ಆದಿಕಾಂಡ 17 : 1 (IRVKN)
ಸುನ್ನತಿಯು ಒಡಂಬಡಿಕೆಯ ಸಂಕೇತ ಅಬ್ರಾಮನು ತೊಂಭತೊಂಭತ್ತು ವರ್ಷದವನಾದಾಗ ಯೆಹೋವನು ಅವನಿಗೆ ದರ್ಶನದಲ್ಲಿ, “ನಾನು ಸರ್ವಶಕ್ತನಾದ ದೇವರು; ನನ್ನೆದುರಿನಲ್ಲಿ ದೋಷ ಇಲ್ಲದವನಾಗಿ ನಡೆದುಕೊ.
ಆದಿಕಾಂಡ 17 : 2 (IRVKN)
ನಾನು ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳುತ್ತೇನೆ; ಅತ್ಯಧಿಕವಾದ ಸಂತತಿಯನ್ನು ನಿನಗೆ ಕೊಡುವೆನು” ಎಂದನು.
ಆದಿಕಾಂಡ 17 : 3 (IRVKN)
ಅಬ್ರಾಮನು ಅಡ್ಡಬೀಳಲು ದೇವರು ಅವನ ಸಂಗಡ ಮಾತನಾಡಿ,
ಆದಿಕಾಂಡ 17 : 4 (IRVKN)
“ನಾನು ನಿನ್ನೊಂದಿಗೆ ಒಂದು ಒಡಂಬಡಿಕೆ ಮಾಡಿಕೊಳ್ಳುತ್ತೇನೆ; ಅದೇನೆಂದರೆ ನೀನು ಅನೇಕ ಜನಾಂಗಗಳಿಗೆ ಮೂಲಪುರುಷನಾಗುವಿ,
ಆದಿಕಾಂಡ 17 : 5 (IRVKN)
ಇನ್ನು ಮುಂದೆ ನಿನಗೆ * ಮಹಾ ಪಿತೃ. ಅಬ್ರಾಮ ಎಂದು ಹೆಸರಿರುವುದಿಲ್ಲ. ನಿನ್ನನ್ನು ಅನೇಕ ಜನಾಂಗಗಳಿಗೆ ಮೂಲಪಿತೃವಾಗಿ ನೇಮಿಸಿರುವುದರಿಂದ ನಿನಗೆ ಇನ್ನು ಮೇಲೆ † ಅನೇಕ ಜನಾಂಗಗಳಿಗೆ ಮಹಾ ಪಿತೃ. ಅಬ್ರಹಾಮ ಎಂದು ಹೆಸರಿರುವುದು.
ಆದಿಕಾಂಡ 17 : 6 (IRVKN)
ನಿನಗೆ ಅತ್ಯಧಿಕವಾದ ಸಂತಾನವನ್ನು ಕೊಡುವೆನು ನಿನ್ನಿಂದ ಜನಾಂಗಗಳು ಉತ್ಪತ್ತಿಯಾಗಿ ಅರಸರು ಹುಟ್ಟುವರು.
ಆದಿಕಾಂಡ 17 : 7 (IRVKN)
ನಾನು ನಿನಗೂ ನಿನ್ನ ಸಂತತಿಗೂ ದೇವರಾಗಿರುವೆನೆಂದೂ ನಿನಗೋಸ್ಕರವೂ ನಿನ್ನ ಸಂತತಿಯ ಎಲ್ಲಾ ತಲತಲಾಂತರಗಳಿಗೋಸ್ಕರವೂ ಮಾಡಿಕೊಂಡ ನನ್ನ ಒಡಂಬಡಿಕೆಯನ್ನು ಸ್ಥಿರಪಡಿಸುವೆನು.
