ಯೆಶಾಯ 52 : 1 (IRVKN)
ಯೆರೂಸಲೇಮಿನ ಬಿಡುಗಡೆ ಚೀಯೋನೇ, ಎಚ್ಚರಗೊಳ್ಳು, ಎಚ್ಚರಗೊಳ್ಳು, ನಿನ್ನ ಪ್ರತಾಪವನ್ನು ಧರಿಸಿಕೋ! ಯೆರೂಸಲೇಮೇ ಪರಿಶುದ್ಧ ಪಟ್ಟಣವೇ, ನಿನ್ನ ಸುಂದರವಾದ ಉಡುಪನ್ನು ಹಾಕಿಕೋ! ಇಂದಿನಿಂದ ಅಶುದ್ಧರೂ, ಸುನ್ನತಿಯಿಲ್ಲದವರೂ ನಿನ್ನೊಳಗೆ ಪ್ರವೇಶಮಾಡುವುದಿಲ್ಲ.
ಯೆಶಾಯ 52 : 2 (IRVKN)
ಯೆರೂಸಲೇಮೇ, ಧೂಳನ್ನು ಝಾಡಿಸಿಕೋ! ಎದ್ದು ಆಸನದ ಮೇಲೆ ಕುಳಿತುಕೋ! ಸೆರೆಯಲ್ಲಿ ಬಿದ್ದ ಚೀಯೋನ್ ಪುತ್ರಿಯೇ, ನಿನ್ನ ಕುತ್ತಿಗೆಯ ಬಂಧನವನ್ನು ಬಿಚ್ಚಿಕೋ!
ಯೆಶಾಯ 52 : 3 (IRVKN)
ಯೆಹೋವನ ಈ ಮಾತನ್ನು ಕೇಳಿರಿ, “ಲಾಭಪಡೆಯದೆ ನಿಮ್ಮನ್ನು ಮಾರಿದೆನು, ಹಣತಕ್ಕೊಳ್ಳದೆ ನಿಮ್ಮನ್ನು ಬಿಡುಗಡೆಮಾಡುವೆನು.”
ಯೆಶಾಯ 52 : 4 (IRVKN)
ಕರ್ತನಾದ ಯೆಹೋವನು ಹೀಗೆಂದುಕೊಳ್ಳುತ್ತಾನೆ, “ನನ್ನ ಜನರು ಮೊಟ್ಟಮೊದಲು ಐಗುಪ್ತದಲ್ಲಿ ಇಳಿದುಕೊಳ್ಳಬೇಕೆಂದು ಹೋಗಿ ಅಲ್ಲಿ ಸೆರೆಯಾದರು. ಅಶ್ಶೂರ್ಯರು ಕಾರಣವಿಲ್ಲದೆ ಅವರನ್ನು ಬಾಧೆಪಡಿಸಿದರು.”
ಯೆಶಾಯ 52 : 5 (IRVKN)
ಕರ್ತನಾದ ಯೆಹೋವನು ಹೇಳುವುದೇನೆಂದರೆ, “ಈಗಲೂ ಅನ್ಯರು ನನ್ನ ಜನರನ್ನು ಕಾರಣವಿಲ್ಲದೆ ಸೆರೆತೆಗೆದುಕೊಂಡು ಹೋಗಿರುವಾಗ ನಾನು ಇಲ್ಲಿ ಸುಮ್ಮನಿರುವುದು ಹೇಗೆ? ನನ್ನ ಪ್ರಜೆಯನ್ನು ಆಳುವವರು ರೌದ್ರದಿಂದ ಅರಚುತ್ತಾರೆ.* ಅರಚುತ್ತಾರೆ. ಅಥವಾ ಪರಿಹಾಸ್ಯ ಮಾಡುತ್ತಾರೆ. ನನ್ನ ನಾಮವು ದಿನವೆಲ್ಲಾ ಎಡೆಬಿಡದೆ ದೂಷಣೆಗೆ ಗುರಿಯಾಗಿದೆ.
ಯೆಶಾಯ 52 : 6 (IRVKN)
ಹೀಗಿರಲು ನನ್ನ ಜನರು ನನ್ನ ನಾಮದ ಮಹತ್ತನ್ನು ತಿಳಿದುಕೊಳ್ಳುವರು. ಹೀಗೆ ಆ ದಿನದಲ್ಲಿ ಅವರ ಸಂಗಡ ಮಾತನಾಡಿದವನು ನಾನೇ. ಹೌದು ನಾನೇ” ಎಂದು ಗ್ರಹಿಸಿಕೊಳ್ಳುವ ಹಾಗೆ ಮಾಡುವೆನು.
ಯೆಶಾಯ 52 : 7 (IRVKN)
ಪರ್ವತಗಳ ಮೇಲೆ ತ್ವರೆಪಡುತ್ತಾ, ಶುಭಸಮಾಚಾರವನ್ನು ತಂದು, ಸಮಾಧಾನವನ್ನು ಸಾರುವ ದೂತನ ಪಾದಗಳು ಎಷ್ಟೋ ಅಂದವಾಗಿವೆ! ಶುಭವರ್ತಮಾನವನ್ನು, ಶುಭದ ಸುವಾರ್ತೆಯನ್ನು ತಂದು, ರಕ್ಷಣೆಯನ್ನು ಪ್ರಕಟಿಸುತ್ತಾ, “ನಿನ್ನ ದೇವರು ರಾಜ್ಯಭಾರವನ್ನು ವಹಿಸಿದ್ದಾನೆ” ಎಂದು ಚೀಯೋನಿಗೆ ತಿಳಿಸುವವನಾಗಿದ್ದಾನೆ.
