ಯೆಹೋಶುವ 24 : 1 (IRVKN)
ಶೆಕೆಮಿನಲ್ಲಿ ಒಡಂಬಡಿಕೆಯ ನವೀಕರಣ ತರುವಾಯ ಯೆಹೋಶುವನು ಇಸ್ರಾಯೇಲ್ಯರ ಎಲ್ಲಾ ಕುಲದವರನ್ನು ಶೆಕೆಮಿನಲ್ಲಿ ಸಭೆ ಸೇರಿಸಿದನು. ಹಿರಿಯರು, ಪ್ರಧಾನರು, ನ್ಯಾಯಾಧಿಪತಿಗಳು, ಅಧಿಕಾರಿಗಳು ಬಂದು ದೇವರ ಸನ್ನಿಧಿಯಲ್ಲಿ ಕಾಣಿಸಿಕೊಂಡರು.
ಯೆಹೋಶುವ 24 : 2 (IRVKN)
ಯೆಹೋಶುವನು ಅವರಿಗೆ, “ನಿಮ್ಮ ದೇವರಾದ ಯೆಹೋವನು ಹೇಳುವುದೇನೆಂದರೆ, ಅಬ್ರಹಾಮ, ನಾಹೋರ ಎಂಬುವವರ ತಂದೆಯಾದ ತೆರಹ, ಮೊದಲಾದ ನಿಮ್ಮ ಮೂಲ ಪುರುಷರು ಪೂರ್ವದಲ್ಲಿ ಯೂಫ್ರೆಟಿಸ್ ನದಿಯ ಆಚೆಯಲ್ಲಿದ್ದ ಅನ್ಯದೇವತೆಗಳನ್ನು ಪೂಜಿಸುತ್ತಿದ್ದರು.
ಯೆಹೋಶುವ 24 : 3 (IRVKN)
ನಾನು ನಿಮ್ಮ ಪಿತೃವಾದ ಅಬ್ರಹಾಮನನ್ನು ಅಲ್ಲಿಂದ ಕರೆತಂದು ಕಾನಾನ್ ದೇಶದಲ್ಲೆಲ್ಲಾ ಸಂಚಾರ ಮಾಡಿ, ಇಸಾಕನೆಂಬ ಮಗನನ್ನು ಕೊಟ್ಟು ಅವನ ಸಂತಾನವನ್ನು ಹೆಚ್ಚಿಸಿದೆನು.
ಯೆಹೋಶುವ 24 : 4 (IRVKN)
ಇಸಾಕನಿಗೆ ಯಾಕೋಬ, ಏಸಾವ ಎಂಬ ಇಬ್ಬರು ಮಕ್ಕಳನ್ನು ಅನುಗ್ರಹಿಸಿ, ಏಸಾವನಿಗೆ ಸೇಯೀರ್ ಪರ್ವತವನ್ನೂ ಸ್ವತ್ತಾಗಿ ದಯಪಾಲಿಸಿದೆನು. ಯಾಕೋಬನಾದರೋ ತನ್ನ ಮಕ್ಕಳ ಸಹಿತವಾಗಿ ಐಗುಪ್ತ ದೇಶಕ್ಕೆ ಹೋದನು.
ಯೆಹೋಶುವ 24 : 5 (IRVKN)
ತರುವಾಯ ನಾನು ಮೋಶೆ, ಆರೋನರನ್ನೂ ಕಳುಹಿಸಿ, ಆ ಐಗುಪ್ತದಲ್ಲಿ ಅನೇಕ ಮಹತ್ಕಾರ್ಯಗಳನ್ನು ನಡಿಸಿ, ಅವರನ್ನು ಬಾಧಿಸಿ, ನಿಮ್ಮನ್ನು ಹೊರಗೆ ಕರೆತಂದೆನು.
