ಯೆಹೋಶುವ 9 : 1 (IRVKN)
ಗಿಬ್ಯೋನ್ಯರು ಯುಕ್ತಿಯಿಂದ ಉಳಿದದ್ದೂ, ಇಸ್ರಾಯೇಲರಿಗೆ ದಾಸರಾದದ್ದೂ ಯೊರ್ದನ್ ನದಿಯ * ಪಶ್ಚಿಮ ದಿಕ್ಕಿನ. ಆಚೆಗಿರುವ ಬೆಟ್ಟದ ಮೇಲಿನ ಪ್ರದೇಶ, ಕಣಿವೆ ಪ್ರದೇಶ, ಲೆಬನೋನಿನ ಎದುರಿಗಿರುವ ಮಹಾಸಾಗರದ ತೀರಪ್ರದೇಶ ಇವುಗಳಲ್ಲಿ ವಾಸವಾಗಿದ್ದ ಅಮೋರಿಯ, ಹಿತ್ತಿಯ, ಕಾನಾನ್, ಪೆರಿಜ್ಜೀಯ, ಹಿವ್ವಿಯ, ಯೆಬೂಸಿಯ ರಾಜರು ನಡೆದ ಸಂಗತಿಯನ್ನು ಕೇಳಿದರು ಹಾಗೂ
ಯೆಹೋಶುವ 9 : 2 (IRVKN)
ಒಂದೇ ಮನಸ್ಸಿನಿಂದ ಯೆಹೋಶುವನಿಗೂ ಇಸ್ರಾಯೇಲ್ಯರಿಗೂ ವಿರೋಧವಾಗಿ ಯುದ್ಧಮಾಡುವುದಕ್ಕೆ ಕೂಡಿಕೊಂಡರು.
ಯೆಹೋಶುವ 9 : 3 (IRVKN)
ಯೆರಿಕೋವಿನವರನ್ನೂ ಮತ್ತು ಆಯಿ ಎಂಬ ಊರಿನವರನ್ನೂ ಯೆಹೋಶುವನು ಸಂಹರಿಸಿದ ಸುದ್ದಿಯು ಗಿಬ್ಯೋನಿನ ನಿವಾಸಿಗಳಿಗೆ ಮುಟ್ಟಿತು
ಯೆಹೋಶುವ 9 : 4 (IRVKN)
ಅವರು ಒಂದು ಉಪಾಯವನ್ನು ಮಾಡಿದರು. ಅದೇನೆಂದರೆ ಅವರು ತಮ್ಮ ಕತ್ತೆಗಳ ಮೇಲೆ ಹಳೆಯ ಗೋಣಿ ತಟ್ಟುಗಳನ್ನು ಹಾಕಿ, ಅವುಗಳ ಮೇಲೆ ತೇಪೆ ಹಾಕಿದ ದ್ರಾಕ್ಷಾರಸದ ಹಳೆಯ ಬುದ್ದಲಿಗಳನ್ನು ಹೇರಿದರು,
ಯೆಹೋಶುವ 9 : 5 (IRVKN)
ಹರಿದುಹೋಗಿದ್ದ ಹಳೆಯ ಕೆರಗಳನ್ನು ಮೆಟ್ಟಿಕೊಂಡರು. ಹಳೆಯ ಬಟ್ಟೆಗಳನ್ನು ಹಾಕಿಕೊಂಡರು. ಒಣರೊಟ್ಟಿ ಚೂರುಗಳನ್ನು ಬುತ್ತಿಯಾಗಿ ಕಟ್ಟಿಕೊಂಡರು.
ಯೆಹೋಶುವ 9 : 6 (IRVKN)
ತಾವು ರಾಯಭಾರಿಗಳೆಂದು ಗಿಲ್ಗಾಲಿನಲ್ಲಿದ್ದ ಯೆಹೋಶುವನ ಪಾಳೆಯಕ್ಕೆ ಬಂದರು. ಅವನಿಗೂ ಇಸ್ರಾಯೇಲ್ಯರಿಗೂ “ನಾವು ದೂರದೇಶದಿಂದ ಬಂದವರು. ನೀವು ನಮ್ಮ ಸಂಗಡ ಒಂದು ಒಪ್ಪಂದ ಮಾಡಿಕೊಳ್ಳಬೇಕು” ಎಂದು ಕೇಳಿ ಕೊಂಡರು.
