ಯೆರೆಮಿಯ 42 : 1 (IRVKN)
ಜನರ ಬಿನ್ನಹ, ಯೆರೆಮೀಯನ ಉತ್ತರ ಆಗ ಸಕಲ ಸೇನಾಧಿಪತಿಗಳು, ಕಾರೇಹನ ಮಗನಾದ ಯೋಹಾನಾನನೂ ಮತ್ತು ಹೋಷಾಯನ ಮಗನಾದ ಯೆಜನ್ಯನೂ ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲಾ ಜನರೂ ಪ್ರವಾದಿಯಾದ ಯೆರೆಮೀಯನ ಬಳಿಗೆ ಬಂದರು.
ಯೆರೆಮಿಯ 42 : 2 (IRVKN)
ಅವರು ಅವನಿಗೆ, “ದಯಮಾಡು, ನಮ್ಮ ಬಿನ್ನಹವನ್ನು ಲಾಲಿಸು; ನಿನ್ನ ಕಣ್ಣಿಗೆ ಕಾಣುವ ಪ್ರಕಾರ ಅಪಾರ ಜನರಲ್ಲಿ ನಾವು ಕೆಲವರು ಮಾತ್ರ ಉಳಿದಿದ್ದೇವೆ.
ಯೆರೆಮಿಯ 42 : 3 (IRVKN)
ನಿನ್ನ ದೇವರಾದ ಯೆಹೋವನು ನಾವು ನಡೆಯಬೇಕಾದ ಮಾರ್ಗವನ್ನೂ, ಮಾಡತಕ್ಕ ಕಾರ್ಯವನ್ನೂ ತೋರಿಸುವ ಹಾಗೆ ನಮಗಾಗಿ ಅಂದರೆ ಉಳಿದಿರುವ ಈ ಜನರೆಲ್ಲರಿಗಾಗಿ ನಿನ್ನ ದೇವರಾದ ಯೆಹೋವನನ್ನು ಪ್ರಾರ್ಥಿಸು” ಎಂದು ವಿಜ್ಞಾಪಿಸಿದರು.
ಯೆರೆಮಿಯ 42 : 4 (IRVKN)
ಇದನ್ನು ಕೇಳಿ ಪ್ರವಾದಿಯಾದ ಯೆರೆಮೀಯನು ಅವರಿಗೆ, “ನಿಮ್ಮ ಬಿನ್ನಹವನ್ನು ಕೇಳಿದೆನು; ಇಗೋ, ನಿಮ್ಮ ಮಾತಿನಂತೆ ನಿಮ್ಮ ದೇವರಾದ ಯೆಹೋವನನ್ನು ಪ್ರಾರ್ಥಿಸುವೆನು; ಯೆಹೋವನು ಯಾವ ಉತ್ತರವನ್ನು ದಯಪಾಲಿಸುವನೋ ಒಂದನ್ನೂ ಬಚ್ಚಿಡದೆ ನಿಮಗೆ ತಿಳಿಸುವೆನು” ಎಂದು ಉತ್ತರಕೊಟ್ಟನು.
ಯೆರೆಮಿಯ 42 : 5 (IRVKN)
ಅವರು ಯೆರೆಮೀಯನಿಗೆ, “ನಿನ್ನ ದೇವರಾದ ಯೆಹೋವನು ನಿನ್ನ ಮೂಲಕ ನಮಗೆ ಕಳುಹಿಸುವ ಮಾತಿನಂತೆ ನಾವು ನಡೆಯದಿದ್ದರೆ ಯೆಹೋವನು ಸ್ಥಿರವಾದ ಸತ್ಯಸಾಕ್ಷಿಯಾಗಿ ನಿಂತು ನಮ್ಮನ್ನು ಖಂಡಿಸಲಿ!
ಯೆರೆಮಿಯ 42 : 6 (IRVKN)
ನಮ್ಮ ದೇವರಾದ ಯೆಹೋವನ ಮಾತು ಹಿತವಾಗಲಿ ಅಥವಾ ಅಹಿತವಾಗಲಿ ಆತನ ಸನ್ನಿಧಿಯಲ್ಲಿ ವಿಚಾರಿಸುವುದಕ್ಕೆ ನಿನ್ನನ್ನು ಕಳುಹಿಸುವ ನಾವು ಅದನ್ನು ಕೈಕೊಳ್ಳುವೆವು; ನಮ್ಮ ದೇವರಾದ ಯೆಹೋವನ ಮಾತನ್ನು ನಾವು ಕೇಳಿದರೆ ನಮಗೆ ಶುಭವಾಗುವುದು” ಎಂಬುದಾಗಿ ಹೇಳಿದರು.
ಯೆರೆಮಿಯ 42 : 7 (IRVKN)
ಹತ್ತು ದಿನಗಳಾದ ಮೇಲೆ ಯೆಹೋವನು ತನ್ನ ವಾಕ್ಯವನ್ನು ಯೆರೆಮೀಯನಿಗೆ ದಯಪಾಲಿಸಿದನು.
