ಹೋಶೇ 7 : 1 (IRVKN)
ಇಸ್ರಾಯೇಲರು ದುಷ್ಟತನವನ್ನು ಪ್ರೀತಿಸಿದ್ದು ನಾನು ನನ್ನ ಜನರ ದುರವಸ್ಥೆಯನ್ನು ತಪ್ಪಿಸಿ, ಇಸ್ರಾಯೇಲನ್ನು ಸ್ವಸ್ಥ ಮಾಡಬೇಕೆಂದಿರುವಾಗ ಎಫ್ರಾಯೀಮಿನ ಅಧರ್ಮವೂ, ಸಮಾರ್ಯದ ದುಷ್ಟತನವೂ ವ್ಯಕ್ತವಾಗುತ್ತವೆ. ಎಲ್ಲರೂ ಮೋಸಮಾಡುತ್ತಾರೆ, ಒಳಗೆ ಕಳ್ಳರು ನುಗ್ಗುತ್ತಾರೆ, ಹೊರಗೆ ಡಕಾಯಿತಿಯವರು ಸುಲಿಯುತ್ತಾರೆ.
ಹೋಶೇ 7 : 2 (IRVKN)
ತಮ್ಮ ದುರ್ಮಾರ್ಗವೆಲ್ಲಾ ಯೆಹೋವನ ಜ್ಞಾಪಕದಲ್ಲಿರುತ್ತದೆ ಎಂದು ಅವರು ಮನದಟ್ಟು ಮಾಡಿಕೊಳ್ಳುವುದಿಲ್ಲ; ಅವರ ದುಷ್ಕೃತ್ಯಗಳು ಈಗ ಅವರನ್ನು ಮುತ್ತಿಕೊಂಡಿವೆ, ನನ್ನ ಕಣ್ಣೆದುರಿಗಿವೆ.
ಹೋಶೇ 7 : 3 (IRVKN)
ತಮ್ಮ ಕೆಟ್ಟತನದಿಂದ ರಾಜನನ್ನು ಆನಂದಗೊಳಿಸುತ್ತಾರೆ, ಸುಳ್ಳುಗಳಿಂದ ಮುಖಂಡರನ್ನು ಸಂತೋಷಪಡಿಸುತ್ತಾರೆ.
ಹೋಶೇ 7 : 4 (IRVKN)
ಅವರೆಲ್ಲರೂ ವ್ಯಭಿಚಾರಿಗಳು; ರೊಟ್ಟಿಸುಡುವವನು ಬೆಂಕಿಹೊತ್ತಿಸಿ, ಉರಿಸಿ, ಕಣಕವನ್ನು ನಾದಿದಾಗಿನಿಂದ ಹುಳಿಬರುವ ತನಕ ಮತ್ತಷ್ಟು ಉರಿಸದೆ ಹಾಗೆಯೇ ಬಿಟ್ಟಿರುವ ಒಲೆಗೆ ಸಮಾನರಾಗಿದ್ದಾರೆ.
ಹೋಶೇ 7 : 5 (IRVKN)
ನಮ್ಮ ರಾಜನ ದಿನದಲ್ಲಿ ದ್ರಾಕ್ಷಾರಸದ ಉಷ್ಣವು ದೇಶಾಧಿಪತಿಗಳ ತಲೆಗೇರಲು ಆರಂಭವಾಯಿತು; ರಾಜನು ಆ ತುಂಟರ ಕೈಯ ಮೇಲೆ ಕೈ ಹಾಕಿದನು.
ಹೋಶೇ 7 : 6 (IRVKN)
ಅವರು ಹೊಂಚಿಕೊಂಡಿರುವಾಗ ಆಹಾ, ತಮ್ಮ ಹೃದಯವನ್ನು ಒಲೆಯಂತೆ ಸಿದ್ಧಮಾಡಿ ಉರಿಯುತ್ತಿದ್ದಾರೆ; ಅವರ ರೋಷಾಗ್ನಿಯು ರಾತ್ರಿಯೆಲ್ಲಾ ಹೊತ್ತಿಕೊಂಡೇ ಇರುತ್ತದೆ; ಬೆಳಿಗ್ಗೆ ಧಗಧಗನೆ ಉರಿಯುತ್ತದೆ.
ಹೋಶೇ 7 : 7 (IRVKN)
ಎಲ್ಲರೂ ಒಲೆಯಂತೆ ಝಳವೇರಿ ತಮ್ಮ ನ್ಯಾಯಾಧೀಶ್ವರರನ್ನು ನುಂಗಿಬಿಡುತ್ತಾರೆ; ಅವರ ಸಕಲ ರಾಜರು ಬಿದ್ದಿರುತ್ತಾರೆ, ಅವರೊಳಗೆ ನನ್ನನ್ನು ಪ್ರಾರ್ಥಿಸುವವರೇ ಇಲ್ಲ.
ಹೋಶೇ 7 : 8 (IRVKN)
ಇಸ್ರಾಯೇಲಿನ ಅವಿವೇಕದ ರಾಜ್ಯತಂತ್ರಗಳು ಎಫ್ರಾಯೀಮು ಜನಾಂಗಗಳಲ್ಲಿ ಸೇರಿಕೊಳ್ಳುತ್ತದೆ; ಎಫ್ರಾಯೀಮು ತಿರುವಿಹಾಕದ ರೊಟ್ಟಿಯಂತಿದೆ.