ಆದಿಕಾಂಡ 17 : 8 (IRVKN)
ನೀನು ಪ್ರವಾಸಿಯಾಗಿರುವ ಕಾನಾನ್ ದೇಶವನ್ನೆಲ್ಲಾ ನಿನಗೂ ನಿನ್ನ ಸಂತತಿಗೂ ಶಾಶ್ವತ ಸ್ವತ್ತಾಗಿ ಕೊಟ್ಟು ಎಂದೆಂದಿಗೂ ಅವರಿಗೆ ದೇವರಾಗಿರುವೆನು” ಎಂದನು.
ಆದಿಕಾಂಡ 17 : 9 (IRVKN)
ಇದಲ್ಲದೆ ದೇವರು ಅಬ್ರಹಾಮನಿಗೆ, “ನೀನಂತೂ ನನ್ನ ಒಡಂಬಡಿಕೆಯನ್ನು ಕೈಕೊಂಡು ನಡೆಯಬೇಕು. ನೀನು ಮಾತ್ರವಲ್ಲದೆ ನಿನ್ನ ಸಂತತಿಯವರು ತಲತಲಾಂತರಗಳಲ್ಲಿ ಅದನ್ನು ಕೈಕೊಂಡು ನಡೆಯಬೇಕು.
ಆದಿಕಾಂಡ 17 : 10 (IRVKN)
ನೀನೂ ನಿನ್ನ ಸಂತತಿಯುವರೂ ಕೈಕೊಳ್ಳಬೇಕಾದ ನನ್ನ ಒಡಂಬಡಿಕೆ ಯಾವುದೆಂದರೆ, ನಿಮ್ಮಲ್ಲಿರುವ ಗಂಡಸರೆಲ್ಲರಿಗೂ ಸುನ್ನತಿಯಾಗಬೇಕು ಎಂಬುದೇ.
ಆದಿಕಾಂಡ 17 : 11 (IRVKN)
ಅದೇ ನಿಮಗೂ ನನಗೂ ಉಂಟಾದ ಒಡಂಬಡಿಕೆಯ ಗುರುತಾಗಿದೆ.
ಆದಿಕಾಂಡ 17 : 12 (IRVKN)
ಮುಂದಿನ ಎಲ್ಲಾ ತಲತಲಾಂತರವಾಗಿ ಬರುವ ನಿಮ್ಮ ಪ್ರತಿಯೊಂದು ಗಂಡು ಮಗುವಿಗೂ, ಎಂಟು ದಿನಗಳಾದ ಮೇಲೆ ಸುನ್ನತಿ ಮಾಡಿಸಬೇಕು; ಮನೆಯಲ್ಲಿ ಹುಟ್ಟಿದವನಾಗಲಿ, ನಿನ್ನ ಸಂತತಿಯಲ್ಲದೆ ಪರರ ಮಕ್ಕಳಾಗಲಿ, ಅನ್ಯರಿಂದ ಕ್ರಯಕ್ಕೆ ತೆಗೆದುಕೊಂಡವನಾಗಲಿ;
ಆದಿಕಾಂಡ 17 : 13 (IRVKN)
ನಿನ್ನ ಮನೆಯಲ್ಲಿ ಹುಟ್ಟಿದವನಿಗೂ, ನೀನು ಕ್ರಯಕ್ಕೆ ತೆಗೆದುಕೊಂಡವನಿಗೂ ತಪ್ಪದೆ ಸುನ್ನತಿಯಾಗಬೇಕು. ಹೀಗೆ ನಾನು ಮಾಡುವ ಒಡಂಬಡಿಕೆಯ ಗುರುತು ನಿಮ್ಮ ಶರೀರದಲ್ಲೇ ಇದ್ದು, ಶಾಶ್ವತವಾದ ಒಡಂಬಡಿಕೆಯನ್ನು ಸೂಚಿಸುವುದು.
ಆದಿಕಾಂಡ 17 : 14 (IRVKN)
ಸುನ್ನತಿಮಾಡಿಸಿಕೊಳ್ಳದ ಪುರುಷನಿಗೆ ನನ್ನ ಒಡಂಬಡಿಕೆಯನ್ನು ಉಲ್ಲಂಘಿಸಿದಂತೆ ಆಗುವ ಕಾರಣ ಅವನನ್ನು ಕುಲದಿಂದ ಬಹಿಷ್ಕರಿಸಬೇಕು” ಎಂದು ಹೇಳಿದನು.
