ಆದಿಕಾಂಡ 22 : 1 (IRVKN)
ಅಬ್ರಹಾಮನನ್ನು ದೇವರು ಪರೀಕ್ಷಿಸಿದ್ದು ಈ ಸಂಗತಿಗಳು ಆದ ಮೇಲೆ ದೇವರು ಅಬ್ರಹಾಮನನ್ನು ಪರೀಕ್ಷಿಸಿದನು.
ಆದಿಕಾಂಡ 22 : 2 (IRVKN)
ಹೇಗೆಂದರೆ ಆತನು ಅವನನ್ನು, “ಅಬ್ರಹಾಮನೇ” ಎಂದು ಕರೆಯಲು ಅವನು, “ಇಗೋ, ಇದ್ದೇನೆ” ಎಂದನು. ಆಗ ಆತನು, “ನಿನಗೆ ಪ್ರಿಯನಾಗಿರುವ ಒಬ್ಬನೇ ಮಗನಾದ ಇಸಾಕನನ್ನು ಕರೆದುಕೊಂಡು ಮೊರೀಯ ದೇಶಕ್ಕೆ ಹೋಗಿ ಅಲ್ಲಿ ಅವನನ್ನು ನಾನು ಹೇಳುವ ಒಂದು ಬೆಟ್ಟದ ಮೇಲೆ ಸರ್ವಾಂಗಹೋಮವಾಗಿ ಅರ್ಪಿಸಬೇಕು” ಎಂದನು.
ಆದಿಕಾಂಡ 22 : 3 (IRVKN)
ಅದರಂತೆ ಮುಂಜಾನೆಯೇ ಎದ್ದು ಅಬ್ರಹಾಮನು ಕತ್ತೆಗೆ ತಡಿ ಹಾಕಿಸಿ, ಯಜ್ಞಕ್ಕೆ ಬೇಕಾದ ಕಟ್ಟಿಗೆಯನ್ನು ಒಡೆಸಿ ಅದನ್ನು ತೆಗೆದುಕೊಂಡು ತನ್ನ ಸೇವಕರಲ್ಲಿ ಇಬ್ಬರನ್ನೂ, ತನ್ನ ಮಗನಾದ ಇಸಾಕನನ್ನೂ ಕರೆದುಕೊಂಡು ದೇವರು ಹೇಳಿದ ಸ್ಥಳಕ್ಕೆ ಹೊರಟನು.
ಆದಿಕಾಂಡ 22 : 4 (IRVKN)
ಮೂರನೆಯ ದಿನದಲ್ಲಿ ಅಬ್ರಹಾಮನು ಕಣ್ಣೆತ್ತಿ ನೋಡುವಾಗ ಆ ಸ್ಥಳವು ದೂರದಲ್ಲಿ ಕಾಣಿಸಲು ಅವನು ತನ್ನ ಸೇವಕರಿಗೆ,
ಆದಿಕಾಂಡ 22 : 5 (IRVKN)
“ನೀವು ಇಲ್ಲೇ ಕತ್ತೆಯ ಬಳಿಯಲ್ಲಿರಿ; ನಾನೂ ನನ್ನ ಮಗನೂ ಅಲ್ಲಿಗೆ ಹೋಗಿ ದೇವಾರಾಧನೆ ಮಾಡಿಕೊಂಡು ನಿಮ್ಮ ಬಳಿಗೆ ಬರುತ್ತೇವೆ” ಎಂದು ಅಬ್ರಹಾಮನು ಹೇಳಿದನು.
ಆದಿಕಾಂಡ 22 : 6 (IRVKN)
ಆನಂತರ ಅಬ್ರಹಾಮನು ಯಜ್ಞಕ್ಕೆ ಬೇಕಾದ ಕಟ್ಟಿಗೆಯನ್ನು ತನ್ನ ಮಗನಾದ ಇಸಾಕನ ಮೇಲೆ ಹೊರಿಸಿ, ತನ್ನ ಕೈಯಲ್ಲೇ ಬೆಂಕಿಯನ್ನೂ ಕತ್ತಿಯನ್ನೂ ತೆಗೆದುಕೊಂಡ ನಂತರ ಅವರಿಬ್ಬರೂ ಹೊರಟರು.
ಆದಿಕಾಂಡ 22 : 7 (IRVKN)
ಹೋಗುವಾಗ ಇಸಾಕನು ತನ್ನ ತಂದೆಯಾದ ಅಬ್ರಹಾಮನಿಗೆ, “ಅಪ್ಪಾ” ಎಂದು ಕರೆಯಲು ಅಬ್ರಹಾಮನು, “ಏನು ಮಗನೇ” ಎಂದನು. ಇಸಾಕನು, “ಇಗೋ, ಬೆಂಕಿಯೂ ಕಟ್ಟಿಗೆಯೂ ಉಂಟು; ಆದರೆ ಹೋಮಕ್ಕೆ ಬೇಕಾದ ಕುರಿ ಎಲ್ಲಿ” ಎಂದು ಕೇಳಿದ್ದಕ್ಕೆ,
ಆದಿಕಾಂಡ 22 : 8 (IRVKN)
ಅಬ್ರಹಾಮನು, “ಮಗನೇ, ಹೋಮಕ್ಕೆ ಬೇಕಾದ ಕುರಿಮರಿಯನ್ನು ದೇವರೇ ಒದಗಿಸುವನು” ಎಂದನು.
