ಯೆರೆಮಿಯ 35 : 1 (IRVKN)
ರೇಕಾಬ್ಯರ ವಿಧೇಯತೆ, ಯೆಹೂದ್ಯರ ಅವಿಧೇಯತೆ ಯೋಷೀಯನ ಮಗನೂ, ಯೆಹೂದದ ಅರಸನೂ ಆದ ಯೆಹೋಯಾಕೀಮನ ಕಾಲದಲ್ಲಿ ಯೆಹೋವನು ಯೆರೆಮೀಯನಿಗೆ ದಯಪಾಲಿಸಿದ ವಾಕ್ಯ,
ಯೆರೆಮಿಯ 35 : 2 (IRVKN)
“ನೀನು ರೇಕಾಬನ ಮನೆತನದವರ ಬಳಿಗೆ ಹೋಗಿ ಅವರ ಸಂಗಡ ಮಾತನಾಡಿ ಅವರನ್ನು ಯೆಹೋವನ ಆಲಯದ ಒಂದು ಕೋಣೆಯೊಳಕ್ಕೆ ಕರೆದು ದ್ರಾಕ್ಷಾರಸವನ್ನು ಕುಡಿಯುವುದಕ್ಕೆ ಕೊಡು” ಎಂಬುದೇ.
ಯೆರೆಮಿಯ 35 : 3 (IRVKN)
ಆಗ ಪ್ರವಾದಿಯು ಯೆರೆಮೀಯನ ಮಗನೂ ಹಬಚ್ಚಿನ್ಯನ ಮೊಮ್ಮಗನೂ ಆದ ಯಾಜನ್ಯನನ್ನು, ಅವನ ಅಣ್ಣತಮ್ಮಂದಿರನ್ನು, ಅವನ ಎಲ್ಲಾ ಮಕ್ಕಳನ್ನು, ಅಂತು ರೇಕಾಬನ ಮನೆತನದವರೆಲ್ಲರನ್ನೂ
ಯೆರೆಮಿಯ 35 : 4 (IRVKN)
ಯೆಹೋವನ ಆಲಯಕ್ಕೆ ಕರೆದು ಇಗ್ದಲ್ಯನ ಮಗನೂ, ದೇವರ ಮನುಷ್ಯನೂ ಆದ ಹಾನಾನನ ಮಕ್ಕಳ ಕೋಣೆಯೊಳಕ್ಕೆ, ಅಂದರೆ ಸರದಾರರ ಕೋಣೆಯ ಪಕ್ಕದಲ್ಲಿ, ಶಲ್ಲೂಮನ ಮಗನೂ ದ್ವಾರಪಾಲಕನೂ ಆದ ಮಾಸೇಯನ ಕೋಣೆಯ ಮೇಲ್ಗಡೆ ಇರುವ ಕೋಣೆಯೊಳಕ್ಕೆ ಬರಮಾಡಿದನು.
ಯೆರೆಮಿಯ 35 : 5 (IRVKN)
ಆ ರೇಕಾಬನ ಮನೆತನದವರ ಮುಂದೆ ದ್ರಾಕ್ಷಾರಸ ತುಂಬಿದ ಬಟ್ಟಲುಗಳನ್ನೂ, ಪಂಚಪಾತ್ರೆಗಳನ್ನೂ ಇಟ್ಟು, “ದ್ರಾಕ್ಷಾರಸವನ್ನು ಕುಡಿಯಿರಿ” ಅಂದನು.
ಯೆರೆಮಿಯ 35 : 6 (IRVKN)
ಅದಕ್ಕೆ ಅವರು, “ನಾವು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲ, ನಮ್ಮ ಪಿತೃವಾದ ರೇಕಾಬನ ಮಗನಾದ ಯೋನಾದಾಬನು ನಮಗೆ, ‘ನೀವಾಗಲಿ ನಿಮ್ಮ ಸಂತಾನದವರಾಗಲಿ ಯುಗಯುಗಾಂತರಕ್ಕೂ ದ್ರಾಕ್ಷಾರಸ ಕುಡಿಯಬಾರದು,
ಯೆರೆಮಿಯ 35 : 7 (IRVKN)
ಮನೆಕಟ್ಟಬಾರದು, ಬೀಜ ಬಿತ್ತಬಾರದು, ದ್ರಾಕ್ಷಿತೋಟ ಮಾಡಬಾರದು, ಅನುಭವಿಸಲೂ ಬಾರದು, ನಿಮ್ಮ ಜೀವಮಾನವೆಲ್ಲಾ ಗುಡಾರಗಳಲ್ಲೇ ವಾಸಿಸಬೇಕು, ಇದರಿಂದ ನೀವು ತಂಗುವ ದೇಶದಲ್ಲಿ ನಿಮಗೆ ದೀರ್ಘಾಯುಷ್ಯವಾಗವುದು’ ” ಎಂದು ಅಪ್ಪಣೆಕೊಟ್ಟಿದ್ದಾನೆ.
