ಯೆರೆಮಿಯ 2 : 1 (IRVKN)
ದೇವರ ಪ್ರೀತಿ
ಯೆರೆಮಿಯ 2 : 2 (IRVKN)
ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು, “ನೀನು ಹೋಗಿ ಯೆರೂಸಲೇಮಿನ ಕಿವಿಗೆ ಮುಟ್ಟುವಂತೆ ಈ ಮಾತುಗಳನ್ನು ಸಾರು, ‘ಯೆಹೋವನು ಹೀಗೆನ್ನುತ್ತಾನೆ, ನೀನು ಯೌವನದಲ್ಲಿ ನನ್ನ ಮೇಲೆ ಇಟ್ಟಿದ್ದ ಪ್ರೀತಿಯನ್ನೂ, ವಿವಾಹಕಾಲದ ನಿನ್ನ ಪ್ರೇಮವನ್ನೂ, ನೀನು ಬಿತ್ತನೆ ಮಾಡದ ಅರಣ್ಯದಲ್ಲಿ ನನ್ನನ್ನು ಹಿಂಬಾಲಿಸಿದ ನಿನ್ನ ಪಾತಿವ್ರತ್ಯವನ್ನೂ ನಿನ್ನ ಹಿತಕ್ಕಾಗಿ ಜ್ಞಾಪಕದಲ್ಲಿಟ್ಟಿದ್ದೇನೆ.
ಯೆರೆಮಿಯ 2 : 3 (IRVKN)
ಇಸ್ರಾಯೇಲ್ ಯೆಹೋವನ ಬೆಳೆಯ ಪ್ರಥಮಫಲವಾಗಿ ಆತನಿಗೆ ಮೀಸಲಾಗಿತ್ತು; ಅದನ್ನು ತಿಂದವರೆಲ್ಲರೂ ದೋಷಿಗಳಾಗಿ ಕೇಡಿಗೆ ಗುರಿಯಾಗುವ. ಇದು ಯೆಹೋವನು ನುಡಿ.’ ”
ಯೆರೆಮಿಯ 2 : 4 (IRVKN)
ಇಸ್ರಾಯೇಲಿನ ಪೂರ್ವಿಕರ ದ್ರೋಹ ಯಾಕೋಬನ ಮನೆತನವೇ, ಇಸ್ರಾಯೇಲ್ ವಂಶದ ಸಕಲ ಗೋತ್ರಗಳೇ, ಯೆಹೋವನ ವಾಕ್ಯವನ್ನು ಕೇಳಿರಿ;
ಯೆರೆಮಿಯ 2 : 5 (IRVKN)
ಯೆಹೋವನು ಹೀಗೆನ್ನುತ್ತಾನೆ, “ನಿಮ್ಮ ಪೂರ್ವಿಕರು ನನ್ನಲ್ಲಿ ಯಾವ ಅನ್ಯಾಯವನ್ನು ಕಂಡು, ವ್ಯರ್ಥಾಚರಣೆಯನ್ನು ಅನುಸರಿಸಿ ತಾವೇ ಅಯೋಗ್ಯರಾಗಿ ನನ್ನನ್ನು ಬಿಟ್ಟು ದೂರವಾದರು?
ಯೆರೆಮಿಯ 2 : 6 (IRVKN)
‘ನಮ್ಮನ್ನು ಐಗುಪ್ತ ದೇಶದೊಳಗಿಂದ ಬರಮಾಡಿ ಕಾಡಾಗಿಯೂ, ಹಳ್ಳಕೊಳ್ಳವಾಗಿಯೂ, ನಿರ್ಜಲವಾಗಿಯೂ, ಘೋರಾಂಧಕಾರವಾಗಿಯೂ, ಯಾರೂ ಹಾದುಹೋಗದೆಯೂ, ಯಾರೂ ವಾಸಿಸದೆಯೂ ಇರುವ ಅರಣ್ಯದಲ್ಲಿ ನಡೆಸಿದ ಯೆಹೋವನು ಎಲ್ಲಿ?’ ಎಂದು ಅವರು ಅಂದುಕೊಳ್ಳಲಿಲ್ಲವಲ್ಲ.