ಯೆಶಾಯ 52 : 8 (IRVKN)
ಇಗೋ, ನಿನ್ನ ಕಾವಲುಗಾರರ ಕೂಗು! ಸ್ವರವೆತ್ತಿ ಒಟ್ಟಿಗೆ ಹರ್ಷಧ್ವನಿಗೈಯುತ್ತಾರೆ. ಯೆಹೋವನು ಚೀಯೋನಿಗೆ ತಿರುಗಿ ಬರುವುದನ್ನು ಪ್ರತ್ಯಕ್ಷವಾಗಿ ನೋಡುವರು.
ಯೆಶಾಯ 52 : 9 (IRVKN)
ಯೆರೂಸಲೇಮಿನ ಹಾಳುಪ್ರದೇಶಗಳೇ, ತಟ್ಟನೆ ಜಯಘೋಷಮಾಡಿ ಒಟ್ಟಿಗೆ ಹರ್ಷಧ್ವನಿಗೈಯಿರಿ! ಯೆಹೋವನು ಯೆರೂಸಲೇಮನ್ನು ವಿಮೋಚಿಸಿ ತನ್ನ ಜನರನ್ನು ಸಂತೈಸಿದ್ದಾನೆ.
ಯೆಶಾಯ 52 : 10 (IRVKN)
ಯೆಹೋವನು ಸಕಲ ಜನಾಂಗಗಳ ಕಣ್ಣೆದುರಿನಲ್ಲಿ ತನ್ನ ದಿವ್ಯಬಾಹುವನ್ನು ತೆರೆದು ತೋರಿಸಿದ್ದಾನೆ. ಭೂಮಿಯ ಎಲ್ಲಾ ದಿಕ್ಕಿನವರೂ ನಮ್ಮ ದೇವರ ರಕ್ಷಣಾಕಾರ್ಯವನ್ನು ನೋಡುವರು.
ಯೆಶಾಯ 52 : 11 (IRVKN)
ತೊಲಗಿರಿ, ತೊಲಗಿರಿ, ಬಾಬೆಲಿನಿಂದ ಹೊರಡಿರಿ, ಅಶುದ್ಧವಾದ ಯಾವುದನ್ನೂ ಮುಟ್ಟದಿರಿ, ಅದರಿಂದ ದೂರ ಹೋಗಿ, ಯೆಹೋವನ ಆರಾಧನೆಯ ಉಪಕರಣಗಳನ್ನು ಹೊರುವವರೇ, ಶುದ್ಧರಾಗಿರಿ!
ಯೆಶಾಯ 52 : 12 (IRVKN)
ನೀವು ಅವಸರದಿಂದ ಹೊರಡಬೇಕಾಗಿಲ್ಲ, ಓಡಿಹೋಗಬೇಕಾಗಿಲ್ಲ. ಯೆಹೋವನು ನಿಮಗೆ ಮುಂಬಲವಾಗಿ ಮುಂದೆ ಹೋಗುವನು. ಇಸ್ರಾಯೇಲಿನ ದೇವರು ನಿಮಗೆ ಹಿಂಬಲವಾಗಿಯೂ ಕಾಯುವನು.
ಯೆಶಾಯ 52 : 13 (IRVKN)
ಯೆಹೋವನ ಸೇವಕನ ಶ್ರಮೆ, ಪ್ರಾಣತ್ಯಾಗ ಅದರ ಪ್ರತಿಫಲ ಇಗೋ, ನನ್ನ ಸೇವಕನು ಕೃತಾರ್ಥನಾಗುವನು. ಅವನು ಉನ್ನತನಾಗಿ ಮೇಲಕ್ಕೇರಿ ಮಹೋನ್ನತ ಪದವಿಗೆ ಬರುವನು.
ಯೆಶಾಯ 52 : 14 (IRVKN)
ಅವನ ಮುಖವು ಸಕಲ ಮನುಷ್ಯರ ಮುಖಕ್ಕಿಂತಲೂ, ಅವನ ರೂಪವು ಎಲ್ಲಾ ನರಜನ್ಮದವರ ರೂಪಕ್ಕಿಂತಲೂ ವಿಕಾರವಾಗಿರುವುದನ್ನು ನೋಡಿ, ಅನೇಕರು ಹೇಗೆ ಹೆದರಿದರೋ,
ಯೆಶಾಯ 52 : 15 (IRVKN)
ಹಾಗೆಯೇ ಅನೇಕ ಜನಾಂಗಗಳವರು ಅವನನ್ನು ಕಂಡು ವಿಸ್ಮಯದಿಂದ ಚಕಿತರಾಗುವರು. ಅರಸರೂ ಅವನ ಮುಂದೆ ಬಾಯಿಮುಚ್ಚಿಕೊಳ್ಳುವರು. ಏಕೆಂದರೆ ಸುದ್ದಿಯೇ ಇಲ್ಲದ ಸಂಗತಿಯನ್ನು ನೋಡುವರು, ಎಂದೂ ಕೇಳದೇ ಇರುವ ವಿಷಯವನ್ನು ಗ್ರಹಿಸಿಕೊಳ್ಳುವರು.

1 2 3 4 5 6 7 8 9 10 11 12 13 14 15