ಯೆಶಾಯ 50 : 1 (IRVKN)
ಯೆಹೋವನು ಹೀಗೆನ್ನುತ್ತಾನೆ, “ನಾನು ನಿಮ್ಮ ತಾಯಿಯನ್ನು ತ್ಯಜಿಸಿದ ತ್ಯಾಗಪತ್ರವು ಎಲ್ಲಿ? ನನ್ನ ಸಾಲಗಾರರಲ್ಲಿ ಯಾರಿಗೆ ನಿಮ್ಮನ್ನು ಮಾರಿಬಿಟ್ಟಿದ್ದೇನೆ? ನೋಡಿರಿ, ನಿಮ್ಮ ದೋಷಗಳ ನಿಮಿತ್ತ ನಿಮ್ಮನ್ನು ಮಾರಿದೆನು, ನಿಮ್ಮ ದ್ರೋಹಗಳಿಗಾಗಿ ನಿಮ್ಮ ತಾಯಿಯನ್ನು ಬಿಟ್ಟೆನು.
ಯೆಶಾಯ 50 : 2 (IRVKN)
ನಾನು ಬಂದಾಗ ಏಕೆ ಯಾರೂ ಕಾದಿರಲಿಲ್ಲ? ನಾನು ಕರೆದಾಗ ಏಕೆ ಯಾರೂ ಉತ್ತರಕೊಡಲಿಲ್ಲ? ನನ್ನ ಹಸ್ತವು ರಕ್ಷಿಸಲಾರದ ಮೋಟುಗೈಯೋ? ಉದ್ಧರಿಸುವ ಶಕ್ತಿಯು ನನ್ನಲ್ಲಿಲ್ಲವೋ? ಇಗೋ, ನನ್ನ ಗದರಿಕೆಯಿಂದಲೇ ನಾನು ಸಮುದ್ರವನ್ನು ಬತ್ತಿಸಿ ನದಿಗಳನ್ನು ಒಣಕಾಡನ್ನಾಗಿ ಮಾಡುತ್ತೇನೆ. ನೀರಿಲ್ಲದೆ ಅಲ್ಲಿನ ಮೀನುಗಳು ಬಾಯಾರಿ ಸತ್ತು ನಾರುವವು.
ಯೆಶಾಯ 50 : 3 (IRVKN)
ನಾನು ಆಕಾಶಕ್ಕೆ ಅಂಧಕಾರವನ್ನು ಹೊದಿಸಿ, ಗೋಣಿತಟ್ಟಿನ ಮುಸುಕನ್ನು ಹಾಕುತ್ತೇನೆ.”
ಯೆಶಾಯ 50 : 4 (IRVKN)
ಯೆಹೋವನ ಸೇವಕನ ಭರವಸೆ ಬಳಲಿಹೋದವರನ್ನು ಮಾತುಗಳಿಂದ ಸುಧಾರಿಸುವುದಕ್ಕೆ ನಾನು ಬಲ್ಲವನಾಗುವಂತೆ ಕರ್ತನಾದ ಯೆಹೋವನು ಶಿಕ್ಷಿತರ ನಾಲಿಗೆಯನ್ನು ನನಗೆ ದಯಪಾಲಿಸಿದ್ದಾನೆ. ಮುಂಜಾನೆಯಿಂದ ಮುಂಜಾನೆಗೆ ನನ್ನನ್ನು ಎಚ್ಚರಿಸಿ ಶಿಕ್ಷಿತರಂತೆ ನಾನು ಕೇಳುವ ಹಾಗೆ ನನ್ನ ಕಿವಿಯನ್ನು ಎಚ್ಚರಗೊಳಿಸುತ್ತಾನೆ.
ಯೆಶಾಯ 50 : 5 (IRVKN)
ಕರ್ತನಾದ ಯೆಹೋವನು ನನ್ನ ಕಿವಿಯನ್ನು ತೆರೆದಿದ್ದಾನೆ. ನಾನು ಎದುರು ಬೀಳಲಿಲ್ಲ, ವಿಮುಖನಾಗಲೂ ಇಲ್ಲ.
