ಯೆಹೋಶುವ 6 : 1 (IRVKN)
ಯೆರಿಕೋವಿನ ಪತನ ಯೆರಿಕೋವಿನವರು ಇಸ್ರಾಯೇಲ್ಯರಿಗೆ ಹೆದರಿ ತಮ್ಮ ಪಟ್ಟಣದ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಕೊಂಡರು. ಯಾರೂ ಒಳಗೆ ಹೋಗಲಿಲ್ಲ; ಹೊರಗೆ ಬರಲಿಲ್ಲ.
ಯೆಹೋಶುವ 6 : 2 (IRVKN)
ಆಗ ಯೆಹೋವನು ಯೆಹೋಶುವನಿಗೆ “ನೋಡು, ನಾನು ಯೆರಿಕೋವನ್ನೂ ಅದರ ಅರಸನನ್ನೂ ಹಾಗೂ ಯುದ್ಧವೀರರನ್ನೂ ನಿನ್ನ ಕೈಗೆ ಒಪ್ಪಿಸಿದ್ದೇನೆ.
ಯೆಹೋಶುವ 6 : 3 (IRVKN)
ನಿನ್ನ ಭಟರೆಲ್ಲ ಆರು ದಿನಗಳ ವರೆಗೆ ದಿನಕ್ಕೆ ಒಂದು ಸಾರಿ ಪಟ್ಟಣವನ್ನು ಸುತ್ತಲಿ.
ಯೆಹೋಶುವ 6 : 4 (IRVKN)
ಏಳು ಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಮಂಜೂಷದ ಮುಂದೆ ನಡೆಯಲಿ. ಏಳನೆಯ ದಿನ ನೀವು ಪಟ್ಟಣವನ್ನು ಏಳು ಸಾರಿ ಸುತ್ತಬೇಕು; ಯಾಜಕರು ಕೊಂಬುಗಳನ್ನು ಊದಬೇಕು.
ಯೆಹೋಶುವ 6 : 5 (IRVKN)
ಅವರು ದೀರ್ಘವಾಗಿ ಊದುವ ಕೊಂಬಿನ ಧ್ವನಿಯು ಕೇಳಿಸುತ್ತಲೇ ನೀವೆಲ್ಲರೂ ಗಟ್ಟಿಯಾಗಿ ಆರ್ಭಟಿಸಿರಿ. ಆಗ ಪಟ್ಟಣದ ಗೋಡೆಯು ತಾನೇ ಬಿದ್ದುಹೋಗುವುದು; ಪ್ರತಿಯೊಬ್ಬನೂ ನೆಟ್ಟಗೆ ಒಳಗೆ ನುಗ್ಗಬಹುದು” ಎಂದು ಹೇಳಿದನು.
ಯೆಹೋಶುವ 6 : 6 (IRVKN)
ಆಗ ನೂನನ ಮಗನಾದ ಯೆಹೋಶುವನು ಯಾಜಕರನ್ನು ಕರೆದು ಅವರಿಗೆ, “ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಹೋಗಿರಿ. ಏಳು ಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಯೆಹೋವನ ಮಂಜೂಷದ ಮುಂದೆ ನಡೆಯಲಿ” ಎಂದನು.
ಯೆಹೋಶುವ 6 : 7 (IRVKN)
ಮತ್ತು ಅವನು ಜನರಿಗೆ “ನೀವು ಹೋಗಿ ಪಟ್ಟಣವನ್ನು ಸುತ್ತಿರಿ. ಯುದ್ಧಸನ್ನದ್ಧರೆಲ್ಲರೂ ಯೆಹೋವನ ಮಂಜೂಷದ ಮುಂದೆ ಹೋಗಲಿ” ಎಂದು ಹೇಳಿದನು.
ಯೆಹೋಶುವ 6 : 8 (IRVKN)
ಯೆಹೋಶುವನು ಆಜ್ಞಾಪಿಸಿದಂತೆಯೇ ಏಳು ಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಊದುತ್ತಾ, ಯೆಹೋವನ ಪ್ರಸನ್ನತೆಯಲ್ಲಿ ನಡೆದರು. ಯೆಹೋವನ ಒಡಂಬಡಿಕೆಯ ಮಂಜೂಷವು ಅವರ ಹಿಂದೆ ಹೋಯಿತು.
