ಯೆಶಾಯ 26 : 1 (IRVKN)
ಸ್ತೋತ್ರಗೀತೆ ಆ ದಿನದಲ್ಲಿ ಯೆಹೂದ ದೇಶದೊಳಗೆ ಈ ಗೀತೆಯನ್ನು ಹಾಡುವರು, “ನಮಗೆ ಬಲವಾದ ಪಟ್ಟಣವಿದೆ. ಯೆಹೋವನು ತನ್ನ ರಕ್ಷಣೆಯನ್ನು ಕೋಟೆಯನ್ನಾಗಿಯೂ, ಹೊರಪೌಳಿಯನ್ನಾಗಿಯೂ ಮಾಡಿದ್ದಾನೆ.
ಯೆಶಾಯ 26 : 2 (IRVKN)
ಬಾಗಿಲುಗಳನ್ನು ತೆರೆಯಿರಿ! ಧರ್ಮಸತ್ಯಗಳನ್ನು ಕೈಗೊಳ್ಳುವ ಜನಾಂಗವು ಒಳಗೆ ಪ್ರವೇಶಿಸಲಿ!
ಯೆಶಾಯ 26 : 3 (IRVKN)
ಸ್ಥಿರಚಿತ್ತನನ್ನು ಶಾಂತಿಯಲ್ಲಿ ನೆಲೆಗೊಳಿಸಿ ಕಾಯುವಿ; ಅವನಿಗೆ ನಿನ್ನಲ್ಲಿ ಭರವಸವಿದೆ.
ಯೆಶಾಯ 26 : 4 (IRVKN)
ಯೆಹೋವನಲ್ಲಿ ಸದಾ ಭರವಸವಿಡಿರಿ; ಏಕೆಂದರೆ ಯೆಹೋವನೇ ಶಾಶ್ವತವಾದ ಆಶ್ರಯಗಿರಿಯಾಗಿದ್ದಾನೆ.
ಯೆಶಾಯ 26 : 5 (IRVKN)
ಆತನು ಹೆಮ್ಮೆಯಿಂದ ವಾಸಿಸುವವರನ್ನು ಇಳಿಸಿದ್ದಾನೆ. ಅವರ ಉನ್ನತ ಪಟ್ಟಣವನ್ನು ತಗ್ಗಿಸಿದ್ದಾನೆ. ಅದನ್ನು ಕೆಡವಿ, ನೆಲಸಮಮಾಡಿ ಧೂಳಿಗೆ ತಂದಿದ್ದಾನೆ.
ಯೆಶಾಯ 26 : 6 (IRVKN)
ಅದು ಕಾಲು ತುಳಿತಕ್ಕೆ ಈಡಾಗಿದೆ. ದಿಕ್ಕಿಲ್ಲದ ಬಡವರೂ ಅದನ್ನು ಕಾಲಿನಿಂದ ತುಳಿದು ಬಿಡುತ್ತಾರೆ.
ಯೆಶಾಯ 26 : 7 (IRVKN)
ನೀತಿವಂತನ ಮಾರ್ಗವು ಸಮವಾಗಿದೆ; ನೀನು ಅವನ ದಾರಿಯನ್ನು ಸರಿಪಡಿಸಿ ನೇರಮಾಡುತ್ತಿ.
ಯೆಶಾಯ 26 : 8 (IRVKN)
ಹೌದು, ಯೆಹೋವನೇ, ನಿನ್ನ ನ್ಯಾಯತೀರ್ಪಿನ ಮಾರ್ಗದಲ್ಲಿ ನಡೆಯುತ್ತಾ ನಿನಗಾಗಿ ಕಾದುಕೊಂಡಿದ್ದೇವೆ; ನಿನ್ನ ನಾಮಸ್ಮರಣೆಯು ನಮ್ಮ ಆತ್ಮಕ್ಕೆ ಇಷ್ಟವಾಗಿದೆ, ಹಿತವಾಗಿದೆ.
