ಯೆರೆಮಿಯ 7 : 1 (IRVKN)
ದೇವಾಲಯದಲ್ಲಿ ಯೆರೆಮೀಯನಿಗೆ ಬೋಧನೆ ಯೆಹೋವನು ಯೆರೆಮೀಯನಿಗೆ ಈ ಮಾತನ್ನು ದಯಪಾಲಿಸಿದನು,
ಯೆರೆಮಿಯ 7 : 2 (IRVKN)
“ನೀನು ಯೆಹೋವನ ಆಲಯದ ಬಾಗಿಲಿನಲ್ಲಿ ನಿಂತು ಈ ವಾಕ್ಯವನ್ನು ಅಲ್ಲಿ ಸಾರು, ಯೆಹೋವನಿಗೆ ಅಡ್ಡಬೀಳುವುದಕ್ಕೆ ಈ ದ್ವಾರಗಳನ್ನು ಪ್ರವೇಶಿಸುವ ಸಕಲ ಯೆಹೂದ್ಯರೇ, ಯೆಹೋವನ ನುಡಿಯನ್ನು ಕೇಳಿರಿ.
ಯೆರೆಮಿಯ 7 : 3 (IRVKN)
ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಹೀಗೆನ್ನುತ್ತಾನೆ, ನೀವು ನಿಮ್ಮ ನಡತೆಯನ್ನೂ, ಕೃತ್ಯಗಳನ್ನೂ ತಿದ್ದಿಕೊಳ್ಳಿರಿ; ಹೀಗೆ ಮಾಡಿದರೆ ನಾನು ನಿಮ್ಮನ್ನು ಈ ಸ್ಥಳದಲ್ಲಿ ನೆಲೆಗೊಳಿಸುವೆನು.
ಯೆರೆಮಿಯ 7 : 4 (IRVKN)
‘ಈ ಕಟ್ಟಡಗಳೇ ಯೆಹೋವನ ಆಲಯ, ಯೆಹೋವನ ಆಲಯ, ಯೆಹೋವನ ಆಲಯ’ ಎಂಬ ಸುಳ್ಳು ಮಾತುಗಳ ಮೇಲೆ ಭರವಸವಿಡಬೇಡಿರಿ.
ಯೆರೆಮಿಯ 7 : 5 (IRVKN)
ನೀವು ನಿಮ್ಮ ನಡತೆಯನ್ನು ಮತ್ತು ಕೃತ್ಯಗಳನ್ನು ಸಂಪೂರ್ಣವಾಗಿ ತಿದ್ದಿಕೊಂಡು ಕಕ್ಷಿ ಪ್ರತಿಕಕ್ಷಿಗಳಿಗೆ ಕೇವಲ ನ್ಯಾಯವನ್ನೇ ತೀರಿಸಿರಿ.
ಯೆರೆಮಿಯ 7 : 6 (IRVKN)
ಪರದೇಶಿಯನ್ನಾಗಲಿ, ಅನಾಥನನ್ನಾಗಲಿ ಅಥವಾ ವಿಧವೆಯನ್ನಾಗಲಿ ಹಿಂಸಿಸದೆ, ಈ ಸ್ಥಳದಲ್ಲಿ ನಿರ್ದೋಷಿಗಳ ರಕ್ತವನ್ನು ಸುರಿಸದೆ, ನಿಮಗೆ ಹಾನಿಕರವಾದ ಅನ್ಯದೇವತೆಗಳಲ್ಲಿ ಭಕ್ತಿ ಇಡದೆ ಇದ್ದರೆ,
ಯೆರೆಮಿಯ 7 : 7 (IRVKN)
ನಾನು ನಿಮ್ಮನ್ನು ಈ ಸ್ಥಳದಲ್ಲಿ, ನಾನೇ ನಿಮ್ಮ ಪೂರ್ವಿಕರಿಗೆ ಶಾಶ್ವತವಾಗಿ ದಯಪಾಲಿಸಿದ ಈ ದೇಶದಲ್ಲಿ ನೆಲೆಗೊಳಿಸುವೆನು.
ಯೆರೆಮಿಯ 7 : 8 (IRVKN)
ಆಹಾ, ನೀವು ನಿಷ್ಪ್ರಯೋಜಕವಾದ ಸುಳ್ಳುಮಾತುಗಳಲ್ಲಿ ಭರವಸವಿಟ್ಟಿದ್ದೀರಿ.