ಯೆಹೋಶುವ 9 : 7 (IRVKN)
ಆಗ ಇಸ್ರಾಯೇಲ್ಯರು ಹಿವ್ವಿಯರಾದ ಅವರಿಗೆ “ಬಹುಶಃ ನೀವು ನಮ್ಮ ದೇಶದ ನಿವಾಸಿಗಳೇ ಆಗಿರಬಹುದು. ಹೀಗಿರುವುದರಿಂದ ನಾವು ನಿಮ್ಮ ಸಂಗಡ ಒಪ್ಪಂದ ಮಾಡಿಕೊಳ್ಳುವುದು ಹೇಗೆ?” ಎಂದು ಉತ್ತರಕೊಟ್ಟರು.
ಯೆಹೋಶುವ 9 : 8 (IRVKN)
ಅವರು ಯೆಹೋಶುವನಿಗೆ “ನಾವು ನಿಮ್ಮ ದಾಸರು” ಎಂದರು. ಯೆಹೋಶುವನು ಅವರನ್ನು “ನೀವು ಯಾರು? ಎಲ್ಲಿಯವರು?” ಎಂದು ವಿಚಾರಿಸಿದನು.
ಯೆಹೋಶುವ 9 : 9 (IRVKN)
ಅವರು “ನಿನ್ನ ಸೇವಕರಾದ ನಾವು ನಿಮ್ಮ ದೇವರಾದ ಯೆಹೋವನ ನಾಮ ಮಹತ್ತನ್ನು ಕೇಳಿ ಬಹುದೂರ ದೇಶದಿಂದ ಬಂದಿದ್ದೇವೆ. ನಮ್ಮ ಹಿರಿಯರೂ ದೇಶನಿವಾಸಿಗಳೂ ಯೆಹೋವನು ಐಗುಪ್ತದಲ್ಲಿ ನಡಿಸಿದ ಮಹತ್ಕಾರ್ಯಗಳ ಸುದ್ದಿಯನ್ನು ಕೇಳಿದ್ದಾರೆ.
ಯೆಹೋಶುವ 9 : 10 (IRVKN)
ಹೆಷ್ಬೋನಿನ ಅರಸನಾದ ಸೀಹೋನ್, ಅಷ್ಟರೋತಿನಲ್ಲಿ ವಾಸವಾಗಿದ್ದ ಬಾಷಾನಿನ ಅರಸನಾದ ಓಗ್ ಎಂಬ ಈ ಇಬ್ಬರು ಅಮೋರಿಯರ ಅರಸರಿಗೆ ಯೆಹೋವನು ಮಾಡಿದ್ದೆಲ್ಲವನ್ನೂ ಕೇಳಿದ್ದಾರೆ.
ಯೆಹೋಶುವ 9 : 11 (IRVKN)
‘ನೀವು ಪ್ರಯಾಣಕ್ಕೋಸ್ಕರ ಬುತ್ತೀ ಕಟ್ಟಿಕೊಂಡು ಹೋಗಿ ಇಸ್ರಾಯೇಲ್ಯರನ್ನು ಎದುರುಗೊಂಡು “ನಾವು ನಿಮ್ಮ ಸೇವಕರು”, ನೀವು ನಮ್ಮ ಸಂಗಡ ಒಪ್ಪಂದ ಮಾಡಿಕೊಳ್ಳಬೇಕು ಎಂಬುದಾಗಿ ಅವರನ್ನು ಬೇಡಿಕೊಳ್ಳಿರಿ ಎಂದು ಹೇಳಿ ನಮ್ಮನ್ನು ಕಳುಹಿಸಿದರು.
ಯೆಹೋಶುವ 9 : 12 (IRVKN)
ನಾವು ನಿಮ್ಮನ್ನು ಎದುರುಗೊಳ್ಳುವುದಕ್ಕಾಗಿ ಮನೆಬಿಟ್ಟು ಹೊರಟಾಗ ಪ್ರಯಾಣಕ್ಕೋಸ್ಕರ ತೆಗೆದುಕೊಂಡ ಈ ರೊಟ್ಟಿ ಬಿಸಿಯಾಗಿತ್ತು. ಈಗ ಒಣಗಿ ಚೂರುಚೂರಾಗಿದೆ ನೋಡಿರಿ.
ಯೆಹೋಶುವ 9 : 13 (IRVKN)
ನಾವು ದ್ರಾಕ್ಷಾರಸ ತುಂಬಿಸಿಕೊಂಡಿದ್ದ ಈ ಬುದ್ದಲಿಗಳು ಹೊಸದಾಗಿದ್ದವು; ಈಗ ಹರಿದುಹೋಗಿವೆ. ನಮ್ಮ ಬಟ್ಟೆಬರೆಗಳು ಹಾಗೂ ಕೆರಗಳು ದೀರ್ಘಪ್ರಯಾಣದಿಂದ ಸವೆದುಹೋಗಿವೆ’ ” ಎಂದು ವಿವರಿಸಿದರು.
