ಯೆಶಾಯ 61 : 1 (IRVKN)
ಚೀಯೋನಿಗೆ ರಕ್ಷಣೆಯ ವಾಗ್ದಾನಗಳು ಕರ್ತನಾದ ಯೆಹೋವನ ಆತ್ಮವು ನನ್ನ ಮೇಲೆ ಇದೆ, ಆತನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವುದಕ್ಕೆ ಅಭಿಷೇಕಿಸಿದನು; ಮನಮುರಿದವರನ್ನು ಕಟ್ಟಿ ವಾಸಿಮಾಡುವುದಕ್ಕೂ, ಸೆರೆಯವರಿಗೆ ಬಿಡುಗಡೆಯಾಗುವುದನ್ನು, ಬಂದಿಗಳಿಗೆ ಕದ ತೆರೆಯುವುದನ್ನು ಪ್ರಸಿದ್ಧಿಪಡಿಸುವುದಕ್ಕೂ,
ಯೆಶಾಯ 61 : 2 (IRVKN)
ಯೆಹೋವನು ನೇಮಿಸಿರುವ ಶುಭವರ್ಷ, ನಮ್ಮ ದೇವರು ಮುಯ್ಯಿತೀರಿಸುವ ದಿನ ಇವುಗಳನ್ನು ಪ್ರಚುರಗೊಳಿಸುವುದಕ್ಕೂ,
ಯೆಶಾಯ 61 : 3 (IRVKN)
ದುಃಖಿತರೆಲ್ಲರನ್ನು ಸಂತೈಸುವುದಕ್ಕೂ, ಚೀಯೋನಿನಲ್ಲಿ ಶೋಕಿಸುವವರಿಗೆ ಬೂದಿಗೆ ಬದಲಾಗಿ ಶಿರೋಭೂಷಣ, ದುಃಖವಿದ್ದಲ್ಲಿ ಆನಂದತೈಲ, ಕುಂದಿದ ಮನಕ್ಕೆ ಪ್ರತಿಯಾಗಿ ಉತ್ಸಾಹ ಸ್ತೋತ್ರದ ವಸ್ತ್ರ ಇವುಗಳನ್ನು ಒದಗಿಸಿಕೊಡುವುದಕ್ಕೂ ಆತನು ನನ್ನನ್ನು ಕಳುಹಿಸಿದ್ದಾನೆ. ಯೆಹೋವನು ತನ್ನ ಪ್ರಭಾವಕ್ಕೋಸ್ಕರ ಹಾಕಿದ ನೀತಿವೃಕ್ಷಗಳು ಎಂಬ ಬಿರುದು ಇವರಿಗಾಗುವುದು.
ಯೆಶಾಯ 61 : 4 (IRVKN)
ಪುರಾತನಕಾಲದಲ್ಲಿ ಹಾಳಾದ ನಿವೇಶನಗಳನ್ನು ತಿರುಗಿ ಕಟ್ಟುವರು, ಪೂರ್ವದಲ್ಲಿ ಹಾಳುಬಿದ್ದದ್ದನ್ನು ಪುನಃ ಎಬ್ಬಿಸುವರು, ತಲತಲಾಂತರಗಳಿಂದ ಹಾಳಾದ ಪಟ್ಟಣಗಳನ್ನು ಜೀರ್ಣೋದ್ಧಾರ ಮಾಡುವರು.
ಯೆಶಾಯ 61 : 5 (IRVKN)
ಆಗ ವಿದೇಶೀಯರು ನಿಂತುಕೊಂಡು ನಿಮ್ಮ ಮಂದೆಗಳನ್ನು ಮೇಯಿಸುವರು, ಅನ್ಯರು ನಿಮಗೆ ಉಳುವವರೂ ಮತ್ತು ತೋಟಗಾರರೂ ಆಗುವರು.
ಯೆಶಾಯ 61 : 6 (IRVKN)
ನೀವೋ ಯೆಹೋವನ ಯಾಜಕರೆಂಬ ಬಿರುದನ್ನು ಹೊಂದುವಿರಿ, ಜನರು ನಿಮ್ಮನ್ನು ನಮ್ಮ ದೇವರ ಸೇವಕರು ಎಂದು ಕರೆಯುವರು; ಜನಾಂಗಗಳ ಆಸ್ತಿಯನ್ನು ಅನುಭವಿಸುವಿರಿ, ಅವುಗಳ ವೈಭವವನ್ನು ಪಡೆದು ಹೊಗಳಿಕೊಳ್ಳುವಿರಿ.