ಯೆಹೋಶುವ 6 : 9 (IRVKN)
ಯುದ್ಧ ಸನ್ನದ್ಧರಾದವರು ಕೊಂಬುಗಳನ್ನು ಊದುತ್ತಿದ್ದ ಯಾಜಕರ ಮುಂದೆ ಇದ್ದರು. ಹಿಂಬದಿಯ ದಂಡು ಮಂಜೂಷದ ಹಿಂದಿತ್ತು. ಯಾಜಕರು ಕೊಂಬುಗಳನ್ನು ಊದುತ್ತಲೇ ಹೋಗುತ್ತಿದ್ದರು.
ಯೆಹೋಶುವ 6 : 10 (IRVKN)
ಯೆಹೋಶುವನು ಜನರಿಗೆ “ನೀವು ಈಗ ಆರ್ಭಟಿಸಬಾರದು; ನಿಮ್ಮ ಧ್ವನಿಯು ಕೇಳಿಸದಿರಲಿ, ನಿಮ್ಮ ಬಾಯಿಂದ ಒಂದು ಮಾತಾದರೂ ಹೊರಡದಿರಲಿ. ಆರ್ಭಟಿಸಿರೆಂದು ನಾನು ಹೇಳುವ ದಿನದಲ್ಲಿ ಮಾತ್ರ ಆರ್ಭಟಿಸಿರಿ” ಎಂದು ಆಜ್ಞಾಪಿಸಿದನು.
ಯೆಹೋಶುವ 6 : 11 (IRVKN)
ಅವರು ಯೆಹೋವನ ಮಂಜೂಷವನ್ನು ಒಂದು ಸಾರಿ ಪಟ್ಟಣವನ್ನು ಪ್ರದಕ್ಷಿಣೆ ಮಾಡಿದ ಮೇಲೆ ತಿರುಗಿ ಪಾಳೆಯಕ್ಕೆ ಬಂದು ರಾತ್ರಿ ಕಳೆದರು.
ಯೆಹೋಶುವ 6 : 12 (IRVKN)
ಯೆಹೋಶುವನು ಬೆಳಗಿನ ಜಾವದಲ್ಲೇ ಎದ್ದನು. ಯಾಜಕರು ಯೆಹೋವನ ಮಂಜೂಷವನ್ನು ಹೊತ್ತುಕೊಂಡು ಹೊರಟರು.
ಯೆಹೋಶುವ 6 : 13 (IRVKN)
ಏಳು ಮಂದಿ ಯಾಜಕರು ಕೊಂಬುಗಳನ್ನು ಊದುತ್ತಾ ಯೆಹೋವನ ಮಂಜೂಷದ ಮುಂದೆ ನಡೆದರು. ಯುದ್ಧ ಸನ್ನದ್ಧರು ಅವರ ಮುಂದಿದ್ದರು. ಹಿಂಬದಿಯ ದಂಡು ಯೆಹೋವನ ಮಂಜೂಷದ ಹಿಂದಿತ್ತು. ಕೊಂಬುಗಳನ್ನು ಊದುತ್ತಲೇ ಹೋಗುತ್ತಿದ್ದರು.
ಯೆಹೋಶುವ 6 : 14 (IRVKN)
ಹೀಗೆ ಎರಡನೆಯ ದಿನದಲ್ಲಿಯೂ ಪಟ್ಟಣವನ್ನು ಸುತ್ತಿ ಪಾಳೆಯಕ್ಕೆ ಹಿಂದಿರುಗಿದರು.
ಯೆಹೋಶುವ 6 : 15 (IRVKN)
ಆರು ದಿನ ಈ ಪ್ರಕಾರ ಮಾಡಿದರು. ಏಳನೆಯ ದಿನದಲ್ಲಿ ಅವರು ಸೂರ್ಯೋದಯವಾಗುತ್ತಲೇ ಎದ್ದು ಅದೇ ಕ್ರಮದಲ್ಲಿ ಪಟ್ಟಣವನ್ನು ಏಳು ಸಾರಿ ಸುತ್ತಿದರು. ಈ ದಿನದಲ್ಲಿ ಮಾತ್ರ ಅದನ್ನು ಏಳು ಸಾರಿ ಸುತ್ತಿದರು.
ಯೆಹೋಶುವ 6 : 16 (IRVKN)
ಏಳನೆಯ ಸಾರಿ ಸುತ್ತುವಾಗ ಯಾಜಕರು ಕೊಂಬುಗಳನ್ನು ಊದಲು ಯೆಹೋಶುವನು ಜನರಿಗೆ, “ಆರ್ಭಟಿಸಿರಿ, ಯೆಹೋವನು ನಿಮಗೆ ಈ ಪಟ್ಟಣವನ್ನು ಕೊಟ್ಟಿದ್ದಾನೆ.
