ಯೆಶಾಯ 63 : 1 (IRVKN)
ಯೆಹೋವನು ಶತ್ರುಗಳನ್ನು ಧ್ವಂಸಮಾಡುವುದು ಆಹಾ, ರಕ್ತವರ್ಣದ ಉಡುಪನ್ನಿಟ್ಟು, ಘನವಸ್ತ್ರಗಳನ್ನು ಧರಿಸಿಕೊಂಡು, ಮಹಾಶೌರ್ಯಯುಕ್ತನಾಗಿ ಮೆರೆಯುತ್ತಾ, ಎದೋಮಿನ ಬೊಚ್ರದಿಂದ ಬರುವ ಇವನು ಯಾರು? ಸತ್ಯಾನುಸಾರವಾಗಿ ಮಾತನಾಡುವವನು, ರಕ್ಷಿಸಲು ಸಮರ್ಥನು ಆದ ನಾನೇ.
ಯೆಶಾಯ 63 : 2 (IRVKN)
ನಿನ್ನ ಉಡುಪು ಏಕೆ ಕೆಂಪಾಗಿದೆ, ನಿನ್ನ ವಸ್ತ್ರಗಳು ದ್ರಾಕ್ಷಿಯನ್ನು ತುಳಿಯುವವನ ಬಟ್ಟೆಯ ಹಾಗಿರುವುದು ಏಕೆ?
ಯೆಶಾಯ 63 : 3 (IRVKN)
ನಾನೊಬ್ಬನೇ ದ್ರಾಕ್ಷಿಯನ್ನು ತೊಟ್ಟಿಯಲ್ಲಿ ತುಳಿದಿದ್ದೇನೆ, ಜನಾಂಗದವರಲ್ಲಿ ಯಾರೂ ನನ್ನೊಂದಿಗಿರಲಿಲ್ಲ. ನನ್ನ ಕೋಪದಿಂದ ಶತ್ರುಗಳನ್ನು ತುಳಿದೆನು, ರೋಷವೇರಿದವನಾಗಿ ಅವರನ್ನು ತುಳಿದುಹಾಕಿದೆನು; ಅವರ ಜೀವಸತ್ವ ನನ್ನ ವಸ್ತ್ರಗಳ ಮೇಲೆ ಸಿಡಿದಿದೆ, ನನ್ನ ಉಡುಪನ್ನೆಲ್ಲಾ ಮಲಿನ ಮಾಡಿಕೊಂಡೆನು.
ಯೆಶಾಯ 63 : 4 (IRVKN)
ಏಕೆಂದರೆ ಮುಯ್ಯಿ ತೀರಿಸುವ ದಿನವು ನನ್ನ ಹೃದಯದಲ್ಲಿ ಸಿದ್ಧವಾಗಿತ್ತು, ನನ್ನ ಜನರನ್ನು ವಿಮೋಚಿಸುವ ವರ್ಷವು ಒದಗಿತ್ತು.
ಯೆಶಾಯ 63 : 5 (IRVKN)
ನಾನು ನೋಡಲು ಸಹಾಯಕರು ಯಾರೂ ಇರಲಿಲ್ಲ, ಯಾವ ಬೆಂಬಲವೂ ಇಲ್ಲದ್ದನ್ನು ಕಂಡು ಸ್ತಬ್ಧನಾದೆನು; ಆಗ ನನ್ನ ಸ್ವಹಸ್ತವೇ ನನಗೆ ರಕ್ಷಣಾಸಾಧನವಾಯಿತು, ನನ್ನ ರೌದ್ರವೇ ನನಗೆ ಆಧಾರವಾಯಿತು.
ಯೆಶಾಯ 63 : 6 (IRVKN)
ನನ್ನ ಕೋಪದಿಂದ ಜನಾಂಗಗಳನ್ನು ತುಳಿದು ರೋಷವೇರಿದವನಾಗಿ, ಅವುಗಳನ್ನು ಚೂರುಚೂರು ಮಾಡಿ ನೆಲದ ಮೇಲೆ ಅವುಗಳ ಸಾರವನ್ನು ಸುರಿಸಿದೆನು.
