ಯೆರೆಮಿಯ 30 : 1 (IRVKN)
ಸುಸ್ಥಿತಿಗೆ ತರುವ ವಾಗ್ದಾನ ಯೆಹೋವನು ಯೆರೆಮೀಯನಿಗೆ ಈ ಮಾತನ್ನು ದಯಪಾಲಿಸಿದನು,
ಯೆರೆಮಿಯ 30 : 2 (IRVKN)
“ಇಸ್ರಾಯೇಲರ ದೇವರಾದ ಯೆಹೋವನು ಇಂತೆನ್ನುತ್ತಾನೆ, ನಾನು ನಿನಗೆ ಹೇಳಿರುವ ಮಾತುಗಳನ್ನೆಲ್ಲಾ ನೀನು ಗ್ರಂಥವಾಗಿ ಬರೆ.
ಯೆರೆಮಿಯ 30 : 3 (IRVKN)
ಇಗೋ, ನಾನು ನನ್ನ ಜನರಾದ ಇಸ್ರಾಯೇಲರನ್ನು ಮತ್ತು ಯೆಹೂದ್ಯರನ್ನು ಅವರ ದುರವಸ್ಥೆಯಿಂದ ತಪ್ಪಿಸುವ ದಿನಗಳು ಬರುವವು. ಆಗ ನಾನು ಅವರನ್ನು ಅವರ ಪೂರ್ವಿಕರಿಗೆ ಅನುಗ್ರಹಿಸಿದ ದೇಶಕ್ಕೆ ಪುನಃ ಬರಮಾಡುವೆನು. ಅವರು ಅದನ್ನು ಅನುಭವಿಸುವರು. ಇದು ಯೆಹೋವನ ನುಡಿ” ಎಂಬುದೇ.
ಯೆರೆಮಿಯ 30 : 4 (IRVKN)
ಇಸ್ರಾಯೇಲಿಗೆ ಸಂಭವಿಸುವ ಬಾಧೆಯೂ ಉದ್ಧಾರವೂ ಯೆಹೋವನು ಇಸ್ರಾಯೇಲಿನ ಮತ್ತು ಯೆಹೂದದ ವಿಷಯವಾಗಿ ಈ ಮಾತುಗಳನ್ನು ಹೇಳಿದನು,
ಯೆರೆಮಿಯ 30 : 5 (IRVKN)
“ಯೆಹೋವನು ಇಂತೆನ್ನುತ್ತಾನೆ, ಭೀತಿಯಿಂದಾಗುವ ಶಬ್ದವು ಕೇಳಿಸಿದೆ; ಭಯವೇ ಹೊರತು ಸಮಾಧಾನವಿಲ್ಲ;
ಯೆರೆಮಿಯ 30 : 6 (IRVKN)
ವಿಚಾರಿಸಿ ನೋಡಿರಿ, ಗಂಡಸು ಪ್ರಸವವೇದನೆ ಪಡುವುದುಂಟೆ? ಪ್ರತಿಯೊಬ್ಬನು ಹೆರುವವಳಂತೆ ಸೊಂಟವನ್ನು ಹಿಸಕಿಕೊಳ್ಳುವುದು, ಎಲ್ಲಾ ಮುಖಗಳು ಬಿಳಿಚಿಕೊಂಡಿರುವುದು, ಇವು ಏಕೆ ನನ್ನ ಕಣ್ಣಿಗೆ ಬೀಳುತ್ತವೆ?
ಯೆರೆಮಿಯ 30 : 7 (IRVKN)
ಅಯ್ಯೋ, ಆ ದಿನವು ಘೋರವಾದದ್ದು, ಅಂಥ ದಿನ ಮತ್ತೊಂದಿಲ್ಲ, ಅದು ಯಾಕೋಬರಿಗೆ ಇಕ್ಕಟ್ಟಿನ ದಿನ; ಆದರೂ ಅವರು ಅದರಿಂದ ಪಾರಾಗುವರು.”