ಯೆರೆಮಿಯ 2 : 7 (IRVKN)
ನಾನು ನಿಮ್ಮನ್ನು ಫಲವತ್ತಾದ ಸೀಮೆಗೆ ಕರೆತಂದು, ಅದರ ಫಲವನ್ನು ಮತ್ತು ಸಾರವನ್ನು ಅನುಭವಿಸುವ ಹಾಗೆ ಮಾಡಿದೆನು. ಆದರೆ ನೀವು ಆ ನನ್ನ ದೇಶವನ್ನು ಪ್ರವೇಶಿಸಿ, ಅದನ್ನು ಹೊಲೆ ಮಾಡಿ, ನನ್ನ ಸ್ವತ್ತನ್ನು ಅಸಹ್ಯಪಡಿಸಿದಿರಿ.
ಯೆರೆಮಿಯ 2 : 8 (IRVKN)
ಯಾಜಕರು, ‘ಯೆಹೋವನು ಎಲ್ಲಿ?’ ಎಂಬುದನ್ನು ವಿಚಾರಿಸಲಿಲ್ಲ. ಧರ್ಮೋಪದೇಶಕರು ನನ್ನನ್ನು ತಿಳಿಯಲ್ಲಿಲ್ಲ, ಪಾಲಕರು ನನಗೆ ದ್ರೋಹಮಾಡಿದರು, ಪ್ರವಾದಿಗಳು ಬಾಳ್ ದೇವತೆಯ ಆವೇಶದಿಂದ ಪ್ರವಾದಿಸಿ ಕೆಲಸಕ್ಕೆ ಬಾರದವುಗಳನ್ನು ಆರಾಧಿಸಿದರು.
ಯೆರೆಮಿಯ 2 : 9 (IRVKN)
ಆದಕಾರಣ ನಾನು ನಿಮ್ಮೊಂದಿಗೆ ಇನ್ನೂ ವ್ಯಾಜ್ಯ ಮಾಡುವೆನು. ನಾನು ನಿಮ್ಮ ಸಂತಾನದವರೊಂದಿಗೂ ವ್ಯಾಜ್ಯ ಮಾಡುವೆನು” ಎಂದು ಯೆಹೋವನು ನುಡಿಯುತ್ತಾನೆ.
ಯೆರೆಮಿಯ 2 : 10 (IRVKN)
“ಕಿತ್ತೀಮ್ ದ್ವೀಪಗಳಿಗೆ ಹೋಗಿ ನೋಡಿರಿ, ಕೇದಾರಿಗೆ ಕಳುಹಿಸಿ ವಿಚಾರಮಾಡಿರಿ, ಇಂತಹ ಕಾರ್ಯವು ಎಲ್ಲಿಯಾದರೂ ನಡೆಯಿತೇ ಎಂದು ಚೆನ್ನಾಗಿ ಆಲೋಚಿಸಿರಿ.
ಯೆರೆಮಿಯ 2 : 11 (IRVKN)
ತನ್ನ ದೇವತೆಗಳು ದೇವರಲ್ಲದೆ ಇದ್ದರೂ ಅವುಗಳನ್ನು ಯಾವ ಜನಾಂಗವಾದರೂ ಬದಲಾಯಿಸಿಕೊಂಡಿತೋ? ಆದರೆ ನನ್ನ ಜನರು ತಮ್ಮ ಮಹಿಮೆಯಾದ ನನ್ನ ಬದಲಾಗಿ ಕೆಲಸಕ್ಕೆ ಬಾರದವುಗಳನ್ನು ಆರಿಸಿಕೊಂಡಿದ್ದಾರೆ.
ಯೆರೆಮಿಯ 2 : 12 (IRVKN)
ಆಕಾಶಮಂಡಲವೇ, ಇದಕ್ಕೆ ಬೆಚ್ಚಿಬೆರಗಾಗು, ತತ್ತರಿಸು, ಹಾಳಾಗು” ಎಂದು ಯೆಹೋವನು ನುಡಿಯುತ್ತಾನೆ.
ಯೆರೆಮಿಯ 2 : 13 (IRVKN)
“ನನ್ನ ಜನರು ಎರಡು ಅಪರಾಧಗಳನ್ನು ಮಾಡಿದ್ದಾರೆ; ಅವರು ಜೀವಜಲದ ಬುಗ್ಗೆಯಾದ ನನ್ನನ್ನು ಬಿಟ್ಟುಬಿಟ್ಟು ತಮಗೋಸ್ಕರ ತೊಟ್ಟಿಗಳನ್ನು ತೋಡಿಕೊಂಡಿದ್ದಾರೆ. ಅವರು ಬಿರುಕು ಬಿಟ್ಟ, ನೀರು ನಿಲ್ಲದ ತೊಟ್ಟಿಗಳನ್ನು ಕೊರೆದುಕೊಂಡಿದ್ದಾರೆ.
