ಯೆಶಾಯ 54 : 1 (IRVKN)
ಚೀಯೋನಿನ ಮುಂದಿನ ವೃದ್ಧಿಯೂ ವೈಭವವೂ “ಹೆರದವಳೇ, ಬಂಜೆಯೇ, ಹರ್ಷಧ್ವನಿಗೈ! ಪ್ರಸವ ವೇದನೆಯನ್ನು ಅನುಭವಿಸದವಳೇ, ಆನಂದ ಸ್ವರವೆತ್ತಿ ಕೂಗು! ಗಂಡನುಳ್ಳವಳಿಗಿಂತ ಗಂಡಬಿಟ್ಟವಳಿಗೆ ಮಕ್ಕಳು ಹೆಚ್ಚು” ಎಂದು ಯೆಹೋವನು ಹೇಳುತ್ತಾನೆ.
ಯೆಶಾಯ 54 : 2 (IRVKN)
ನಿನ್ನ ಗುಡಾರದ ಸ್ಥಳವನ್ನು ವಿಸ್ತರಿಸು, ನಿನ್ನ ನಿವಾಸದ ಪರದೆಗಳು ಹರಡಲಿ, ಸಂಕೋಚಪಡಬೇಡ; ನಿನ್ನ ಹಗ್ಗಗಳನ್ನು ಉದ್ದಮಾಡಿ ಗೂಟಗಳನ್ನು ಬಲಪಡಿಸು.
ಯೆಶಾಯ 54 : 3 (IRVKN)
ನೀನು ಎಲ್ಲಾ ಕಡೆಗಳಲ್ಲಿಯೂ ಹಬ್ಬಿಕೊಳ್ಳುವಿ; ನಿನ್ನ ಸಂತಾನದವರು ಜನಾಂಗಗಳನ್ನು ವಶಮಾಡಿಕೊಂಡು ಹಾಳು ಪಟ್ಟಣಗಳನ್ನು ಜನಭರಿತವಾಗುವಂತೆ ಮಾಡುವರು.
ಯೆಶಾಯ 54 : 4 (IRVKN)
“ಹೆದರಬೇಡ, ನಿನಗೆ ಅವಮಾನವಾಗುವುದಿಲ್ಲ, ನಾಚಿಕೆಪಡದಿರು, ನಿನಗೆ ಆಶಾಭಂಗವಾಗದು; ಯೌವನದಲ್ಲಿ ನಿನಗಾದ ಅವಮಾನವನ್ನು ಮರೆತುಬಿಡುವಿ, ವೈಧವ್ಯದಲ್ಲಿ ನಿನಗೆ ಸಂಭವಿಸಿದ ನಿಂದೆಯು ಇನ್ನು ನಿನ್ನ ನೆನಪಿಗೆ ಬಾರದು.
ಯೆಶಾಯ 54 : 5 (IRVKN)
“ನಿನ್ನ ಸೃಷ್ಟಿಕರ್ತನೇ ನಿನ್ನ ಪತಿ, ಆತನ ಹೆಸರು ಸೇನಾಧೀಶ್ವರನಾದ ಯೆಹೋವ; ಇಸ್ರಾಯೇಲಿನ ಸದಮಲಸ್ವಾಮಿಯು ನಿನ್ನ ನ್ಯಾಯಸ್ಥಾಪಕನಾಗಿದ್ದಾನೆ; ಸರ್ವಲೋಕದ ದೇವರೆಂಬ ನಾಮಧೇಯವನ್ನು ಹೊಂದಿರುವನು.
ಯೆಶಾಯ 54 : 6 (IRVKN)
ನೀನು ತ್ಯಜಿಸಿದ ಮನನೊಂದ ಹೆಂಡತಿ, ಹೌದು, ತ್ಯಜಿಸಲ್ಪಟ್ಟವಳಾದ ನನ್ನ ಯೌವನಕಾಲದ ಪತ್ನಿ ಎಂದು ಯೆಹೋವನು ನಿನ್ನನ್ನು ಕನಿಕರಿಸಿ ಕರೆದಿದ್ದಾನೆ” ಎಂಬುದು ನಿನ್ನ ದೇವರ ನುಡಿ.
ಯೆಶಾಯ 54 : 7 (IRVKN)
“ಕ್ಷಣಮಾತ್ರ ನಿನ್ನನ್ನು ಬಿಟ್ಟಿದ್ದೆನು, ಮಹಾ ಕೃಪೆಯಿಂದ ಸೇರಿಸಿಕೊಳ್ಳುವೆನು.
ಯೆಶಾಯ 54 : 8 (IRVKN)
ತಟ್ಟನೆ ಉಬ್ಬಿ ಹರಿಯುವ ಕೋಪದಿಂದ ಒಂದು ಕ್ಷಣ ಮಾತ್ರ ನನ್ನ ಮುಖವನ್ನು ನಿನಗೆ ಮರೆಮಾಡಿಕೊಂಡಿದ್ದೆನು, ಶಾಶ್ವತ ಕೃಪೆಯಿಂದ ನಿನ್ನನ್ನು ಕರುಣಿಸುವೆನು” ಎಂದು ನಿನ್ನ ವಿಮೋಚಕನಾದ ಯೆಹೋವನು ಅನ್ನುತ್ತಾನೆ.