ಯೆರೆಮಿಯ 7 : 9 (IRVKN)
ನೀವು ಕಳ್ಳತನ, ಕೊಲೆ ಮತ್ತು ವ್ಯಭಿಚಾರಗಳನ್ನು ಮಾಡಿ ಸುಳ್ಳುಸಾಕ್ಷಿ ಹೇಳಿ, ಬಾಳನಿಗೆ ಹೋಮವನ್ನರ್ಪಿಸಿ, ಕಂಡುಕೇಳದ ಅನ್ಯದೇವತೆಗಳನ್ನು ಹಿಂಬಾಲಿಸಿದ ಮೇಲೆ,
ಯೆರೆಮಿಯ 7 : 10 (IRVKN)
ನನ್ನ ಹೆಸರುಗೊಂಡಿರುವ ಈ ಆಲಯಕ್ಕೆ ಬಂದು ನನ್ನ ಸನ್ನಿಧಿಯಲ್ಲಿ ನಿಂತು, ‘ನಮಗೆ ಪರಿಹಾರವಾಯಿತು’ ಎಂದು ಹೇಳಿ ಈ ಎಲ್ಲಾ ಅಸಹ್ಯಕಾರ್ಯಗಳನ್ನು ಇನ್ನೂ ನಡೆಸುವುದಕ್ಕೆ ಅವಕಾಶ ಮಾಡಿಕೊಳ್ಳುವಿರೋ?
ಯೆರೆಮಿಯ 7 : 11 (IRVKN)
ನನ್ನ ಹೆಸರುಗೊಂಡಿರುವ ಈ ಆಲಯವು ನಿಮ್ಮ ದೃಷ್ಟಿಯಲ್ಲಿ ಕಳ್ಳರ ಗವಿಯಾಯಿತೋ? ಆಹಾ, ನಾನೇ, ನಾನೇ ಇದನ್ನೆಲ್ಲಾ ನೋಡಿದ್ದೇನೆ” ಎಂಬುದು ಯೆಹೋವನಾದ ನನ್ನ ನುಡಿ.
ಯೆರೆಮಿಯ 7 : 12 (IRVKN)
“ನಾನು ಮೊದಲು ನನ್ನ ನಾಮವನ್ನು ಸ್ಥಾಪಿಸಿದ ಶೀಲೋವಿನಲ್ಲಿನ ನನ್ನ ಸ್ಥಾನಕ್ಕೆ ನೀವು ಹೋಗಿ ನನ್ನ ಜನರಾದ ಇಸ್ರಾಯೇಲರ ಅಧರ್ಮದ ನಿಮಿತ್ತ ಅದಕ್ಕೆ ತಂದ ಗತಿಯನ್ನು ನೋಡಿರಿ.
ಯೆರೆಮಿಯ 7 : 13 (IRVKN)
ನಾನು ಸಾವಕಾಶ ಮಾಡದೆ ನಿಮಗೆ ನುಡಿದ ಮಾತುಗಳನ್ನು ನೀವು ಕೇಳದೆ, ನಿಮ್ಮನ್ನು ಕರೆದ ನನಗೆ ಉತ್ತರ ಕೊಡದೆ ಈ ಕೃತ್ಯಗಳನ್ನೆಲ್ಲಾ ನಡೆಸಿದಿರಿ.
ಯೆರೆಮಿಯ 7 : 14 (IRVKN)
ಆದಕಾರಣ ನನ್ನ ನಾಮಕ್ಕೆ ನೆಲೆಯಾದ ನಿಮ್ಮ ಭರವಸೆಗೆ ಆಧಾರವಾದ ಆಲಯಕ್ಕೂ, ನಾನು ನಿಮಗೂ ನಿಮ್ಮ ಪೂರ್ವಿಕರಿಗೂ ದಯಪಾಲಿಸಿದ ಸ್ಥಳಕ್ಕೂ ಶೀಲೋವಿಗೆ ತಂದ ಗತಿಯನ್ನೇ ಈಗ ತರುವೆನು.
ಯೆರೆಮಿಯ 7 : 15 (IRVKN)
ಮತ್ತು ನಾನು ನಿಮ್ಮ ಎಲ್ಲಾ ಸಹೋದರರನ್ನು ಅಂದರೆ ಸಮಸ್ತ ಎಫ್ರಾಯೀಮ್ ವಂಶದವರನ್ನು ತೊಲಗಿಸಿಬಿಟ್ಟ ಹಾಗೆ ನಿಮ್ಮನ್ನೂ ನನ್ನ ಕಣ್ಣೆದುರಿನಿಂದ ತೊಲಗಿಸುವೆನು.
