ಯೆರೆಮಿಯ 39 : 1 (IRVKN)
ಯೆರೂಸಲೇಮಿನ ಪತನ ಯೆಹೂದದ ಅರಸನಾದ ಚಿದ್ಕೀಯನ ಆಳ್ವಿಕೆಯ ಒಂಭತ್ತನೆಯ ವರ್ಷದ ಹತ್ತನೆಯ ತಿಂಗಳಿನಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಸಕಲ ಸೈನ್ಯಸಹಿತ ಬಂದು ಯೆರೂಸಲೇಮನ್ನು ಮುತ್ತಿದನು.
ಯೆರೆಮಿಯ 39 : 2 (IRVKN)
ಚಿದ್ಕೀಯನ ಹನ್ನೊಂದನೆಯ ವರ್ಷದ ನಾಲ್ಕನೆಯ ತಿಂಗಳಿನ ಒಂಭತ್ತನೆಯ ದಿನದಲ್ಲಿ ಪೌಳಿಗೋಡೆ ಒಡಕು ಬಿದ್ದು ಯೆರೂಸಲೇಮ್ ಪಟ್ಟಣವು ಶತ್ರುವಶವಾಯಿತು.
ಯೆರೆಮಿಯ 39 : 3 (IRVKN)
ಆಗ ನೇರ್ಗಲ್ ಸರೆಚರ್, ಸಮ್ಗರ್ ನೆಬೋ, ಕಂಚುಕಿಯರ ಮುಖ್ಯಸ್ಥನಾದ ಸರ್ಸೆಕೀಮ್, ಜೋಯಿಸರ ಮುಖ್ಯಸ್ಥನಾದ ನೇರ್ಗಲ್ ಸರೆಚರ್ ಅಂತು ಬಾಬೆಲಿನ ಅರಸನ ಸಕಲ ಸರದಾರರೂ ಪುರಪ್ರವೇಶಮಾಡಿ ಮಧ್ಯಮದ್ವಾರದೊಳಗೆ ಆಸೀನರಾದರು.
ಯೆರೆಮಿಯ 39 : 4 (IRVKN)
ಯೆಹೂದದ ಅರಸನಾದ ಚಿದ್ಕೀಯನೂ ಮತ್ತು ಸಮಸ್ತ ಸೈನಿಕರೂ ಇವರನ್ನು ನೋಡಿ ಅದೇ ರಾತ್ರಿಯಲ್ಲಿ ಹೊರಟು ಅರಸನ ಉದ್ಯಾನದ ಮಾರ್ಗವಾಗಿ ಎರಡು ಗೋಡೆಗಳ ನಡುವಣ ಬಾಗಿಲಿನಿಂದ ಪಟ್ಟಣವನ್ನು ಬಿಟ್ಟು ಅರಾಬಾ* ಅರಾಬಾ ಯೊರ್ದನ್ ಕಣಿವೆ. ಎಂಬ ತಗ್ಗಾದ ಪ್ರದೇಶದ ಕಡೆಗೆ ಪಲಾಯನ ಮಾಡಿದರು.
ಯೆರೆಮಿಯ 39 : 5 (IRVKN)
ಕಸ್ದೀಯರ ಸೈನಿಕರು ಅವರನ್ನು ಹಿಂದಟ್ಟುತ್ತಾ ಯೆರಿಕೋವಿನ ಬಯಲಿನಲ್ಲಿ ಚಿದ್ಕೀಯನನ್ನು ಹಿಡಿದು ಹಮಾತ್ ಸೀಮೆಯ ರಿಬ್ಲದಲ್ಲಿದ್ದ ನೆಬೂಕದ್ನೆಚ್ಚರನೆಂಬ ಬಾಬೆಲಿನ ಅರಸನ ಬಳಿಗೆ ತೆಗೆದುಕೊಂಡು ಬಂದರು.