ಯೆರೆಮಿಯ 42 : 8 (IRVKN)
ಆಗ ಅವನು ಕಾರೇಹನ ಮಗನಾದ ಯೋಹಾನಾನನನ್ನೂ, ಅವನೊಂದಿಗಿದ್ದ ಸಕಲ ಸೇನಾಧಿಪತಿಗಳನ್ನೂ, ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲಾ ಜನರನ್ನೂ ಕರೆದು,
ಯೆರೆಮಿಯ 42 : 9 (IRVKN)
“ನಿಮ್ಮ ವಿಜ್ಞಾಪನೆಯನ್ನು ಯೆಹೋವನಿಗೆ ಅರಿಕೆಮಾಡುವುದಕ್ಕಾಗಿ ನನ್ನನ್ನು ಕಳುಹಿಸಿದ್ದಿರಲ್ಲಾ; ಅದಕ್ಕೆ ಇಸ್ರಾಯೇಲಿನ ದೇವರಾದ ಯೆಹೋವನು ಹೀಗೆನ್ನುತ್ತಾನೆ,
ಯೆರೆಮಿಯ 42 : 10 (IRVKN)
‘ನೀವು ಈ ದೇಶದಲ್ಲಿ ನೆಲೆಗೊಂಡಿದ್ದರೆ ನಾನು ನಿಮ್ಮನ್ನು ಕಟ್ಟುವೆನು, ಕೆಡವುವುದಿಲ್ಲ; ನೆಡುವೆನು, ಕೀಳುವುದಿಲ್ಲ; ನಾನು ನಿಮಗೆ ಮಾಡಿದ ಕೇಡಿಗೆ ಪಶ್ಚಾತ್ತಾಪಪಡುತ್ತೇನೆ.
ಯೆರೆಮಿಯ 42 : 11 (IRVKN)
ನೀವು ಹೆದರಿರುವ ಬಾಬೆಲಿನ ಅರಸನಿಗೆ ಹೆದರಬೇಡಿರಿ, ಅವನಿಗೆ ಅಂಜದಿರಿ; ನಾನು ನಿಮ್ಮನ್ನು ಅವನ ಕೈಯಿಂದ ತಪ್ಪಿಸಿ ರಕ್ಷಿಸಲಿಕ್ಕೆ ನಿಮ್ಮೊಂದಿಗಿದ್ದೇನಲ್ಲಾ. ಇದು ಯೆಹೋವನಾದ ನನ್ನ ನುಡಿ.
ಯೆರೆಮಿಯ 42 : 12 (IRVKN)
ಅವನು ನಿಮ್ಮನ್ನು ಕರುಣಿಸಿ ಸ್ವದೇಶಕ್ಕೆ ಹೋಗುವಂತೆ ನಾನು ನಿಮಗೆ ಕರುಣೆಯನ್ನು ಅನುಗ್ರಹಿಸುವೆನು’ ಎಂದೆನು.
ಯೆರೆಮಿಯ 42 : 13 (IRVKN)
ಆದರೆ ನೀವು ನಿಮ್ಮ ದೇವರಾದ ಯೆಹೋವನ ನುಡಿಗೆ ಕಿವಿಗೊಡದೆ ‘ಈ ದೇಶದಲ್ಲಿ ನಾವು ನೆಲೆಸುವುದೇ ಇಲ್ಲ;
ಯೆರೆಮಿಯ 42 : 14 (IRVKN)
ಬೇಡವೇ ಬೇಡ; ನಾವು ಯುದ್ಧ ಕಾಣದೆ, ತುತ್ತೂರಿಯ ಶಬ್ದ ಕೇಳದೆ, ಅನ್ನದ ಕೊರತೆಯಿಂದ ಹಸಿವಾಗದೆ ಇರುವ ಐಗುಪ್ತ ದೇಶಕ್ಕೆ ಹೋಗಿ ಅಲ್ಲೇ ವಾಸಿಸುವೆವು’ ಎಂದುಕೊಂಡರೆ,
ಯೆರೆಮಿಯ 42 : 15 (IRVKN)
ಯೆಹೂದ್ಯರಲ್ಲಿ ಉಳಿದವರೇ, ಯೆಹೋವನ ವಾಕ್ಯವನ್ನು ಈಗ ಕೇಳಿರಿ, ‘ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ನೀವು ಐಗುಪ್ತಕ್ಕೆ ಹೋಗಬೇಕೆಂದು ಹಟಹಿಡಿದು ಅಲ್ಲಿಗೆ ಸೇರಿ ವಾಸಮಾಡುವುದಾದರೆ,
ಯೆರೆಮಿಯ 42 : 16 (IRVKN)
ಆಗ ನೀವು ಹೆದರುತ್ತಿರುವ ಖಡ್ಗವು ಐಗುಪ್ತದಲ್ಲಿಯೂ ನಿಮ್ಮನ್ನು ಹಿಂದಟ್ಟಿ ಹಿಡಿಯುವುದು, ನೀವು ಅಂಜುತ್ತಿರುವ ಕ್ಷಾಮವು ಅಲ್ಲಿಯೂ ನಿಮ್ಮ ಬೆನ್ನ ಹತ್ತುವುದು; ಅಲ್ಲೇ ಸಾಯುವಿರಿ.