ಯೆರೆಮಿಯ 30 : 8 (IRVKN)
ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಆ ದಿನದಲ್ಲಿ ಅವರ ಮೇಲೆ ಹೇರಿದ ನೊಗವನ್ನು ಅವರ ಹೆಗಲಿನಿಂದ ಮುರಿದುಬಿಟ್ಟು, ಕಣ್ಣಿಗಳನ್ನು ಕಿತ್ತುಹಾಕುವೆನು; ಇನ್ನು ಅನ್ಯರು ಅವರನ್ನು ಅಡಿಯಾಳಾಗಿ ಮಾಡಿಕೊಳ್ಳರು.
ಯೆರೆಮಿಯ 30 : 9 (IRVKN)
ಅವರು ತಮ್ಮ ದೇವರಾದ ಯೆಹೋವನೆಂಬ ನನ್ನನ್ನೂ, ನಾನು ಅವರಿಗಾಗಿ ಏರ್ಪಡಿಸುವ ರಾಜನಾದ ದಾವೀದನನ್ನೂ ಸೇವಿಸುವರು.”
ಯೆರೆಮಿಯ 30 : 10 (IRVKN)
ಯೆಹೋವನು ಇಂತೆನ್ನುತ್ತಾನೆ, “ನನ್ನ ಸೇವಕನಾದ ಯಾಕೋಬೇ, ಭಯಪಡಬೇಡ! ಇಸ್ರಾಯೇಲೇ, ಅಂಜಬೇಡ! ಇಗೋ ನಾನು ನಿನ್ನನ್ನು ದೂರದೇಶದಿಂದ ಉದ್ಧರಿಸುವೆನು, ನಿನ್ನ ಸಂತಾನವನ್ನು ಸೆರೆಹೋದ ಸೀಮೆಯಿಂದ ರಕ್ಷಿಸುವೆನು. ಯಾಕೋಬನು ಹಿಂದಿರುಗಿ ನೆಮ್ಮದಿಯಾಗಿಯೂ, ಹಾಯಾಗಿಯೂ ಇರುವುದು; ಯಾರೂ ಅದನ್ನು ಹೆದರಿಸರು.”
ಯೆರೆಮಿಯ 30 : 11 (IRVKN)
ಯೆಹೋವನು ಇಂತೆನ್ನುತ್ತಾನೆ, “ನಾನು ನಿನ್ನನ್ನು ರಕ್ಷಿಸಲು ನಿನ್ನೊಂದಿಗಿದ್ದೇನೆ; ನಾನು ಯಾವ ಜನಾಂಗಗಳಲ್ಲಿಗೆ ನಿನ್ನನ್ನು ಓಡಿಸಿಬಿಟ್ಟು ಚದರಿಸಿದೆನೋ, ಆ ಜನಾಂಗಗಳನ್ನೆಲ್ಲಾ ನಿರ್ಮೂಲಮಾಡುವೆನು. ನಿನ್ನನ್ನೋ ನಿರ್ಮೂಲಮಾಡೆನು; ನಿನ್ನನ್ನು ಮಿತಿಮೀರಿ ಶಿಕ್ಷಿಸೆನು. ಆದರೆ ಶಿಕ್ಷಿಸದೆ ಬಿಡುವುದಿಲ್ಲ.”
ಯೆರೆಮಿಯ 30 : 12 (IRVKN)
ಹಾಳಾಗಿ ಹೋದ ಚೀಯೋನನ್ನು ಯೆಹೋವನು ಉನ್ನತಿಗೆ ತರುವುದು ಯೆಹೋವನು ಇಂತೆನ್ನುತ್ತಾನೆ, “ನಿನ್ನ ಗಾಯವು ಗುಣಹೊಂದುವುದಿಲ್ಲ, ನಿನ್ನ ಬಾಸುಂಡೆಯು ಘೋರವಾಗಿದೆ.