ಯೆರೆಮಿಯ 2 : 14 (IRVKN)
ಇಸ್ರಾಯೇಲರ ಪಾಪಗಳ ಫಲ ಇಸ್ರಾಯೇಲ್ ಒಬ್ಬ ದಾಸನೋ? ಮನೆಯ ಗುಲಾಮನಾಗಿ ಹುಟ್ಟಿದವನೋ?
ಯೆರೆಮಿಯ 2 : 15 (IRVKN)
ಏಕೆ ಸೂರೆಯಾದನು? ಪ್ರಾಯದ ಸಿಂಹಗಳು ಅವನ ಮೇಲೆ ಗರ್ಜಿಸಿ ಆರ್ಭಟಿಸುತ್ತಿವೆ, ಅವನ ದೇಶವನ್ನು ಹಾಳುಮಾಡಿವೆ, ಅವನ ಊರುಗಳು ಸುಟ್ಟು ನಿರ್ಜನವಾಗಿವೆ.
ಯೆರೆಮಿಯ 2 : 16 (IRVKN)
ನೋಫ್ ಮತ್ತು ತಹಪನೇಸ್ ಪಟ್ಟಣಗಳವರು ನಿನ್ನ ನೆತ್ತಿಯನ್ನೂ ನುಣ್ಣಗೆ ಮೇದುಬಿಟ್ಟಿದ್ದಾರೆ.
ಯೆರೆಮಿಯ 2 : 17 (IRVKN)
ನಿನ್ನನ್ನು ಮಾರ್ಗದರ್ಶಿಯಾಗಿ ನಡೆಸುತ್ತಿದ್ದ ನಿನ್ನ ದೇವರಾದ ಯೆಹೋವನನ್ನು ತೊರೆದುಬಿಟ್ಟು ಇದನ್ನೆಲ್ಲಾ ನೀನೇ ನಿನ್ನ ಮೇಲೆ ಬರಮಾಡಿಕೊಂಡೆಯಲ್ಲಾ.
ಯೆರೆಮಿಯ 2 : 18 (IRVKN)
ನೀನು ಐಗುಪ್ತದ ದಾರಿಯಲ್ಲಿ ನಡೆದದ್ದೇಕೆ? ನೈಲ್* ನೈಲ್ ಸಿಹೋರ್. ನದಿಯ ನೀರನ್ನು ಕುಡಿಯ ಅವಶ್ಯಕತೆ ಇತ್ತೆ? ಅಶ್ಶೂರದ ಮಾರ್ಗದಲ್ಲಿ ಹೆಜ್ಜೆಯಿಟ್ಟದ್ದೇಕೆ? ಯೂಫ್ರೆಟಿಸ್ ನದಿಯ ಜಲವನ್ನು ಪಾನಮಾಡುವ ಅವಶ್ಯಕತೆ ಇತ್ತೇ?
ಯೆರೆಮಿಯ 2 : 19 (IRVKN)
ನಿನ್ನ ಕೆಟ್ಟತನವೇ ನಿನ್ನನ್ನು ಶಿಕ್ಷಿಸುವುದು, ನಿನ್ನ ದ್ರೋಹಗಳೇ ನಿನ್ನನ್ನು ಖಂಡಿಸುವವು; ನೀನು ನನ್ನ ಭಯವಿಲ್ಲದೆ ನಿನ್ನ ದೇವರಾದ ಯೆಹೋವನೆಂಬ ನನ್ನನ್ನು ತೊರೆದುಬಿಟ್ಟಿದ್ದರಿಂದ ನಿನಗೆ ಕೆಟ್ಟದ್ದಾಗಿಯೂ, ಕಹಿ ಅನುಭವವಾಗಿಯೂ ಇರುತ್ತದೆಂದು ಗ್ರಹಿಸಿಕೋ, ಕಣ್ಣಾರೆ ನೋಡು” ಎಂಬುದು ಸೇನಾಧೀಶ್ವರನಾದ ಯೆಹೋವನೆಂಬ ಕರ್ತನ ನುಡಿ.