ಆದಿಕಾಂಡ 22 : 9 (IRVKN)
ದೇವರು ಹೇಳಿದ ಸ್ಥಳಕ್ಕೆ ಅವರು ಸೇರಿದಾಗ ಅಬ್ರಹಾಮನು ಯಜ್ಞವೇದಿಯನ್ನು ಕಟ್ಟಿ, ಕಟ್ಟಿಗೆಯನ್ನು ಜೋಡಿಸಿ ತನ್ನ ಮಗನಾದ ಇಸಾಕನ ಕೈಕಾಲುಗಳನ್ನು ಕಟ್ಟಿ ಅವನನ್ನು ಯಜ್ಞವೇದಿಯ ಮೇಲೆ ಇದ್ದ ಕಟ್ಟಿಗೆಯ ಮೇಲೆ ಮಲಗಿಸಿದನು.
ಆದಿಕಾಂಡ 22 : 10 (IRVKN)
ಅಬ್ರಹಾಮನು ತನ್ನ ಮಗನನ್ನು ಕೊಲ್ಲುವುದಕ್ಕೆ, ಕೈಚಾಚಿ ಕತ್ತಿಯನ್ನು ತೆಗೆದುಕೊಂಡನು.
ಆದಿಕಾಂಡ 22 : 11 (IRVKN)
ಆಗ ಯೆಹೋವನ ದೂತನು ಆಕಾಶದೊಳಗಿನಿಂದ, “ಅಬ್ರಹಾಮನೇ, ಅಬ್ರಹಾಮನೇ” ಎಂದು ಅವನನ್ನು ಕರೆದನು. ಅದಕ್ಕೆ ಅಬ್ರಹಾಮನು, “ಇಗೋ, ಇದ್ದೇನೆ” ಎಂದನು.
ಆದಿಕಾಂಡ 22 : 12 (IRVKN)
ಆ ದೂತನು ಅವನಿಗೆ, “ಹುಡುಗನ ಮೇಲೆ ಕೈ ಹಾಕಬೇಡ, ಅವನಿಗೆ ಏನೂ ಮಾಡಬೇಡ. ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಸಮರ್ಪಿಸುವುದಕ್ಕೆ ಹಿಂಜರಿಯಲಿಲ್ಲ. ಈಗ ನೀನು ದೇವರಲ್ಲಿ ಭಯಭಕ್ತಿಯುಳ್ಳವನು ಎಂದು ನನಗೆ ಗೊತ್ತಾಯಿತು” ಎಂದು ಹೇಳಿದನು.
ಆದಿಕಾಂಡ 22 : 13 (IRVKN)
ಅಬ್ರಹಾಮನು ಕಣ್ಣೆತ್ತಿ ನೋಡಲಾಗಿ ತನ್ನ ಹಿಂದೆ, ಒಂದು ಟಗರು ಪೊದೆಯಲ್ಲಿ ಕೊಂಬುಗಳಿಂದ ಸಿಕ್ಕಿ ಹಾಕಿಕೊಂಡಿರುವುದನ್ನು ಕಂಡನು. ಅವನು ಹೋಗಿ ಅದನ್ನು ಹಿಡಿದು ತಂದು ತನ್ನ ಮಗನಿಗೆ ಬದಲಾಗಿ ಹೋಮಮಾಡಿದನು.
ಆದಿಕಾಂಡ 22 : 14 (IRVKN)
ಆ ಸ್ಥಳಕ್ಕೆ ಅಬ್ರಹಾಮನು “ಯೆಹೋವ ಯೀರೆ” ಎಂದು ಹೆಸರಿಟ್ಟನು. ಯೆಹೋವನು ಬೆಟ್ಟದಲ್ಲಿ * ಯೆಹೋವ ಯೀರೆ. ಒದಗಿಸುವನು ಎಂಬುದಾಗಿ ಇಂದಿನವರೆಗೂ ಹಾಗೆ ಹೇಳುವ ಪದ್ಧತಿ ಇದೆ.