ಯೆರೆಮಿಯ 39 : 6 (IRVKN)
ಆ ಬಾಬೆಲಿನ ಅರಸನು ಅಲ್ಲಿ ಚಿದ್ಕೀಯನಿಗೆ ಶಿಕ್ಷೆಯನ್ನು ವಿಧಿಸಿ, ಅವನ ಮಕ್ಕಳನ್ನು ರಿಬ್ಲದಲ್ಲಿ ಅಲ್ಲೇ ಅವನ ಕಣ್ಣೆದುರಿಗೆ ವಧಿಸಿ ಯೆಹೂದದ ಸಮಸ್ತ ಶ್ರೀಮಂತರನ್ನೂ ಕೊಲ್ಲಿಸಿದನು.
ಯೆರೆಮಿಯ 39 : 7 (IRVKN)
ಇದಲ್ಲದೆ ಚಿದ್ಕೀಯನ ಕಣ್ಣುಗಳನ್ನು ಕೀಳಿಸಿ ಅವನನ್ನು ಬಾಬಿಲೋನಿಗೆ ಸಾಗಿಸಬೇಕೆಂದು ಬೇಡಿಹಾಕಿಸಿದನು.
ಯೆರೆಮಿಯ 39 : 8 (IRVKN)
ಮತ್ತು ಕಸ್ದೀಯರು ಅರಮನೆಯನ್ನೂ, ಪ್ರಜೆಗಳ ಮನೆಗಳನ್ನೂ ಬೆಂಕಿಯಿಂದ ಸುಟ್ಟು, ಯೆರೂಸಲೇಮಿನ ಸುತ್ತಣ ಗೋಡೆಗಳನ್ನು ಕೆಡವಿದರು.
ಯೆರೆಮಿಯ 39 : 9 (IRVKN)
ಆಗ ಕಾವಲು ದಂಡಿನ ಅಧಿಪತಿಯಾದ ನೆಬೂಜರದಾನನು ಪಟ್ಟಣದಲ್ಲಿ ಉಳಿದವರನ್ನೂ, ಮೊದಲೇ ತನ್ನನ್ನು ಮೊರೆಹೊಕ್ಕವರನ್ನೂ, ಇತರ ಸಮಸ್ತ ಜನರನ್ನೂ ಬಾಬಿಲೋನಿಗೆ ಸೆರೆಯೊಯ್ದನು.
ಯೆರೆಮಿಯ 39 : 10 (IRVKN)
ಆದರೆ ಏನೂ ಇಲ್ಲದ ಕೆಲವು ಬಡ ಜನರನ್ನು ಯೆಹೂದ ದೇಶದಲ್ಲಿ ಬಿಟ್ಟು ಆಗಲೇ ಅವರಿಗೆ ಹೊಲ ಮತ್ತು ದ್ರಾಕ್ಷಿತೋಟಗಳನ್ನು ಕೊಟ್ಟನು.
ಯೆರೆಮಿಯ 39 : 11 (IRVKN)
ಕಸ್ದೀಯರ ಮುಖ್ಯಾಧಿಕಾರಿಗಳು ಯೆರೆಮೀಯನನ್ನು ಕಾಪಾಡಿದ್ದು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆರೆಮೀಯನ ವಿಷಯವಾಗಿ ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನಿಗೆ,
ಯೆರೆಮಿಯ 39 : 12 (IRVKN)
“ಅವನನ್ನು ಕರೆಯಿಸಿಕೊಂಡು ಏನೂ ಕೇಡುಮಾಡದೆ ಅವನು ಬೇಡುವುದನ್ನೆಲ್ಲಾ ನೆರವೇರಿಸಿ ಕಟಾಕ್ಷಿಸು” ಎಂದು ಅಪ್ಪಣೆಕೊಟ್ಟನು.
