ಎಜ್ರನು 9 : 1 (IRVKN)
ನಿಷಿದ್ಧ ವಿವಾಹ ಇದಾದನಂತರ ಪ್ರಧಾನಪುರುಷರು ನನ್ನ ಬಳಿಗೆ ಬಂದು, “ಇಸ್ರಾಯೇಲರಲ್ಲಿ ಸಾಧಾರಣಜನರೂ, ಯಾಜಕರೂ, ಲೇವಿಯರೂ, ಕಾನಾನ್ಯರು, ಹಿತ್ತಿಯರು, ಪೆರಿಜ್ಜೀಯರು, ಯೆಬೂಸಿಯರು, ಅಮ್ಮೋನಿಯರು, ಮೋವಾಬ್ಯರು, ಐಗುಪ್ತ್ಯರು ಮತ್ತು ಅಮೋರಿಯರು ಎಂಬ ಅನ್ಯ ದೇಶಗಳವರ ಬಳಿಕೆಯನ್ನು ತೊರೆಯದೆ ಅವರ ಅಸಹ್ಯಕಾರ್ಯಗಳನ್ನು ಅನುಸರಿಸಿದ್ದಾರೆ.
ಎಜ್ರನು 9 : 2 (IRVKN)
ಅವರು ತಮಗೂ ತಮ್ಮ ಗಂಡುಮಕ್ಕಳಿಗೂ ಅವರಿಂದ ಹೆಣ್ಣುಮಕ್ಕಳನ್ನು ತೆಗೆದುಕೊಂಡದ್ದರಿಂದ ದೇವಕುಲವು ಅನ್ಯದೇಶಗಳವರೊಡನೆ ಮಿಶ್ರವಾಯಿತು. ಪ್ರಭುಗಳೂ ಮತ್ತು ಪ್ರಧಾನರೂ ಈ ದ್ರೋಹಕ್ಕೆ ಮುಂದಾಳುಗಳಾದರು” ಎಂದು ತಿಳಿಸಿದರು.
ಎಜ್ರನು 9 : 3 (IRVKN)
ಎಜ್ರನ ಪ್ರಲಾಪ ಮತ್ತು ಪ್ರಾರ್ಥನೆ ಈ ವರ್ತಮಾನವನ್ನು ಕೇಳಿದೊಡನೆ ನಾನು ಬಟ್ಟೆಗಳನ್ನು ಮತ್ತು ಮೇಲಂಗಿಗಳನ್ನು ಹರಿದುಕೊಂಡು ತಲೆಯ ಮತ್ತು ಗಡ್ಡದ ಕೂದಲುಗಳನ್ನು ಕಿತ್ತುಕೊಂಡು, ಸ್ತಬ್ಧನಾಗಿ ಕುಳಿತುಕೊಂಡೆನು.
ಎಜ್ರನು 9 : 4 (IRVKN)
ಇಸ್ರಾಯೇಲ್ ದೇವರ ವಿಧಿಗಳನ್ನು ಗೌರವಿಸಿದವರೆಲ್ಲರೂ ಸೆರೆಯಿಂದ ಬಂದವರ ದ್ರೋಹದ ಸಲುವಾಗಿ ಕಳವಳಗೊಂಡು ನನ್ನನ್ನು ಕೂಡಿಕೊಂಡರು.
ಎಜ್ರನು 9 : 5 (IRVKN)
ನಾನು ಸಂಧ್ಯಾ ನೈವೇದ್ಯ ಸಮರ್ಪಣೆಯ ಹೊತ್ತಿನವರೆಗೂ ಸ್ತಬ್ಧನಾಗಿ ಕುಳಿತುಕೊಂಡಿದ್ದೆನು. ಆ ಮೇಲೆ ದೇಹದಂಡನೆಮಾಡುವುದನ್ನು ಬಿಟ್ಟು ಹರಿದ ಬಟ್ಟೆಮೇಲಂಗಿಗಳಿಂದ ಕೂಡಿದವನಾಗಿಯೇ ಮೊಣಕಾಲೂರಿ ನನ್ನ ದೇವರಾದ ಯೆಹೋವನ ಕಡೆಗೆ ಕೈಗಳನ್ನೆತ್ತಿ ಪ್ರಾರ್ಥಿಸಿದ್ದೇನೆಂದರೆ:
ಎಜ್ರನು 9 : 6 (IRVKN)
“ನನ್ನ ದೇವರೇ, ನಾನು ಮನಗುಂದಿದವನಾಗಿದ್ದೇನೆ, ನಿನ್ನ ಕಡೆಗೆ ತಿರುಗಿಕೊಳ್ಳಲು ನಾಚಿಕೊಳ್ಳುತ್ತೇನೆ. ನನ್ನ ದೇವರೇ, ನಮ್ಮ ಪಾಪಗಳು ನಮ್ಮ ತಲೆಮೀರಿ ಬೆಳೆದಿವೆ, ನಮ್ಮ ಅಪರಾಧವು ಆಕಾಶವನ್ನು ಮುಟ್ಟುವಷ್ಟು ದೊಡ್ಡದಾಗಿವೆ.
