ಯೆಹೆಜ್ಕೇಲನು 9 : 1 (IRVKN)
ಯೆರೂಸಲೇಮಿಗೆ ಶಿಕ್ಷೆ ಆಮೇಲೆ ಆತನು, “ಪಟ್ಟಣವನ್ನು ದಂಡಿಸತಕ್ಕವರೇ, ನೀವೆಲ್ಲರೂ ನಿಮ್ಮ ಹತ್ಯಾ ಆಯುಧಗಳನ್ನು ಹಿಡಿದವರಾಗಿ ಸಮೀಪಿಸಿರಿ” ಎಂದು ಗಟ್ಟಿಯಾಗಿ ಕೂಗಿ ಹೇಳಿದ ಮಾತು ನನ್ನ ಕಿವಿಗೆ ಬಿತ್ತು.
ಯೆಹೆಜ್ಕೇಲನು 9 : 2 (IRVKN)
ಕೂಡಲೆ ಗದೆಗಳನ್ನು ಹಿಡಿದುಕೊಂಡ ಆರು ಮಂದಿ ಪುರುಷರು ಉತ್ತರ ಮುಖವಾಗಿರುವ ಮೇಲಣ ಹೆಬ್ಬಾಗಿಲಿನ ಮಾರ್ಗವಾಗಿ ಬಂದರು; ನಾರಿನ ಬಟ್ಟೆಯನ್ನು ಹೊದ್ದುಕೊಂಡು ಲೇಖಕನ ಮಸಿಕುಡಿಕೆಯನ್ನು ನಡುವಿಗೆ ಕಟ್ಟಿಕೊಂಡಿರುವ ಮತ್ತೊಬ್ಬ ಪುರುಷನು ಅವರ ಮಧ್ಯದಲ್ಲಿದ್ದನು. ಇವರೆಲ್ಲರೂ ಒಳಕ್ಕೆ ಸೇರಿ ತಾಮ್ರದ ಯಜ್ಞವೇದಿಯ ಪಕ್ಕದಲ್ಲಿ ನಿಂತುಕೊಂಡರು.
ಯೆಹೆಜ್ಕೇಲನು 9 : 3 (IRVKN)
ಇಷ್ಟರಲ್ಲಿ ಇಸ್ರಾಯೇಲಿನ ದೇವರ ತೇಜಸ್ಸು ತನ್ನ ವಾಹನವಾದ ಕೆರೂಬಿಯನ್ನು ಬಿಟ್ಟು ಮೇಲಕ್ಕೇರಿ ಆಲಯದ ಹೊಸ್ತಿಲಿನ ಮೇಲ್ಗಡೆ ನಿಂತಿತ್ತು; ಆಗ ನಾರಿನ ಬಟ್ಟೆಯನ್ನು ಹೊದ್ದುಕೊಂಡು, ಲೇಖಕನ ಮಸಿಕೊಂಬನ್ನು ನಡುವಿಗೆ ಕಟ್ಟಿಕೊಂಡಿರುವ ಪುರುಷನನ್ನು ಕಂಡನು.
ಯೆಹೆಜ್ಕೇಲನು 9 : 4 (IRVKN)
ಯೆಹೋವನು ಕೂಗಿ ಅವನಿಗೆ, “ನೀನು ಯೆರೂಸಲೇಮ್ ಪಟ್ಟಣದಲ್ಲೆಲ್ಲಾ ತಿರುಗಿ ಅದರೊಳಗೆ ನಡೆಯುವ ಸಮಸ್ತ ಅಸಹ್ಯ ಕಾರ್ಯಗಳಿಗಾಗಿ ನರಳಿ ಗೋಳಾಡುತ್ತಿರುವ ಜನರ ಹಣೆಯ ಮೇಲೆ ಗುರುತುಮಾಡು” ಎಂದು ಅಪ್ಪಣೆಕೊಟ್ಟನು.
ಯೆಹೆಜ್ಕೇಲನು 9 : 5 (IRVKN)
ಮತ್ತೂ ಆತನು ಉಳಿದವರಿಗೆ, “ನೀವು ಪಟ್ಟಣದಲ್ಲೆಲ್ಲಾ ಇವನ ಹಿಂದೆ ತಿರುಗುತ್ತಾ ಹತಿಸಿರಿ; ಯಾರನ್ನೂ ಕಟಾಕ್ಷಿಸದಿರಿ, ಉಳಿಸದಿರಿ; ವೃದ್ಧ, ಯುವಕ, ಯುವತಿ, ಸ್ತ್ರೀ, ಬಾಲಕ ಎನ್ನದೆ ಸಕಲರನ್ನೂ ಸಂಹಾರ ಮಾಡಿಬಿಡಿರಿ; ಆದರೆ ಆ ಗುರುತುಳ್ಳವರಲ್ಲಿ ಯಾರನ್ನೂ ಮುಟ್ಟಬೇಡಿರಿ; ನನ್ನ ಆಲಯದಲ್ಲಿಯೇ ಪ್ರಾರಂಭಮಾಡಿರಿ” ಎಂಬುದಾಗಿ ಆತನು ನನಗೆ ಕೇಳಿಸುವಂತೆ ಅಪ್ಪಣೆಮಾಡಿದನು.
