ಯೆಶಾಯ 56 : 1 (IRVKN)
ಸಕಲ ಜನಾಂಗಗಳಿಗೂ ದೇವರ ಆಶೀರ್ವಾದ ಯೆಹೋವನು ಹೀಗೆನ್ನುತ್ತಾನೆ, “ನ್ಯಾಯವನ್ನು ಅನುಸರಿಸಿ, ಧರ್ಮವನ್ನು ಆಚರಿಸಿರಿ; ಏಕೆಂದರೆ ನನ್ನ ವಿಮೋಚನಕ್ರಿಯೆಯು ಬೇಗನೆ ಬರುವುದು, ನನ್ನ ರಕ್ಷಣಾಧರ್ಮದ ಕಾರ್ಯವು ಶೀಘ್ರವಾಗಿ ವ್ಯಕ್ತವಾಗುವುದು.
ಯೆಶಾಯ 56 : 2 (IRVKN)
ಈ ವಿಧಿಯನ್ನು ಕೈಕೊಳ್ಳುವ ಮನುಷ್ಯನು ಧನ್ಯನು; ಇದನ್ನೇ ಭದ್ರವಾಗಿ ಹಿಡಿದು, ಸಬ್ಬತ್ ದಿನವನ್ನು ಹೊಲೆಮಾಡದೆ ದೇವರ ದಿನವೆಂದು ಆಚರಿಸುತ್ತಾ ಯಾವ ಕೇಡಿಗೂ ಕೈಹಾಕದ ಮಾನವನು ಭಾಗ್ಯವಂತನು.
ಯೆಶಾಯ 56 : 3 (IRVKN)
ಯೆಹೋವನನ್ನು ಅವಲಂಬಿಸಿದ ವಿದೇಶೀಯನು, ‘ಯೆಹೋವನು ತನ್ನ ಜನರಿಂದ ನನ್ನನ್ನು ಖಂಡಿತವಾಗಿ ಅಗಲಿಸುವನು’ ಎಂದು ಮಾತನಾಡದಿರಲಿ; ಮತ್ತು ನಪುಂಸಕನು, ‘ಅಯ್ಯೋ, ನಾನು ಗೊಡ್ಡುಮರ’ ” ಎಂದು ಅಂದುಕೊಳ್ಳದಿರಲಿ.
ಯೆಶಾಯ 56 : 4 (IRVKN)
ಯೆಹೋವನು ಹೀಗೆನ್ನುತ್ತಾನೆ, “ಸಬ್ಬತ್ ದಿನಗಳನ್ನು ನನ್ನ ದಿನಗಳೆಂದು ಆಚರಿಸಿ ನನಗೆ ಮೆಚ್ಚಿಕೆಯಾದುದನ್ನು ಕೈಕೊಂಡು ನನ್ನ ಒಡಂಬಡಿಕೆಯನ್ನು ಭದ್ರವಾಗಿ
ಯೆಶಾಯ 56 : 5 (IRVKN)
ಹಿಡಿದುಕೊಂಡಿರುವ ಮಂಗಳಮುಖಿಯರಿಗೆ ನನ್ನ ಪ್ರಾಕಾರಗಳೊಳಗೆ ನನ್ನ ಆಲಯದಲ್ಲಿ ಅವರ ಜ್ಞಾಪಕಾರ್ಥವಾಗಿ ಶಿಲೆಯನ್ನಿಟ್ಟು ಹೆಣ್ಣುಗಂಡು ಮಕ್ಕಳಿಗಿಂತ ಮೇಲಾದ ಹೆಸರನ್ನು ದಯಪಾಲಿಸುವೆನು; ಹೌದು, ಎಂದಿಗೂ ಅಳಿಯದ ಶಾಶ್ವತನಾಮವನ್ನು ಅನುಗ್ರಹಿಸುವೆನು.