ಯೆಹೋಶುವ 24 : 6 (IRVKN)
ನಿಮ್ಮ ಪೂರ್ವಿಕರು ಐಗುಪ್ತದಿಂದ ಬಿಡುಗಡೆಯಾಗಿ ಕೆಂಪು ಸಮುದ್ರಕ್ಕೆ ಬರುತ್ತಿರುವಾಗ ಐಗುಪ್ತರು ರಥಾಶ್ವಬಲಗಳ ಸಹಿತವಾಗಿ ಅವರನ್ನು ಆ ಸಮುದ್ರದವರೆಗೂ ಹಿಂದಟ್ಟಿದರು.
ಯೆಹೋಶುವ 24 : 7 (IRVKN)
ಅವರು ಯೆಹೋವನಾದ ನನಗೆ ಮೊರೆಯಿಡಲು ನಾನು ಅವರಿಗೂ, ಐಗುಪ್ತರಿಗೂ ಮಧ್ಯದಲ್ಲಿ ಕಾರ್ಗತ್ತಲೆಯನ್ನು ಉಂಟುಮಾಡಿದೆನು. ಇದಲ್ಲದೆ ನಾನು ಐಗುಪ್ತರ ಮೇಲೆ ಸಮುದ್ರವನ್ನು ಬರಮಾಡಿ ಅವರನ್ನು ಮುಳುಗಿಸಿಬಿಟ್ಟೆನು. ನಾನು ಐಗುಪ್ತದಲ್ಲಿ ಏನೇನು ಮಾಡಿದೆನೆಂಬುದಕ್ಕೆ ನೀವು ಸಾಕ್ಷಿಗಳಾಗಿದ್ದಿರಿ.
ಯೆಹೋಶುವ 24 : 8 (IRVKN)
ನೀವು ಬಹು ಕಾಲದವರೆಗೆ ಅರಣ್ಯದಲ್ಲಿದ್ದ ನಂತರ ನಿಮ್ಮನ್ನು ಯೊರ್ದನಿನ ಆಚೆಯಲ್ಲಿ ಅಮೋರಿಯರ ದೇಶಕ್ಕೆ ಕರೆತಂದೆನು. ನಿಮ್ಮೊಡನೆ ಯುದ್ಧಕ್ಕೆ ಬಂದ ಅವರನ್ನು ನಿಮ್ಮ ಕೈಗೆ ಕೊಟ್ಟುಬಿಟ್ಟೆನು. ನೀವು ಅವರ ದೇಶವನ್ನು ಸ್ವಾಧೀನಮಾಡಿಕೊಂಡಿರಿ. ಅವರನ್ನು ನಿಮ್ಮೆದುರಿನಲ್ಲೇ ಸಂಹರಿಸಿದೆನು.
ಯೆಹೋಶುವ 24 : 9 (IRVKN)
ಅನಂತರ ಮೋವಾಬ್ಯರ ಅರಸನೂ ಚಿಪ್ಪೋರನ ಮಗನೂ ಆದ ಬಾಲಾಕನು ಇಸ್ರಾಯೇಲರಾದ ನಿಮಗೆ ವಿರೋಧವಾಗಿ ಯುದ್ಧ ಮಾಡುವುದಕ್ಕೆ ಎದ್ದು ನಿಮ್ಮನ್ನು ಶಪಿಸುವುದಕ್ಕೋಸ್ಕರ ಬೆಯೋರನ ಮಗನಾದ ಬಿಳಾಮನನ್ನು ಕರೆಕಳುಹಿಸಿದನು.
ಯೆಹೋಶುವ 24 : 10 (IRVKN)
ಆದರೆ ನಾನು ಬಿಳಾಮನಿಗೆ ಸಮ್ಮತಿಕೊಡಲಿಲ್ಲವಾದುದರಿಂದ ಅವನು ನಿಮ್ಮನ್ನು ಆಶೀರ್ವದಿಸುತ್ತಲೇ ಇರಬೇಕಾಯಿತು. ಹೀಗೆ ನಿಮ್ಮನ್ನು ಅವನ ಕೈಗೆ ಬೀಳದಂತೆ ತಪ್ಪಿಸಿದೆನು.