ಯೆರೆಮಿಯ 35 : 8 (IRVKN)
ನಮ್ಮ ಪಿತೃವಾದ ರೇಕಾಬನ ಮಗನಾಗಿರುವ ಯೋನಾದಾಬನು ನಮಗೆ ಕೊಟ್ಟ ಈ ಅಪ್ಪಣೆಯನ್ನು, ಎಲ್ಲಾ ವಿಷಯದಲ್ಲಿಯೂ ಕೈಗೊಳ್ಳುತ್ತಿದ್ದೇವೆ; ನಾವಾಗಲಿ, ನಮ್ಮ ಹೆಂಡತಿಯರಾಗಲಿ, ಗಂಡು ಹೆಣ್ಣುಮಕ್ಕಳಾಗಲಿ ಜೀವಮಾನದಲ್ಲೆಲ್ಲಾ ದ್ರಾಕ್ಷಾರಸವನ್ನು ಕುಡಿಯುವುದಿಲ್ಲ.
ಯೆರೆಮಿಯ 35 : 9 (IRVKN)
ನಮ್ಮ ವಾಸಕ್ಕೆ ಮನೆಯನ್ನು ಕಟ್ಟುವುದಿಲ್ಲ; ನಮಗೆ ದ್ರಾಕ್ಷಿತೋಟ, ಹೊಲ ಮತ್ತು ಬೀಜಗಳೂ ಇಲ್ಲ.
ಯೆರೆಮಿಯ 35 : 10 (IRVKN)
ನಾವು ಗುಡಾರಗಳಲ್ಲಿ ವಾಸಿಸುತ್ತಾ ನಮ್ಮ ಪಿತೃವಾದ ಯೋನಾದಾಬನು ನಮಗೆ ವಿಧಿಸಿದ್ದನ್ನೆಲ್ಲಾ ಶಿರಸಾವಹಿಸಿ ನಡೆಸುತ್ತಿದ್ದೇವೆ.
ಯೆರೆಮಿಯ 35 : 11 (IRVKN)
ಆದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ದೇಶದೊಳಗೆ ನುಗ್ಗಿದಾಗ, “ಕಸ್ದೀಯರ ಮತ್ತು ಅರಾಮ್ಯರ ಸೈನ್ಯಗಳ ಮುಂದೆ ನಿಲ್ಲದೆ ಯೆರೂಸಲೇಮಿಗೆ ಹೋಗೋಣ ಬನ್ನಿ ಎಂದುಕೊಂಡು ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದೇವೆ” ಎಂದು ಹೇಳಿದರು.
ಯೆರೆಮಿಯ 35 : 12 (IRVKN)
ಆಗ ಯೆಹೋವನು ಯೆರೆಮೀಯನಿಗೆ ಈ ಮಾತನ್ನು ದಯಪಾಲಿಸಿದನು,
ಯೆರೆಮಿಯ 35 : 13 (IRVKN)
“ಇಸ್ರಾಯೇಲರ ದೇವರೂ, ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ನೀನು ಹೋಗಿ ಯೆಹೂದ್ಯರಿಗೂ, ಯೆರೂಸಲೇಮಿನ ನಿವಾಸಿಗಳಿಗೂ ಹೀಗೆ ಹೇಳು, ‘ಇದರಿಂದ ನೀವು ಬುದ್ಧಿತಂದುಕೊಂಡು ನನ್ನ ಮಾತುಗಳನ್ನು ಕೇಳುವುದಿಲ್ಲವೋ?’ ಎಂದು ಯೆಹೋವನು ಅನ್ನುತ್ತಾನೆ.
ಯೆರೆಮಿಯ 35 : 14 (IRVKN)
ರೇಕಾಬನ ಮಗನಾದ ಯೋನಾದಾಬನು ತನ್ನ ಸಂತಾನದವರಿಗೆ ದ್ರಾಕ್ಷಾರಸವನ್ನು ಕುಡಿಯಬಾರದೆಂದು ಕೊಟ್ಟ ಅಪ್ಪಣೆ ನೆರವೇರಿದೆ; ಅವರು ಇಂದಿನ ವರೆಗೂ ಕುಡಿಯಲಿಲ್ಲ, ತಮ್ಮ ಪಿತೃವಿನ ಆಜ್ಞೆಯನ್ನು ಕೈಕೊಂಡಿದ್ದಾರೆ; ನೀವೋ, ನಾನು ನಿಮಗೆ ಎಡೆಬಿಡದೆ ಹೇಳುತ್ತಾ ಬಂದರೂ ನನ್ನ ಮಾತಿಗೆ ಕಿವಿಗೊಡಲಿಲ್ಲ.