ಯೆರೆಮಿಯ 42 : 17 (IRVKN)
ಐಗುಪ್ತಕ್ಕೆ ಹೋಗಿ ಅಲ್ಲಿ ವಾಸಿಸಲು ಹಟಹಿಡಿಯುವ ಎಲ್ಲಾ ಜನರಿಗೂ ಇದೇ ಗತಿಯಾಗುವುದು; ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ಸಾಯುವರು. ನಾನು ಅವರಿಗೆ ಬರಮಾಡುವ ವಿಪತ್ತಿನಿಂದ ಯಾರೂ ತಪ್ಪಿಸಿಕೊಳ್ಳರು, ಯಾರೂ ಉಳಿಯರು.
ಯೆರೆಮಿಯ 42 : 18 (IRVKN)
ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ನನ್ನ ಉಗ್ರರೋಷಾಗ್ನಿಯು ಯೆರೂಸಲೇಮಿನವರ ಮೇಲೆ ಹೇಗೆ ಸುರಿಯಿತೋ ಹಾಗೆಯೇ ನೀವು ಐಗುಪ್ತದಲ್ಲಿ ಕಾಲಿಟ್ಟ ಕೂಡಲೆ ನನ್ನ ರೋಷಾಗ್ನಿಯು ನಿಮ್ಮ ಮೇಲೆಯೂ ಸುರಿಯುವುದು; ನೀವು ಅಪವಾದ, ವಿಸ್ಮಯ, ಶಾಪ ಮತ್ತು ದೂಷಣೆಗಳಿಗೆ ಗುರಿಯಾಗುವಿರಿ; ಈ ಸ್ಥಳವು ಮತ್ತೆ ನಿಮ್ಮ ಕಣ್ಣಿಗೆ ಬೀಳದು.’ ”
ಯೆರೆಮಿಯ 42 : 19 (IRVKN)
ಯೆರೆಮೀಯನು ಜನರನ್ನು ಎಚ್ಚರಿಸಿದ್ದು “ಯೆಹೂದ್ಯರಲ್ಲಿ ಉಳಿದವರೇ, ಯೆಹೋವನು ನಿಮ್ಮನ್ನು ಕುರಿತು, ‘ಐಗುಪ್ತಕ್ಕೆ ಹೋಗಬೇಡಿರಿ’ ಎಂದು ಅಪ್ಪಣೆಮಾಡಿದ್ದಾನೆ; ನಾನು ಈ ದಿನ ಆ ಮಾತನ್ನು ನಿಮಗೆ ಪ್ರಕಟಿಸಿದ್ದೇನೆ, ಚೆನ್ನಾಗಿ ತಿಳಿದಿರಲಿ.
ಯೆರೆಮಿಯ 42 : 20 (IRVKN)
ನಿಮ್ಮನ್ನು ನೀವೇ ಮೋಸಪಡಿಸಿಕೊಂಡಿದ್ದೀರಿ; ನೀವು ನನ್ನ ಬಳಿಗೆ ಬಂದು, ‘ನಮ್ಮ ದೇವರಾದ ಯೆಹೋವನನ್ನು ನಮಗಾಗಿ ಪ್ರಾರ್ಥಿಸು; ನಮ್ಮ ದೇವರಾದ ಯೆಹೋವನು ಯಾವ ಅಪ್ಪಣೆ ಕೊಡುತ್ತಾನೋ ಅದನ್ನು ನಮಗೆ ತಿಳಿಸು, ಅದರಂತೆಯೇ ನಡೆಯುವೆವು’ ಎಂಬುದಾಗಿ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ವಿಚಾರಿಸುವುದಕ್ಕೆ ನನ್ನನ್ನು ಕಳುಹಿಸಿದಿರಲ್ಲಾ.
ಯೆರೆಮಿಯ 42 : 21 (IRVKN)
ನಾನು ಯೆಹೋವನ ಅಪ್ಪಣೆಯನ್ನು ಈ ದಿನ ನಿಮಗೆ ತಿಳಿಸಿದ್ದೇನೆ; ನೀವಾದರೆ ನಿಮ್ಮ ದೇವರಾದ ಯೆಹೋವನು ನನ್ನ ಮೂಲಕ ನಿಮಗೆ ಹೇಳಿ ಕಳುಹಿಸಿದ ಯಾವ ಮಾತನ್ನೂ ಕೇಳಲಿಲ್ಲ.
ಯೆರೆಮಿಯ 42 : 22 (IRVKN)
ನೀವು ಯಾವ ಸ್ಥಳದಲ್ಲಿ ವಾಸಮಾಡಲು ಅಪೇಕ್ಷಿಸಿ ಹೋಗುತ್ತೀರೋ ಆ ಸ್ಥಳದಲ್ಲೇ ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ಸಾಯುವಿರಿ ಎಂದು ಖಂಡಿತವಾಗಿ ತಿಳಿಯಿರಿ” ಎಂದು ಹೇಳಿದನು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22