ಯೆಹೋಶುವ 24 : 11 (IRVKN)
ನೀವು ಯೊರ್ದನನ್ನು ದಾಟಿ ಯೆರಿಕೋವಿಗೆ ಬಂದಿರಿ. ಆಗ ಯೆರಿಕೋವಿನವರು ಅಮೋರಿಯರು, ಪೆರಿಜ್ಜೀಯರು, ಕಾನಾನ್ಯರು, ಹಿತ್ತಿಯರು, ಗಿರ್ಗಾಷಿಯರು, ಹಿವ್ವಿಯರು, ಯೆಬೂಸಿಯರು ಇವರೆಲ್ಲಾ ನಿಮಗೆ ವಿರೋಧವಾಗಿ ಯುದ್ಧಕ್ಕೆ ಬರಲು ನಾನು ಅವರೆಲ್ಲರನ್ನು ನಿಮ್ಮ ಕೈಗೆ ಒಪ್ಪಿಸಿದೆನು.
ಯೆಹೋಶುವ 24 : 12 (IRVKN)
ಇದಲ್ಲದೆ ನಾನು ಕಡಜದ ಹುಳಗಳನ್ನು ನಿಮ್ಮ ಮುಂದಾಗಿ ಕಳುಹಿಸಿದೆನು. ಅವು ಅಮೋರಿಯರ ಅರಸರಿಬ್ಬರನ್ನು ಓಡಿಸಿಬಿಟ್ಟವು. ಇದು ನಿಮ್ಮ ಕತ್ತಿ ಬಿಲ್ಲುಗಳಿಂದಲ್ಲ.
ಯೆಹೋಶುವ 24 : 13 (IRVKN)
ನೀವು ವ್ಯವಸಾಯ ಮಾಡದೆ ಬೆಳೆದಿರುವ ಭೂಮಿಯನ್ನು ನಿಮಗೆ ಕೊಟ್ಟೆನು. ನೀವು ಕಟ್ಟದೆ ಇರುವ ಪಟ್ಟಣಗಳಲ್ಲಿ ವಾಸಿಸುತ್ತಿದ್ದೀರಿ. ನೀವು ನೆಟ್ಟು ಬೆಳೆಸದೆ ಇರುವ ದ್ರಾಕ್ಷಿ, ಎಣ್ಣೆಮರ ಇವುಗಳ ಫಲಗಳನ್ನು ಅನುಭವಿಸುತ್ತೀದ್ದೀರಿ”
ಯೆಹೋಶುವ 24 : 14 (IRVKN)
ಹೀಗಿರುವುದರಿಂದ, “ನೀವು ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿರಿ ಆತನನ್ನು ಪೂರ್ಣಮನಸ್ಸಿನಿಂದಲೂ, ಯಥಾರ್ಥಚಿತ್ತದಿಂದಲೂ ಸೇವಿಸಿರಿ. ನಿಮ್ಮ ಪೂರ್ವಿಕರು ಯೂಫ್ರೆಟಿಸ್ ನದಿಯ ಆಚೆಯಲ್ಲಿಯೂ ಐಗುಪ್ತದಲ್ಲಿಯೂ ಪೂಜಿಸುತ್ತಿದ್ದ ದೇವತೆಗಳನ್ನು ನಿಮ್ಮಲ್ಲಿಂದ ತೆಗೆದುಹಾಕಿರಿ. ಯೆಹೋವನನ್ನೇ ಸೇವಿಸಿರಿ.
ಯೆಹೋಶುವ 24 : 15 (IRVKN)
ಯೆಹೋವನನ್ನು ಆರಾಧಿಸುವುದು ನಿಮಗೆ ಸರಿಕಾಣದಿದ್ದರೆ ಯಾರನ್ನು ಸೇವಿಸಬೇಕೆಂದಿದ್ದೀರೆಂಬುದನ್ನು? ಈ ಹೊತ್ತೇ ಆರಿಸಿಕೊಳ್ಳಿರಿ: ನಿಮ್ಮ ಪೂರ್ವಿಕರು ಯೂಫ್ರೆಟಿಸ್ ನದಿಯ ಆಚೆಯಲ್ಲಿ ಸೇವಿಸುತ್ತಿದ್ದ ದೇವತೆಗಳೋ ಈ ದೇಶದ ಮೂಲ ನಿವಾಸಿಗಳಾದ ಅಮೋರಿಯರ ದೇವತೆಗಳೋ ಹೇಳಿರಿ. ನಾನೂ, ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು” ಎಂದನು.