ಯೆಶಾಯ 61 : 7 (IRVKN)
ನಿಮಗಾದ ಅವಮಾನಕ್ಕೆ ಬದಲಾಗಿ ಎರಡರಷ್ಟು ಮಾನವನ್ನು ಹೊಂದುವಿರಿ; ನಾಚಿಕೆಪಟ್ಟದ್ದಕ್ಕೆ ಪ್ರತಿಯಾಗಿ ಇವರು ತಮ್ಮ ಸ್ವತ್ತಿನಲ್ಲಿ ಹಿಗ್ಗುವರು; ಹೀಗೆ ತಮ್ಮ ದೇಶದಲ್ಲಿ ಎರಡರಷ್ಟನ್ನು ಅನುಭವಿಸುವರು; ಇವರಿಗೆ ಶಾಶ್ವತ ಸಂತೋಷವಾಗುವುದು.
ಯೆಶಾಯ 61 : 8 (IRVKN)
ಯೆಹೋವನೆಂಬ ನಾನು ನ್ಯಾಯವನ್ನು ಪ್ರೀತಿಸುತ್ತೇನೆ. ಕೊಳ್ಳೆಯನ್ನೂ, ಅನ್ಯಾಯವನ್ನೂ ದ್ವೇಷಿಸುತ್ತೇನೆ.* ಕೊಳ್ಳೆಯನ್ನೂ, ಅನ್ಯಾಯವನ್ನೂ ದ್ವೇಷಿಸುತ್ತೇನೆ. ಅಥವಾ ಕೊಳ್ಳೆ ಹೊಡೆದ ವಸ್ತುಗಳೊಂದಿಗೆ ಅರ್ಪಿಸುವ ಯಜ್ಞವನ್ನು ದ್ವೇಷಿಸುತ್ತೇನೆ ನಾನು ಇವರ ನಷ್ಟಕ್ಕೆ ಬದಲಾಗಿ ಪ್ರತಿಫಲವನ್ನು ಪ್ರಾಮಾಣಿಕವಾಗಿ ಕೊಟ್ಟು, ಇವರೊಂದಿಗೆ ನಿತ್ಯವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು.
ಯೆಶಾಯ 61 : 9 (IRVKN)
ಇವರ ಸಂತಾನವು ಜನಾಂಗಗಳಲ್ಲಿ ಪ್ರಖ್ಯಾತವಾಗುವುದು, ಇವರ ಸಂತತಿಯು ಅನ್ಯದೇಶೀಯರಲ್ಲಿ ಹೆಸರುಗೊಳ್ಳುವುದು. ಇವರನ್ನು ನೋಡುವವರೆಲ್ಲರು ಯೆಹೋವನು ಆಶೀರ್ವದಿಸಿದ ವಂಶವು ಇದೇ ಎಂದು ಒಪ್ಪಿಕೊಳ್ಳುವರು.
ಯೆಶಾಯ 61 : 10 (IRVKN)
ನಾನು ಯೆಹೋವನಲ್ಲಿ ಪರಮಾನಂದಪಡುವೆನು, ನನ್ನ ಆತ್ಮವು ನನ್ನ ದೇವರಲ್ಲಿ ಹಿಗ್ಗುವುದು. ವರನು ಬಾಸಿಂಗವನ್ನು ಧರಿಸಿಕೊಳ್ಳುವಂತೆಯೂ, ವಧುವು ತನ್ನನ್ನು ಆಭರಣಗಳಿಂದ ಅಲಂಕರಿಸಿಕೊಳ್ಳುವ ಹಾಗೂ, ಆತನು ನನಗೆ ರಕ್ಷಣೆಯೆಂಬ ವಸ್ತ್ರವನ್ನು ಹೊದಿಸಿ, ಧರ್ಮವೆಂಬ ನಿಲುವಂಗಿಯನ್ನು ತೊಡಿಸಿದ್ದಾನೆ.
ಯೆಶಾಯ 61 : 11 (IRVKN)
ಭೂಮಿಯು ತನ್ನೊಳಗಿಂದ ಮೊಳಕೆಯನ್ನು ಹೊರಡಿಸುವಂತೆ, ತೋಟವು ತನ್ನಲ್ಲಿ ಬಿತ್ತಿದ್ದನ್ನು ಮೊಳೆಯಿಸುವ ಹಾಗೆ, ಕರ್ತನಾದ ಯೆಹೋವನು ಎಲ್ಲಾ ಜನಾಂಗಗಳ ಎದುರಿನಲ್ಲಿ ಧರ್ಮವನ್ನೂ ಮತ್ತು ಸ್ತೋತ್ರವನ್ನೂ ಮೊಳೆತು ಅಭಿವೃದ್ಧಿ ಹೊಂದುವಂತೆ ಮಾಡುವನು.

1 2 3 4 5 6 7 8 9 10 11