ಯೆಶಾಯ 53 : 1 (IRVKN)
ನಾವು ಕೇಳಿದ ಸಂಗತಿಯನ್ನು ನಮ್ಮಲ್ಲಿ ಯಾರು ನಂಬಿದ್ದರು? ಯೆಹೋವನ ಬಾಹುವು ಯಾರಿಗೆ ಗೋಚರವಾಗಿತ್ತು?
ಯೆಶಾಯ 53 : 2 (IRVKN)
ಒಣನೆಲದೊಳಗೆ ಬೇರಿನಿಂದ ಹೊರಡುವ ಸಸಿಯಂತೆಯೂ, ಬುಡದಿಂದ ಒಡೆಯುವ ಚಿಗುರಿನ ಹಾಗೂ ಅವನು ಯೆಹೋವನ ದೃಷ್ಟಿಯಲ್ಲಿ ಬೆಳೆದನು. ಅವನಲ್ಲಿ ಯಾವ ಅಂದಚಂದಗಳೂ ಇರಲಿಲ್ಲ; ನಾವು ಅವನನ್ನು ನೋಡಿದಾಗ ನೋಡತಕ್ಕ ಯಾವ ಲಕ್ಷಣವೂ ಕಾಣಲಿಲ್ಲ.
ಯೆಶಾಯ 53 : 3 (IRVKN)
ಅವನು ಧಿಕ್ಕರಿಸಲ್ಪಟ್ಟವನು, ಮನುಷ್ಯರು ಸೇರಿಸಿಕೊಳ್ಳದವನು, ಸಂಕಟಪಡುವವನು, ವ್ಯಾಧಿಪೀಡಿತನು, ಜನರು ಮುಖವನ್ನು ಓರೆಮಾಡಿಕೊಳ್ಳುವ ಧಿಕ್ಕಾರಕ್ಕೆ ಒಳಗಾದವನೂ ಆಗಿದ್ದನು.
ಯೆಶಾಯ 53 : 4 (IRVKN)
ನಿಜವಾಗಿಯೂ ನಮ್ಮ ವ್ಯಾಧಿಗಳನ್ನು ಸಂಕಷ್ಟವನ್ನು ಅನುಭವಿಸಿದನು; ಅವನು ಹೊತ್ತ ಹೊರೆಯು ನಮ್ಮ ಸಂಕಟವೇ ಹೌದು, ನಾವಾದರೋ ಅವನು ದೇವರಿಂದ ಬಾಧಿತನು, ಪೆಟ್ಟು ತಿಂದವನು, ಕುಗ್ಗಿಸಲ್ಪಟ್ಟವನು ಎಂದು ಭಾವಿಸಿಕೊಂಡೆವು.
ಯೆಶಾಯ 53 : 5 (IRVKN)
ನಮ್ಮ ದ್ರೋಹಗಳ ದೆಸೆಯಿಂದ ಅವನಿಗೆ ಗಾಯವಾಯಿತು, ನಮ್ಮ ಅಪರಾಧಗಳ ನಿಮಿತ್ತ ಅವನು ಜಜ್ಜಲ್ಪಟ್ಟನು; ನಮಗೆ ಸುಕ್ಷೇಮವನ್ನು ಉಂಟುಮಾಡುವ ದಂಡನೆಯನ್ನು ಅವನು ಅನುಭವಿಸಿದನು; ಅವನ ಬಾಸುಂಡೆಗಳಿಂದ ನಮಗೆ ಗುಣವಾಯಿತು.
ಯೆಶಾಯ 53 : 6 (IRVKN)
ನಾವೆಲ್ಲರೂ ಕುರಿಗಳಂತೆ ದಾರಿತಪ್ಪಿ ಹೋಗಿದ್ದೆವು, ಪ್ರತಿಯೊಬ್ಬನೂ ತನ್ನ ತನ್ನ ದಾರಿಯನ್ನು ಹಿಡಿಯುತ್ತಿದ್ದನು; ನಮ್ಮೆಲ್ಲರ ದೋಷಫಲವನ್ನೂ ಯೆಹೋವನು ಅವನ ಮೇಲೆ ಹಾಕಿದನು.
ಯೆಶಾಯ 53 : 7 (IRVKN)
ಅವನು ಬಾಧೆಗೆ ಒಳಗಾಗಿ ತನ್ನನ್ನು ತಗ್ಗಿಸಿಕೊಂಡನು, ಬಾಯಿ ತೆರೆಯಲಿಲ್ಲ; ವಧ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆಯೂ, ಉಣ್ಣೆ ಕತ್ತರಿಸುವವರ ಮುಂದೆ ಮೌನವಾಗಿರುವ ಕುರಿಯ ಹಾಗೂ ಇದ್ದನು, ಬಾಯಿ ತೆರೆಯಲೇ ಇಲ್ಲ.