ಯೆಹೋಶುವ 24 : 16 (IRVKN)
ಅದಕ್ಕೆ ಜನರು, “ಯೆಹೋವನ ಸೇವೆಯನ್ನು ಬಿಟ್ಟು ಅನ್ಯದೇವತೆಗಳನ್ನು ಸೇವಿಸುವುದು ನಮಗೆ ದೂರವಾಗಿರಲಿ.
ಯೆಹೋಶುವ 24 : 17 (IRVKN)
ನಾವು ದಾಸತ್ವದಲ್ಲಿದ್ದ ಐಗುಪ್ತದಿಂದ ನಮ್ಮನ್ನು ನಮ್ಮ ಪೂರ್ವಿಕರನ್ನೂ ಹೊರತಂದು ನಮ್ಮೆದುರಿನಲ್ಲಿಯೇ ಮಹತ್ಕಾರ್ಯಗಳನ್ನು ನಡಿಸಿ ನಮ್ಮ ಎಲ್ಲಾ ಪ್ರಯಾಣಗಳಲ್ಲಿಯೂ, ನಾವೂ ದಾಟಿ ಬಂದ ಅನ್ಯಜನಾಂಗಗಳ ಮಧ್ಯದಲ್ಲಿಯೂ ನಮ್ಮನ್ನು ಕಾಪಾಡಿದವನು ನಮ್ಮ ದೇವರಾದ ಯೆಹೋವನಲ್ಲವೇ.
ಯೆಹೋಶುವ 24 : 18 (IRVKN)
ಈ ದೇಶದ ನಿವಾಸಿಗಳಾಗಿದ್ದ ಅಮೋರಿಯರು ಮೊದಲಾದ ಸರ್ವ ಜನಾಂಗಗಳನ್ನು ನಮ್ಮ ಎದುರಿನಿಂದ ಹೊರಡಿಸಿ ಬಿಟ್ಟವನು ಆತನೇ. ಆದುದರಿಂದ ನಾವು ಯೆಹೋವನನ್ನೇ ಸೇವಿಸುವೆವು. ಆತನೇ ನಮ್ಮ ದೇವರು” ಎಂದು ಉತ್ತರ ಕೊಟ್ಟರು.
ಯೆಹೋಶುವ 24 : 19 (IRVKN)
ಆಗ ಯೆಹೋಶುವನು ಅವರಿಗೆ, “ನೀವು ಯೆಹೋವನನ್ನು ಸೇವಿಸಲು ಶಕ್ತರಲ್ಲ. ಯೆಹೋವನು ಪರಿಶುದ್ಧನು; ತನಗೆ ಸಲ್ಲಿಸಬೇಕಾದ ಗೌರವವನ್ನು ಮತ್ತೊಬ್ಬರಿಗೆ ಸಲ್ಲಗೊಡಿಸದ ದೇವರು; ಆತನು ನಿಮ್ಮ ಪಾಪ, ಅಪರಾಧಗಳನ್ನೂ, ಕ್ಷಮಿಸುವುದಿಲ್ಲ.
ಯೆಹೋಶುವ 24 : 20 (IRVKN)
ನೀವು ಆತನನ್ನು ಬಿಟ್ಟು, ಅನ್ಯದೇವತೆಗಳನ್ನು ಸೇವಿಸಿದರೆ ಆತನು ನಿಮಗೆ ವಿಮುಖನಾಗಿ ಮೇಲಿಗೆ ಬದಲಾಗಿ ಕೇಡನ್ನು ಬರಮಾಡಿ ನಿಮ್ಮನ್ನು ನಾಶಮಾಡಿ ಬಿಡುವನು” ಎಂದನು.