ಆದಿಕಾಂಡ 17 : 15 (IRVKN)
ಇದಲ್ಲದೆ ದೇವರು ಅಬ್ರಹಾಮನಿಗೆ, “ನೀನು ಇನ್ನು ಮುಂದೆ ನಿನ್ನ ಹೆಂಡತಿಯನ್ನು ಸಾರಯಳೆಂದು ಕರೆಯದೆ ‘ಸಾರಾ’ (ರಾಣಿ) ಎಂದು ಕರೆಯಬೇಕು.
ಆದಿಕಾಂಡ 17 : 16 (IRVKN)
ನಾನು ಆಕೆಯನ್ನು ಆಶೀರ್ವದಿಸಿ, ಆಕೆಯಿಂದ ನಿನಗೆ ಒಬ್ಬ ಮಗನನ್ನು ಕೊಡುವೆನು. ನಾನು ಆಕೆಯನ್ನು ಆಶೀರ್ವದಿಸಿದ್ದರಿಂದ ಆಕೆಯಿಂದ ಅನೇಕ ಜನಾಂಗಗಳೂ ಅರಸರೂ ಉತ್ಪತ್ತಿಯಾಗುವರು” ಎಂದು ಹೇಳಿದನು.
ಆದಿಕಾಂಡ 17 : 17 (IRVKN)
ಅಬ್ರಹಾಮನು ಅಡ್ಡ ಬಿದ್ದು ನಕ್ಕು, “ನೂರು ವರ್ಷದವನಿಗೆ ಮಗ ಹುಟ್ಟುವುದುಂಟೇ? ತೊಂಭತ್ತು ವರ್ಷದವಳಾದ ಸಾರಳು ಹೆರಲು ಸಾಧ್ಯವೇ?” ಎಂದು ಮನಸ್ಸಿನಲ್ಲಿ ಅಂದುಕೊಂಡನು.
ಆದಿಕಾಂಡ 17 : 18 (IRVKN)
ಅಬ್ರಹಾಮನು ದೇವರಿಗೆ, “ಇಷ್ಮಾಯೇಲ್ ಇದ್ದಾನಲ್ಲಾ, ಅವನೇ ನಿನ್ನ ದಯೆ ಹೊಂದಿ ಬಾಳಲಿ” ಎನ್ನಲು.
ಆದಿಕಾಂಡ 17 : 19 (IRVKN)
ದೇವರು, “ಹಾಗಲ್ಲ ನಿನ್ನ ಹೆಂಡತಿಯಾದ ಸಾರಳಲ್ಲಿಯೇ ನಿನಗೆ ಮಗನು ಹುಟ್ಟುವನು. ಅವನಿಗೆ ‘ಇಸಾಕ’ ಎಂದು ಹೆಸರಿಡಬೇಕು. ಅವನ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸಿಕೊಳ್ಳುವೆನು; ಅದು ಅವನ ಸಂತತಿಯವರಲ್ಲಿಯೂ ಶಾಶ್ವತವಾಗಿರುವುದು.
ಆದಿಕಾಂಡ 17 : 20 (IRVKN)
ಇಷ್ಮಾಯೇಲನ ವಿಷಯದಲ್ಲಿ ನೀನು ಮಾಡಿದ ಬಿನ್ನಹವನ್ನು ಕಿವಿಗೊಟ್ಟು ಕೇಳಿದ್ದೇನೆ. ಅವನನ್ನೂ ಆಶೀರ್ವದಿಸಿದ್ದೇನೆ; ಅವನನ್ನು ಅಭಿವೃದ್ಧಿಮಾಡಿ ಅವನಿಗೆ ಅತ್ಯಧಿಕವಾದ ಸಂತಾನವನ್ನು ಕೊಡುವೆನು. ಅವನು ಹನ್ನೆರಡು ಮಂದಿ ಅರಸರನ್ನು ಪಡೆಯುವನು, ಅವನಿಂದ ಮಹಾ ಜನಾಂಗವಾಗುವಂತೆ ಮಾಡುವೆನು.