ಯೆರೆಮಿಯ 7 : 16 (IRVKN)
ಯೆಹೋವನ ಎಚ್ಚರಿಕೆ “ನೀನಂತು ಈ ಜನರಿಗೋಸ್ಕರ ಬೇಡಿಕೊಳ್ಳಬೇಡ, ಇವರಿಗಾಗಿ ಮೊರೆಯಿಡಬೇಡ, ಪ್ರಾರ್ಥಿಸಬೇಡ, ನನಗೆ ವಿಜ್ಞಾಪಿಸಲೂ ಬೇಡ, ನಾನು ಕೇಳೆನು.
ಯೆರೆಮಿಯ 7 : 17 (IRVKN)
ಇವರು ಯೆಹೂದದ ಪಟ್ಟಣಗಳಲ್ಲಿಯೂ, ಯೆರೂಸಲೇಮಿನ ಬೀದಿಗಳಲ್ಲಿಯೂ ಮಾಡುವುದನ್ನು ನೀನು ನೋಡಲಿಲ್ಲವೋ?
ಯೆರೆಮಿಯ 7 : 18 (IRVKN)
ಗಗನದ ಒಡತಿಗೆ ಹೋಳಿಗೆಗಳನ್ನು ಮಾಡುವುದಕ್ಕಾಗಿ ಮಕ್ಕಳು ಸೌದೆಯನ್ನು ಆರಿಸುತ್ತಾರೆ, ತಂದೆಗಳು ಬೆಂಕಿಯನ್ನು ಹೊತ್ತಿಸುತ್ತಾರೆ, ಹೆಂಗಸರು ಕಣಕವನ್ನು ನಾದುತ್ತಾರೆ; ಅನ್ಯದೇವತೆಗಳಿಗೆ ಪಾನನೈವೇದ್ಯವನ್ನು ಅರ್ಪಿಸುತ್ತಾರೆ; ನನ್ನನ್ನು ಕೆಣಕಬೇಕೆಂದೇ ಇದನ್ನೆಲ್ಲಾ ಮಾಡುತ್ತಾರೆ.
ಯೆರೆಮಿಯ 7 : 19 (IRVKN)
ಅವರು ನನಗೆ ಕೇಡುಮಾಡುತ್ತಾರೋ, ಅವಮಾನವು ತಮ್ಮ ಮುಖವನ್ನು ಮುಚ್ಚುವಷ್ಟರ ಮಟ್ಟಿಗೆ ತಮಗೇ ಕೇಡುಮಾಡಿಕೊಳ್ಳುತ್ತಾರಲ್ಲಾ” ಎಂದು ಯೆಹೋವನು ನುಡಿಯುತ್ತಾನೆ.
ಯೆರೆಮಿಯ 7 : 20 (IRVKN)
ಹೀಗಿರಲು ಕರ್ತನಾದ ಯೆಹೋವನ ಈ ಮಾತನ್ನು ಕೇಳಿರಿ, “ಆಹಾ, ನನ್ನ ಕೋಪವೆಂಬ ರೋಷಾಗ್ನಿಯು ಈ ಸ್ಥಳದಲ್ಲಿ ಸುರಿಯಲ್ಪಡುವುದು; ಮನುಷ್ಯರ ಮೇಲೆಯೂ, ಪಶುಗಳ ಮೇಲೆಯೂ, ಕಾಡುಮರಗಳ ಮೇಲೆಯೂ, ಭೂಮಿಯ ಬೆಳೆಯ ಮೇಲೆಯೂ ಅದನ್ನು ಸುರಿಯುವೆನು; ಅದು ಆರದೆ ದಹಿಸುವುದು.”
ಯೆರೆಮಿಯ 7 : 21 (IRVKN)
ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಹೀಗೆನ್ನುತ್ತಾನೆ, “ನೀವು ಅರ್ಪಿಸುವ ಸರ್ವಾಂಗಹೋಮಗಳನ್ನು ಸಾಧಾರಣ ಯಜ್ಞಗಳೆಂದು ಭಾವಿಸಿ ಅವುಗಳ ಮಾಂಸವನ್ನೂ ತಿನ್ನಿರಿ.