ಯೆಶಾಯ 63 : 7 (IRVKN)
ಕೃಪಾಕಾರ್ಯಗಳಿಗೆ ಪ್ರಾರ್ಥನೆ ಯೆಹೋವನು ನಮಗೆ ಅನುಗ್ರಹಿಸಿದ್ದನ್ನೆಲ್ಲಾ ಸ್ಮರಿಸಿ ಆತನ ಕೃಪಾಕಾರ್ಯಗಳನ್ನು ಮತ್ತು ಸ್ತುತ್ಯಕೃತ್ಯಗಳನ್ನು, ಆತನು ಕನಿಕರದಿಂದಲೂ, ಕೃಪಾತಿಶಯದಿಂದಲೂ ಇಸ್ರಾಯೇಲ್ ವಂಶದವರಿಗೆ ದಯಪಾಲಿಸಿರುವ ಮಹೋಪಕಾರವನ್ನೂ ಪ್ರಸಿದ್ಧಿಪಡಿಸುವೆನು.
ಯೆಶಾಯ 63 : 8 (IRVKN)
“ನಿಜವಾಗಿ ಇವರು ನನ್ನ ಜನರು, ನನ್ನ ಮಕ್ಕಳು, ಮೋಸ ಮಾಡಲಾರರು” ಎಂದು ಆತನು ಅಂದುಕೊಂಡು ಅವರಿಗೆ ರಕ್ಷಕನಾದನು.
ಯೆಶಾಯ 63 : 9 (IRVKN)
ಅವರು ಶ್ರಮೆಪಡುತ್ತಿರುವಾಗೆಲ್ಲಾ ಆತನೂ ಶ್ರಮೆಪಟ್ಟನು; ಆತನ ಸಮ್ಮುಖದ ದೂತನು ಅವರನ್ನು ರಕ್ಷಿಸಿದನು; ತನ್ನಲ್ಲಿನ ಮಮತೆಯಿಂದಲೂ ತಾಳ್ಮೆಯಿಂದಲೂ ಅವರನ್ನು ವಿಮೋಚಿಸಿ, ಪುರಾತನ ಕಾಲದಲ್ಲೆಲ್ಲಾ ಎತ್ತಿಕೊಂಡು ಹೊರುತ್ತಾ ಬಂದನು.
ಯೆಶಾಯ 63 : 10 (IRVKN)
ಅವರಾದರೋ ಎದುರುಬಿದ್ದು ಆತನ ಪವಿತ್ರಾತ್ಮವನ್ನು ದುಃಖಪಡಿಸಿದರು; ಆದುದರಿಂದ ಆತನು ಮಾರ್ಪಟ್ಟು ಅವರಿಗೆ ಶತ್ರುವಾಗಿ ತಾನೇ ಅವರೊಡನೆ ಹೋರಾಡಿದನು.
ಯೆಶಾಯ 63 : 11 (IRVKN)
ಆಗ ಆತನ ಜನರು* ಆತನ ಜನರು ಆತನು ಅಥವಾ ದೇವರು ಪುರಾತನವಾದ ಮೋಶೆಯ ಕಾಲವನ್ನು ಜ್ಞಾಪಕಮಾಡಿಕೊಂಡು ಹೀಗೆಂದರು, “ತನ್ನ ಜನವೆಂಬ ಮಂದೆಯನ್ನು ಕುರುಬರ ಸಹಿತ ಸಮುದ್ರದೊಳಗಿಂದ ಮೇಲಕ್ಕೆ ಬರಮಾಡಿದಾತನು ಎಲ್ಲಿ?
ಯೆಶಾಯ 63 : 12 (IRVKN)
ಅವರ ಮಧ್ಯದಲ್ಲಿ ತನ್ನ ಪವಿತ್ರಾತ್ಮವನ್ನಿರಿಸಿ, ಮೋಶೆಯ ಬಲಗೈಯೊಂದಿಗೆ ತನ್ನ ಘನಹಸ್ತವನ್ನೂ ಮುಂದುವರೆಸುತ್ತಾ ತನ್ನ ಹೆಸರು ಶಾಶ್ವತವಾಗಿರಬೇಕೆಂದು ಅವರೆದುರಿಗೆ ಜಲರಾಶಿಯನ್ನು ಇಬ್ಭಾಗ ಮಾಡಿದಾತನು ಎಲ್ಲಿ?
ಯೆಶಾಯ 63 : 13 (IRVKN)
ಸಾಗರದ ತಳಕ್ಕೆ ಅವರನ್ನು ನಡೆಸಿದಾತನು ಎಲ್ಲಿ? ಕುದುರೆಯು ಮೈದಾನದಲ್ಲಿ ನಡೆಯುವ ಪ್ರಕಾರ ಅವರು ಮುಗ್ಗರಿಸಲಿಲ್ಲ.