ಆದಿಕಾಂಡ 22 : 15 (IRVKN)
ಯೆಹೋವನ ದೂತನು ಆಕಾಶದೊಳಗಿನಿಂದ ಎರಡನೆಯ ಸಾರಿ ಅಬ್ರಹಾಮನನ್ನು ಕರೆದು ಅವನಿಗೆ,
ಆದಿಕಾಂಡ 22 : 16 (IRVKN)
“ನೀನು ನಿನ್ನ ಒಬ್ಬನೇ ಮಗನನ್ನು ಸಮರ್ಪಿಸುವುದಕ್ಕೆ ಹಿಂದೆಗೆಯದೆ ಹೋದುದರಿಂದ, ಯೆಹೋವನಾದ ನಾನು ನಿನಗೆ ಪ್ರಮಾಣವಾಗಿ ಹೇಳುವುದೇನಂದರೆ
ಆದಿಕಾಂಡ 22 : 17 (IRVKN)
ನಾನು ನಿನ್ನನ್ನು ಆಶೀರ್ವದಿಸಿಯೇ ಆಶೀರ್ವದಿಸುವೆನು; ನಿನ್ನ ಸಂತತಿಯನ್ನು ಅಧಿಕವಾಗಿ ಹೆಚ್ಚಿಸುವೆನು, ಅದನ್ನು ಆಕಾಶದ ನಕ್ಷತ್ರಗಳಂತೆಯೂ, ಸಮುದ್ರ ತೀರದಲ್ಲಿರುವ ಮರಳಿನಂತೆಯೂ ಅಸಂಖ್ಯವಾಗುವಂತೆ ಮಾಡುವೆನು; ಅವರು ಶತ್ರುಗಳ ಪಟ್ಟಣಗಳನ್ನು ಸ್ವತ್ತಾಗಿ ಮಾಡಿಕೊಳ್ಳುವರು.
ಆದಿಕಾಂಡ 22 : 18 (IRVKN)
ನೀನು ನನ್ನ ಮಾತಿಗೆ ವಿಧೇಯನಾಗಿ ಭೂಮಿಯ ಎಲ್ಲಾ ಜನಾಂಗಗಳಿಗೆ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವುದು ಎಂಬುದಾಗಿ ಯೆಹೋವನು ವಾಗ್ದಾನ ಮಾಡಿದ್ದಾನೆ.” ಎಂದನು.
ಆದಿಕಾಂಡ 22 : 19 (IRVKN)
ತರುವಾಯ ಅಬ್ರಹಾಮನು ತನ್ನ ಸೇವಕರ ಬಳಿಗೆ ಹಿಂತಿರುಗಿ ಬಂದನು. ಅವರು ಹೊರಟು ಅವನ ಜೊತೆಯಲ್ಲಿ ಬೇರ್ಷೆಬಕ್ಕೆ ಹೋದರು. ಅಬ್ರಹಾಮನು ಬೇರ್ಷೆಬದಲ್ಲಿ ವಾಸವಾಗಿದ್ದನು.
ಆದಿಕಾಂಡ 22 : 20 (IRVKN)
ನಾಹೋರನ ಮಕ್ಕಳು ಅಬ್ರಹಾಮನು ತನ್ನ ತಮ್ಮನಾದ ನಾಹೋರನಿಗೆ ಮಿಲ್ಕಳಲ್ಲಿ ಮಕ್ಕಳು ಹುಟ್ಟಿದ್ದಾರೆ ಎಂಬ ವರ್ತಮಾನವನ್ನು ಕೇಳಿದನು.
ಆದಿಕಾಂಡ 22 : 21 (IRVKN)
ಅವರು ಯಾರೆಂದರೆ: ಅವನ ಚೊಚ್ಚಲಮಗನಾದ ಊಚ್, ಇವನ ತಮ್ಮನಾದ ಬೂಜ್, ಅರಾಮನ ತಂದೆಯಾದ ಕೆಮೂವೇಲನು.
ಆದಿಕಾಂಡ 22 : 22 (IRVKN)
ಕೆಸೆದ್, ಹಜೋ, ಪಿಲ್ದಾಷ್, ಇದ್ಲಾಫ್, ಬೆತೂವೇಲ್ ಎಂಬವರೇ.
ಆದಿಕಾಂಡ 22 : 23 (IRVKN)
ಬೆತೂವೇಲನು ರೆಬೆಕ್ಕಳನ್ನು ಪಡೆದನು. ಈ ಎಂಟು ಮಂದಿಯನ್ನು ಮಿಲ್ಕಳು ಅಬ್ರಹಾಮನ ತಮ್ಮನಾದ ನಾಹೋರನಿಂದ ಪಡೆದಳು.
ಆದಿಕಾಂಡ 22 : 24 (IRVKN)
ಇದಲ್ಲದೆ ಅವನ ಉಪಪತ್ನಿಯಾದ ರೂಮಳೆಂಬುವಳು ಟೆಬಹ, ಗಹಮ್, ತಹಷ್, ಮಾಕಾ ಎಂಬವರನ್ನು ಹೆತ್ತಳು.

1 2 3 4 5 6 7 8 9 10 11 12 13 14 15 16 17 18 19 20 21 22 23 24