ಯೆಹೋಶುವ 24 : 21 (IRVKN)
ಜನರು ಯೆಹೋಶುವನಿಗೆ, “ಇಲ್ಲ, ನಾವು ಯೆಹೋವನನ್ನೇ ಸೇವಿಸುವೆವು” ಎಂದರು.
ಯೆಹೋಶುವ 24 : 22 (IRVKN)
ಯೆಹೋಶುವನು ಅವರಿಗೆ, “ನೀವು ಯೆಹೋವನ ಸೇವೆಯನ್ನು ಆರಿಸಿಕೊಂಡಿರುವುದಕ್ಕೆ ನೀವೇ ಸಾಕ್ಷಿಗಳು ಅನ್ನಲು ಅವರು ಹೌದು ನಾವೇ ಸಾಕ್ಷಿಗಳು” ಎಂದರು
ಯೆಹೋಶುವ 24 : 23 (IRVKN)
ಆಗ ಯೆಹೋಶುವನು ಅವರಿಗೆ, “ಹಾಗಾದರೆ ನಿಮ್ಮಲ್ಲಿರುವ ಅನ್ಯದೇವತೆಗಳನ್ನು ತೆಗೆದುಹಾಕಿ ಇಸ್ರಾಯೇಲಿನ ದೇವರಾದ ಯೆಹೋವನ ಕಡೆಗೆ ಮನಸ್ಸನ್ನು ತಿರುಗಿಸಿಕೊಳ್ಳಿರಿ” ಎಂದನು.
ಯೆಹೋಶುವ 24 : 24 (IRVKN)
ಅದಕ್ಕೆ ಜನರು, “ನಮ್ಮ ದೇವರಾದ ಯೆಹೋವನನ್ನೇ ಸೇವಿಸುತ್ತೇವೆ. ಆತನ ಮಾತನ್ನೇ ಕೇಳುತ್ತೇವೆ” ಎಂದರು.
ಯೆಹೋಶುವ 24 : 25 (IRVKN)
ಹೀಗೆ ಯೆಹೋಶುವನು ಶೆಕೆಮಿನಲ್ಲಿ ಇಸ್ರಾಯೇಲರೊಡನೆ ಒಡಂಬಡಿಕೆಯನ್ನು ಮಾಡಿಕೊಂಡು ಅವರಿಗೆ ಕೆಲವು ನಿಬಂಧನೆಗಳನ್ನು ವಿಧಿಸಿದನು.
ಯೆಹೋಶುವ 24 : 26 (IRVKN)
ಇದಲ್ಲದೆ, ಅವನು ಈ ಎಲ್ಲಾ ಮಾತುಗಳನ್ನು ದೇವರ ಧರ್ಮಶಾಸ್ತ್ರದ ಗ್ರಂಥದಲ್ಲಿ ಬರೆದು, ಒಂದು ದೊಡ್ಡ ಕಲ್ಲನ್ನು ತಂದು ಯೆಹೋವನ ಆಲಯದ ಬಳಿಯಲ್ಲಿ ಇದ್ದ ಅಲ್ಲಾವೃಕ್ಷದ ಅಡಿಯಲ್ಲಿ ನಿಲ್ಲಿಸಿ,
ಯೆಹೋಶುವ 24 : 27 (IRVKN)
ಎಲ್ಲಾ ಜನರಿಗೆ, “ಇಗೋ, ಈ ಕಲ್ಲು ನಿಮ್ಮ ವಿಷಯದಲ್ಲಿ ಸಾಕ್ಷಿ ಹೇಳುವುದು. ಯೆಹೋವನು ಹೇಳಿದ ಎಲ್ಲಾ ಮಾತುಗಳನ್ನು ಇದು ಕೇಳಿದೆ. ಆದುದರಿಂದ ನೀವು ನಿಮ್ಮ ದೇವರನ್ನು ಅಲ್ಲಗಳೆದರೆ ಇದೇ ನಿಮಗೆ ವಿರೋಧವಾಗಿ ಸಾಕ್ಷಿಯಾಗಿರುವುದು” ಎಂದು ಹೇಳಿ
ಯೆಹೋಶುವ 24 : 28 (IRVKN)
ಅವರನ್ನು ಅವರವರ ಸ್ವತ್ತಿನ ಸ್ಥಳಗಳಿಗೆ ಕಳುಹಿಸಿದನು.