ಯೆಶಾಯ 53 : 8 (IRVKN)
ಹಿಂಸೆಯ ನ್ಯಾಯದಿಂದ ಕೊಲ್ಲಲ್ಪಟ್ಟನು, ಆಹಾ, ಇವನು ಜೀವಲೋಕದಿಂದ ತೆಗೆದುಹಾಕಲ್ಪಟ್ಟಿದ್ದಾನೆ. ನಮ್ಮ ಜನಗಳ ದ್ರೋಹಗಳ ದೆಸೆಯಿಂದ ಈ ಪೆಟ್ಟು ಅವನ ಮೇಲೆ ಬಿತ್ತಲ್ಲಾ ಎಂದು ಅವನ ಕಾಲದವರಲ್ಲಿ ಯಾರು ಮನಮುಟ್ಟಿ ಮರುಗಿದರು?
ಯೆಶಾಯ 53 : 9 (IRVKN)
ಅವನು ಯಾವ ಅನ್ಯಾಯವನ್ನು ಮಾಡದಿದ್ದರೂ, ಅವನ ಬಾಯಲ್ಲಿ ಯಾವ ವಂಚನೆಯು ಇಲ್ಲದಿದ್ದರೂ, ಅವನು ಸತ್ತಾಗ ದುಷ್ಟರ ಮಧ್ಯೆ ಪುಷ್ಟರ ನಡುವೆ ಅವನನ್ನು ಹೂಣಿಟ್ಟರು.
ಯೆಶಾಯ 53 : 10 (IRVKN)
ಅವನನ್ನು ಜಜ್ಜುವುದು ಯೆಹೋವನ ಸಂಕಲ್ಪವಾಗಿತ್ತು. ಆತನು ಅವನನ್ನು ವ್ಯಾಧಿಯಿಂದ ಬಾಧಿಸಿ ಹೀಗೆಂದುಕೊಂಡನು, ಇವನು ತನ್ನ ಆತ್ಮವನ್ನು ಪ್ರಾಯಶ್ಚಿತ್ತಯಜ್ಞಕ್ಕಾಗಿ ಒಪ್ಪಿಸಿದ ಮೇಲೆ ತನ್ನ ಸಂತಾನವನ್ನು ನೋಡುವನು, ಚಿರಂಜೀವಿಯಾಗುವನು, ನನ್ನ ಸಂಕಲ್ಪವು ಇವನ ಕೈಯಿಂದ ನೆರವೇರುವುದು;
ಯೆಶಾಯ 53 : 11 (IRVKN)
ತನ್ನ ಆತ್ಮವು ಅನುಭವಿಸಿದ ಶ್ರಮೆಯ ಫಲವನ್ನು ಕಂಡು ತೃಪ್ತನಾಗುವನು; ಧರ್ಮಾತ್ಮನಾದ ನನ್ನ ಸೇವಕನು ತನ್ನ ಜ್ಞಾನದ ಮೂಲಕ ಬಹು ಜನರನ್ನು ಧರ್ಮಮಾರ್ಗಕ್ಕೆ ತರುವನು; ಅವರ ಅಪರಾಧಗಳನ್ನು ಹೊತ್ತುಕೊಂಡು ಹೋಗುವನು.
ಯೆಶಾಯ 53 : 12 (IRVKN)
ಇವನು ಇಂಥವನಾಗಿರುವುದರಿಂದ ನಾನು ಇವನಿಗೆ ದೊಡ್ಡವರ ಸಂಗಡ ಪಾಲು ಕೊಡುವೆನು, ಇವನು ಬಲಿಷ್ಠರೊಡನೆ ಸೂರೆಯನ್ನು ಹಂಚಿಕೊಳ್ಳುವನು; ತನ್ನ ಪ್ರಾಣವನ್ನು ಧಾರೆಯೆರೆದು, ಮರಣಹೊಂದಿ, ದ್ರೋಹಿಗಳೊಂದಿಗೆ ತನ್ನನ್ನೂ ಎಣಿಸಿಕೊಂಡು, ಬಹು ಜನ ದ್ರೋಹಿಗಳ ಪಾಪವನ್ನು ಹೊರುತ್ತಾ ಅವರಿಗಾಗಿ ವಿಜ್ಞಾಪನೆ ಮಾಡಿದನು.

1 2 3 4 5 6 7 8 9 10 11 12