ಯೆಹೋಶುವ 10 : 1 (IRVKN)
ಯೆಹೋಶುವನು ಗಿಬ್ಯೋನಿನ ಬಳಿಯಲ್ಲಿ ಐದು ಮಂದಿ ಅರಸರನ್ನು ಸೋಲಿಸಿದ್ದು ಯೆಹೋಶುವನು ಆಯಿ ನಗರವನ್ನು, ಅದರ ಅರಸನನ್ನು ಹಿಡಿದು ಯೆರಿಕೋವನ್ನೂ ಅದರ ಅರಸನನ್ನೂ ಹೇಗೆ ಸಂಹರಿಸಿದನೆಂದು ಯೆರೂಸಲೇಮಿನ ಅರಸ ಅದೋನೀಚೆದೆಕನು ತಿಳಿದುಕೊಂಡನು.
ಯೆಹೋಶುವ 10 : 2 (IRVKN)
ಆಯಿ ಎಂಬ ಊರಿಗಿಂತ ದೊಡ್ಡದೂ, ಒಂದು ರಾಜಧಾನಿಯಷ್ಟು ಶ್ರೇಷ್ಠವೂ ಆಗಿರುವ ಗಿಬ್ಯೋನ್ ಪಟ್ಟಣದಲ್ಲಿರುವ ಜನರೆಲ್ಲರೂ ಯುದ್ಧವೀರರಾಗಿದ್ದರೂ ಇಸ್ರಾಯೇಲ್ಯರ ಮಧ್ಯದಲ್ಲಿ ಜೀವದಿಂದ ಉಳಿಯುವುದಕ್ಕೋಸ್ಕರ ಅವರ ಸಂಗಡ ಸಂಧಾನ ಮಾಡಿಕೊಂಡಿದ್ದಾರೆ ಎಂಬುವುದನ್ನು ಕೇಳಿ ಯೆರೂಸಲೇಮಿನ ಅರಸನಾದ ಅದೋನೀಚೆದೆಕನು ಬಹಳವಾಗಿ ಭಯಪಟ್ಟನು.
ಯೆಹೋಶುವ 10 : 3 (IRVKN)
ಆದುದರಿಂದ ಹೆಬ್ರೋನಿನ ಅರಸನಾದ ಹೋಹಾಮ್, ಯರ್ಮೂತಿನ ಅರಸನಾದ ಪಿರಾಮ್, ಲಾಕೀಷಿನ ಅರಸನಾದ ಯಾಫೀಯ, ಎಗ್ಲೋನಿನ ಅರಸನಾದ ದೆಬೀರ್ ಇವರ ಬಳಿಗೆ ದೂತರನ್ನು ಕಳುಹಿಸಿದನು.
ಯೆಹೋಶುವ 10 : 4 (IRVKN)
“ನೀವು ಬಂದು ನನಗೆ ಸಹಾಯಮಾಡಿರಿ, ನಾವು ಯೆಹೋಶುವನ ಸಂಗಡಲೂ ಇಸ್ರಾಯೇಲ್ಯರ ಸಂಗಡಲೂ ಒಡಂಬಡಿಕೆ ಮಾಡಿಕೊಂಡಿರುವ ಗಿಬ್ಯೋನ್ಯರನ್ನು ಸೋಲಿಸೋಣ” ಎಂದು ಹೇಳಿ ಕಳುಹಿಸಿದನು.
ಯೆಹೋಶುವ 10 : 5 (IRVKN)
ಆಗ ಯೆರೂಸಲೇಮ್, ಹೆಬ್ರೋನ್, ಯರ್ಮೂತ್, ಲಾಕೀಷ್, ಎಗ್ಲೋನ್ ಎಂಬ ಪಟ್ಟಣಗಳ ಐದು ಮಂದಿ ಅಮೋರಿಯ ರಾಜರು ಒಟ್ಟಾಗಿ ಸೇರಿ ದಂಡೆತ್ತಿ ಬಂದರು. ಅವರು ಗಿಬ್ಯೋನಿಗೆ ಮುತ್ತಿಗೆಹಾಕಿ ಯುದ್ಧಮಾಡಿದರು.