ಯೆಶಾಯ 63 : 14 (IRVKN)
ತಗ್ಗಿಗೆ ಇಳಿಯುವ ದನಗಳೋಪಾದಿಯಲ್ಲಿ ಯೆಹೋವನ ಆತ್ಮವು ಅವರನ್ನು ವಿಶ್ರಾಂತಿಯ ಸ್ಥಾನಕ್ಕೆ ಕರೆತಂದಿತು; ನಿನ್ನ ನಾಮವನ್ನು ಘನಪಡಿಸಿಕೊಳ್ಳುವುದಕ್ಕಾಗಿ ನಿನ್ನ ಜನರನ್ನು ಹೀಗೆ ನಡೆಸಿದಿ.
ಯೆಶಾಯ 63 : 15 (IRVKN)
ಆಕಾಶದಿಂದ ನೋಡು, ಪರಿಶುದ್ಧವೂ, ಘನವೂ ಆದ ನಿನ್ನ ಉನ್ನತಸ್ಥಾನದಿಂದ ಲಕ್ಷಿಸು; ನಿನ್ನ ಉತ್ಸಾಹವೆಲ್ಲಿ, ನಿನ್ನ ಸಾಹಸ ಕಾರ್ಯಗಳೆಲ್ಲಿ? ನಿನ್ನ ಕರುಳ ಮರುಗಾಟವನ್ನೂ, ನಿನ್ನ ಕನಿಕರವನ್ನೂ ನಮ್ಮ ಕಡೆಗೆ ಬಿಗಿ ಹಿಡಿದಿದ್ದಿ.
ಯೆಶಾಯ 63 : 16 (IRVKN)
ನೀನೇ ನಮ್ಮ ಪಿತೃವಾಗಿದ್ದೀಯಲ್ಲಾ; ಅಬ್ರಹಾಮನು ನಮ್ಮನ್ನರಿಯನು, ಇಸ್ರಾಯೇಲನು ನಮ್ಮನ್ನು ಗುರುತಿಸನು; ಯೆಹೋವನೇ, ನೀನೇ ನಮ್ಮ ಪಿತೃ; ನೀನು ಆದಿಯಿಂದಲೂ ‘ನಮ್ಮ ವಿಮೋಚಕನು’ ಅನ್ನಿಸಿಕೊಂಡಿದ್ದಿ.
ಯೆಶಾಯ 63 : 17 (IRVKN)
ಯೆಹೋವನೇ, ನಾವು ನಿನ್ನ ಮಾರ್ಗದಿಂದ ತಪ್ಪಿ ಅಲೆಯುವಂತೆ ಏಕೆ ಮಾಡುತ್ತೀ? ನಾವು ನಿನಗೆ ಭಯಪಡದ ಹಾಗೆ ನಮ್ಮ ಹೃದಯವನ್ನು ಕಠಿನಪಡಿಸುವುದೇಕೆ? ನಿನ್ನ ಸೇವಕರ ನಿಮಿತ್ತ ನಿನ್ನ ಬಾಧ್ಯವಾದ ಕುಲಗಳಿಗಾಗಿ ತಿರುಗಿ ಪ್ರಸನ್ನನಾಗು.
ಯೆಶಾಯ 63 : 18 (IRVKN)
ನಿನ್ನ ಸ್ವಕೀಯಜನರು ಸ್ವಲ್ಪಕಾಲ ಮಾತ್ರ ನಿನ್ನ ಸ್ವತ್ತಾದ ಪವಿತ್ರಸ್ಥಳವನ್ನು ಅನುಭವಿಸುತ್ತಿದ್ದರು; ಈಗ ನಮ್ಮ ವೈರಿಗಳು ಅದನ್ನು ತುಳಿದುಬಿಟ್ಟಿದ್ದಾರೆ.
ಯೆಶಾಯ 63 : 19 (IRVKN)
ನಿನ್ನ ದೊರೆತನಕ್ಕೆ ಎಂದಿಗೂ ಒಳಪಡದೆ, ನಿನ್ನ ನಾಮವನ್ನು ಧರಿಸದೆ ಇರುವ ಜನರ ಹಾಗಿದ್ದೇವೆ. ನಿನ್ನ ನಾಮವನ್ನು ಧರಿಸದೆ ಇರುವ ಜನರ ಹಾಗಿದ್ದೇವೆ. ಪುರಾತನ ಕಾಲದಿಂದಲೂ ನಾವು ನಿನ್ನ ಜನರಾಗಿದ್ದೇವೆ.

1 2 3 4 5 6 7 8 9 10 11 12 13 14 15 16 17 18 19