ಎಜ್ರನು 9 : 7 (IRVKN)
ನಾವು ನಮ್ಮ ಪೂರ್ವಿಕರ ಕಾಲದಿಂದ ಇಂದಿನ ವರೆಗೂ ಮಹಾಪರಾಧಿಗಳೇ. ನಮ್ಮ ಪಾಪಗಳ ದೆಸೆಯಿಂದ ನಾವೂ, ನಮ್ಮ ಅರಸರೂ ಮತ್ತು ಯಾಜಕರೂ ಅನ್ಯದೇಶಗಳ ರಾಜರ ಕೈಗೆ ಒಪ್ಪಿಸಲ್ಪಟ್ಟು ಈಗಿರುವಂತೆ ಕತ್ತಿಗೂ, ಸೆರೆಗೂ, ಸುಲಿಗೆಗೂ, ಅಪಮಾನಕ್ಕೂ ಗುರಿಯಾದೆವು.
ಎಜ್ರನು 9 : 8 (IRVKN)
ಆದರೂ ನಮ್ಮ ದೇವರಾದ ಯೆಹೋವನು ಒಂದು ಕ್ಷಣ ನಮಗೆ ಪ್ರಸನ್ನನಾಗಿ ನಮ್ಮಲ್ಲಿ ಸ್ವಲ್ಪ ಜನರನ್ನು ರಕ್ಷಣೆಗಾಗಿ ಉಳಿಸಿ ತನ್ನ ಪರಿಶುದ್ಧಸ್ಥಳದಲ್ಲಿ ಮೊಳೆಯಂತೆ ನಮ್ಮನ್ನು ನೆಲೆಗೊಳಿಸಿ, ನಮ್ಮ ಕಣ್ಣುಗಳನ್ನು ಕಳೆಗೊಳಿಸಿ ನಮ್ಮ ದಾಸತ್ವದಲ್ಲಿ ನಮಗೆ ಸ್ವಲ್ಪಮಟ್ಟಿಗೆ ಉಜ್ಜೀವನವನ್ನು ಅನುಗ್ರಹಿಸಿದ್ದಾನೆ.
ಎಜ್ರನು 9 : 9 (IRVKN)
ನಾವು ದಾಸರಾದರೂ ನಮ್ಮ ದೇವರು ನಮ್ಮ ದಾಸತ್ವದಲ್ಲಿ ನಮ್ಮನ್ನು ಕೈಬಿಡಲಿಲ್ಲ; ಹಾಳುಬಿದ್ದ ನಮ್ಮ ದೇವರ ಆಲಯವನ್ನು ಪುನಃ ಕಟ್ಟಿ ಭದ್ರಪಡಿಸುವುದಕ್ಕೋಸ್ಕರ ನಮಗೆ ಉಜ್ಜೀವನ ಪ್ರಾಪ್ತವಾಗುವಂತೆಯೂ, ಯೆಹೂದದಲ್ಲಿಯೂ ಮತ್ತು ಯೆರೂಸಲೇಮಿನಲ್ಲಿಯೂ ನಮಗೆ ಅಭಯಾಶ್ರಯ ಸಿಕ್ಕುವಂತೆಯೂ ಪರ್ಷಿಯ ರಾಜರ ಮುಂದೆ ನಮಗೆ ಕೃಪೆಯನ್ನು ಅನುಗ್ರಹಿಸಿದ್ದಾನೆ.
ಎಜ್ರನು 9 : 10 (IRVKN)
ಇಷ್ಟು ಉಪಕಾರವನ್ನು ಪಡೆದ ನಾವು ಏನು ಅರಿಕೆಮಾಡಿಕೊಳ್ಳಲು ಸಾಧ್ಯ? ನಮ್ಮ ದೇವರೇ, ನಿನ್ನ ಆಜ್ಞೆಗಳನ್ನು ಉಲ್ಲಂಘಿಸಿದ್ದೇವೆ.