ಯೆರೆಮಿಯ 30 : 13 (IRVKN)
ನಿನ್ನ ಪಾಲಿಗೆ ಯಾರೂ ಇಲ್ಲ, ನಿನ್ನ ಹುಣ್ಣಿಗೆ ಔಷಧವಿಲ್ಲ, ನಿನಗೆ ವಾಸಿಯಾಗುವುದಿಲ್ಲ.
ಯೆರೆಮಿಯ 30 : 14 (IRVKN)
ನಿನ್ನೊಂದಿಗೆ ವ್ಯಭಿಚಾರದಲ್ಲಿ ತೊಡಗಿದವರು ಯಾರೂ ನಿನ್ನನ್ನು ಹುಡುಕುವುದಿಲ್ಲ, ಮರೆತುಬಿಟ್ಟರು. ನಿನ್ನ ಅಪರಾಧವು ಹೆಚ್ಚಿ ಪಾಪಗಳು ಬಹಳವಾದುದರಿಂದ ನಾನು ಶತ್ರುವಾಗಿ ನಿನ್ನನ್ನು ಹೊಡೆದೆನು, ಕ್ರೂರನಾಗಿ ದಂಡಿಸಿದೆನು.
ಯೆರೆಮಿಯ 30 : 15 (IRVKN)
ಅಯ್ಯೋ, ನೋವು ನಿಲ್ಲದು ಎಂದು ನಿನ್ನ ಪೆಟ್ಟಿಗಾಗಿ ಏಕೆ ಅರಚಿಕೊಳ್ಳುತ್ತೀ? ನಿನ್ನ ಅಪರಾಧವು ಹೆಚ್ಚಿ ಪಾಪಗಳು ಬಹಳವಾದುದರಿಂದ ನಿನಗೆ ಇದನ್ನೆಲ್ಲಾ ಮಾಡಿದೆನು.
ಯೆರೆಮಿಯ 30 : 16 (IRVKN)
ಹೀಗಿರಲು ನಿನ್ನನ್ನು ನುಂಗುವವರೆಲ್ಲರು ನುಂಗಲ್ಪಡುವರು; ನಿನ್ನ ಶತ್ರುಗಳಲ್ಲಿ ಒಬ್ಬನೂ ತಪ್ಪದೆ ಸೆರೆಗೆ ಹೋಗುವರು. ನಿನ್ನನ್ನು ಸೂರೆಮಾಡುವವರು ಸೂರೆಯಾಗುವರು, ನಿನ್ನನ್ನು ಕೊಳ್ಳೆ ಹೊಡೆಯುವವರನ್ನು ಕೊಳ್ಳೆಗೆ ಈಡುಮಾಡುವೆನು.”
ಯೆರೆಮಿಯ 30 : 17 (IRVKN)
ಯೆಹೋವನು ಇಂತೆನ್ನುತ್ತಾನೆ, “ಇಗೋ, ‘ಇದು ಚೀಯೋನ್, ಯಾರಿಗೂ ಬೇಡವಾಗಿರುವ ನಗರ’ ಎಂದು ಜನರು ಹೇಳಿ, ನಿನ್ನನ್ನು ಭ್ರಷ್ಟಳೆಂದದ್ದನ್ನು ನಾನು ಸಹಿಸಲಾರದೆ, ನಿನ್ನನ್ನು ಗುಣಪಡಿಸಿ ನಿನ್ನ ಬಾಸುಂಡೆಗಳನ್ನು ವಾಸಿಮಾಡುವೆನು.”
ಯೆರೆಮಿಯ 30 : 18 (IRVKN)
ಯೆಹೋವನು ಹೀಗೆನ್ನುತ್ತಾನೆ, “ಆಹಾ, ನಾನು ಯಾಕೋಬಿನ ಮನೆಗಳ ದುರವಸ್ಥೆಯನ್ನು ತಪ್ಪಿಸಿ, ಅದರ ನಿವಾಸಗಳನ್ನು ಕರುಣಿಸುವೆನು. ಪಟ್ಟಣವು ತನ್ನ ಹಾಳುದಿಬ್ಬದ ಮೇಲೆ ಪುನಃ ಕಟ್ಟಲ್ಪಡುವುದು, ಅರಮನೆಯು ತಾನಿದ್ದ ಸ್ಥಳದಲ್ಲೇ ನೆಲೆಯಾಗಿರುವುದು.
