ಯೆಶಾಯ 58 : 1 (IRVKN)
ನಿಜವಾದ ಉಪವಾಸ ಸ್ವರವೆತ್ತಿ ಕೂಗು, ಸಂಕೋಚಪಡಬೇಡ, ಕೊಂಬಿನಂತೆ ಧ್ವನಿಗೈದು ನನ್ನ ಜನರಿಗೆ ಅವರ ದ್ರೋಹಗಳನ್ನು ತಿಳಿಯಪಡಿಸು. ಯಾಕೋಬ ವಂಶದವರಿಗೆ ಅವರ ಪಾಪಗಳನ್ನು ತಿಳಿಸು.
ಯೆಶಾಯ 58 : 2 (IRVKN)
ಅವರಂತು ದಿನದಿನವೂ ನನ್ನ ದರ್ಶನಕ್ಕಾಗಿ ಬಂದು, ನನ್ನ ಮಾರ್ಗವನ್ನು ತಿಳಿದುಕೊಳ್ಳುವುದರಲ್ಲಿ ಹೆಚ್ಚಳಪಡುತ್ತಾರೆ; ತನ್ನ ದೇವರ ನಿಯಮಗಳನ್ನು ಬಿಡದೆ ಧರ್ಮವನ್ನಾಚರಿಸುವ ಜನಾಂಗವೋ ಎಂಬಂತೆ, ಧೈರ್ಯವಾಗಿ ನನ್ನಿಂದ ನ್ಯಾಯವಿಧಿಗಳನ್ನು ಕೇಳಿಕೊಂಡು ದೇವದರ್ಶನದಲ್ಲಿ ಆನಂದಿಸುತ್ತಾರೆ.
ಯೆಶಾಯ 58 : 3 (IRVKN)
“ನಾವು ಉಪವಾಸಮಾಡಿದ್ದೇವೆ, ನೀನು ಏಕೆ ಕಟಾಕ್ಷಿಸುವುದಿಲ್ಲ; ನಮ್ಮ ಆತ್ಮವನ್ನು ಕುಂದಿಸಿಕೊಂಡಿದ್ದೇವೆ, ನೀನು ಗಮನಿಸದಿರುವುದೇಕೆ” ಅಂದುಕೊಳ್ಳುತ್ತಾರೆ. ಇಗೋ, ನಿಮ್ಮ ಉಪವಾಸದ ದಿನದಲ್ಲಿಯೂ ನಿಮ್ಮ ನಿತ್ಯದ ಕೆಲಸವನ್ನು ನಡೆಸಿ ನಿಮ್ಮ ಆಳುಗಳನ್ನು ದುಡಿತಕ್ಕೆ ಎಳೆಯುತ್ತೀರಿ.
ಯೆಶಾಯ 58 : 4 (IRVKN)
ನೋಡಿರಿ, ನಿಮ್ಮ ಉಪವಾಸದ ಫಲವೇನೆಂದರೆ, ವ್ಯಾಜ್ಯ, ಕಲಹ, ಕೇಡಿನ ಗುದ್ದು ಇವುಗಳೇ. ನೀವು ಈಗ ಮಾಡುವ ಉಪವಾಸವು ನಿಮ್ಮ ಪ್ರಾರ್ಥನೆಯನ್ನು ಉನ್ನತಲೋಕಕ್ಕೆ ಮುಟ್ಟಿಸತಕ್ಕದ್ದಲ್ಲ.
ಯೆಶಾಯ 58 : 5 (IRVKN)
ಮನುಷ್ಯನು ತನ್ನ ಆತ್ಮವನ್ನು ಕುಂದಿಸಿಕೊಳ್ಳುವುದಕ್ಕಾಗಿ ನಾನು ನೇಮಿಸಿದ ಉಪವಾಸದಿನವು ಇಂಥದ್ದೋ,? ಒಬ್ಬನು ಜೊಂಡಿನಂತೆ ತಲೆಯನ್ನು ಬೊಗ್ಗಿಸಿಕೊಂಡು ಗೋಣಿತಟ್ಟನ್ನೂ ಮತ್ತು ಬೂದಿಯನ್ನೂ ಆಸನಮಾಡಿಕೊಳ್ಳುವುದು ಯೆಹೋವನಿಗೆ ಸಮರ್ಪಕವಾದ ಉಪವಾಸ ಎನ್ನುತ್ತೀರೋ?