ಯೆಶಾಯ 54 : 9 (IRVKN)
“ನಿನ್ನನ್ನು ತ್ಯಜಿಸಿದ್ದು ನನಗೆ ನೋಹನ ಕಾಲದ ಜಲಪ್ರಳಯದಂತಿದೆ; ಇಂತಹ ಜಲಪ್ರಳಯವು ಭೂಮಿಯನ್ನು ಪುನಃ ಆವರಿಸುವುದಿಲ್ಲ ಎಂದು ನಾನು ಹೇಗೆ ಪ್ರಮಾಣಮಾಡಿದೆನೋ ಹಾಗೆಯೇ ನಾನು ನಿನ್ನ ಮೇಲೆ ಇನ್ನು ಕೋಪಮಾಡುವುದಿಲ್ಲ, ಗದರಿಸುವುದಿಲ್ಲ ಎಂದು ಈಗ ಪ್ರಮಾಣಮಾಡಿದ್ದೇನೆ.
ಯೆಶಾಯ 54 : 10 (IRVKN)
ಬೆಟ್ಟಗಳು ಸ್ಥಳವನ್ನು ಬಿಟ್ಟುಹೋದಾವು, ಗುಡ್ಡಗಳು ಕದಲಿಯಾವು; ಆದರೆ ನನ್ನ ಕೃಪೆಯು ನಿನ್ನನ್ನು ಬಿಟ್ಟುಹೋಗದು, ಸಮಾಧಾನದ ನನ್ನ ಒಪ್ಪಂದವು ಕದಲದು ಎಂದು ನಿನ್ನನ್ನು ಕರುಣಿಸುವ ಯೆಹೋವನು ಅನ್ನುತ್ತಾನೆ.
ಯೆಶಾಯ 54 : 11 (IRVKN)
ಕುಗ್ಗಿದವಳೇ, ಗಾಳಿಯ ಬಡಿತಕ್ಕೆ ಗುರಿಯಾದವಳೇ, ಯಾರೂ ಸಂತೈಸದವಳೇ, ಇಗೋ, ಇಂದ್ರನೀಲಮಣಿಗಳಿಂದ ನಿನಗೆ ಅಸ್ತಿವಾರವನ್ನು ಹಾಕಿ, ನಿನ್ನ ಕಲ್ಲುಗಳನ್ನು ನೀಲಾಂಜನದ ಗಾರೆಯಿಂದ ಕಟ್ಟುವೆನು.
ಯೆಶಾಯ 54 : 12 (IRVKN)
ನಿನ್ನ ಶಿಖರಗಳನ್ನು ಮಾಣಿಕ್ಯಗಳಿಂದ, ನಿನ್ನ ಬಾಗಿಲುಗಳನ್ನು ಪದ್ಮರಾಗಗಳಿಂದ, ನಿನ್ನ ಪೌಳಿಗೋಡೆಯನ್ನು ಮನೋಹರ ರತ್ನಗಳಿಂದ ನಿರ್ಮಿಸುವೆನು.
ಯೆಶಾಯ 54 : 13 (IRVKN)
ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು, ಅವರಿಗೆ ಅಧಿಕ ಸುಕ್ಷೇಮವಾಗುವುದು.
ಯೆಶಾಯ 54 : 14 (IRVKN)
ಧರ್ಮವೇ ನಿನಗೆ ಆಧಾರ; ನೀನು ಹಿಂಸೆಗೆ ದೂರವಾಗಿರುವಿ, ನಿನಗೆ ಹೆದರಿಕೆ ಇರುವುದಿಲ್ಲ, ನಾಶನವು ದೂರವಾಗಿರುವುದು, ನಿನ್ನ ಹತ್ತಿರಕ್ಕೆ ಬಾರದು.
ಯೆಶಾಯ 54 : 15 (IRVKN)
ನೋಡು, ಯಾರಾದರೂ ನಿನ್ನ ಸಂಗಡ ವ್ಯಾಜ್ಯವಾಡಿದರೆ ಅದು ನನ್ನ ಅಪ್ಪಣೆಯಿಂದ ಅಲ್ಲ; ಯಾರು ನಿನ್ನ ಮೇಲೆ ವ್ಯಾಜ್ಯವಾಡುತ್ತಾರೋ ಅವರು ನಿನ್ನ ನಿಮಿತ್ತ ಕೆಡವಲ್ಪಡುವರು.
ಯೆಶಾಯ 54 : 16 (IRVKN)
ಕೇಳು, ಕೆಂಡವನ್ನು ಊದುತ್ತಾ ಉಪಯುಕ್ತವಾದ ಆಯುಧವನ್ನು ಉಂಟುಮಾಡುವ ಕಮ್ಮಾರನನ್ನು ಸೃಷ್ಟಿಸಿದವನು ನಾನೇ, ಹಾಳುಮಾಡುವ ಕೆಡುಕನನ್ನು ನಿರ್ಮಿಸಿದವನೂ ನಾನೇ.
ಯೆಶಾಯ 54 : 17 (IRVKN)
ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು; ನ್ಯಾಯವಿಚಾರಣೆಯಲ್ಲಿ ನಿನಗೆ ವಿರುದ್ಧವಾಗಿ ಏಳುವ ಪ್ರತಿಯೊಂದು ನಾಲಿಗೆಯನ್ನು ದೋಷಿಯೆಂದು ನೀನು ಖಂಡಿಸುವಿ. ಈ ಸ್ಥಿತಿಯೇ ಯೆಹೋವನ ಸೇವಕರ ಸ್ವಾಸ್ತ್ಯವೂ, ನಾನು ದಯಪಾಲಿಸುವ ಸದ್ಧರ್ಮಫಲವೂ ಆಗಿದೆ” ಎಂದು ಯೆಹೋವನು ಅನ್ನುತ್ತಾನೆ.
❮
❯
1
2
3
4
5
6
7
8
9
10
11
12
13
14
15
16
17