ಯೆಹೋಶುವ 9 : 14 (IRVKN)
ಆಗ ಇಸ್ರಾಯೇಲ್ಯರು ಅವರ ಬುತ್ತಿಯಲ್ಲಿ ಸ್ವಲ್ಪ ತೆಗೆದುಕೊಂಡರು. ಆದರೆ ಯೆಹೋವನನ್ನು ವಿಚಾರಿಸಲಿಲ್ಲ.
ಯೆಹೋಶುವ 9 : 15 (IRVKN)
ಯೆಹೋಶುವನು ಅವರೊಡನೆ “ನಿಮ್ಮ ಜೀವವನ್ನು ಕಾಪಾಡುತ್ತೇವೆ” ಎಂದು ಶಾಂತಿ ಸಂಧಾನ ಮಾಡಿಕೊಂಡನು. ಸಭೆಯ ನಾಯಕರೂ ಹಾಗೆಯೇ ಪ್ರಮಾಣ ಮಾಡಿದರು. ಜನರ ಪ್ರಧಾನರೂ ಪ್ರಮಾಣಮಾಡಿದರು.
ಯೆಹೋಶುವ 9 : 16 (IRVKN)
ಈ ಒಪ್ಪಂದವಾದ ಮೂರು ದಿನಗಳ ಮೇಲೆ ಅವರು ತಮ್ಮ ನೆರೆಯವರೆಂದು ತಮ್ಮ ಮಧ್ಯದಲ್ಲಿಯೇ ವಾಸಿಸುವವರೆಂದು ಇಸ್ರಾಯೇಲ್ಯರಿಗೆ ಗೊತ್ತಾಯಿತು.
ಯೆಹೋಶುವ 9 : 17 (IRVKN)
ಹೇಗೆಂದರೆ ಇಸ್ರಾಯೇಲ್ಯರು ಮೂರನೆಯ ದಿನದಲ್ಲಿ ಹೊರಟು ಗಿಬ್ಯೋನ್, ಕೆಫೀರಾ, ಬೇರೋತ್, ಕಿರ್ಯತ್ಯಾರೀಮ್ ಎಂಬ ಊರುಗಳನ್ನು ಸೇರಿದರು. ಆಗ ಆ ಊರುಗಳು ಆ ಜನರದ್ದೇ ಎಂದು ಗೊತ್ತಾಯಿತು.
ಯೆಹೋಶುವ 9 : 18 (IRVKN)
ಸಭೆಯ ನಾಯಕರು ಇಸ್ರಾಯೇಲಿನ ದೇವರಾದ ಯೆಹೋವನ ಹೆಸರಿನಲ್ಲಿ ಆ ಜನರಿಗೆ ಪ್ರಮಾಣಮಾಡಿದ್ದರಿಂದ ಇಸ್ರಾಯೇಲ್ಯರು ಅವರನ್ನು ಕೊಲ್ಲಲಿಲ್ಲ. ಆದರೆ ಸಭಿಕರೆಲ್ಲರು ತಮ್ಮ ನಾಯಕರಿಗೆ ವಿರೋಧವಾಗಿ ಗೊಣಗಾಡಿದರು.
ಯೆಹೋಶುವ 9 : 19 (IRVKN)
ಆಗ ನಾಯಕರೆಲ್ಲರು ಸಭೆಯ ಎಲ್ಲಾ ಸದಸ್ಯರಿಗೆ “ನಾವು ಇಸ್ರಾಯೇಲರ ದೇವರಾದ ಯೆಹೋವನ ಹೆಸರಿನಲ್ಲಿ ಅವರಿಗೆ ಪ್ರಮಾಣ ಮಾಡಿದ್ದರಿಂದ ಅವರನ್ನು ಮುಟ್ಟಲಾಗದು.
ಯೆಹೋಶುವ 9 : 20 (IRVKN)
ನಾವು ಇಟ್ಟ ಆಣೆಯ ನಿಮಿತ್ತ ದೇವರ ಕೋಪವು ನಮ್ಮ ಮೇಲೆ ಬಾರದಂತೆ ಅವರನ್ನು ಜೀವದಿಂದುಳಿಸಬೇಕು. ನಾವು ಹೀಗೆ ಮಾಡೋಣ, ಅವರನ್ನು ಜೀವದಿಂದ ಉಳಿಸಿ ಬಿಟ್ಟುಬಿಡೋಣ
ಯೆಹೋಶುವ 9 : 21 (IRVKN)
ಅವರು ಸಮೂಹಕ್ಕೆಲ್ಲಾ ಕಟ್ಟಿಗೆ ಸೀಳುವವರೂ ನೀರು ಹೊರುವವರೂ ಆಗಿರಲಿ” ಎಂದು ಹೇಳಿದರು. ನಾಯಕರ ಮಾತಿನಂತೆಯೇ ಆಯಿತು.