ಯೆಹೋಶುವ 10 : 6 (IRVKN)
ಗಿಬ್ಯೋನ್ಯರು ಗಿಲ್ಗಾಲಿನಲ್ಲಿದ್ದ ಯೆಹೋಶುವನ ಪಾಳೆಯಕ್ಕೆ ದೂತರನ್ನು ಕಳುಹಿಸಿದರು. “ನಿಮ್ಮ ಸೇವಕರಾದ ನಮ್ಮನ್ನು ಕೈಬಿಡದೆ, ಬೇಗನೆ ಬಂದು ಸಹಾಯಮಾಡಿ ನಮಗೆ ವಿರೋಧವಾಗಿ ಸೇರಿ ಬಂದಿರುವ ಈ ಬೆಟ್ಟದ ಸೀಮೆಯ ಎಲ್ಲಾ ಅಮೋರಿಯ ರಾಜರಿಂದ ನಮ್ಮನ್ನು ತಪ್ಪಿಸಿರಿ” ಎಂದು ಬೇಡಿಕೊಂಡರು.
ಯೆಹೋಶುವ 10 : 7 (IRVKN)
ಆಗ ಯೆಹೋಶುವನು ಎಲ್ಲಾ ಭಟರ ಮತ್ತು ಯುದ್ಧವೀರರ ಸಹಿತವಾಗಿ ಗಿಲ್ಗಾಲಿನಿಂದ ಹೊರಟನು.
ಯೆಹೋಶುವ 10 : 8 (IRVKN)
ಯೆಹೋವನು ಯೆಹೋಶುವನಿಗೆ, ಅವರಿಗೆ “ಹೆದರಬೇಡ, ಅವರನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ. ಅವರಲ್ಲಿ ಒಬ್ಬನೂ ನಿನ್ನ ಮುಂದೆ ನಿಲ್ಲುವುದಿಲ್ಲ” ಎಂದನು
ಯೆಹೋಶುವ 10 : 9 (IRVKN)
ಯೆಹೋಶುವನು ಗಿಲ್ಗಾಲ್ ಬಿಟ್ಟು ರಾತ್ರಿಯೆಲ್ಲಾ ಪ್ರಯಾಣಮಾಡಿ ತಟ್ಟನೆ ಅವರ ಮೇಲೆ ಬಿದ್ದನು.
ಯೆಹೋಶುವ 10 : 10 (IRVKN)
ಆ ಅಮೋರಿಯರಲ್ಲಿ ಯೆಹೋವನು ಇಸ್ರಾಯೇಲರ ಕುರಿತಾಗಿ ಅವರನ್ನು ಕಳವಳಗೊಳಿಸಿದ್ದರಿಂದ ಯೆಹೋಶುವನು ಅವರನ್ನು ಗಿಬ್ಯೋನಿನ ಹತ್ತಿರ ಸಂಪೂರ್ಣವಾಗಿ ಸೋಲಿಸಿ ಬೇತ್‌ಹೋರೋನ್ ಎಂಬ ಬೆಟ್ಟದ ದಾರಿಯಲ್ಲಿ ಅಜೇಕ, ಮಕ್ಕೇದ ಎಂಬ ಊರುಗಳವರೆಗೂ ಅವರನ್ನು ಹಿಂದಟ್ಟಿ ಸಂಹರಿಸಿದನು.
ಯೆಹೋಶುವ 10 : 11 (IRVKN)
ಅವರು ಇಸ್ರಾಯೇಲ್ಯರಿಗೆ ಬೆಂಗೊಟ್ಟು ಬೇತ್‍ಹೋರೋನಿನ ಇಳಿಜಾರಿನಲ್ಲಿ ಓಡುತ್ತಾ ಅಜೇಕವನ್ನು ತಲುಪುವವರೆಗೂ ಯೆಹೋವನು ಅವರ ಮೇಲೆ ಆಕಾಶದಿಂದ ದೊಡ್ಡ ಆಲಿಕಲ್ಲಿನ ಮಳೆಯನ್ನು ಸುರಿಸಿದನು. ಈ ಕಾರಣದಿಂದ ಅನೇಕರು ಸತ್ತರು ಇಸ್ರಾಯೇಲ್ಯರ ಕತ್ತಿಯಿಂದ ಸಂಹಾರವಾದವರಿಗಿಂತ ಆಲಿಕಲ್ಲಿನ ಮಳೆಯಿಂದ ನಾಶವಾದವರೇ ಹೆಚ್ಚು ಮಂದಿಯಾಗಿದ್ದರು.