ಎಜ್ರನು 9 : 11 (IRVKN)
ನೀನು ನಿನ್ನ ಸೇವಕರಾದ ಪ್ರವಾದಿಗಳ ಮುಖಾಂತರ ನಮಗೆ, ‘ನೀವು ಸ್ವತಂತ್ರಿಸಿಕೊಳ್ಳುವುದಕ್ಕೆ ಹೋಗುವ ದೇಶವು ಅನ್ಯದೇಶಗಳವರ ಅಶುದ್ಧತ್ವದಿಂದಲೂ, ಅವರ ವಿಗ್ರಹಗಳಿಂದಲೂ ಮಲಿನವಾಗಿದೆ. ಆ ದೇಶವು ಎಲ್ಲೆಲ್ಲೂ ಆ ವಿಗ್ರಹಗಳ ಅಸಹ್ಯತೆಯಿಂದ ತುಂಬಿರುತ್ತದೆ.
ಎಜ್ರನು 9 : 12 (IRVKN)
ಹೀಗಿರಲಾಗಿ ನೀವು ನಿಮ್ಮ ಹೆಣ್ಣುಮಕ್ಕಳನ್ನು ಅವರ ಗಂಡುಮಕ್ಕಳಿಗೆ ಕೊಡಲೂ ಬಾರದು, ನಿಮ್ಮ ಗಂಡುಮಕ್ಕಳಿಗೋಸ್ಕರ ಅವರ ಹೆಣ್ಣು ಮಕ್ಕಳನ್ನು ತೆಗೆದುಕೊಳ್ಳಲೂ ಬಾರದು, ಅವರಿಗೋಸ್ಕರ ಸುಖಕ್ಷೇಮಗಳನ್ನು ಎಂದಿಗೂ ಬಯಸಬಾರದು. ಈ ಪ್ರಕಾರ ನಡೆದರೆ ನೀವು ಬಲಗೊಂಡು ಆ ದೇಶದ ಸಮೃದ್ಧಿಯನ್ನು ಅನುಭವಿಸಿ, ಅದನ್ನು ನಿಮ್ಮ ಸಂತಾನದವರಿಗೆ ಶಾಶ್ವತಸ್ವಾಸ್ಥ್ಯವನ್ನಾಗಿ ಬಿಡುವಿರಿ’ ಎಂದು ಹೇಳಿದಿಯಲ್ಲಾ.
ಎಜ್ರನು 9 : 13 (IRVKN)
ನಮ್ಮ ದುಷ್ಕರ್ಮ ಮಹಾಪರಾಧಗಳ ನಿಮಿತ್ತವಾಗಿ ಇಷ್ಟೆಲ್ಲಾ ಕೇಡು ಬಂದರೂ ನಮ್ಮ ದೇವರಾದ ನೀನು ನಮ್ಮ ಪಾಪಗಳಿಗೆ ತಕ್ಕಂತೆ ನಮ್ಮನ್ನು ದಂಡಿಸದೆ, ನಮ್ಮಲ್ಲಿ ಇಷ್ಟು ಜನರನ್ನು ಉಳಿಸಿದಿ.
ಎಜ್ರನು 9 : 14 (IRVKN)
ಹೀಗಿರುವಲ್ಲಿ ನಾವು ತಿರುಗಿ ನಿನ್ನ ಆಜ್ಞೆಗಳನ್ನು ಮೀರಿ ವಿಗ್ರಹಾರಾಧಕರಾದ ಈ ಜನರ ಸಂಗಡ ಬೀಗತನ ಮಾಡುವುದು ಯೋಗ್ಯವೋ? ಹಾಗೆ ಮಾಡಿದರೆ ನೀನು ನಮ್ಮ ಮೇಲೆ ರೌದ್ರಾವೇಶವುಳ್ಳವನಾಗಿ ಯಾರೂ ತಪ್ಪಿಸಿಕೊಂಡು ಉಳಿಯದಂತೆ ನಮ್ಮನ್ನು ಮುಗಿಸಿಬಿಡುವಿಯಲ್ಲವೋ?
ಎಜ್ರನು 9 : 15 (IRVKN)
ಯೆಹೋವನೇ, ಇಸ್ರಾಯೇಲ್ ದೇವರೇ, ಈಗಿರುವಷ್ಟು ಜನರನ್ನು ನಮ್ಮಲ್ಲಿ ಉಳಿಸಿದ್ದರಿಂದ ನೀನು ಧರ್ಮಸ್ವರೂಪನೆಂದು ಪ್ರಕಟವಾಯಿತು. ನಾವಾದರೋ ನಿನ್ನ ದೃಷ್ಟಿಯಲ್ಲಿ ಅಪರಾಧಿಗಳು. ಈ ನಮ್ಮ ದುಷ್ಕೃತ್ಯದ ನಿಮಿತ್ತವಾಗಿ ನಿನ್ನೆದುರಿನಲ್ಲಿ ನಿಲ್ಲಲಾರೆವು” ಎಂದು ಬೇಡಿಕೊಂಡೆನು.

1 2 3 4 5 6 7 8 9 10 11 12 13 14 15