ಹೋಶೇ 7 : 9 (IRVKN)
ಅನ್ಯರು ಅದರ ಶಕ್ತಿಯನ್ನು ಹೀರಿಬಿಟ್ಟಿದ್ದರೂ ಅದಕ್ಕೆ ತಿಳಿಯದು; ಅದರ ತಲೆಯ ಮೇಲೆ ಅಲ್ಲಲ್ಲಿ ನೆರೆಯು ಕಾಣಿಸಿದರೂ ಅದಕ್ಕೆ ಗೊತ್ತಿಲ್ಲ.
ಹೋಶೇ 7 : 10 (IRVKN)
ಇಸ್ರಾಯೇಲಿಗೆ ಅದರ ಹೆಮ್ಮೆಯೇ ವಿರುದ್ಧ ಸಾಕ್ಷಿಯಾಗಿದೆ; ಇದೆಲ್ಲಾ ಸಂಭವಿಸಿದರೂ ಅದು ತನ್ನ ದೇವರಾದ ಯೆಹೋವನ ಕಡೆಗೆ ತಿರುಗಿಕೊಳ್ಳಲಿಲ್ಲ; ಆತನನ್ನು ಆಶ್ರಯಿಸಲಿಲ್ಲ.
ಹೋಶೇ 7 : 11 (IRVKN)
ಎಫ್ರಾಯೀಮು ಬುದ್ಧಿ ವಿವೇಕಗಳಿಲ್ಲದ ಪಾರಿವಾಳದಂತಿದೆ; ಅದರ ಜನರು ಐಗುಪ್ತವನ್ನು ಕೂಗುತ್ತಾರೆ, ಅಶ್ಶೂರಕ್ಕೆ ಹೊರಡುತ್ತಾರೆ.
ಹೋಶೇ 7 : 12 (IRVKN)
ಹೊರಟ ಕೂಡಲೆ ಅವರ ಮೇಲೆ ನನ್ನ ಬಲೆಯನ್ನು ಬೀಸಿ, ಆಕಾಶದ ಪಕ್ಷಿಗಳ ಹಾಗೆ ಅವರನ್ನು ಕೆಳಕ್ಕೆ ಎಳೆಯುವೆನು. ಅವರೆಲ್ಲರ ಕಿವಿಗೆ ಬಿದ್ದ ಮಾತಿಗನುಸಾರವಾಗಿ ಅವರನ್ನು ಶಿಕ್ಷಿಸುವೆನು.
ಹೋಶೇ 7 : 13 (IRVKN)
ಅವರು ನನ್ನಿಂದ ಅಗಲಿ ಹೋಗಿದ್ದಾರೆ, ಹಾಳಾಗಲಿ! ನನಗೆ ದ್ರೋಹಮಾಡಿದ್ದಾರೆ, ನಾಶವಾಗಲಿ! ನಾನು ಅವರನ್ನು ಉದ್ಧರಿಸಬೇಕೆಂದು ಇರುವಾಗಲೂ ನನ್ನ ವಿಷಯವಾಗಿ ಸುಳ್ಳಾಡಿದ್ದಾರೆ, ಅವರನ್ನು ಹೇಗೆ ಉದ್ಧರಿಸಲಿ!
ಹೋಶೇ 7 : 14 (IRVKN)
ಅವರು ಹಾಸಿಗೆಯ ಮೇಲೆ ಬಿದ್ದುಕೊಂಡು ಧಾನ್ಯ ದ್ರಾಕ್ಷಾರಸಗಳಿಗೆ ಅರಚಿಕೊಳ್ಳುತ್ತಾರೆಯೇ ಹೊರತು, ನನ್ನನ್ನು ಮನಃಪೂರ್ವಕವಾಗಿ ಎಂದೂ ಪ್ರಾರ್ಥಿಸಲಿಲ್ಲ; ನನ್ನನ್ನು ತೊರೆದುಬಿಟ್ಟು ತಮ್ಮ ದೇಹಗಳನ್ನು ಗಾಯಮಾಡಿಕೊಳ್ಳುತ್ತಾರೆ.
ಹೋಶೇ 7 : 15 (IRVKN)
ಅವರಿಗೆ ಯುದ್ಧವನ್ನು ಕಲಿಸಿ, ತೋಳುಗಳನ್ನು ಬಲಪಡಿಸಿದ ನನಗೂ ವಿರುದ್ಧವಾಗಿ ಕೇಡನ್ನು ಕಲ್ಪಿಸುತ್ತಾರೆ.
ಹೋಶೇ 7 : 16 (IRVKN)
ಅತ್ತಿತ್ತ ತಿರುಗಿಕೊಳ್ಳುತ್ತಾರೆ, ದೇವರ ಕಡೆಗೆ ತಿರುಗಿಕೊಳ್ಳುವುದಿಲ್ಲ; ಮೋಸದ ಬಿಲ್ಲಿಗೆ ಸಮಾನರಾಗಿದ್ದಾರೆ. ಅವರ ಮುಖಂಡರು ತಮ್ಮ ನಾಲಿಗೆಯ ಸೊಕ್ಕಿನ ನಿಮಿತ್ತ ಖಡ್ಗದಿಂದ ಹತರಾಗಿ ಬೀಳುವರು; ಅವರ ಸೋಲು ಐಗುಪ್ತದೇಶದ ಹಾಸ್ಯಕ್ಕೆ ಆಸ್ಪದವಾಗುವುದು.

1 2 3 4 5 6 7 8 9 10 11 12 13 14 15 16