ಯೆರೆಮಿಯ 7 : 22 (IRVKN)
ನಿಮ್ಮ ಪೂರ್ವಿಕರನ್ನು ಐಗುಪ್ತ ದೇಶದೊಳಗಿಂದ ಬರಮಾಡಿದಾಗ ಸರ್ವಾಂಗಹೋಮದ ಮತ್ತು ಯಜ್ಞದ ವಿಷಯವಾಗಿ ನಾನು ಅವರಿಗೆ ಏನೂ ಹೇಳಲಿಲ್ಲ, ಯಾವ ಅಪ್ಪಣೆಯನ್ನು ಕೊಡಲಿಲ್ಲ.
ಯೆರೆಮಿಯ 7 : 23 (IRVKN)
ಆದರೆ, ‘ನನ್ನ ಧ್ವನಿಗೆ ಕಿವಿಗೊಡಿರಿ, ನಾನು ನಿಮ್ಮ ದೇವರಾಗಿರುವೆನು, ನೀವು ನನ್ನ ಪ್ರಜೆಯಾಗಿರುವಿರಿ; ನಿಮಗೆ ಹಿತವಾಗುವಂತೆ ನಾನು ವಿಧಿಸುವ ಮಾರ್ಗದಲ್ಲೇ ನಡೆಯಿರಿ’ ಎಂಬ ಈ ಒಂದು ಅಪ್ಪಣೆಯನ್ನು ಮಾತ್ರ ಕೊಟ್ಟೆನು.
ಯೆರೆಮಿಯ 7 : 24 (IRVKN)
ಅವರಾದರೋ ಕೇಳಲಿಲ್ಲ, ಕಿವಿಗೊಡಲಿಲ್ಲ, ಸ್ವಂತ ಆಲೋಚನೆಗಳನ್ನು ಅನುಸರಿಸಿ ತಮ್ಮ ದುಷ್ಟಹೃದಯದ ಹಟದಂತೆ ನಡೆದು ಹಿಂದಿರುಗಿಯೇ ಹೋದರು, ಮುಂದುವರಿಯಲಿಲ್ಲ.
ಯೆರೆಮಿಯ 7 : 25 (IRVKN)
“ನಿಮ್ಮ ಪೂರ್ವಿಕರು ಐಗುಪ್ತ ದೇಶದೊಳಗಿಂದ ಹೊರಟ ದಿನ ಮೊದಲುಗೊಂಡು ಈ ದಿನದವರೆಗೂ ನನ್ನ ಸೇವಕರಾದ ಪ್ರವಾದಿಗಳನ್ನೆಲ್ಲಾ ನಿಮ್ಮವರ ಬಳಿಗೆ ಕಳುಹಿಸುತ್ತಾ ಬಂದಿದ್ದೇನೆ, ದಿನ ದಿನವೂ ತಡ ಮಾಡದೆ ಕಳುಹಿಸಿದ್ದೇನೆ.
ಯೆರೆಮಿಯ 7 : 26 (IRVKN)
ನಿಮ್ಮವರಾದರೋ ನನ್ನ ಮಾತನ್ನು ಕೇಳಲಿಲ್ಲ, ಕಿವಿಗೊಡಲಿಲ್ಲ, ನನ್ನ ಆಜ್ಞೆಗೆ ಮಣಿಯಲಿಲ್ಲ; ತಮ್ಮ ಪೂರ್ವಿಕರಿಗಿಂತಲೂ ಕೆಟ್ಟವರಾಗಿ ನಡೆದರು.
ಯೆರೆಮಿಯ 7 : 27 (IRVKN)
“ನೀನು ಈ ಮಾತುಗಳನ್ನೆಲ್ಲಾ ಹೇಳುವಾಗ ಅವರು ಕಿವಿಗೊಡುವುದಿಲ್ಲ, ಕರೆಯುವಾಗ ಉತ್ತರಕೊಡುವುದಿಲ್ಲ.
ಯೆರೆಮಿಯ 7 : 28 (IRVKN)
ಆದಕಾರಣ ನೀನು ಅವರಿಗೆ, ತಮ್ಮ ದೇವರಾದ ಯೆಹೋವನ ಧ್ವನಿಗೆ ಕಿವಿಗೊಡದೆ, ಶಿಕ್ಷಿತರಾಗದೆ ಇರುವ ಜನಾಂಗ ಇದುವೇ, ಸತ್ಯವು ಅವರ ಬಾಯಿಂದ ನಿರ್ಮೂಲವಾಗಿ ಅಳಿದುಹೋಗಿದೆ” ಎಂದು ಹೇಳು.