ಯೆಹೋಶುವ 10 : 12 (IRVKN)
ಯೆಹೋವನು ಅಮೋರಿಯರನ್ನು ಇಸ್ರಾಯೇಲ್ಯರಿಗೆ ಒಪ್ಪಿಸಿದ ದಿನದಲ್ಲಿ ಯೆಹೋಶುವನು ಯೆಹೋವನಲ್ಲಿ ಒಂದು ವಿಜ್ಞಾಪನೆ ಮಾಡಿಕೊಂಡನು. “ಸೂರ್ಯನೇ, ನೀನು ಗಿಬ್ಯೋನಿನಲ್ಲೇ ನಿಲ್ಲು; ಚಂದ್ರನೇ, ನೀನು ಅಯ್ಯಾಲೋನ್ ಕಣಿವೆಯಲ್ಲೇ ನಿಲ್ಲು” ಎಂದು ಇಸ್ರಾಯೇಲ್ಯರ ಸಮಕ್ಷಮದಲ್ಲಿ ಆಜ್ಞಾಪಿಸಿದನು.
ಯೆಹೋಶುವ 10 : 13 (IRVKN)
ಇಸ್ರಾಯೇಲ್ಯರು ತಮ್ಮ ಶತ್ರುಗಳಿಗೆ ಮುಯ್ಯಿತೀರಿಸುವ ತನಕ ಸೂರ್ಯಚಂದ್ರರು ಹಾಗೆಯೇ ನಿಂತರು. ಈ ಮಾತು ಯಾಷಾರ್‌ ಗ್ರಂಥದಲ್ಲಿ ಬರೆದಿದೆಯಲ್ಲವೆ? ಹೀಗೆ ಸೂರ್ಯನು ಮುಳುಗಲು ಆತುರ ಪಡದೆ ಹೆಚ್ಚು ಕಡಿಮೆ ಒಂದು ದಿನ ಪೂರ್ತಿ ಆಕಾಶದ ಮಧ್ಯದಲ್ಲಿಯೇ ನಿಂತನು.
ಯೆಹೋಶುವ 10 : 14 (IRVKN)
ಯೆಹೋವನು ಈ ಪ್ರಕಾರ ಒಬ್ಬ ಮನುಷ್ಯನ ಮಾತಿಗೆ ಕಿವಿಗೊಟ್ಟ ದಿನವು ಅದಕ್ಕಿಂತ ಹಿಂದೆಯೂ ಮುಂದೆಯೂ ಇಲ್ಲವೇ ಇಲ್ಲ. ಯೆಹೋವನು ತಾನೇ ಇಸ್ರಾಯೇಲ್ಯರಿಗೋಸ್ಕರ ಯುದ್ಧಮಾಡುತ್ತಾ ಇದ್ದನು.
ಯೆಹೋಶುವ 10 : 15 (IRVKN)
ಯೆಹೋಶುವನು ಇಸ್ರಾಯೇಲ್ಯರ ಸಹಿತವಾಗಿ ಗಿಲ್ಗಾಲಿನ ಪಾಳೆಯಕ್ಕೆ ಹಿಂದಿರುಗಿದನು.
ಯೆಹೋಶುವ 10 : 16 (IRVKN)
ಆ ಐದು ಮಂದಿ ಅರಸರು ಓಡಿಹೋಗಿ ಮಕ್ಕೇದದ ಗುಹೆಯಲ್ಲಿ ಅಡಗಿಕೊಂಡರು.
ಯೆಹೋಶುವ 10 : 17 (IRVKN)
ಜನರು ಯೆಹೋಶುವನಿಗೆ “ಆ ಐದು ಮಂದಿ ನಮಗೆ ಸಿಕ್ಕಿದ್ದಾರೆ. ಅವರು ಮಕ್ಕೇದದ ಗವಿಯಲ್ಲಿ ಅಡಗಿಕೊಂಡಿದ್ದಾರೆ” ಎಂದು ತಿಳಿಸಿದರು.