ಯೆರೆಮಿಯ 2 : 20 (IRVKN)
ಬಹುಕಾಲದಿಂದ ನೀನು ನಿನ್ನ ನೊಗವನ್ನು ಮುರಿದು, ಕಣ್ಣಿಗಳನ್ನು ಕಿತ್ತು “ನಾನು ಸೇವೆ ಮಾಡುವುದಿಲ್ಲ” ಎಂದು ಅಂದುಕೊಳ್ಳುತ್ತಿದ್ದಿ, ಎತ್ತರವಾದ ಎಲ್ಲಾ ಗುಡ್ಡಗಳ ಮೇಲೂ, ಸೊಂಪಾಗಿ ಬೆಳೆದಿರುವ ಎಲ್ಲಾ ಮರಗಳ ಕೆಳಗೂ ನೀನು ಅಡ್ಡಬಿದ್ದು ಜಾರಳಂತೆ ನಡೆದುಕೊಂಡಿದ್ದಿ.
ಯೆರೆಮಿಯ 2 : 21 (IRVKN)
“ನಾನು ನಿನ್ನನ್ನು ಅತ್ಯುತ್ತಮ ಬೀಜದಿಂದ ಬೆಳೆದ ಒಳ್ಳೆಯ ದ್ರಾಕ್ಷಾಲತೆಯನ್ನಾಗಿ ನೆಟ್ಟಿರಲು ನೀನು ನನಗೆ ಕಾಡುದ್ರಾಕ್ಷಿಬಳ್ಳಿಯ ಕೆಟ್ಟರೆಂಬೆಗಳಂತೆ ಆಗಲು ಕಾರಣವೇನು?
ಯೆರೆಮಿಯ 2 : 22 (IRVKN)
ನೀನು ಬಹಳ ಸೌಳನ್ನು ಹಾಕಿಕೊಂಡು ಸಾಬೂನಿನಿಂದ ತೊಳೆದುಕೊಂಡರೂ ಶುದ್ಧವಾಗದೆ, ನಿನ್ನ ಅಧರ್ಮವು ನನ್ನ ಕಣ್ಣೆದುರಿಗೆ ಕೊಳಕಾಗಿ ನಿಂತಿದೆ” ಎಂದು ಕರ್ತನಾದ ಯೆಹೋವನು ನುಡಿಯುತ್ತಾನೆ.
ಯೆರೆಮಿಯ 2 : 23 (IRVKN)
“ನಾನು ಅಶುದ್ಧವಾಗಲಿಲ್ಲ, ಬಾಳ್ ದೇವತೆಗಳನ್ನು ನಾನು ಹಿಂಬಾಲಿಸಲಿಲ್ಲ” ಎಂದು ಹೇಗೆ ಹೇಳುತ್ತಿ? ಆ ತಗ್ಗಿನಲ್ಲಿನ ನಿನ್ನ ನಡತೆಯನ್ನು ನೋಡು, ನೀನು ಮಾಡಿದ ದುಷ್ಟ ಕೆಲಸವನ್ನು ಮನಸ್ಸಿಗೆ ತಂದುಕೋ. ಅತ್ತಿತ್ತ ನೆಗೆದಾಡುವ ಬೆದೆಗೆ ಬಂದ ಹೆಣ್ಣು ಒಂಟೆಯಂತಿರುವೆ.
ಯೆರೆಮಿಯ 2 : 24 (IRVKN)
ನೀನು ಮದದಿಂದ ಗಾಳಿಯನ್ನು ಬುಸುಬುಸನೆ ಮೂಸಿ ನೋಡುವ ಅಡವಿಯ ಹೆಣ್ಣು ಕಾಡುಕತ್ತೆಯ ಹಾಗಿದ್ದಿ; ಅದಕ್ಕೆ ಬೆದೆ ಏರಿದಾಗ ಯಾವ ಗಂಡು ಕತ್ತೆಯೂ ಅದನ್ನು ಬದಿಗೆ ನೂಕುವುದಿಲ್ಲ. ಆಯಾ ತಿಂಗಳಿನಲ್ಲಿ ಅದನ್ನು ಹುಡುಕುವವುಗಳೆಲ್ಲಾ ಆಯಾಸಗೊಳ್ಳದೆ ಅದನ್ನು ದೊರಕಿಸಿಕೊಳ್ಳುವವು.