ಯೆಶಾಯ 50 : 6 (IRVKN)
ನಾನು ಹೊಡೆಯುವವರಿಗೆ ಬೆನ್ನುಕೊಟ್ಟು, ಕೂದಲು ಕೀಳುವವರಿಗೆ ಗಡ್ಡವನ್ನು ಒಡ್ಡಿದೆನು. ಉಗುಳಿಸಿಕೊಳ್ಳುವ ಅವಮಾನಕ್ಕೆ ನನ್ನ ಮುಖವನ್ನು ಮರೆಮಾಡಿಕೊಳ್ಳಲಿಲ್ಲ.
ಯೆಶಾಯ 50 : 7 (IRVKN)
ಕರ್ತನಾದ ಯೆಹೋವನು ನನಗೆ ಸಹಾಯಮಾಡುವನು. ಆದಕಾರಣ ನಾನು ನಾಚಿಕೆಯಿಂದ ಕೊರಗಲಿಲ್ಲ; ನನ್ನ ಮುಖವನ್ನು ಕಗ್ಗಲ್ಲಿನಂತೆ ಗಟ್ಟಿಮಾಡಿಕೊಂಡಿದ್ದೇನೆ. ಆಶಾಭಂಗಪಡಲಾರನೆಂದು ನನಗೆ ಗೊತ್ತು.
ಯೆಶಾಯ 50 : 8 (IRVKN)
ನನ್ನ ನೀತಿ ನಿರ್ಣಯಿಸುವಾತನು ಸಮೀಪದಲ್ಲಿದ್ದಾನೆ. ನನ್ನೊಡನೆ ಯಾರು ವ್ಯಾಜ್ಯವಾಡುವರು? ನಾವಿಬ್ಬರು ನ್ಯಾಯಾಸನದ ಮುಂದೆ ನಿಂತುಕೊಳ್ಳುವ. ನನಗೆ ಪ್ರತಿಕಕ್ಷಿಯು ಯಾರು? ಅವನು ನನ್ನ ಬಳಿಗೆ ಬರಲಿ.
ಯೆಶಾಯ 50 : 9 (IRVKN)
ಆಹಾ, ಕರ್ತನಾದ ಯೆಹೋವನು ನನಗೆ ಸಹಾಯಮಾಡುವನು. ನನ್ನನ್ನು ಅಪರಾಧಿ ಎಂದು ನಿರ್ಣಯಿಸುವವನು ಯಾರು? ಇಗೋ, ಅವರೆಲ್ಲರೂ ಹಳೆಯ ವಸ್ತ್ರದಂತಾಗುವರು. ಅವರನ್ನು ನುಸಿಯು ತಿಂದುಬಿಡುವುದು.
ಯೆಶಾಯ 50 : 10 (IRVKN)
ನಿಮ್ಮೊಳಗೆ ಯಾರು ಯೆಹೋವನಲ್ಲಿ ಭಯಭಕ್ತಿಯಿಟ್ಟು ಆತನ ಸೇವಕನ ಮಾತನ್ನು ಕೇಳುವರು? ಬೆಳಕಿಲ್ಲದೇ ಕತ್ತಲೆಯಲ್ಲಿ ನಡೆಯುವವನು ಯಾರು? ಅವನು ಯೆಹೋವನ ನಾಮದಲ್ಲಿ ಭರವಸವಿಟ್ಟು ತನ್ನ ದೇವರನ್ನು ಆಧಾರಮಾಡಿಕೊಳ್ಳಲಿ.
ಯೆಶಾಯ 50 : 11 (IRVKN)
ಓಹೋ, ಬೆಂಕಿಹಚ್ಚಿ ಸುತ್ತಮುತ್ತಲು ಉರಿಯನ್ನು ಹತ್ತಿಸಿಕೊಂಡಿರುವವರೇ, ನಿಮ್ಮ ಬೆಂಕಿಯ ಬೆಳಕಿನಲ್ಲಿಯೂ, ನೀವು ಹತ್ತಿಸಿದ ಕೊಳ್ಳಿಗಳ ನಡುವೆ ನಡೆದರೂ ನಡೆಯಿರಿ. ಇಗೋ, “ನನ್ನ ಹಸ್ತದಿಂದ ನಿಮಗಾಗುವ ಗತಿಯು ಇದೇ, ದುಃಖಕ್ಕೆ ಒಳಗಾಗಿ ಸಾಯುವಿರಿ.”

1 2 3 4 5 6 7 8 9 10 11