ಯೆಹೋಶುವ 10 : 18 (IRVKN)
ಆಗ ಯೆಹೋಶುವನು ಅವರಿಗೆ “ಆ ಗವಿಯ ಬಾಯಿಗೆ ದೊಡ್ಡ ಕಲ್ಲುಗಳನ್ನು ಹೊರಳಿಸಿ ಕಾಯುವುದಕ್ಕೆ ಕಾವಲುಗಾರರನ್ನು ಇಡಿರಿ. ನೀವಾದರೂ ಅಲ್ಲೇ ನಿಂತುಕೊಳ್ಳಬೇಡಿ. ಬೇಗನೆ ಹಿಂದಟ್ಟಿ ಹಿಂದೆ ಬರುವ ಶತ್ರುಗಳನ್ನು ಹತಮಾಡುತ್ತಾ ಹೋಗಿರಿ.
ಯೆಹೋಶುವ 10 : 19 (IRVKN)
ಅವರನ್ನು ಅವರ ಪಟ್ಟಣಗಳಲ್ಲಿ ಸೇರುವುದಕ್ಕೆ ಬಿಡಬೇಡಿರಿ. ನಿಮ್ಮ ದೇವರಾದ ಯೆಹೋವನು ಅವರನ್ನು ನಿಮ್ಮ ಕೈಗೆ ಒಪ್ಪಿಸಿದ್ದಾನಲ್ಲಾ?” ಎಂದನು.
ಯೆಹೋಶುವ 10 : 20 (IRVKN)
ಈ ರೀತಿಯಾಗಿ ಯೆಹೋಶುವನೂ ಹಾಗೂ ಇಸ್ರಾಯೇಲ್ಯರೂ ಅವರನ್ನು ಸಂಪೂರ್ಣವಾಗಿ ಸೋಲಿಸಿ ಸಂಹರಿಸಿಬಿಟ್ಟರು. ಸ್ವಲ್ಪ ಜನರು ಮಾತ್ರ ತಪ್ಪಿಸಿಕೊಂಡು ಕೋಟೆ ಕೊತ್ತಲುಗಳಿದ್ದ ಪಟ್ಟಣಗಳನ್ನು ಸೇರಿಕೊಂಡರು.
ಯೆಹೋಶುವ 10 : 21 (IRVKN)
ಇಸ್ರಾಯೇಲ್ಯರಾದರೋ ಮಕ್ಕೇದದಲ್ಲಿ ಇಳುಕೊಂಡಿದ್ದ ಯೆಹೋಶುವನ ಬಳಿಗೆ ಸುರಕ್ಷಿತರಾಗಿ ಬಂದರು. ಇಸ್ರಾಯೇಲ್ಯರಿಗೆ ವಿರೋಧವಾಗಿ ಒಬ್ಬನೂ ಮಾತನಾಡಲಿಲ್ಲ.
ಯೆಹೋಶುವ 10 : 22 (IRVKN)
ಅನಂತರ ಯೆಹೋಶುವನು ಜನರಿಗೆ “ಗವಿಯ ಬಾಯನ್ನು ತೆರೆದು ಆ ಐದು ಮಂದಿ ಅರಸರನ್ನು ನನ್ನ ಬಳಿಗೆ ತನ್ನಿರಿ” ಎಂದನು.
ಯೆಹೋಶುವ 10 : 23 (IRVKN)
ಅವರು ಹೋಗಿ ಯೆರೂಸಲೇಮ್, ಹೆಬ್ರೋನ್, ಯರ್ಮೂತ್, ಲಾಕೀಷ್, ಎಗ್ಲೋನ್ ಎಂಬ ಪಟ್ಟಣಗಳ ಐದು ಮಂದಿ ಅರಸರನ್ನು ಗವಿಯಿಂದ ಎಳೆದು ಕೊಂಡು ಅವನ ಬಳಿಗೆ ತಂದರು.
ಯೆಹೋಶುವ 10 : 24 (IRVKN)
ಅವರನ್ನು ತನ್ನ ಬಳಿಗೆ ತಂದನಂತರ ಯೆಹೋಶುವನು ಎಲ್ಲಾ ಇಸ್ರಾಯೇಲ್ಯರನ್ನು ಕರೆಸಿ ತನ್ನ ಜೊತೆಯಲ್ಲಿ ಬಂದಿದ್ದ ಸೈನ್ಯಾಧಿಪತಿಗಳಿಗೆ “ಹತ್ತಿರ ಬಂದು ಈ ಅರಸರ ಕೊರಳಿನ ಮೇಲೆ ಪಾದಗಳನ್ನಿಡಿರಿ” ಎಂದು ಹೇಳಿದನು. ಅವರು ಹತ್ತಿರ ಬಂದು ಅವರ ಕುತ್ತಿಗೆಯ ಮೇಲೆ ಕಾಲಿಟ್ಟರು.
