ಯೆಶಾಯ 55 : 1 (IRVKN)
ಯೆಹೋವನ ಕರೆ “ಎಲೈ, ಬಾಯಾರಿದ ಸಕಲಜನರೇ, ನೀರಿನ ಬಳಿಗೆ ಬನ್ನಿರಿ, ಹಣವಿಲ್ಲದವನು ಸಹ ಬರಲಿ! ಬನ್ನಿರಿ, ಕೊಂಡುಕೊಳ್ಳಿರಿ, ಊಟ ಮಾಡಿರಿ! ಬಂದು ದ್ರಾಕ್ಷಾರಸವನ್ನೂ, ಹಾಲನ್ನೂ ಹಣಕೊಡದೆ, ಕ್ರಯವಿಲ್ಲದೆ ತೆಗೆದುಕೊಳ್ಳಿರಿ.
ಯೆಶಾಯ 55 : 2 (IRVKN)
ಆಹಾರವಲ್ಲದ್ದಕ್ಕೆ ಹಣವನ್ನು ಏಕೆ ವ್ಯರ್ಥ ಮಾಡುತ್ತೀರಿ? ತೃಪ್ತಿಗೊಳಿಸದ ಪದಾರ್ಥಕ್ಕೆ ನಿಮ್ಮ ದುಡಿತವನ್ನು ವೆಚ್ಚಮಾಡುವುದೇಕೆ? ಕಿವಿಗೊಟ್ಟು ನನ್ನ ಮಾತನ್ನು ಕೇಳಿರಿ, ಒಳ್ಳೆಯದನ್ನೇ ಉಂಡು ಮೃಷ್ಟಾನ್ನದಲ್ಲಿ ಆನಂದಪಡಿರಿ.
ಯೆಶಾಯ 55 : 3 (IRVKN)
ಕಿವಿಯನ್ನು ನನ್ನ ಕಡೆಗೆ ತಿರುಗಿಸಿರಿ, ನನ್ನ ಬಳಿಗೆ ಬನ್ನಿರಿ; ಆಲಿಸಿದರೆ ಬದುಕಿ ಬಾಳುವಿರಿ. ನಾನು ದಾವೀದನಿಗೆ ಖಂಡಿತವಾಗಿ ವಾಗ್ದಾನಮಾಡಿದ ಕೃಪಾವರಗಳನ್ನು ನಿಮಗೆ ಕೊಡುತ್ತೇನೆ” ಎಂಬ ಶಾಶ್ವತವಾದ ಒಡಂಬಡಿಕೆಯನ್ನು ನಿಮ್ಮೊಂದಿಗೆ ಮಾಡಿಕೊಳ್ಳುವೆನು.
ಯೆಶಾಯ 55 : 4 (IRVKN)
ಇಗೋ, ನಾನು ಅವನನ್ನು ಜನಾಂಗಗಳಿಗೆ ಸಾಕ್ಷಿಯನ್ನಾಗಿಯೂ, ನಾಯಕನನ್ನಾಗಿಯೂ ಅಧಿಪತಿಯನ್ನಾಗಿಯೂ ನೇಮಿಸಿದೆನು.
ಯೆಶಾಯ 55 : 5 (IRVKN)
ಎಲೈ, ಇಸ್ರಾಯೇಲೇ, ಅವನಂತೆ ನೀನೂ ನಿನಗೆ ಗೊತ್ತಿಲ್ಲದ ಜನಾಂಗವನ್ನು ನಿನ್ನ ಅಧೀನಕ್ಕೆ ಕರೆಯುವಿ, ಇಸ್ರಾಯೇಲಿನ ಸದಮಲಸ್ವಾಮಿ ಎನಿಸಿಕೊಳ್ಳುವ ನಿನ್ನ ದೇವರಾದ ಯೆಹೋವನು ನಿನಗೆ ವೈಭವ ಕೊಟ್ಟಿರುವುದನ್ನು ನೋಡಿ ನಿನ್ನನ್ನು ತಿಳಿಯದ ಜನಾಂಗವು ನಿನ್ನ ಆಶ್ರಯಕ್ಕೆ ಓಡಿಬರುವುದು.