ಆದಿಕಾಂಡ 17 : 21 (IRVKN)
ಆದರೆ ಆ ನನ್ನ ಒಡಂಬಡಿಕೆಯನ್ನು ಇಸಾಕನೊಂದಿಗೆ ಸ್ಥಾಪಿಸಿಕೊಳ್ಳುತ್ತೇನೆ; ಬರುವ ವರ್ಷ ಇದೇ ವೇಳೆಗೆ ಸಾರಳು ಅವನನ್ನು ಹೆರುವಳು” ಅಂದನು.
ಆದಿಕಾಂಡ 17 : 22 (IRVKN)
ಆ ನಂತರ ದೇವರು ಅಬ್ರಹಾಮನ ಸಂಗಡ ಮಾತನಾಡುವುದನ್ನು ಮುಗಿಸಿ ಅವನ ಬಳಿಯಿಂದ ಮೇಲಕ್ಕೆ ಏರಿ ಹೋದನು.
ಆದಿಕಾಂಡ 17 : 23 (IRVKN)
ಅದೇ ದಿನದಲ್ಲಿ ಅಬ್ರಹಾಮನು ತನ್ನ ಮಗನಾದ ಇಷ್ಮಾಯೇಲನಿಗೂ ತನ್ನ ಮನೆಯಲ್ಲಿದ್ದ ಎಲ್ಲಾ ಗಂಡಸರಿಗೂ, ಅಂದರೆ ಮನೆಯಲ್ಲಿ ಹುಟ್ಟಿದವರಿಗೆ ಮಾತ್ರವಲ್ಲದೆ, ತಾನು ಕ್ರಯಕ್ಕೆ ತೆಗೆದುಕೊಂಡವರಿಗೂ ದೇವರ ಅಪ್ಪಣೆಯಂತೆ ಸುನ್ನತಿಮಾಡಿಸಿದನು.
ಆದಿಕಾಂಡ 17 : 24 (IRVKN)
ಅಬ್ರಹಾಮನಿಗೆ ಸುನ್ನತಿಯಾದಾಗ ಅವನಿಗೆ ತೊಂಭತ್ತೊಂಭತ್ತು ವರ್ಷವಾಗಿತ್ತು.
ಆದಿಕಾಂಡ 17 : 25 (IRVKN)
ಇಷ್ಮಾಯೇಲನಿಗೆ ಸುನ್ನತಿಯಾದಾಗ ಅವನಿಗೆ ಹದಿಮೂರು ವರ್ಷವಾಗಿತ್ತು.
ಆದಿಕಾಂಡ 17 : 26 (IRVKN)
ಅಬ್ರಹಾಮನಿಗೂ ಅವನ ಮಗನಾದ ಇಷ್ಮಾಯೇಲನಿಗೂ ಒಂದೇ ದಿನದಲ್ಲಿ ಸುನ್ನತಿಯಾಯಿತು.
ಆದಿಕಾಂಡ 17 : 27 (IRVKN)
ಅವನ ಮನೆಯಲ್ಲಿದ್ದ ಗಂಡಸರೆಲ್ಲರಿಗೂ ಅಂದರೆ ಮನೆಯಲ್ಲಿ ಹುಟ್ಟಿದವರಿಗೆ ಮಾತ್ರವಲ್ಲದೆ, ಅನ್ಯರಿಂದ ಕ್ರಯಕ್ಕೆ ತೆಗೆದುಕೊಂಡವರಿಗೂ ಅವನೊಂದಿಗೆ ಸುನ್ನತಿಯಾಯಿತು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27