ಯೆರೆಮಿಯ 2 : 25 (IRVKN)
“ನಿನ್ನ ಕಾಲು ಸವೆಯದಂತೆಯೂ ನಿನ್ನ ಗಂಟಲು ಆರದಂತೆಯೂ ತಡೆದುಕೋ” ಎಂದೆನು, ಆದರೆ ನೀನು, “ನಿರೀಕ್ಷೆಯಿಲ್ಲ, ಆಗಲಾರದು, ಅನ್ಯರ ಮೇಲೆ ಮೋಹಗೊಂಡಿದ್ದೇನೆ. ಅವರ ಹಿಂದೆಯೇ ಹೋಗುವೆನು” ಅಂದುಕೊಂಡಿದ್ದಿ.
ಯೆರೆಮಿಯ 2 : 26 (IRVKN)
ಕಳ್ಳನು ಸಿಕ್ಕಿಬಿದ್ದು ಹೇಗೆ ನಾಚಿಕೆಪಡುವನೋ, ಹಾಗೆಯೇ ಇಸ್ರಾಯೇಲ್ ವಂಶವು ನಾಚಿಕೆಪಡುವುದು. ಅವರು ಮರಕ್ಕೆ, “ನೀನು ನನ್ನ ತಂದೆ” ಎಂತಲೂ; ಕಲ್ಲಿಗೆ, “ನೀನು ಹೆತ್ತ ತಾಯಿ” ಎಂತಲೂ ಹೇಳುವ ಪ್ರಜೆಗಳು. ಅವರ ಅರಸರು, ಅಧಿಪತಿಗಳು, ಯಾಜಕರು, ಪ್ರವಾದಿಗಳು ನಾಚಿಕೆಗೆ ಈಡಾಗುವರು.
ಯೆರೆಮಿಯ 2 : 27 (IRVKN)
ಅವರು ನನ್ನ ಕಡೆಗೆ ಮುಖತಿರುಗಿಸದೆ ಬೆನ್ನು ಮಾಡಿದ್ದಾರೆ, ಆದರೆ ಅವರಿಗೆ ಕೇಡು ಸಂಭವಿಸಿದಾಗ, “ಎದ್ದು ನಮ್ಮನ್ನು ಉದ್ಧರಿಸು” ಎಂದು ಮೊರೆಯಿಡುವರು.
ಯೆರೆಮಿಯ 2 : 28 (IRVKN)
ಯೆಹೂದವೇ, ನೀನು ನಿರ್ಮಿಸಿಕೊಂಡ ದೇವರುಗಳು ಎಲ್ಲಿ? ನಿನಗೆ ಕೇಡು ಸಂಭವಿಸಿದಾಗ ಅವು ನಿನ್ನನ್ನು ಉದ್ಧರಿಸಲು ಶಕ್ತವಾದರೆ ಏಳಲಿ! ನಿನ್ನ ಪಟ್ಟಣಗಳೆಷ್ಟೋ, ನಿನ್ನ ದೇವರುಗಳೂ ಅಷ್ಟು ಇವೆ.
ಯೆರೆಮಿಯ 2 : 29 (IRVKN)
ಯೆಹೋವನು ಹೀಗೆನ್ನುತ್ತಾನೆ, “ನನ್ನೊಡನೆ ಏಕೆ ವ್ಯಾಜ್ಯವಾಡುತ್ತೀರಿ? ನೀವೆಲ್ಲರೂ ನನಗೆ ದ್ರೋಹಿಗಳು.
ಯೆರೆಮಿಯ 2 : 30 (IRVKN)
ನಾನು ನಿಮ್ಮ ವಂಶದವರನ್ನು ಹೊಡೆದದ್ದು ವ್ಯರ್ಥ, ನೀವು ತಿದ್ದಿ ನಡೆಯಲಿಲ್ಲ. ಸಂಹರಿಸುವ ಸಿಂಹದಂತೆ ನಿಮ್ಮ ಕೈಯ ಕತ್ತಿಯೇ ನಿಮ್ಮ ಪ್ರವಾದಿಗಳನ್ನು ನುಂಗಿಬಿಟ್ಟಿದೆ.”
ಯೆರೆಮಿಯ 2 : 31 (IRVKN)
ನೀವು ಎಂತಹ ದುಷ್ಟ ವಂಶದವರು! ಯೆಹೋವನ ಮಾತನ್ನು ಕೇಳಿರಿ, “ನಾನು ಇಸ್ರಾಯೇಲಿಗೆ ಅರಣ್ಯವಾಗಿಯೂ, ಗಾಢಾಂಧಕಾರದ ಪ್ರದೇಶವಾಗಿಯೂ ಏಕೆ ಪರಿಣಮಿಸಿದವು? ‘ನಾವು ಮನಬಂದಂತೆ ತಿರುಗುತ್ತಿದ್ದೇವೆ, ನಿನ್ನ ಹತೋಟಿಗೆ ಇನ್ನು ಬಾರೆವು’ ” ಎಂದು ನನ್ನ ಜನರು ಹೇಳುವುದು ಏಕೆ?