ಯೆಹೋಶುವ 9 : 22 (IRVKN)
ಯೆಹೋಶುವನು ಗಿಬ್ಯೋನ್ಯರನ್ನು ಕರೆಸಿ ಅವರಿಗೆ “ನೀವು ನಮ್ಮ ಮಧ್ಯದಲ್ಲಿ ವಾಸಿಸುವವರಾಗಿದ್ದರೂ ಬಹು ದೂರದವರೆಂದು ಹೇಳಿ ನಮ್ಮನ್ನು ವಂಚಿಸಿದ್ದೇಕೆ?
ಯೆಹೋಶುವ 9 : 23 (IRVKN)
ಇದರಿಂದ ನೀವು ಶಾಪಗ್ರಸ್ತರು! ನೀವು ಯಾವಾಗಲೂ ದಾಸರಾಗಿದ್ದು ನನ್ನ ದೇವರ ಮಂದಿರಕ್ಕೆ ಕಟ್ಟಿಗೆ ಹೊಡೆಯುವವರೂ ನೀರುತರುವವರೂ ಆಗಿರಬೇಕು” ಎಂದನು.
ಯೆಹೋಶುವ 9 : 24 (IRVKN)
ಅವರು ಯೆಹೋಶುವನಿಗೆ “ನಿನ್ನ ದೇವರಾದ ಯೆಹೋವನು ತನ್ನ ಸೇವಕನಾದ ಮೋಶೆಗೆ ‘ನಾನು ನಿಮಗೆ ಈ ದೇಶವನ್ನೆಲ್ಲಾ ಕೊಡುವಾಗ ನೀವು ಇದರ ಎಲ್ಲಾ ನಿವಾಸಿಗಳನ್ನು ಸಂಹರಿಸಿ ಬಿಡಬೇಕೆಂದು’ ಆಜ್ಞಾಪಿಸಿದ್ದನ್ನು ಕೇಳಿ ನಮ್ಮ ಪ್ರಾಣ ತೆಗೆಯುವಿರೆಂದು ಹೆದರಿ ಹೀಗೆ ಮಾಡಿದೆವು.
ಯೆಹೋಶುವ 9 : 25 (IRVKN)
ಇಗೋ, ಈಗ ನಾವು ನಿನ್ನ ಕೈಯಲ್ಲಿದ್ದೇವೆ; ನಿನಗೆ ಯಾವುದು ಒಳ್ಳೆಯದು, ನ್ಯಾಯವಾದುದ್ದು ಎಂದು ತೋರುತ್ತದೋ ಅದರಂತೆ ನಮಗೆ ಮಾಡು” ಎಂದು ಉತ್ತರಕೊಟ್ಟರು.
ಯೆಹೋಶುವ 9 : 26 (IRVKN)
ಯೆಹೋಶುವನು ತಾನು ಮೊದಲು ಹೇಳಿದಂತೆಯೇ ಮಾಡಿದನು. ಅವನು ಅವರನ್ನು ಇಸ್ರಾಯೇಲ್ಯರ ಕೈಯಿಂದ ಹತರಾಗದಂತೆ ತಪ್ಪಿಸಿದನು.
ಯೆಹೋಶುವ 9 : 27 (IRVKN)
ಇಸ್ರಾಯೇಲ್ಯರಿಗಾಗಿ ಯೆಹೋವನು ಆರಿಸಿಕೊಂಡ ಸ್ಥಳದಲ್ಲಿ ಕಟ್ಟಲಾಗುವ ಆತನ ಯಜ್ಞವೇದಿಗೂ ಕಟ್ಟಿಗೆ ಕಡಿಯುವವರನ್ನಾಗಿ ಹಾಗೂ ನೀರು ಹೊರುವವರನ್ನಾಗಿ ಅವರನ್ನು ನೇಮಿಸಿದನು. ಅವರು ಇಂದಿನವರೆಗೂ ಅದೇ ಕೆಲಸವನ್ನು ಮಾಡಿಕೊಂಡು ಇಸ್ರಾಯೇಲ್ಯರೊಂದಿಗಿದ್ದಾರೆ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27