ಯೆಶಾಯ 55 : 6 (IRVKN)
ಯೆಹೋವನು ಸಿಕ್ಕುವ ಕಾಲದಲ್ಲಿ ಆತನನ್ನು ಆಶ್ರಯಿಸಿರಿ, ಆತನು ಸಮೀಪದಲ್ಲಿರುವಾಗ ಆತನಿಗೆ ಬಿನ್ನಹಮಾಡಿರಿ.
ಯೆಶಾಯ 55 : 7 (IRVKN)
ದುಷ್ಟನು ತನ್ನ ದುರ್ಮಾರ್ಗವನ್ನು ಬಿಡಲಿ, ಕೆಡುಕನು ತನ್ನ ದುರಾಲೋಚನೆಗಳನ್ನು ತ್ಯಜಿಸಲಿ; ಯೆಹೋವನ ಕಡೆಗೆ ತಿರುಗಿಕೊಂಡು ಬರಲಿ, ಆತನು ಅವನನ್ನು ಕರುಣಿಸುವನು; ನಮ್ಮ ದೇವರನ್ನು ಆಶ್ರಯಿಸಲಿ, ಆತನು ಮಹಾಕೃಪೆಯಿಂದ ಕ್ಷಮಿಸುವನು.
ಯೆಶಾಯ 55 : 8 (IRVKN)
ಯೆಹೋವನು ಹೀಗೆನ್ನುತ್ತಾನೆ, “ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ.
ಯೆಶಾಯ 55 : 9 (IRVKN)
ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ, ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ, ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ.
ಯೆಶಾಯ 55 : 10 (IRVKN)
ಮಳೆಯೂ, ಹಿಮವೂ ಆಕಾಶದಿಂದ ಬಿದ್ದು, ಭೂಮಿಯನ್ನು ತೋಯಿಸಿ, ಹಸರುಗೊಳಿಸಿ ಫಲಿಸುವಂತೆ ಮಾಡಿ, ಬಿತ್ತುವವನಿಗೆ ಬೀಜವನ್ನು, ಉಣ್ಣುವವನಿಗೆ ಆಹಾರವನ್ನು ಒದಗಿಸಿದ ಹೊರತು ಹೇಗೆ ಆಕಾಶಕ್ಕೆ ಸುಮ್ಮನೆ ಹಿಂದಿರುಗುವುದಿಲ್ಲವೋ,
ಯೆಶಾಯ 55 : 11 (IRVKN)
ಹಾಗೆಯೇ ನನ್ನ ಬಾಯಿಂದ ಹೊರಟ ಮಾತು, ನನ್ನ ಇಷ್ಟಾರ್ಥವನ್ನು ನೆರವೇರಿಸಿ, ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವುದಿಲ್ಲ.
ಯೆಶಾಯ 55 : 12 (IRVKN)
ನೀವು ಆನಂದಭರಿತರಾಗಿ ಹೊರಡುವಿರಿ, ಸಮಾಧಾನದಿಂದ ಮೆರವಣಿಗೆಯಾಗಿ ಬರುವಿರಿ; ಬೆಟ್ಟ ಗುಡ್ಡಗಳು ನಿಮ್ಮ ಮುಂದೆ ಜಯಘೋಷ ಮಾಡುವವು.
ಯೆಶಾಯ 55 : 13 (IRVKN)
ಮುಳ್ಳಿಗೆ ಬದಲಾಗಿ ತುರಾಯಿಯೂ, ದತ್ತೂರಿಗೆ ಪ್ರತಿಯಾಗಿ ಸುಗಂಧವೂ ಬೆಳೆಯುವವು; ಆ ವನವು ಯೆಹೋವನ ನಾಮಸ್ಮರಣೆಗೆ ಶಾಶ್ವತವಾದ ಗುರುತಾಗಿ ಎಂದಿಗೂ ಅಳಿಯದಿರುವುದು.”
❮
❯
1
2
3
4
5
6
7
8
9
10
11
12
13