ಯೆಹೋಶುವ 6 : 17 (IRVKN)
ಇದೂ ಇದರಲ್ಲಿರುವುದೆಲ್ಲವೂ ಯೆಹೋವನಿಗೆ ಅರ್ಪಿತವಾದವುಗಳೇ ಎಂದು ತಿಳಿಯಿರಿ. ವೇಶ್ಯೆಯಾದ ರಾಹಾಬಳೂ ಅವಳ ಸಂಗಡ ಮನೆಯಲ್ಲಿರುವವರೆಲ್ಲರೂ ಉಳಿಯಲಿ. ಏಕೆಂದರೆ ನಾವು ಕಳುಹಿಸಿದ ಗೂಢಚಾರರನ್ನು ಅವಳು ಅಡಗಿಸಿಟ್ಟಿದ್ದಳಲ್ಲಾ.
ಯೆಹೋಶುವ 6 : 18 (IRVKN)
ನೀವಾದರೋ ಯೆಹೋವನಿಗೆ ಅರ್ಪಿಸುವ ವಸ್ತುಗಳ ವಿಷಯದಲ್ಲಿ ಜಾಗರೂಕತೆಯಿಂದಿರಬೇಕು. ನೀವು ಅವುಗಳಲ್ಲಿ ಯಾವುದನ್ನಾದರೂ ತೆಗೆದುಕೊಂಡರೆ, ಇಸ್ರಾಯೇಲ್ಯರ ಪಾಳೆಯವು ಶಾಪಕ್ಕೆ ಗುರಿಯಾಗಿ ನಾಶವಾದೀತು.
ಯೆಹೋಶುವ 6 : 19 (IRVKN)
ಎಲ್ಲಾ ಬೆಳ್ಳಿ ಬಂಗಾರವೂ, ತಾಮ್ರ ಕಬ್ಬಿಣಗಳ ಪಾತ್ರೆಗಳೂ ಯೆಹೋವನಿಗೆ ಮೀಸಲಾಗಿದ್ದು ಆತನ ಭಂಡಾರಕ್ಕೆ ಸೇರತಕ್ಕವುಗಳು” ಎಂದನು.
ಯೆಹೋಶುವ 6 : 20 (IRVKN)
ಕೂಡಲೆ ಜನರ ಆರ್ಭಟವೂ ಕೊಂಬುಗಳ ಧ್ವನಿಯೂ ಉಂಟಾದವು. ಜನರು ಕೊಂಬಿನ ಧ್ವನಿಯನ್ನು ಕೇಳಿ ಗಟ್ಟಿಯಾಗಿ ಆರ್ಭಟಿಸಲು ಪಟ್ಟಣದ ಗೋಡೆಯು ತಾನೇ ಬಿದ್ದುಹೋಯಿತು. ಪ್ರತಿಯೊಬ್ಬನೂ ನೆಟ್ಟಗೆ ಪಟ್ಟಣದಲ್ಲಿ ನುಗ್ಗಿ ಹೋದನು. ಅದು ಅವರಿಗೆ ವಶವಾಯಿತು.
ಯೆಹೋಶುವ 6 : 21 (IRVKN)
ಪಟ್ಟಣದಲ್ಲಿದ್ದ ಗಂಡಸರನ್ನೂ, ಹೆಂಗಸರನ್ನೂ, ಹುಡುಗರನ್ನೂ, ಮುದುಕರನ್ನೂ, ದನ, ಕುರಿ ಕತ್ತೆಗಳನ್ನೂ ಸಂಪೂರ್ಣವಾಗಿ ಕತ್ತಿಯಿಂದ ಸಂಹರಿಸಿಬಿಟ್ಟರು.