ಯೆಶಾಯ 26 : 9 (IRVKN)
ರಾತ್ರಿಯಲ್ಲಿ ನಿನ್ನನ್ನು ಮನಃಪೂರ್ವಕವಾಗಿ ಹಾರೈಸಿದ್ದೇವೆ, ಹೌದು, ನಮ್ಮ ಆತ್ಮದಲ್ಲಿ ನಿನ್ನನ್ನು ತವಕದಿಂದ ಹುಡುಕಿದ್ದೇವೆ. ನೀನು ಲೋಕದಲ್ಲಿ ನ್ಯಾಯಕಾರ್ಯಗಳನ್ನು ನಡೆಸುವಾಗ ಭೂನಿವಾಸಿಗಳು ಧರ್ಮಜ್ಞಾನವನ್ನು ಪಡೆದುಕೊಳ್ಳುವರು.
ಯೆಶಾಯ 26 : 10 (IRVKN)
ದುಷ್ಟರನ್ನು ಕರುಣಿಸಿದರೂ, ಅವರು ಧರ್ಮಜ್ಞಾನವನ್ನು ಪಡೆಯರು; ಯೆಹೋವನ ಮಹಿಮೆಯನ್ನು ಲಕ್ಷಿಸದೆ ಯಥಾರ್ಥರ ದೇಶದಲ್ಲಿಯೂ ಅನ್ಯಾಯವನ್ನು ಆಚರಿಸುವರು.
ಯೆಶಾಯ 26 : 11 (IRVKN)
ಯೆಹೋವನೇ, ನೀನು ಕೈಯೆತ್ತಿದ್ದರೂ ಅವರು ಲಕ್ಷಿಸರು. ಆದರೆ ನಿನ್ನ ಸ್ವಜನರ ಅಭಿಮಾನವನ್ನು ನೋಡಿ ನಾಚಿಕೆಪಡಲಿ; ಹೌದು, ಆ ನಿನ್ನ ವಿರೋಧಿಗಳನ್ನು ಅಗ್ನಿಯು ದಹಿಸಿಬಿಡುವುದು.
ಯೆಶಾಯ 26 : 12 (IRVKN)
ಯೆಹೋವನೇ, ನೀನು ನಮಗೆ ಸಮಾಧಾನವನ್ನು ವಿಧಿಸುವಿ, ಏಕೆಂದರೆ ನೀನೇ ನಮ್ಮ ಕ್ರಿಯೆಗಳನ್ನೆಲ್ಲಾ ನಮಗೋಸ್ಕರ ನಡೆಸಿದ್ದಿ.
ಯೆಶಾಯ 26 : 13 (IRVKN)
ನಮ್ಮ ದೇವರಾದ ಯೆಹೋವನೇ, ನಿನ್ನ ಸ್ಥಾನದಲ್ಲಿ ಬೇರೆ ಒಡೆಯರು ನಮ್ಮ ಮೇಲೆ ದೊರೆತನ ಮಾಡುತ್ತಿದ್ದರು; ಆದರೆ ನಾವು ನಿನ್ನ ನಾಮವನ್ನೇ ಹೊಗಳುವೆವು, ಸ್ತುತಿಸುವೆವು.
ಯೆಶಾಯ 26 : 14 (IRVKN)
ನೀನು ಆ ಒಡೆಯರ ಮೇಲೆ ಕೈಮಾಡಿ, ಅವರನ್ನು ನಿರ್ಮೂಲಮಾಡಿ ಅವರ ಜ್ಞಾಪಕವನ್ನು ಅಳಿಸಿಬಿಟ್ಟಿದ್ದಿ. ಸತ್ತವರು ಪುನಃ ಬದುಕುವುದಿಲ್ಲ, ಪ್ರೇತಗಳು ಎದ್ದು ಬರುವುದಿಲ್ಲ.
ಯೆಶಾಯ 26 : 15 (IRVKN)
ಯೆಹೋವನೇ, ನೀನು ಜನಾಂಗವನ್ನು ಹೆಚ್ಚಿಸಿದ್ದೀ, ಹೌದು, ನಿನ್ನ ಜನಾಂಗವನ್ನು ವೃದ್ಧಿಗೊಳಿಸಿದ್ದೀ; ನೀನು ದೇಶದ ಮೇರೆಗಳನ್ನೆಲ್ಲಾ ವಿಸ್ತರಿಸಿ ಮಹಿಮೆಗೊಂಡಿದ್ದೀ.