ಯೆರೆಮಿಯ 7 : 29 (IRVKN)
ಸಂಹಾರದ ತಗ್ಗು ಯೆರೂಸಲೇಮೇ, ತಲೆಯನ್ನು ಬೋಳಿಸಿಕೊಂಡು ಕೂದಲನ್ನು ಬಿಸಾಡಿಬಿಟ್ಟು, ಬೋಳುಗುಡ್ಡಗಳಲ್ಲಿ ಶೋಕಗೀತವನ್ನು ಹಾಡು; ಯೆಹೋವನು ತನ್ನ ಕೋಪಕ್ಕೆ ಗುರಿಯಾದ ಈ ವಂಶವನ್ನು ನಿರಾಕರಿಸಿ ತ್ಯಜಿಸಿದ್ದಾನೆ.
ಯೆರೆಮಿಯ 7 : 30 (IRVKN)
ಯೆಹೋವನು ಹೀಗೆನ್ನುತ್ತಾನೆ, “ಯೆಹೂದ್ಯರು ನನ್ನ ಚಿತ್ತಕ್ಕೆ ವಿರುದ್ಧವಾದದ್ದನ್ನೇ ನಡೆಸಿದ್ದಾರೆ, ನನ್ನ ಹೆಸರಿನಿಂದ ಖ್ಯಾತಿಗೊಂಡ ಆಲಯದಲ್ಲಿ ತಮ್ಮ ಅಸಹ್ಯವಸ್ತುಗಳನ್ನು ಇಟ್ಟು ಅದನ್ನು ಹೊಲೆಮಾಡಿದ್ದಾರೆ.
ಯೆರೆಮಿಯ 7 : 31 (IRVKN)
ಅವರು ಗಂಡು ಮತ್ತು ಹೆಣ್ಣು ಮಕ್ಕಳನ್ನು ಆಹುತಿಕೊಡುವುದಕ್ಕೆ ಬೆನ್ ಹಿನ್ನೋಮ್ ತಗ್ಗಿನಲ್ಲಿನ ‘ತೋಫೆತ್’ ಎಂಬ ಪೂಜಾಸ್ಥಳವನ್ನು ಕಟ್ಟಿದ್ದಾರೆ. ನಾನು ಆ ಸಂಸ್ಕಾರವನ್ನು ವಿಧಿಸಲಿಲ್ಲ, ಅದು ನನ್ನ ಮನಸ್ಸಿನಲ್ಲಿ ಹುಟ್ಟಲೂ ಇಲ್ಲ.
ಯೆರೆಮಿಯ 7 : 32 (IRVKN)
ಆಹಾ, ಈ ಕಾರಣದಿಂದ ಆ ಸ್ಥಳಕ್ಕೆ ತೋಫೆತ್ ಮತ್ತು ಬೆನ್ ಹಿನ್ನೋಮಿನ ತಗ್ಗು ಎಂಬ ಹೆಸರುಗಳು ಹೋಗಿ ‘ಸಂಹಾರದ ತಗ್ಗು’ ಎಂಬ ಹೆಸರಾಗುವ ದಿನಗಳು ಬರುವವು; ಇನ್ನೆಲ್ಲಿಯೂ ಸ್ಥಳವಿಲ್ಲವಾಗಿ ಶವಗಳನ್ನು ತೋಫೆತಿನಲ್ಲಿ ಹೂಣುವರು.
ಯೆರೆಮಿಯ 7 : 33 (IRVKN)
ಈ ಜನರ ಹೆಣಗಳು ಆಕಾಶದ ಪಕ್ಷಿಗಳಿಗೂ ಹಾಗು ಭೂಜಂತುಗಳಿಗೂ ಆಹಾರವಾಗುವವು; ಅವುಗಳನ್ನು ಬೆದರಿಸುವವರು ಯಾರೂ ಇರುವುದಿಲ್ಲ.
ಯೆರೆಮಿಯ 7 : 34 (IRVKN)
ಯೆಹೂದದ ಪಟ್ಟಣಗಳಲ್ಲಿಯೂ ಮತ್ತು ಯೆರೂಸಲೇಮಿನ ಬೀದಿಗಳಲ್ಲಿಯೂ ಹರ್ಷಸಂಭ್ರಮಗಳ ಧ್ವನಿಯನ್ನೂ, ವಧೂವರರ ಸ್ವರವನ್ನೂ ನಿಲ್ಲಿಸಿಬಿಡುವೆನು, ದೇಶವು ಹಾಳೇ ಹಾಳಾಗುವುದು” ಇದು ಯೆಹೋವನ ನುಡಿ.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34