ಯೆಹೋಶುವ 6 : 22 (IRVKN)
ಯೆಹೋಶುವನು ದೇಶವನ್ನು ಸಂಚರಿಸಿ ನೋಡಿದ್ದ ಇಬ್ಬರು ಗೂಢಚಾರರಿಗೆ “ನೀವು ಆ ವೇಶ್ಯೆಯ ಮನೆಗೆ ಹೋಗಿ ಅವಳಿಗೆ ಪ್ರಮಾಣಮಾಡಿದಂತೆ ಅವಳನ್ನೂ ಅವಳಿಗಿರುವುದೆಲ್ಲವನ್ನೂ ಹೊರಗೆ ತೆಗೆದುಕೊಂಡು ಬನ್ನಿರಿ” ಎಂದು ಹೇಳಲು
ಯೆಹೋಶುವ 6 : 23 (IRVKN)
ಆ ಯೌವನಸ್ಥರು ಹೋಗಿ ರಾಹಾಬಳನ್ನೂ ಅವಳ ತಂದೆತಾಯಿಯನ್ನು, ಸಹೋದರರನ್ನು, ಅವಳಿಗಿರುವುದೆಲ್ಲವನ್ನೂ, ಅವಳ ಗೋತ್ರದ ಎಲ್ಲಾ ಜನರನ್ನೂ ತಂದು ಇಸ್ರಾಯೇಲ್ಯರ ಪಾಳೆಯದ ಹೊರಗೆ ಇಟ್ಟರು.
ಯೆಹೋಶುವ 6 : 24 (IRVKN)
ಇಸ್ರಾಯೇಲ್ಯರು ಪಟ್ಟಣವನ್ನೂ ಅದರಲ್ಲಿರುವುದೆಲ್ಲವನ್ನೂ ಬೆಂಕಿಯಿಂದ ಸುಟ್ಟುಬಿಟ್ಟರು. ಆದರೆ ಬೆಳ್ಳಿಬಂಗಾರವನ್ನೂ, ತಾಮ್ರ ಕಬ್ಬಿಣಗಳ ಪಾತ್ರೆಗಳನ್ನೂ, ಯೆಹೋವನ ಆಲಯದ ಭಂಡಾರಕ್ಕೆ ಒಪ್ಪಿಸಿದರು.
ಯೆಹೋಶುವ 6 : 25 (IRVKN)
ವೇಶ್ಯೆಯಾದ ರಾಹಾಬಳು ಯೆರಿಕೋ ಪಟ್ಟಣವನ್ನು ಸಂಚರಿಸಿ ನೋಡುವುದಕ್ಕೆ ಬಂದಿದ್ದ ಯೆಹೋಶುವನ ಗೂಢಚಾರರನ್ನು ಅಡಗಿಸಿಟ್ಟದ್ದರಿಂದ ಅವನು ಅವಳನ್ನೂ, ಅವಳ ತಂದೆಯ ಮನೆಯವರನ್ನೂ, ಅವಳಿಗಿರುವುದೆಲ್ಲವನ್ನೂ ಉಳಿಸಿದನು. ಅವಳು ಇಂದಿನವರೆಗೂ ಇಸ್ರಾಯೇಲ್ಯರಲ್ಲಿ ವಾಸವಾಗಿದ್ದಾಳೆ.
ಯೆಹೋಶುವ 6 : 26 (IRVKN)
ಅದೇ ಸಮಯದಲ್ಲಿ ಯೆಹೋಶುವನು ಇಸ್ರಾಯೇಲ್ಯರಿಂದ ಪ್ರಮಾಣಮಾಡಿಸಿ ಅವರಿಗೆ “ಈ ಯೆರಿಕೋ ಪಟ್ಟಣವನ್ನು ಕಟ್ಟುವುದಕ್ಕೆ ಕೈ ಹಾಕುವ ಮನುಷ್ಯನು ಯೆಹೋವನ ದೃಷ್ಟಿಯಲ್ಲಿ ಶಾಪಗ್ರಸ್ತನಾಗಿರಲಿ. ಅಂಥವನು ಅದಕ್ಕೆ ಅಸ್ತಿವಾರ ಹಾಕುವಾಗ ತನ್ನ ಹಿರಿಯ ಮಗನನ್ನೂ ಬಾಗಿಲುಗಳನ್ನಿಡುವಾಗ ಕಿರಿಯ ಮಗನನ್ನೂ ಕಳೆದುಕೊಳ್ಳಲಿ” ಎಂದು ಹೇಳಿದನು.
ಯೆಹೋಶುವ 6 : 27 (IRVKN)
ಯೆಹೋವನು ಯೆಹೋಶುವನ ಸಂಗಡ ಇದ್ದುದರಿಂದ ಅವನ ಕೀರ್ತಿ ದೇಶದಲ್ಲೆಲ್ಲಾ ಹಬ್ಬಿತು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27