ಯೆಹೋಶುವ 24 : 29 (IRVKN)
ಯೆಹೋಶುವನ ಮರಣ ಇದಾದ ಮೇಲೆ ಯೆಹೋವನ ಸೇವಕನಾದ ನೂನನ ಮಗನಾದ ಯೆಹೋಶುವನು ನೂರಹತ್ತು ವರ್ಷದವನಾಗಿ ಮರಣಹೊಂದಿದನು.
ಯೆಹೋಶುವ 24 : 30 (IRVKN)
ಅವನ ಶವವನ್ನು ಎಫ್ರಾಯೀಮ್ ಪರ್ವತಪ್ರದೇಶದಲ್ಲಿ ಗಾಷ್ ಬೆಟ್ಟದ ಉತ್ತರದಿಕ್ಕಿನಲ್ಲಿರುವ ತಿಮ್ನತ್‌ಸೆರಹ ಎಂಬ ಅವನ ಸ್ವತ್ತಿನಭೂಮಿಯಲ್ಲಿ ಸಮಾಧಿಮಾಡಿದರು.
ಯೆಹೋಶುವ 24 : 31 (IRVKN)
ಯೆಹೋಶುವನ ದಿನಗಳಲ್ಲಿಯೂ ಅವನ ಕಾಲದಿಂದ ಇನ್ನೂ ಜೀವಿಸುತ್ತಾ ಯೆಹೋವನು ಇಸ್ರಾಯೇಲರಿಗೋಸ್ಕರ ನಡೆಸಿದ ಮಹತ್ಕಾರ್ಯಗಳಿಗೆ ಸಾಕ್ಷಿಗಳಾಗಿದ್ದ ಹಿರಿಯರ ದಿನಗಳಲ್ಲಿಯೂ ಇಸ್ರಾಯೇಲ್ಯರು ಯೆಹೋವನನ್ನು ಆರಾಧಿಸುತ್ತಿದ್ದರು.
ಯೆಹೋಶುವ 24 : 32 (IRVKN)
ಇಸ್ರಾಯೇಲ್ಯರು ಐಗುಪ್ತದಿಂದ ತಂದ ಯೋಸೇಫನ ಎಲುಬುಗಳನ್ನು, ಯಾಕೋಬನು ಶೆಕೆಮಿನ ತಂದೆಯಾದ ಹಮೋರನ ಮಕ್ಕಳಿಂದ ನೂರು ವರಹಾ ಕೊಟ್ಟು ಕೊಂಡು ಕೊಂಡ ಶೆಕೆಮ್ ಊರಿನ ಹೊಲದಲ್ಲಿ ಹೂಣಿಟ್ಟರು. ಆ ಹೊಲವು ಯೋಸೇಫ್ಯರ ಸ್ವತ್ತಾಗಿತ್ತು.
ಯೆಹೋಶುವ 24 : 33 (IRVKN)
ಆರೋನನ ಮಗನಾದ ಎಲಿಯಾಜರನು ಮರಣ ಹೊಂದಿದನು. ಅವನ ಶವವನ್ನು ಎಫ್ರಾಯೀಮ್ ಪರ್ವತ ಪ್ರಾಂತ್ಯದಲ್ಲಿ ಅವನ ಮಗನಾದ ಫೀನೆಹಾಸನ ಪಾಲಿಗೆ ಬಂದ ಗುಡ್ಡದಲ್ಲಿ ಸಮಾಧಿಮಾಡಿದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33