ಯೆಶಾಯ 56 : 6 (IRVKN)
ಅನ್ಯದೇಶೀಯರಲ್ಲಿ ಯಾರು ಯೆಹೋವನೆಂಬ ನನ್ನನ್ನು ಅವಲಂಬಿಸಿ ಸೇವಿಸಿ ನನ್ನ ನಾಮವನ್ನು ಪ್ರೀತಿಸಿ ನನಗೆ ದಾಸರಾಗಿ ಸಬ್ಬತ್ ದಿನವನ್ನು ಹೊಲೆಮಾಡದೆ ನನ್ನ ದಿನವೆಂದು ಆಚರಿಸಿ ನನ್ನ ಒಡಂಬಡಿಕೆಯನ್ನು ಭದ್ರವಾಗಿ ಹಿಡಿಯುತ್ತಾರೋ
ಯೆಶಾಯ 56 : 7 (IRVKN)
ಅವರೆಲ್ಲರನ್ನೂ ನಾನು ನನ್ನ ಪವಿತ್ರಪರ್ವತಕ್ಕೆ ಬರಮಾಡಿ ನನ್ನ ಪ್ರಾರ್ಥನಾಲಯದಲ್ಲಿ ಉಲ್ಲಾಸಗೊಳಿಸುವೆನು; ನನ್ನ ಯಜ್ಞವೇದಿಯಲ್ಲಿ ಅವರು ಅರ್ಪಿಸುವ ಸರ್ವಾಂಗಹೋಮಗಳೂ, ಯಜ್ಞಗಳೂ ನನಗೆ ಮೆಚ್ಚಿಗೆಯಾಗುವವು; ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯ ಎನಿಸಿಕೊಳ್ಳುವುದು.
ಯೆಶಾಯ 56 : 8 (IRVKN)
ಇಸ್ರಾಯೇಲಿನ ದೇಶಭ್ರಷ್ಟರನ್ನು ಕೂಡಿಸಿಕೊಳ್ಳುವ ಕರ್ತನಾದ ಯೆಹೋವನ ನುಡಿಯೇನೆಂದರೆ, ‘ನಾನು ಕೂಡಿಸಿದ ಇಸ್ರಾಯೇಲರೊಂದಿಗೆ ಇನ್ನೂ ಹಲವರನ್ನು ಕೂಡಿಸುವೆನು’ ” ಎಂಬುದೇ.
ಯೆಶಾಯ 56 : 9 (IRVKN)
ಅಧಿಪತಿಗಳ ಅತ್ಯಾಶೆ, ಜನರ ದೇವದ್ರೋಹ, ಇವುಗಳ ಖಂಡನೆ ಅರಣ್ಯದ ಸಕಲ ಮೃಗಗಳೇ, ಕಾಡಿನ ಎಲ್ಲಾ ಜಂತುಗಳೇ, ನುಂಗಿಬಿಡುವುದಕ್ಕೆ ಬನ್ನಿರಿ!
ಯೆಶಾಯ 56 : 10 (IRVKN)
ಇವರ ಕಾವಲುಗಾರರು ಕುರುಡರು, ಇವರಲ್ಲಿ ಯಾರಿಗೂ ತಿಳಿವಳಿಕೆಯಿಲ್ಲ; ಇವರೆಲ್ಲರೂ ಬೊಗಳಲಾರದ ಮೂಕ ನಾಯಿಗಳು, ನಿದ್ರೆಯನ್ನಾಶಿಸಿ ಮಲಗಿಕೊಂಡು ಕನವರಿಸುವ ನಾಯಿಗಳು.
ಯೆಶಾಯ 56 : 11 (IRVKN)
ಇವು ಹೊಟ್ಟೆಬಾಕ ನಾಯಿಗಳು, ಇವುಗಳಿಗೆ ಎಂದಿಗೂ ಸಾಕು ಎನಿಸದು. ಇಂಥವರು ಕುರಿಗಳನ್ನು ಕಾಯತಕ್ಕವರೋ! ಬುದ್ಧಿಹೀನರಾಗಿದ್ದಾರೆ, ಇವರಲ್ಲಿ ಯಾರೂ ತಪ್ಪದೆ ಪ್ರತಿಯೊಬ್ಬನೂ ಕೊಳ್ಳೆಹೊಡೆಯಬೇಕೆಂದು ತನ್ನ ತನ್ನ ಮಾರ್ಗಕ್ಕೆ ತಿರುಗಿಕೊಂಡಿದ್ದಾನೆ.
ಯೆಶಾಯ 56 : 12 (IRVKN)
“ಬನ್ನಿರಿ, ನಾನು ದ್ರಾಕ್ಷಾರಸವನ್ನು ತರಿಸುವೆನು, ಬೇಕಾದಷ್ಟು ಮದ್ಯವನ್ನು ಕುಡಿಯುವ; ನಾಳೆಯೂ ಈ ದಿನದಂತೆ ಕೇವಲ ಅತ್ಯಂತ ವಿಶೇಷ ದಿನವಾಗಿರುವುದು” ಎಂದು ಹರಟೆ ಕೊಚ್ಚಿಕೊಳ್ಳುವರು.
❮
❯
1
2
3
4
5
6
7
8
9
10
11
12