ಯೆಹೋಶುವ 10 : 25 (IRVKN)
ಆಗ ಅವನು ಅವರಿಗೆ “ಅಂಜಬೇಡಿರಿ, ಕಳವಳಗೊಳ್ಳಬೇಡಿರಿ; ಸ್ಥಿರಚಿತ್ತರಾಗಿ, ಧೈರ್ಯದಿಂದಿರಿ. ನಿಮ್ಮೊಡನೆ ಯುದ್ಧಕ್ಕೆ ಬರುವ ಎಲ್ಲಾ ವೈರಿಗಳಿಗೂ ಯೆಹೋವನು ಹೀಗೆಯೇ ಮಾಡುವನು” ಎಂದು ಹೇಳಿದನು.
ಯೆಹೋಶುವ 10 : 26 (IRVKN)
ಅನಂತರ ಆ ಅರಸರನ್ನು ಕೊಲ್ಲಿಸಿ ಐದು ಮರಗಳಿಗೆ ನೇತುಹಾಕಿಸಿದನು. ಅವರ ಶವಗಳು ಸಾಯಂಕಾಲದವರೆಗೂ ಅಲ್ಲೇ ತೂಗಾಡುತ್ತಿದ್ದವು.
ಯೆಹೋಶುವ 10 : 27 (IRVKN)
ಸೂರ್ಯಾಸ್ತಮಾನದ ಹೊತ್ತಿಗೆ ಜನರು ಯೆಹೋಶುವನ ಅಪ್ಪಣೆಯಂತೆ ಅವುಗಳನ್ನು ಮರಗಳಿಂದ ಕೆಳಗಿಳಿಸಿ ಅವರು ಅಡಗಿಕೊಂಡಿದ್ದ ಗವಿಯಲ್ಲಿಯೇ ಹಾಕಿ ಅದರ ಬಾಯಿಗೆ ದೊಡ್ಡ ಕಲ್ಲುಗಳನ್ನು ಹೊರಳಿಸಿದರು. ಆ ಕಲ್ಲುಗಳು ಇಂದಿನವರೆಗೂ ಅಲ್ಲೇ ಇರುತ್ತವೆ.
ಯೆಹೋಶುವ 10 : 28 (IRVKN)
ಕಾನಾನ್ ದೇಶದ ದಕ್ಷಿಣ ಭಾಗವು ಇಸ್ರಾಯೇಲ್ಯರಿಗೆ ವಶವಾದದ್ದು ಅದೇ ದಿನ ಯೆಹೋಶುವನು ಮಕ್ಕೇದವನ್ನು ಸ್ವಾಧೀನಪಡಿಸಿ ಕೊಂಡನು. ಅ ಊರಿನ ರಾಜ ಪ್ರಜೆಗಳೆಲ್ಲರನ್ನೂ ಕತ್ತಿಯಿಂದ ಸಂಹರಿಸಿದನು. ಒಬ್ಬನನ್ನೂ ಉಳಿಸಲಿಲ್ಲ. ಯೆರಿಕೋವಿನ ಅರಸನಿಗೆ ಮಾಡಿದಂತೆ ಈ ಅರಸನಿಗೂ ಮಾಡಿದನು.
ಯೆಹೋಶುವ 10 : 29 (IRVKN)
ಯೆಹೋಶುವನು ಜನರೆಲ್ಲರ ಸಹಿತವಾಗಿ ಮಕ್ಕೇದದಿಂದ ಲಿಬ್ನಕ್ಕೆ ಹೋಗಿ ಅಲ್ಲಿಯವರೊಡನೆ ಯುದ್ಧಮಾಡಿದನು.
