೆ ತಮ್ಮ ಹೆಣ್ಣುಗಳನ್ನು ಕೊಡುವ ಇಸ್ರಾಯೇಲರು ಶಾಪಗ್ರಸ್ತರಾಗಲಿ ಎಂದು ಆಣೆಯಿಟ್ಟುಕೊಂಡಿದ್ದ ಕಾರಣ ನಾವು ಅವರಿಗೆ ನಮ್ಮ ಹೆಣ್ಣುಗಳನ್ನು ಕೊಡುವುದಕ್ಕಾಗುವುದಿಲ್ಲ” ಎಂದು ಮಾತನಾಡಿಕೊಳ್ಳುತ್ತಿದ್ದರು.
ನ್ಯಾಯಸ್ಥಾಪಕರು 21 : 19 (IRVKN)
ಆಗ ಶೀಲೋವಿನಲ್ಲಿ ಪ್ರತಿವರ್ಷ ಯೆಹೋವನ ಉತ್ಸವ ನಡೆಯುತ್ತದೆಂಬುದು ಅವರ ನೆನಪಿಗೆ ಬಂದಿತು. (ಶೀಲೋ ಎಂಬುದು ಬೇತೇಲಿನ ಉತ್ತರಕ್ಕೂ ಬೇತೇಲಿನಿಂದ ಶೆಕೆಮಿಗೆ ಹೋಗುವ ರಾಜಮಾರ್ಗದ ಪೂರ್ವಕ್ಕೂ, ಲೆಬೋನದ ದಕ್ಷಿಣಕ್ಕೂ ಇರುತ್ತದೆ.)
ನ್ಯಾಯಸ್ಥಾಪಕರು 21 : 20 (IRVKN)
ಆಗ ಅವರು ಬೆನ್ಯಾಮೀನ್ಯರನ್ನು ಕರೆದು ಅವರಿಗೆ, “ಇಗೋ, ನೀವು ದ್ರಾಕ್ಷಿತೋಟಗಳಲ್ಲಿ ಅಡಗಿಕೊಳ್ಳಿರಿ;
ನ್ಯಾಯಸ್ಥಾಪಕರು 21 : 21 (IRVKN)
ಶೀಲೋವಿನ ಕನ್ಯೆಯರು ಹೊರಗೆ ಬಂದು ನಾಟ್ಯವಾಡುವಾಗ, ನೀವು ತೋಟಗಳಿಂದ ಹೊರಗೆ ಬಂದು ಪ್ರತಿಯೊಬ್ಬನು ತನತನಗೆ ಶೀಲೋವಿನ ಕನ್ಯೆಯರಿಂದ ಒಬ್ಬಳನ್ನು ಹೆಂಡತಿಯಾಗಿ ತೆಗೆದುಕೊಂಡು ನಿಮ್ಮ ಸೀಮೆಗೆ ಓಡಿಹೋಗಿರಿ.
ನ್ಯಾಯಸ್ಥಾಪಕರು 21 : 22 (IRVKN)
ಅವರ ತಂದೆಗಳೂ, ಅಣ್ಣತಮ್ಮಂದಿರೂ ನಮ್ಮ ಹತ್ತಿರ ದೂರು ತಂದರೆ ನಾವು ಅವರಿಗೆ, ‘ನಮ್ಮನ್ನು ನೋಡಿ ಅವರಿಗೆ ಕೃಪೆತೋರಿಸಿರಿ; ಯುದ್ಧದಿಂದ ಪ್ರತಿಯೊಬ್ಬನಿಗೆ ಹೆಣ್ಣನ್ನು ದೊರಕಿಸುವುದು ನಮ್ಮಿಂದಾಗಲಿಲ್ಲವಲ್ಲಾ; ಮತ್ತು ನಿಮ್ಮ ಹೆಣ್ಣುಮಕ್ಕಳನ್ನು ನೀವೇ ಕೊಡಲಿಲ್ಲವಾದ್ದರಿಂದ ನೀವು ನಿರಪರಾಧಿಗಳು’ ಎಂದು ಹೇಳಿ ಸಮಾಧಾನಪಡಿಸುವೆವು” ಅಂದರು.
ನ್ಯಾಯಸ್ಥಾಪಕರು 21 : 23 (IRVKN)
ಅದರಂತೆಯೇ ಬೆನ್ಯಾಮೀನ್ಯರು ನೃತ್ಯಮಾಡುತ್ತ ಹೊರಗೆ ಬಂದಿದ್ದ ಕನ್ಯೆಯರಲ್ಲಿ ತಮ್ಮ ಸಂಖ್ಯೆಗೆ ಸರಿಯಾಗುವಷ್ಟು ಮಂದಿಯನ್ನು ಹೆಂಡತಿಯರನ್ನಾಗಿ ಹಿಡಿದುಕೊಂಡು ತಮ್ಮ ಸ್ವಾಧೀನವಾದ ಭೂಮಿಗೆ ಹೋಗಿ ಅಲ್ಲಿ ಪಟ್ಟಣಗಳನ್ನು ಕಟ್ಟಿ ವಾಸಮಾಡಿದರು.
ನ್ಯಾಯಸ್ಥಾಪಕರು 21 : 24 (IRVKN)
ಅನಂತರ ಇಸ್ರಾಯೇಲರು ತಮ್ಮ ತಮ್ಮ ಕುಲಗೋತ್ರಗಳಿಗೆ ಸ್ವತ್ತಾಗಿ ಸಿಕ್ಕಿದ ಪ್ರದೇಶಗಳಿಗೆ ಹಿಂದಿರುಗಿ ಹೋದರು.
ನ್ಯಾಯಸ್ಥಾಪಕರು 21 : 25 (IRVKN)
ಆ ಕಾಲದಲ್ಲಿ ಇಸ್ರಾಯೇಲರೊಳಗೆ ಅರಸನಿರಲಿಲ್ಲ; ಪ್ರತಿಯೊಬ್ಬನೂ ತನ್ನ ಮನಸ್ಸಿಗೆ ಬಂದಂತೆ ನಡೆಯುತ್ತಿದ್ದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25