ಯೆಶಾಯ 58 : 6 (IRVKN)
ನೋಡಿರಿ, ಕೇಡಿನ ಬಂಧನಗಳನ್ನು ಬಿಚ್ಚುವುದು, ನೊಗಹೊರಿಸುವ ಹುರಿಯನ್ನು ಕಳಚುವುದು, ಜಜ್ಜಿ ಹೋದವರನ್ನು ಬಿಡುಗಡೆ ಮಾಡುವುದು, ನೊಗಗಳನ್ನೆಲ್ಲಾ ಮುರಿಯುವುದು,
ಯೆಶಾಯ 58 : 7 (IRVKN)
ಹಸಿದವರಿಗೆ ಅನ್ನವನ್ನು ಹಂಚುವುದು, ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು, ಬೆತ್ತಲೆಯವರನ್ನು ಕಂಡಾಗೆಲ್ಲಾ ಅವರಿಗೆ ಹೊದಿಸುವುದು, ನಿನ್ನಂತೆ ಮನುಷ್ಯನಾಗಿರುವ ಯಾರಿಗೇ ಆಗಲಿ ಮುಖತಪ್ಪಿಸಿಕೊಳ್ಳದಿರುವುದು, ಇವುಗಳೇ ನನಗೆ ಇಷ್ಟವಾದ ಉಪವಾಸ ವ್ರತವಲ್ಲವೇ.
ಯೆಶಾಯ 58 : 8 (IRVKN)
ಇದನ್ನು ಆಚರಿಸುವಾಗ ನಿಮಗೆ ಬೆಳಕು ಉದಯದಂತೆ ಮೂಡಿ ಬರುವುದು, ನಿಮ್ಮ ಕ್ಷೇಮವು ಬೇಗನೆ ಬೆಳೆಯುವುದು; ನಿಮ್ಮ ಧರ್ಮವು ನಿಮಗೆ ಮುಂಬಲವಾಗಿರುವುದು, ಯೆಹೋವನ ಮಹಿಮೆಯು ನಿಮಗೆ ಹಿಂಬಲವಾಗಿರುವುದು.
ಯೆಶಾಯ 58 : 9 (IRVKN)
ಆಗ ನೀವು ಕೂಗಿದರೆ ಯೆಹೋವನು ಉತ್ತರಕೊಡುವನು, ಮೊರೆಯಿಟ್ಟು ಕರೆದರೆ, “ಇಗೋ, ಇದ್ದೇನೆ” ಅನ್ನುವನು. ನೀವು ನಿಮ್ಮ ಮಧ್ಯದೊಳಗಿಂದ ನೊಗವನ್ನು, ಇನ್ನೊಬ್ಬರನ್ನು ದೂಷಣೆಗೆ ಗುರಿಮಾಡಿ ತೋರುವ ಬೆರಳನ್ನು, ಕೆಡುಕಿನ ನುಡಿಯನ್ನು ಬಿಟ್ಟು,
ಯೆಶಾಯ 58 : 10 (IRVKN)
ನಿಮಗೆ ಪ್ರಿಯವಾದದ್ದನ್ನು ಹಸಿದವರಿಗೆ ಒದಗಿಸಿ, ಕುಗ್ಗಿದವರ ಆಶೆಯನ್ನು ನೆರವೇರಿಸಿದರೆ, ಆಗ ನಿಮಗೆ ಕತ್ತಲಲ್ಲಿ ಬೆಳಕು ಉದಯಿಸುವುದು, ನಿಮ್ಮ ಅಂಧಕಾರವು ಪರಿಹಾರವಾಗಿ ಮಧ್ಯಾಹ್ನವಾಗುವುದು.