ಯೆಹೋಶುವ 10 : 30 (IRVKN)
ಯೆಹೋವನು ಅದನ್ನೂ ಅದರ ಅರಸನನ್ನೂ ಇಸ್ರಾಯೇಲ್ಯರ ಕೈವಶಮಾಡಿದನು. ಅವರು ಅದರಲ್ಲಿದ್ದ ಜನರಲ್ಲಿ ಒಬ್ಬನನ್ನೂ ಉಳಿಸದೆ ಎಲ್ಲರನ್ನೂ ಕತ್ತಿಯಿಂದ ಸಂಹರಿಸಿದರು. ಯೆರಿಕೋವಿನ ಅರಸನಿಗಾದ ಗತಿಯೇ ಇವರ ಅರಸನಿಗೂ ಆಯಿತು.
ಯೆಹೋಶುವ 10 : 31 (IRVKN)
ಅಲ್ಲಿಂದ ಯೆಹೋಶುವನು ಇಸ್ರಾಯೇಲ್ಯರ ಸಹಿತವಾಗಿ ಲಾಕೀಷಿಗೆ ಹೋಗಿ ಮುತ್ತಿಗೆಹಾಕಿ ಯುದ್ಧಮಾಡಿದನು.
ಯೆಹೋಶುವ 10 : 32 (IRVKN)
ಯೆಹೋವನು ಅದನ್ನು ಇಸ್ರಾಯೇಲ್ಯರ ಕೈಗೆ ಒಪ್ಪಿಸಿದ್ದರಿಂದ, ಅವರು ಅದನ್ನು ಎರಡನೆಯ ದಿನದಲ್ಲಿ ಸ್ವಾಧೀನಮಾಡಿಕೊಂಡು ಅದನ್ನೂ ಅದರ ಜನರನ್ನೂ ಸಂಹರಿಸಿಬಿಟ್ಟರು. ಲಿಬ್ನದವರಿಗಾದ ಗತಿಯೇ ಇವರಿಗೂ ಆಯಿತು.
ಯೆಹೋಶುವ 10 : 33 (IRVKN)
ಇದಲ್ಲದೆ ಯೆಹೋಶುವನು ಲಾಕೀಷಿನವರ ಸಹಾಯಕ್ಕೆ ಬಂದ ಗೆಜೆರಿನ ಅರಸನಾದ ಹೋರಾಮನನ್ನೂ ಅವನ ಪ್ರಜೆಗಳೆಲ್ಲರನ್ನೂ ಸದೆಬಡಿದನು. ಒಬ್ಬನೂ ಉಳಿಯಲಿಲ್ಲ.
ಯೆಹೋಶುವ 10 : 34 (IRVKN)
ತರುವಾಯ ಯೆಹೋಶುವನು ಲಾಕೀಷನ್ನು ಬಿಟ್ಟು ಇಸ್ರಾಯೇಲ್ಯರೆಲ್ಲರ ಸಹಿತವಾಗಿ ಎಗ್ಲೋನಿಗೆ ಬಂದು ಮುತ್ತಿಗೆಹಾಕಿ ಯುದ್ಧಮಾಡಿದನು.
ಯೆಹೋಶುವ 10 : 35 (IRVKN)
ಅವರು ಅದೇ ದಿನದಲ್ಲಿ ಅದನ್ನು ಹಿಡಿದು ಲಾಕೀಷಿನವರಿಗೆ ಮಾಡಿದಂತೆಯೇ ಅದನ್ನೂ ಅದರ ಜನರೆಲ್ಲರನ್ನೂ ಕತ್ತಿಯಿಂದ ಸಂಹರಿಸಿಬಿಟ್ಟರು.
ಯೆಹೋಶುವ 10 : 36 (IRVKN)
ಅನಂತರ ಯೆಹೋಶುವನೂ, ಇಸ್ರಾಯೇಲರೂ ಎಗ್ಲೋನನ್ನು ಬಿಟ್ಟು ಹೆಬ್ರೋನಿಗೆ ಹೋಗಿ ಅದಕ್ಕೆ ವಿರೋಧವಾಗಿ ಯುದ್ಧಮಾಡಿ
ಯೆಹೋಶುವ 10 : 37 (IRVKN)
ಅದಕ್ಕೆ ಸೇರಿದ ಊರುಗಳನ್ನೂ ಅದರ ರಾಜಪ್ರಜೆಗಳೆಲ್ಲರನ್ನೂ ಕತ್ತಿಯಿಂದ ಸಂಹರಿಸಿದರು. ಎಗ್ಲೋನಿನಲ್ಲಿ ಹೇಗೋ ಹಾಗೆಯೇ ಇಲ್ಲಿಯೂ ಒಬ್ಬನನ್ನೂ ಉಳಿಸಲಿಲ್ಲ; ಪಟ್ಟಣವನ್ನೂ ಜನರನ್ನೂ ನಾಶಮಾಡಿದರು.