ಯೆರೆಮಿಯ 2 : 32 (IRVKN)
ಯುವತಿಯು ತನ್ನ ಆಭರಣಗಳನ್ನು, ವಧುವು ತನ್ನ ಒಡ್ಯಾಣವನ್ನು ಮರೆಯುವುದುಂಟೇ? ನನ್ನ ಜನರೋ ಲೆಕ್ಕವಿಲ್ಲದಷ್ಟು ದಿನ ನನ್ನನ್ನು ಮರೆತಿದ್ದಾರೆ.
ಯೆರೆಮಿಯ 2 : 33 (IRVKN)
ಕಾಮವನ್ನು ತೀರಿಸಿಕೊಳ್ಳಬೇಕೆಂದು ಎಷ್ಟೋ ಮುಂದುವರೆದಿದ್ದಿ! ಇದರಿಂದ ನಿನ್ನ ದುರಭ್ಯಾಸಗಳಿಗೆ ನಿನ್ನ ನಡತೆಯನ್ನು ಹೊಂದಿಸಿಕೊಂಡಿದ್ದಿ.
ಯೆರೆಮಿಯ 2 : 34 (IRVKN)
ಇದಲ್ಲದೆ ನಿರ್ದೋಷಿಗಳಾದ ದರಿದ್ರರ ಪ್ರಾಣರಕ್ತವು ನಿನ್ನ ನೆರಿಗೆಯಲ್ಲಿ ಅಂಟಿಕೊಂಡಿದೆ; ಇವರು ಕನ್ನ ಕೊರೆಯುವುದನ್ನು ಕಂಡೆನು ಎಂದು ನೀವು ನೆವ ಹೇಳುವಂತಿಲ್ಲ, ನಿನ್ನ ಈ ಎಲ್ಲಾ ದುರಭ್ಯಾಸಗಳ ದೆಸೆಯಿಂದ ನಿನ್ನನ್ನು ದಂಡಿಸುವೆನು.
ಯೆರೆಮಿಯ 2 : 35 (IRVKN)
ನೀನಾದರೋ, “ನಾನು ನಿರ್ದೋಷಿ, ಆತನ ಕೋಪವು ನನ್ನ ಮೇಲಿಂದ ನಿಶ್ಚಯವಾಗಿ ತೊಲಗಿಹೋಗಿದೆ” ಎಂದುಕೊಂಡಿದ್ದಿ; “ನಾನು ಪಾಪಮಾಡಲಿಲ್ಲ” ಎಂದು ನೀನು ಹೇಳಿದ ಕಾರಣ, ಇಗೋ, ನಾನು ನಿನಗೆ ನ್ಯಾಯ ತೀರಿಸುವೆನು.
ಯೆರೆಮಿಯ 2 : 36 (IRVKN)
ಹೊಸ ಹೊಸ ಮಾರ್ಗಗಳನ್ನು ಅನುಸರಿಸಲು ಏಕೆ ಅಷ್ಟು ಪ್ರಯತ್ನಿಸುತ್ತೀ? ಅಶ್ಶೂರದ ವಿಷಯವಾಗಿ ಹೇಗೆ ಆಶಾಭಂಗಪಟ್ಟೆಯೋ ಹಾಗೆಯೇ ಐಗುಪ್ತದ ವಿಷಯವಾಗಿಯೂ ಆಶಾಭಂಗಪಡುವಿ.
ಯೆರೆಮಿಯ 2 : 37 (IRVKN)
ಅಲ್ಲಿಂದಲೂ ತಲೆಯ ಮೇಲೆ ಕೈಹೊತ್ತುಕೊಂಡು ಹೊರಡುವಿ; ಏಕೆಂದರೆ ನಿನ್ನ ಭರವಸೆಗಳನ್ನು ಯೆಹೋವನು ನಿರಾಕರಿಸಿದ್ದಾನೆ; ಅವುಗಳ ಮುಖಾಂತರ ನಿನ್ನ ಕಾರ್ಯವು ಕೈಗೂಡುವುದಿಲ್ಲ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37