ಯೆಶಾಯ 58 : 11 (IRVKN)
ಮತ್ತು ಯೆಹೋವನು ನಿಮ್ಮನ್ನು ನಿತ್ಯವೂ ನಡೆಸುತ್ತಾ, ಮರುಭೂಮಿಯಲ್ಲಿಯೂ ನಿಮ್ಮ ಆತ್ಮವನ್ನು ತೃಪ್ತಿಗೊಳಿಸಿ, ನಿಮ್ಮ ಎಲುಬುಗಳನ್ನು ಬಲಗೊಳಿಸುವನು; ನೀವು ತಂಪಾದ ತೋಟಕ್ಕೂ, ನೀರಿಗೆ ಮೋಸವಿಲ್ಲದ ಬುಗ್ಗೆಗೂ ಸಮಾನವಾಗುವಿರಿ.
ಯೆಶಾಯ 58 : 12 (IRVKN)
ನಿಮ್ಮ ಸಂತಾನದವರು ಪುರಾತನಕಾಲದಲ್ಲಿ ಹಾಳಾದ ನಿವೇಶನಗಳನ್ನು ಪುನಃ ಕಟ್ಟುವರು. ನೀವು ತಲತಲಾಂತರಗಳಿಂದ ಹಾಳುಬಿದ್ದಿರುವ ಅಸ್ತಿವಾರಗಳ ಮೇಲೆ ಕಟ್ಟಡಗಳನ್ನು ಎಬ್ಬಿಸುವಿರಿ; “ಬಿದ್ದ ಗೋಡೆಯನ್ನು ಕಟ್ಟುವ ಜನಾಂಗ, ಹಾದಿಗಳನ್ನು ತಿರುಗಾಡುವ ಸ್ಥಿತಿಗೆ ತರುವ ಜನಾಂಗ” ಎಂಬ ಬಿರುದುಗಳು ನಿಮಗುಂಟಾಗುವವು.
ಯೆಶಾಯ 58 : 13 (IRVKN)
ಸಬ್ಬತ್ ದಿನದ ಆಚರಣೆ ನೀವು ಸಬ್ಬತ್ ದಿನವನ್ನು ಅಗಮ್ಯವಾದದ್ದೆಂದು ತಿಳಿದು, ಆ ನನ್ನ ಪರಿಶುದ್ಧ ದಿನದಲ್ಲಿ ನಿಮ್ಮ ನಿತ್ಯದ ಕೆಲಸವನ್ನು ಮಾಡದೆ, ಸ್ವಇಚ್ಛೆಯಂತೆ ನಡೆಯದೆ, ಸ್ವಕಾರ್ಯದಲ್ಲಿ ನಿರತರಾಗದೆ, ಹರಟೆಹರಟದೆ, ಯೆಹೋವನ ಸಬ್ಬತ್ ಎಂಬ ಪರಿಶುದ್ಧದಿನವು ಉಲ್ಲಾಸಕರವೂ, ಮಾನ್ಯವೂ ಆದದ್ದೆಂದು ಘನಪಡಿಸಿದರೆ,
ಯೆಶಾಯ 58 : 14 (IRVKN)
ಆಗ ನೀವು ಯೆಹೋವನಲ್ಲಿ ಉಲ್ಲಾಸಪಡುವಿರಿ ಮತ್ತು ನಾನು ನಿಮ್ಮನ್ನು ಭೂಮಿಯ ಉನ್ನತವಾದ ಪ್ರದೇಶಗಳ ಮೇಲೆ ಹತ್ತಿಸಿ, ನಿಮ್ಮ ಪಿತೃವಾದ ಯಾಕೋಬನ ಸ್ವತ್ತನ್ನು ನೀವು ಅನುಭವಿಸುವಂತೆ ಮಾಡುವೆನು. ಯೆಹೋವನೇ ಇದನ್ನು ನುಡಿದಿದ್ದಾನೆ.

1 2 3 4 5 6 7 8 9 10 11 12 13 14