ಯೆಹೋಶುವ 10 : 38 (IRVKN)
ಅಲ್ಲಿಂದ ಯೆಹೋಶುವನೂ ಎಲ್ಲಾ ಇಸ್ರಾಯೇಲರೂ ದೆಬೀರಿಗೆ ಬಂದು ಅಲ್ಲಿಯವರೊಡನೆ ಯುದ್ಧಮಾಡಿದರು.
ಯೆಹೋಶುವ 10 : 39 (IRVKN)
ಅದನ್ನೂ ಅದಕ್ಕೆ ಸೇರಿದ ಊರುಗಳನ್ನೂ ಹಿಡಿದುಕೊಂಡು ಅದರ ರಾಜಪ್ರಜೆಗಳೆಲ್ಲರನ್ನೂ ಕತ್ತಿಯಿಂದ ಸಂಹರಿಸಿದರು. ಒಬ್ಬನನ್ನೂ ಉಳಿಸಲಿಲ್ಲ. ಹೆಬ್ರೋನಿಗೂ ಅದರ ಅರಸನಿಗೂ ಲಿಬ್ನಕ್ಕೂ ಅದರ ಅರಸನಿಗೂ ಆದ ಗತಿಯೇ ದೆಬೀರಿಗೂ ಅದರ ಅರಸನಿಗೂ ಆಯಿತು.
ಯೆಹೋಶುವ 10 : 40 (IRVKN)
ಹೀಗೆ ಯೆಹೋಶುವನು ಬೆಟ್ಟದ ಮೇಲಣ ಪ್ರದೇಶ, ದಕ್ಷಿಣಪ್ರಾಂತ್ಯ, ಇಳುಕಲ್ಲಿನ ಪ್ರದೇಶ, ಬೆಟ್ಟಗಳ ತಗ್ಗು ಪ್ರದೇಶ ಇವುಗಳನ್ನು ಸ್ವಾಧೀನಪಡಿಸಿಕೊಂಡು ಇವುಗಳ ರಾಜಪ್ರಜೆಗಳನ್ನು ಸಂಹರಿಸಿಬಿಟ್ಟನು. ಒಬ್ಬನನ್ನೂ ಉಳಿಸಲಿಲ್ಲ. ಇಸ್ರಾಯೇಲ್‍ ದೇವರಾದ ಯೆಹೋವನ ಆಜ್ಞೆಯಂತೆ ಜೀವವಿರುವುದೆಲ್ಲವನ್ನು ಸಂಹರಿಸಿದನು.
ಯೆಹೋಶುವ 10 : 41 (IRVKN)
ಕಾದೇಶ್ ಬರ್ನೇಯದಿಂದ ಗಾಜಾ ಊರಿನ ವರೆಗೂ ಗೋಷೆನ್ ಪ್ರಾಂತ್ಯದಿಂದ ಗಿಬ್ಯೋನಿನವರೆಗೂ ಎಲ್ಲರನ್ನೂ ಸೋಲಿಸಿದನು.
ಯೆಹೋಶುವ 10 : 42 (IRVKN)
ಇಸ್ರಾಯೇಲರ ದೇವರಾದ ಯೆಹೋವನು ಅವರ ಪರವಾಗಿ ಯುದ್ಧ ಮಾಡಿದ್ದರಿಂದ ಯೆಹೋಶುವನು ಈ ಎಲ್ಲಾ ರಾಜರನ್ನೂ ರಾಜ್ಯಗಳನ್ನೂ ಏಕಕಾಲದಲ್ಲಿ ವಶಮಾಡಿಕೊಂಡನು.
ಯೆಹೋಶುವ 10 : 43 (IRVKN)
ತರುವಾಯ ಯೆಹೋಶುವನು ಎಲ್ಲಾ ಇಸ್ರಾಯೇಲ್ಯರೊಡನೆ ಗಿಲ್ಗಾಲಿನಲ್ಲಿದ್ದ ತನ್ನ ಪಾಳೆಯಕ್ಕೆ ಹಿಂದಿರುಗಿದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43