ಯೆಶಾಯ 35 : 1 (IRVKN)
ಇಸ್ರಾಯೇಲಿನ ಮುಂದಿನ ಸೌಭಾಗ್ಯ ಅರಣ್ಯವೂ, ಮರುಭೂಮಿಯೂ ಆನಂದಿಸುವವು; ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವುದು.
ಯೆಶಾಯ 35 : 2 (IRVKN)
ಅದು ಸಮೃದ್ಧಿಯಾಗಿ ಹೂಬಿಟ್ಟು, ಉತ್ಸಾಹ ಧ್ವನಿಮಾಡುವಷ್ಟು ಉಲ್ಲಾಸಿಸುವುದು. ಲೆಬನೋನಿನ ಮಹಿಮೆಯೂ, ಕರ್ಮೆಲಿನ ಮತ್ತು ಶಾರೋನಿನ ವೈಭವವೂ ಅದಕ್ಕೆ ದೊರೆಯುವವು; ಇವೆಲ್ಲಾ ಯೆಹೋವನ ಮಹಿಮೆಯನ್ನೂ, ನಮ್ಮ ದೇವರ ವೈಭವವನ್ನೂ ಕಾಣುವವು.
ಯೆಶಾಯ 35 : 3 (IRVKN)
ಜೋಲುಬಿದ್ದ ಕೈಗಳನ್ನೂ, ನಡುಗುವ ಮೊಣಕಾಲುಗಳನ್ನೂ ಬಲಗೊಳಿಸಿರಿ.
ಯೆಶಾಯ 35 : 4 (IRVKN)
ಭಯಭ್ರಾಂತ ಹೃದಯದವರಿಗೆ, “ಬಲಗೊಳ್ಳಿರಿ, ಹೆದರಬೇಡಿರಿ! ಇಗೋ, ನಿಮ್ಮ ದೇವರು ಮುಯ್ಯಿತೀರಿಸುವುದಕ್ಕೂ, ದೈವಿಕ ಪ್ರತಿಫಲವನ್ನು ಕೊಡುವುದಕ್ಕೂ ಬರುವನು. ತಾನೇ ಬಂದು ನಿಮ್ಮನ್ನು ರಕ್ಷಿಸುವನು” ಎಂದು ಹೇಳಿರಿ.
ಯೆಶಾಯ 35 : 5 (IRVKN)
ಆಗ ಕುರುಡರ ಕಣ್ಣು ಕಾಣುವುದು, ಕಿವುಡರ ಕಿವಿ ಕೇಳುವುದು.
ಯೆಶಾಯ 35 : 6 (IRVKN)
ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವುದು, ಅರಣ್ಯದಲ್ಲಿ ಒರತೆಗಳು ಒಡೆಯುವವು, ಮರುಭೂಮಿಯಲ್ಲಿ ನದಿಗಳು ಹುಟ್ಟಿ ಹರಿಯುವವು.
ಯೆಶಾಯ 35 : 7 (IRVKN)
ಬೆಂಗಾಡು ಸರೋವರವಾಗುವುದು, ಒಣನೆಲದಲ್ಲಿ ಬುಗ್ಗೆಗಳು ಹರಿಯುವವು; ನರಿಗಳು ಮಲಗುತ್ತಿದ್ದ ಸ್ಥಳವು ಆಪುಜಂಬುಗಳ ಪ್ರದೇಶವಾಗುವುದು.
ಯೆಶಾಯ 35 : 8 (IRVKN)
ಅಲ್ಲಿ ರಾಜಮಾರ್ಗವಿರುವುದು. ಅದು ಪರಿಶುದ್ಧ ಮಾರ್ಗ ಎನಿಸಿಕೊಳ್ಳುವುದು. ಯಾವ ಅಶುದ್ಧನೂ ಅದರ ಮೇಲೆ ಹಾದುಹೋಗನು. ಆದರೆ ಅದು ದೇವಜನರಿಗಾಗಿಯೇ ಇರುವುದು. ಅಲ್ಲಿ ಹೋಗುವ ಮೂಢನೂ ದಾರಿತಪ್ಪನು.
ಯೆಶಾಯ 35 : 9 (IRVKN)
ಸಿಂಹವು ಅಲ್ಲಿ ಇರದು. ಇಲ್ಲವೆ ಕ್ರೂರವಾದ ಮೃಗಗಳು ಅದರ ಮೇಲೆ ಹೋಗುವುದಿಲ್ಲ. ಅದು ಅಲ್ಲಿ ಕಾಣುವುದೇ ಇಲ್ಲ. ಬಿಡುಗಡೆಯಾದವರೇ ಅಲ್ಲಿ ನಡೆಯುವರು.
ಯೆಶಾಯ 35 : 10 (IRVKN)
ಯೆಹೋವನು ವಿಮೋಚಿಸಿದವರು ಹಿಂದಿರುಗಿ, ಶಾಶ್ವತ ಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು ಉತ್ಸಾಹಧ್ವನಿಯೊಡನೆ ಚೀಯೋನಿಗೆ ಸೇರುವರು. ಅವರು ಹರ್ಷಾನಂದಗಳನ್ನು ಅನುಭವಿಸುವರು, ದುಃಖವೂ, ನಿಟ್ಟುಸಿರೂ ಓಡಿಹೋಗುವವು.

1 2 3 4 5 6 7 8 9 10