ಯೆಶಾಯ 26 : 16 (IRVKN)
ಯೆಹೋವನೇ, ನಿನ್ನ ಜನರು ಇಕ್ಕಟ್ಟಿಗೆ ಸಿಕ್ಕಿ ನಿನ್ನನ್ನು ಹುಡುಕಿದರು. ನಿನ್ನ ಶಿಕ್ಷೆ ಅವರ ಮೇಲಿರುವಾಗ ಅವರು ಪ್ರಾರ್ಥನೆಯನ್ನು ಮಾಡಿದರು.
ಯೆಶಾಯ 26 : 17 (IRVKN)
ಹೆರಿಗೆ ಹತ್ತಿರವಾದ ಗರ್ಭಿಣಿಯು ಯಾತನೆಪಡುತ್ತಾ, ಬೇನೆಯಿಂದ ಕೂಗಿ ಅಳುವಂತೆ ಯೆಹೋವನೇ, ನಾವು ನಿನ್ನ ಮುಂದೆ ಸಹಾಯಕ್ಕಾಗಿ ಕೂಗಿ ದುಃಖಿಸಿದ್ದೇವೆ.
ಯೆಶಾಯ 26 : 18 (IRVKN)
ನಾವು ಗರ್ಭಧರಿಸಿ, ವೇದನೆಪಟ್ಟು ಗಾಳಿಯನ್ನು ಹಡೆದಂತಾಯಿತು, ದೇಶಕ್ಕೆ ನಮ್ಮಿಂದ ಯಾವ ಉದ್ಧಾರವೂ ಆಗಲಿಲ್ಲ, ನಮ್ಮೊಳಗೆ ಯಾವ ಭೂನಿವಾಸಿಗಳೂ ಹುಟ್ಟಲಿಲ್ಲ.
ಯೆಶಾಯ 26 : 19 (IRVKN)
ಮೃತರಾದ ನಿನ್ನ ಜನರು ಬದುಕುವರು, ನಮ್ಮ ಹೆಣಗಳು ಜೀವದಿಂದ ಏಳುವವು, ಧೂಳಿನ ನಿವಾಸಿಗಳೇ, ಎಚ್ಚರಗೊಂಡು ಹರ್ಷಧ್ವನಿಗೈಯಿರಿ! ಯೆಹೋವನೇ, ನೀನು ಸುರಿಸುವ ಇಬ್ಬನಿಯು ಮುಂಜಾನೆಯ ಇಬ್ಬನಿಯಂತಿರುವುದು. ಭೂಮಿಯು ಸತ್ತವರನ್ನು ಹೊರಗೆ ಹಾಕುವುದು.
ಯೆಶಾಯ 26 : 20 (IRVKN)
ಯೆಹೋವನ ಶಿಕ್ಷೆ ನನ್ನ ಜನರೇ, ಬನ್ನಿರಿ, ನಿಮ್ಮ ನಿಮ್ಮ ಕೋಣೆಗಳಲ್ಲಿ ಸೇರಿಕೊಂಡು ಬಾಗಿಲುಗಳನ್ನು ಮುಚ್ಚಿಕೊಳ್ಳಿರಿ; ದೈವರೋಷವು ತೀರುವ ತನಕ ಒಂದು ಕ್ಷಣ ಅವಿತುಕೊಳ್ಳಿರಿ.
ಯೆಶಾಯ 26 : 21 (IRVKN)
ಇಗೋ, ಯೆಹೋವನು ಭೂನಿವಾಸಿಗಳಿಗೆ ಅವರ ಪಾಪ ಫಲವನ್ನು ತಿನ್ನಿಸಬೇಕೆಂದು ತನ್ನ ಸ್ಥಳದಿಂದ ಹೊರಡುತ್ತಾನೆ; ಭೂಮಿಯು ತನ್ನಲ್ಲಿ ಇಂಗಿದ್ದ ರಕ್ತವನ್ನು ಪ್ರಕಟಮಾಡುವುದು, ತನ್ನ ನಿವಾಸಿಗಳಲ್ಲಿ ಹತರಾದವರನ್ನು ಇನ್ನು ಮರೆಮಾಡುವುದಿಲ್ಲ.”
❮
❯
1
2
3
4
5
6
7
8
9
10
11
12
13
14
15
16
17
18
19
20
21