ಯೆಹೆಜ್ಕೇಲನು 9 : 6 (IRVKN)
ಆಗ ಅವರು ದೇವಾಲಯದ ಮುಂದೆ ಇದ್ದ ಹಿರಿಯರನ್ನು ಮೊದಲುಗೊಂಡು ಹತಿಸತೊಡಗಿದರು.
ಯೆಹೆಜ್ಕೇಲನು 9 : 7 (IRVKN)
ಆತನು ಅವರಿಗೆ, “ಹೊರಡಿರಿ, ಪ್ರಾಕಾರಗಳನ್ನು ಶವಗಳಿಂದ ತುಂಬಿಸಿ, ದೇವಾಲಯವನ್ನು ಹೊಲೆಗೆಡಿಸಿರಿ” ಎಂದು ಅಪ್ಪಣೆ ಕೊಡಲು ಅವರು ಹೊರಟು ಪಟ್ಟಣದಲ್ಲಿದ್ದವರನ್ನು ಹತಿಸಿದರು.
ಯೆಹೆಜ್ಕೇಲನು 9 : 8 (IRVKN)
ಅವರು ಹತಿಸುತ್ತಿರುವಾಗ ಅಲ್ಲಿ ಒಂಟಿಗನಾಗಿ ಉಳಿದ ನಾನು ಅಡ್ಡಬಿದ್ದು, “ಅಯ್ಯೋ, ಕರ್ತನಾದ ಯೆಹೋವನೇ, ನೀನು ಯೆರೂಸಲೇಮಿನ ಮೇಲೆ ನಿನ್ನ ಕೋಪಾಗ್ನಿಯನ್ನು ಹೊಯ್ದು, ಇಸ್ರಾಯೇಲರಲ್ಲಿ ಉಳಿದವರನ್ನೆಲ್ಲಾ ನಾಶಮಾಡುವಿಯಾ?” ಎಂದು ಮೊರೆಯಿಟ್ಟೆನು.
ಯೆಹೆಜ್ಕೇಲನು 9 : 9 (IRVKN)
ಆತನು ನನಗೆ, “ಇಸ್ರಾಯೇಲ್ ಮತ್ತು ಯೆಹೂದ ವಂಶದವರ ಅಧರ್ಮವು ಅತ್ಯಂತವಾಗಿದೆ; ದೇಶವು ರಕ್ತಪೂರ್ಣವಾಗಿದೆ, ಪಟ್ಟಣವು ಅನ್ಯಾಯಭರಿತವಾಗಿದೆ; ಆ ವಂಶದವರು, ‘ನಮ್ಮ ದೇಶವನ್ನು ಯೆಹೋವನು ಬಿಟ್ಟುಬಿಟ್ಟಿದ್ದಾನೆ, ಯೆಹೋವನು ನೋಡುವುದಿಲ್ಲ’ ಎಂಬುದಾಗಿ ಮಾತನಾಡಿಕೊಳ್ಳುತ್ತಿದ್ದಾರೆ.
ಯೆಹೆಜ್ಕೇಲನು 9 : 10 (IRVKN)
ನಾನಂತು, ಅವರನ್ನು ಕಟಾಕ್ಷಿಸುವುದಿಲ್ಲ, ಉಳಿಸುವುದಿಲ್ಲ, ಅವರ ದುರ್ನಡತೆಯನ್ನು ಅವರ ತಲೆಗೆ ಕಟ್ಟುವೆನು” ಎಂದು ಹೇಳಿದನು.
ಯೆಹೆಜ್ಕೇಲನು 9 : 11 (IRVKN)
ಕೂಡಲೆ ನಾರಿನ ಬಟ್ಟೆಯನ್ನು ಹೊದ್ದುಕೊಂಡು ಮಸಿಕೊಂಬನ್ನು ನಡುವಿಗೆ ಕಟ್ಟಿಕೊಂಡಿರುವ ಪುರುಷನು, “ನಿನ್ನ ಅಪ್ಪಣೆಯಂತೆಯೇ ಮಾಡಿದ್ದೇನೆ” ಎಂದು ಅರಿಕೆಮಾಡಿದನು.
❮
❯