ಯೆರೆಮಿಯ 30 : 19 (IRVKN)
ಅವುಗಳೊಳಗಿಂದ ಸ್ತೋತ್ರವೂ ಮತ್ತು ಸಂತೋಷದಿಂದ ನಲಿಯುವ ಧ್ವನಿಯೂ ಕೇಳಿಸುವವು. ನಾನು ಆ ಜನರನ್ನು ಹೆಚ್ಚಿಸುವೆನು, ಅವರು ಇನ್ನು ಅಲ್ಪರಾಗಿರರು, ಅವರನ್ನು ಘನಪಡಿಸುವೆನು, ಅವರು ಇನ್ನು ಹೀನರಾಗಿರರು.
ಯೆರೆಮಿಯ 30 : 20 (IRVKN)
ಅವರ ಸಂತಾನವು ಪೂರ್ವದ ಸ್ಥಿತಿಯನ್ನು ಹೊಂದುವುದು, ಅವರ ಸಮಾಜವು ನನ್ನ ಮುಂದೆ ನೆಲೆಯಾಗಿರುವುದು, ಅವರನ್ನು ಬಾಧಿಸುವವರನ್ನೆಲ್ಲಾ ದಂಡಿಸುವೆನು.
ಯೆರೆಮಿಯ 30 : 21 (IRVKN)
ಅವರಲ್ಲೇ ಒಬ್ಬನು ಅವರಿಗೆ ಪ್ರಭುವಾಗಿರುವನು, ಅವರ ವಂಶದವನೇ ಅವರನ್ನಾಳುವನು. ನಾನು ಅವನನ್ನು ನನ್ನ ಹತ್ತಿರಕ್ಕೆ ಬರಗೊಡಿಸಲಾಗಿ ಅವನು ನನ್ನ ಸನ್ನಿಧಾನಕ್ಕೆ ಸೇರುವನು. ನನ್ನನ್ನು ಸಮೀಪಿಸುವುದಕ್ಕೆ ಯಾರು ಧೈರ್ಯಗೊಂಡಾರು? ಇದು ಯೆಹೋವನ ನುಡಿ.”
ಯೆರೆಮಿಯ 30 : 22 (IRVKN)
ನೀವು ನನ್ನ ಜನರಾಗಿರುವಿರಿ, ನಾನು ನಿಮಗೆ ದೇವರಾಗಿರುವೆನು.
ಯೆರೆಮಿಯ 30 : 23 (IRVKN)
ಯೆಹೋವನ ರೋಷವೆಂಬ ಬಿರುಗಾಳಿ ಆಹಾ, ಯೆಹೋವನ ರೋಷವೆಂಬ ಬಿರುಗಾಳಿಯು, ಬಡಿದುಕೊಂಡು ಹೋಗುವ ಗಾಳಿಯು ಹೊರಟಿದೆ; ಅದು ದುಷ್ಟರ ತಲೆಯ ಮೇಲೆ ಹೊಡೆಯುವುದು.
ಯೆರೆಮಿಯ 30 : 24 (IRVKN)
ಯೆಹೋವನು ತನ್ನ ಹೃದಯಾಲೋಚನೆಯನ್ನು ಕಾರ್ಯಗತಗೊಳಿಸಿ, ನೆರವೇರಿಸುವ ತನಕ ಆತನ ರೋಷವು ಹಿಂದಿರುಗದು, ಕಟ್ಟಕಡೆಯ ದಿನಗಳಲ್ಲಿ ನೀವು ಇದನ್ನು ಗ್ರಹಿಸುವಿರಿ.

1 2 3 4 5 6 7 8 9 10 11 12 13 14 15 16 17 18 19 20 21 22 23 24