ಯೆರೆಮಿಯ 35 : 15 (IRVKN)
ಇದಲ್ಲದೆ ನಾನು ನನ್ನ ಸೇವಕರಾದ ಪ್ರವಾದಿಗಳನ್ನೆಲ್ಲಾ ನಿಮ್ಮ ಬಳಿಗೆ ನಿತ್ಯವೂ ಕಳುಹಿಸುತ್ತಾ, ನೀವೆಲ್ಲರೂ ನಿಮ್ಮ ನಿಮ್ಮ ದುರ್ಮಾರ್ಗಗಳಿಂದ ಹಿಂದಿರುಗಿ ನಿಮ್ಮ ನಡತೆಗಳನ್ನು ಸರಿಪಡಿಸಿಕೊಳ್ಳಿರಿ, ಅನ್ಯದೇವತೆಗಳನ್ನು ಹಿಂಬಾಲಿಸಿ ಸೇವಿಸದಿರಿ; ಹೀಗೆ ಮಾಡಿದರೆ ನಾನು ನಿಮಗೂ, ನಿಮ್ಮ ಪೂರ್ವಿಕರಿಗೂ ದಯಪಾಲಿಸಿದ ದೇಶದಲ್ಲಿ ನೀವು ಸುಖವಾಸಿಗಳಾಗಿರುವಿರಿ ಎಂದು ಹೇಳಿಸಿದರೂ ನೀವು ನನ್ನ ಮಾತನ್ನು ಕೇಳಲಿಲ್ಲ, ಕಿವಿಗೊಡಲೂ ಇಲ್ಲ.
ಯೆರೆಮಿಯ 35 : 16 (IRVKN)
ರೇಕಾಬನ ಮಗನಾದ ಯೋನಾದಾಬನ ಸಂತಾನದವರು ತಮ್ಮ ಪಿತೃವು ತಮಗೆ ವಿಧಿಸಿದ್ದನ್ನು ಕೇಳಿ ಅನುಸರಿಸುತ್ತಿರುವಲ್ಲಿ ಈ ಜನರು ನನ್ನ ಮಾತನ್ನು ಕೇಳದೆ ಹೋದುದರಿಂದ,
ಯೆರೆಮಿಯ 35 : 17 (IRVKN)
ಇಗೋ, ನಾನು ಯೆಹೂದ್ಯರಿಗೂ, ಯೆರೂಸಲೇಮಿನವರೆಲ್ಲರಿಗೂ ಕೊಟ್ಟ ಶಾಪದ ಕೇಡನ್ನೆಲ್ಲಾ ಅವರ ಮೇಲೆ ಬರಮಾಡುವೆನು; ನಾನು ಹೇಳಿದರೂ ಅವರು ಕೇಳಲಿಲ್ಲ, ಕೂಗಿದರೂ ಉತ್ತರಕೊಡಲಿಲ್ಲ ಎಂದು ಸೇನಾಧೀಶ್ವರ ಸ್ವಾಮಿಯೂ, ಇಸ್ರಾಯೇಲರ ದೇವರೂ ಆದ ಯೆಹೋವನು ಅನ್ನುತ್ತಾನೆ” ಎಂಬುದೇ.
ಯೆರೆಮಿಯ 35 : 18 (IRVKN)
ಮತ್ತು ಯೆರೆಮೀಯನು ರೇಕಾಬ್ಯರಿಗೆ, “ಇಸ್ರಾಯೇಲರ ದೇವರೂ, ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ‘ನೀವು ನಿಮ್ಮ ಪಿತೃವಾದ ಯೋನಾದಾಬನ ಅಪ್ಪಣೆಯನ್ನು ಕೇಳಿ ಅವನ ಸಕಲ ವಿಧಿಗಳನ್ನು ಅನುಸರಿಸಿ ಅವನು ಆಜ್ಞಾಪಿಸಿದ್ದನ್ನೆಲ್ಲಾ ನೆರವೇರಿಸಿದ ಕಾರಣ,
ಯೆರೆಮಿಯ 35 : 19 (IRVKN)
ರೇಕಾಬನ ಮಗನಾದ ಯೋನಾದಾಬನ ಸಂತಾನದವರೊಳಗೆ ನನ್ನ ಸಮ್ಮುಖದಲ್ಲಿ ಸೇವೆಮಾಡತಕ್ಕವರು ತಲತಲಾಂತರಕ್ಕೂ ಇದ್ದೇ ಇರುವರು. ಇಸ್ರಾಯೇಲರ ದೇವರೂ, ಸೇನಾಧೀಶ್ವರನೂ ಆದ ಯೆಹೋವನು ಇದನ್ನು ನುಡಿದಿದ್ದಾನೆ’ ” ಎಂಬುದೇ.

1 2 3 4 5 6 7 8 9 10 11 12 13 14 15 16 17 18 19