ಯೆರೆಮಿಯ 39 : 13 (IRVKN)
ಅದಕ್ಕೆ ಕಾವಲುದಂಡಿನ ಅಧಿಪತಿಯಾದ ನೆಬೂಜರದಾನ್, ಕಂಚುಕಿಯರ ಮುಖ್ಯಸ್ಥನಾದ ನೆಬೂಷಜ್ಬಾನ್, ಜೋಯಿಸರ ಮುಖ್ಯಸ್ಥನಾದ ನೇರ್ಗಲ್ ಸರೆಚರ್ ಅಂತು ಬಾಬೆಲಿನ ಅರಸನ ಸಮಸ್ತ ಮುಖ್ಯಾಧಿಕಾರಿಗಳು,
ಯೆರೆಮಿಯ 39 : 14 (IRVKN)
ಯೆರೆಮೀಯನನ್ನು ಕಾರಾಗೃಹದ ಅಂಗಳದಿಂದ ಕರೆತರಿಸಿ, ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನ ವಶಕ್ಕೆ ಒಪ್ಪಿಸಿ ಮನೆಗೆ ಕರೆದುಕೊಂಡು ಹೋಗುವಂತೆ ಹೇಳಿದರು. ಅಂದಿನಿಂದ ಯೆರೆಮೀಯನು ಎಂದಿನಂತೆ ಜನರ ಮಧ್ಯದಲ್ಲಿ ವಾಸಿಸಿದನು.
ಯೆರೆಮಿಯ 39 : 15 (IRVKN)
ಎಬೆದ್ಮೆಲೆಕನಿಗೆ ಆದ ವಾಗ್ದಾನ ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ಸೆರೆಯಾಗಿದ್ದಾಗ ಯೆಹೋವನು ಅವನಿಗೆ ಈ ಮಾತನ್ನು ದಯಪಾಲಿಸಿದನು,
ಯೆರೆಮಿಯ 39 : 16 (IRVKN)
“ನೀನು ಹೋಗಿ ಕೂಷ್ಯನಾದ ಎಬೆದ್ಮೆಲೆಕನಿಗೆ ಹೀಗೆ ಹೇಳು, ‘ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ಆಹಾ, ನಾನು ನುಡಿದ ಮೇಲನ್ನಲ್ಲ, ನುಡಿದ ಕೇಡನ್ನೇ ಈ ಪಟ್ಟಣದ ಮೇಲೆ ಬರಮಾಡುವೆನು; ಅದು ಆ ದಿನದಲ್ಲಿ ನಿನ್ನ ಕಣ್ಣೆದುರಿಗೆ ಆಗುವುದು.
ಯೆರೆಮಿಯ 39 : 17 (IRVKN)
ಯೆಹೋವನು ಇಂತೆನ್ನುತ್ತಾನೆ, ಆ ದಿನದಲ್ಲಿ ನಾನು ನಿನ್ನನ್ನು ಉದ್ಧರಿಸುವೆನು; ನೀನು ಹೆದರುವ ಮನುಷ್ಯರ ಕೈಗೆ ಸಿಕ್ಕುವುದಿಲ್ಲ.
ಯೆರೆಮಿಯ 39 : 18 (IRVKN)
ನೀನು ನನ್ನಲ್ಲಿ ಭರವಸವಿಟ್ಟ ಕಾರಣ ನಿನ್ನನ್ನು ರಕ್ಷಿಸೇ ರಕ್ಷಿಸುವೆನು; ನೀನು ಖಡ್ಗಕ್ಕೆ ತುತ್ತಾಗದೆ ಅದರ ಬಾಯೊಳಗಿಂದ ನಿನ್ನ ಪ್ರಾಣವನ್ನು ಸೆಳೆದುಕೊಂಡು ಹೋಗುವಿ; ಇದು ಯೆಹೋವನ ನುಡಿ’ ” ಎಂಬುದೇ.
❮
❯
1
2
3
4
5
6
7
8
9
10
11
12
13
14
15
16
17
18